ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪಾಕಿಸ್ತಾನದ ಪುಂಡಾಟ ಗಂಭೀರವಾಗಿ ಪರಿಗಣಿಸಿ

Srinivasa Murthy VN
Updated On : 1 Sept 2013, 11:26 am

ಪಾಕಿಸ್ತಾನ ಮತ್ತೆ ಹಳೇ ಚಾಳಿಯನ್ನು ಮುಂದುವರಿಸಿದೆ. ತನ್ನ ಮೊಂಡುತನವನ್ನು ಕಪಟ ಬುದ್ಧಿಯಿಂದ ರಣ ಹೇಡಿಗಳಂತೆ ಉಗ್ರರೂಪ ತಾಳಿ ಜೀವ ತೆಗೆಯಲು ಹವಣಿಸುತ್ತಿದೆ. ಆ ಮೂಲಕ ಭಾರತೀಯರನ್ನು ಪದೇ ಪದೇ ಕೆಣಕುತ್ತಿರುವುದು ತರವಲ್ಲ. ಉಗ್ರವಾದವನ್ನು ಬಗ್ಗು ಬಡಿಯುವ ಶಕ್ತಿ ನಮ್ಮ ಭಾರತೀಯ ಸೇನಾಪಡೆಗಳಿಗಿದೆ. ಪಾಕಿಸ್ತಾನದ ಉದ್ಧಟತನಕ್ಕೆ ತಕ್ಕ ಶಾಸ್ತಿ ಮಾಡಲೇ ಬೇಕಾಗಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ದೇಶಕ್ಕೆ ನೀಡಿದ ಸಂದೇಶದಲ್ಲಿ "ನಮ್ಮ ತಾಳ್ಮೆಗೂ ಮಿತಿಯಿದೆ" ಎಂದು ಪಾಕ್‌ಗೆ ತಿರುಗೇಟು ನೀಡಿದ್ದಾರೆ. ಆದರೆ ಈ ಎಚ್ಚರಿಕೆಯ ಮಾತುಗಳನ್ನು ಪಾಕ್ ಕೇಳಿಸಿಕೊಳ್ಳುತ್ತಲೇ ಇಲ್ಲ. ಈಗ ಗುಂಡಿಗೆ ಗುಂಡಿನ ಮೂಲಕ ಉತ್ತರ ನೀಡುವುದು ಅನಿವಾರ್ಯವಾಗಿದೆ. ಅಲ್ಲಿ ಶಾಂತಿಮಂತ್ರ ಕೆಲಸ ಮಾಡುತ್ತಿಲ್ಲ. ನಮ್ಮಲ್ಲಿ ಪಾಕಿಸ್ತಾನದವರು ಗಡಿ ನುಸುಳಿ ಬಂದು ನಮ್ಮ ಸೈನಿಕರನ್ನು ಕೊಂದರೂ ಶಾಂತಿ ಮಂತ್ರ ಜಪಿಸುವ ಅಗತ್ಯವೇನಿದೆ? ದೇಶದ ರಕ್ಷಣೆ ವಿಷಯ ಬಂದಾಗ ಯಾರ ಮುಲಾಜಿಗೂ ಕಾಯಬೇಕಿಲ್ಲ.
ನಮ್ಮ ಪ್ರಧಾನಮಂತ್ರಿಗಳಂತೂ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ. ರಕ್ಷಣಾ ಸಚಿವರು ಬಾಯಿ ಚಪಲಕ್ಕೆ ಮಾತನಾಡಿ ಅಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ನಗೆಪಾಟಲಿಗೀಡಾದರು. ಕೇಂದ್ರ ಸರ್ಕಾರ ದೇಶದ ಭದ್ರತೆ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲಾರದೇ ಇರುವುದರಿಂದ ಅಮಾಯಕ ಸೈನಿಕರು ಗಡಿಯಲ್ಲಿ ನಿರಂತರ ಅಸು ನೀಗುತ್ತಿದ್ದಾರೆ ಎನ್ನುವುದು ಈಗ ಗಮನಾರ್ಹ. ಒಂದೆಡೆ ಚೀನಾ ಪದೇ ಪದೇ ಗಡಿ ನಿಯಂತ್ರಣ ರೇಖೆ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಇಂಥ ದೇಶಗಳ ಗಡಿ ನುಸುಳುವಿಕೆ, ಅತಿಕ್ರಮಣ ಗಂಭೀರವಾಗಿ ಪರಿಗಣಿಸಬೇಕಿದೆ. ಇವರ ಜತೆ ರಾಜತಾಂತ್ರಿಕ ವ್ಯವಹಾರವನ್ನು ಕಡಿತಗೊಳಿಸಿ ತಕ್ಕ ಉತ್ತರ ನೀಡಿ. ಅಮಾಯಕ ಸೈನಿಕರ ಪ್ರಾಣವನ್ನು ಉಳಿಸಬೇಕಾಗಿದೆ.
ಭಾರತದ ಪ್ರತಿಯೊಂದು ವಿಶ್ವಾಸದ ಹೆಜ್ಜೆಗಳಿಗೆ ಪಾಕ್‌ನಿಂದ ದೊರೆತದ್ದು ಮೋಸ ಹಾಗೂ ವಂಚನೆಯ ಪ್ರತಿಕ್ರಿಯೆಗಳೇ. ಆದರೆ ಈಗ ಪರಿಸ್ಥಿತಿ ಉದ್ವಿಗ್ನವಾಗಿದೆ. ಪಾಕ್‌ನ ಮೊಂಡುತನ, ಹುಚ್ಚಾಟ, ಭಯೋತ್ಪಾದಕ ಕೃತ್ಯ ಭಾರತ ಇನ್ನು ಸಹಿಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಭಾರತ ಸರ್ಕಾರ ಸ್ಪಷ್ಟವಾಗಿ ತಕ್ಷಣ ಮನದಟ್ಟು ಮಾಡಿ ಕೊಡಬೇಕಾಗಿದೆ.
-ನವೀದ್ ಮುಲ್ಲಾ, ಹುಬ್ಬಳ್ಳಿ

ಸರ್ಕಾರಿ ಇಲಾಖೆಗಳಿಗೆ ನೇಮಕಾತಿ ಮಾಡಿ

ಕರ್ನಾಟಕ ರಾಜ್ಯ ಸರ್ಕಾರ 2009ರಿಂದ ಇಲಾಖೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೇಮಕಾತಿಯನ್ನು ಮಾಡುತ್ತಿಲ್ಲ. ಸರ್ಕಾರಿ ವಲಯದ ಎಲ್ಲಾ ಇಲಾಖೆಗಳಲ್ಲಿ 1.24 ಲಕ್ಷ ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ಅರ್ಹತೆ ಹೊಂದಿ ಕರ್ತವ್ಯ ನಿರ್ವಹಿಸಲು ಸಜ್ಜಾಗಿರುವ ಯುವಕರು ನಿರುದ್ಯೋಗದಿಂದ ಪರಿತಪಿಸುತ್ತಿದ್ದಾರೆ. ಉದಾ: 2009ರಲ್ಲಿ ಪಿಎಸ್‌ಐ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಾಗಿವೆ. ತದನಂತರದ ನಾಲ್ಕು ವರ್ಷದಲ್ಲಿ ನೇಮಕಾತಿ ನಡೆದಿಲ್ಲ.
ಮೂಲಗಳ ಪ್ರಕಾರ ಶಿಕ್ಷಣ ಇಲಾಖೆಯಲ್ಲಿ 28 ಸಾವಿರ ಖಾಲಿ ಹುದ್ದೆಗಳಿವೆ. ಪೊಲೀಸ್ ಇಲಾಖೆಯಲ್ಲಿ 1300 ಪಿಎಸ್‌ಐ ಹಾಗೂ 16000 ಪೊಲೀಸ್ ಪೇದೆ ಹುದ್ದೆಗಳಿವೆ. ಬಿಜೆಪಿ ಸರ್ಕಾರ ನೇಮಕಾತಿ ಮಾಡುತ್ತೇವೆ ಎಂಬ ಭರವಸೆ ನೀಡಿತ್ತೇ ಹೊರತು ನೇಮಕಾತಿ ಮಾಡಲಿಲ್ಲ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಶಿಕ್ಷಣ ಇಲಾಖೆ ಹಾಗೂ ಗೃಹ ಇಲಾಖೆಯಲ್ಲಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. 2011ರ ಕೆಎಎಸ್ ನೇಮಕಾತಿಯ ಅಂತಿಮ ಪಟ್ಟಿಯಲ್ಲಿ ಪ್ರಾಮಾಣಿಕರಿಗೆ ನ್ಯಾಯ ಸಲ್ಲಿಸಿ ಅರ್ಹ ಅಭ್ಯರ್ಥಿಗಳ ನೇಮಕಾತಿ ಮಾಡಿ.
-ಮಹಾಂತೇಶ ಬ್ಯಾಹಟ್ಟಿ, ಸವದತ್ತಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement