ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯಯುತ್ತಾರೆ- 'ರಾಮಕೃಷ್ಣ ಹೆಗಡೆಯವರು ದೈವಾಧೀನವಾದ ದಿನಾಂಕದ ಕುರಿತು ಗೊಂದಲವಾಗಿದೆ. ಆ.29ರಂದು 'ಕನ್ನಡಪ್ರಭ' ಪತ್ರಿಕೆಯ ಪುಟ 9ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ. ಸುಧಾಕರ್ ಅವರು ಬರೆದ 'ಸಾಮೂಹಿಕ ನಾಯಕತ್ವದ ಹರಿಕಾರ ರಾಮಕೃಷ್ಣ ಹೆಗಡೆ' ಲೇಖನದ ಕೊನೆಯಲ್ಲಿ 'ಅನಾರೋಗ್ಯದಿಂದ ಹೆಗಡೆಯವರು 2004ರ ಜನೆವರಿ 12ರಂದು ಕಣ್ಣುಮುಚ್ಚಿದರು' ಎಂದಿದೆ. ವಿಕಿಪೀಡಿಯಾದಲ್ಲೂ ಜನವರಿ 12 ಎಂದಿದೆ. ಆದರೆ ನನಗೆ ನೆನಪಿದ್ದಂತೆ ಅದು 2004ರ ಫೆಬ್ರವರಿ 12. ಇತಿಹಾಸವೆಂದೂ ತಪ್ಪಿರಬಾರದು ಎಂಬ ಕಾರಣಕ್ಕೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಇದನ್ನು ಪರಿಶೀಲಿಸುವುದೊಳಿತು.'
'ಆ.27ರಂದು ಪುಟ 5ರಲ್ಲಿ ಬಂದ ವರದಿ 'ಮಾಹಿತಿ ಹಕ್ಕು ವೇದಿಕೆ ಅಸ್ತಿತ್ವಕ್ಕೆ' ಎಲ್ಲಿಂದ ಬಂದಿದ್ದು ಅದು? ಮೈಸೂರೋ ಅಥವಾ ದಾವಣಗೆರೆಯೋ? ಕಾರಣ ವರದಿ ನೋಡಿದರೆ ದಾವಣಗೆರೆ ಎಂದಿದೆ. ಆದರೆ ವರದಿಯ ಆರಂಭದಲ್ಲಿ ಮೈಸೂರು ಎಂದಿದೆ.'
'ಆ.30ರಂದು ಪುಟ 12ರಲ್ಲಿ 'ಇಂದಿನ ರು.20,000 ಅಂದಿನ ರು.100'ರಲ್ಲಿ ಪ್ರಕಟಿಸಿರುವ ನೂರು ರುಪಾಯಿಯ ಚಿತ್ರದಲ್ಲಿ ನೋಟಿನ ಸಂಖ್ಯೆಯನ್ನು ಮರೆಮಾಚ (ಬ್ಲರ್) ಬೇಕಿತ್ತಲ್ಲವೇ?'
'ಆ.30ರಂದು ಪುಟ 15ರಲ್ಲಿ 'ಕುಮಾರಣ್ಣ ನಾನು ಅಣ್ಣ ತಮ್ಮ' ವರದಿಯಲ್ಲಿ 'ಇದೆಲ್ಲ ವಿರೋಧ ಪಕ್ಷದವರ ಸೃಷ್ಟಿ'. ಎಂದು ಪ್ರಕಟವಾಗಿದೆ. ಆದರೆ ಇದೆಲ್ಲಾ ಆಡಳಿತ ಪಕ್ಷದವರ ಸೃಷ್ಟಿ ಎಂದಾಗಬೇಕಿತ್ತು ಅಲ್ಲವೇ? ಏಕೆಂದರೆ ಶಾಸಕ ಜಮೀರ್ ಅಹ್ಮದ್ ಇರುವುದು ವಿರೋಧ ಪಕ್ಷದಲ್ಲಿ, ಹಾಗಾಗಿ ಇದು ಆಡಳಿತ ಪಕ್ಷದವರ ಸೃಷ್ಟಿ ಸೂಕ್ತ ಪದ ಅನ್ನಿಸುತ್ತೆ' ಎಂದಿದ್ದಾರೆ.
ಜಮೀರ್ ಅಹ್ಮದ್ ಇರುವುದು ವಿರೋಧ ಪಕ್ಷದಲ್ಲಿಯೇ. ಆದರೆ ಅವರು ಹೇಳಿಕೆ ನೀಡಿದ್ದು ಆಡಳಿತ ಪಕ್ಷ- ವಿರೋಧ ಪಕ್ಷ ಎಂಬ ಹಿನ್ನೆಲೆಯಲ್ಲಲ್ಲ. ಬದಲಾಗಿ ಅವರದ್ದೇ ಪಕ್ಷದ ಆಂತರಿಕ ಸಮಸ್ಯೆ ಕುರಿತು. ಆದ್ದರಿಂದ ಇದು ವಿರೋಧಪಕ್ಷಗಳ ಅಂದರೆ ಅವರ ಪಕ್ಷದ ವಿರೋಧಪಕ್ಷಗಳ ಅಥವಾ ಇತರೆ ಪಕ್ಷಗಳ ಕೃತ್ಯ ಎಂಬ ಅರ್ಥದಲ್ಲಿ. ಆಡಳಿತ ಪಕ್ಷ ಎಂದು ಹೇಳುವ ಬದಲು ಕಾಂಗ್ರೆಸ್ ಎಂದು ನೇರವಾಗಿಯೇ ಹೇಳಬಹುದಿತ್ತು. ಆದರೆ ವಿರೋಧ ಪಕ್ಷಗಳ ಕೆಲಸ ಅಂದರೆ ಬೇರೆ ಯಾವ ಪಕ್ಷ ಬೇಕಾದರೂ ಆಗಬಹುದು.
ಇನ್ನು 'ಅಂದಿನ 20,000 ಇಂದಿನ 100' ಎಂಬ ಸುದ್ದಿಯಲ್ಲಿ 100 ನೋಟಿನ ನಂಬರ್ ಮಸುಕು ಮಾಡಿದ್ದರೆ ಅಥವಾ ಮಾಡದಿರುವುದರಿಂದ ಸುದ್ದಿಗಾಗಲಿ, ಓದುಗರಿಗಾಗಲೀ ಯಾವುದೇ ವ್ಯತ್ಯಾಸವಾಗುತ್ತಿರಲಿಲ್ಲ. ನೋಟಿನ ನಂಬರ್ ಮಸುಕು ಮಾಡದೇ ಇರುವುದರಿಂದ ಯಾವುದೇ ನಷ್ಟ ಕೂಡ ಆಗಿಲ್ಲ ಎಂದು ಭಾವಿಸುತ್ತೇನೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ನಿಧನರಾಗಿದ್ದು 2004ರ ಜ.12ರಂದು. ಅದರಲ್ಲಿ ಅನುಮಾನ ಬೇಡ.
-ವಿಶ್ವೇಶ್ವರಭಟ್