ಉಡುಪು ಸಂಹಿತೆ
ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ, ಅವರ ಕೆಲಸಕ್ಕೆ ಅನುಗುಣವಾದಂತಹ ಉಡುಪು ಧರಿಸಬೇಕೆನ್ನುವ ಸಂಹಿತೆ ನಿಜವಾಗಲೂ ಬೇಕೇನು ಎನ್ನುವ ಪ್ರಶ್ನೆ ಹಳೆಯದು. ಹಿಂದೆಲ್ಲ ಮಹಿಳಾ ಕಾಲೇಜುಗಳಲ್ಲಿ ಆಡಳಿತ ಮಂಡಳಿಯವರು ವಿದ್ಯಾರ್ಥಿನಿಯರಿಗೆ, ಅಧ್ಯಾಪಕಿಯರಿಗೆ ಉಡುಪು ಸಂಹಿತೆಯನ್ನು ಜಾರಿಗೆ ತರಲು ಪ್ರಯತ್ನಿಸಿದಾಗ ವ್ಯಕ್ತಿ ಸ್ವಾತಂತ್ರ್ಯಕ್ಕೇ ಧಕ್ಕೆ ಬಂದಂತೆ ಆದೀತು ಎನ್ನುವ ವಿವಾದಗಳು ಎದ್ದಿದ್ದವು. ಅದೆಲ್ಲ ಹೇಗೋ ಅಡಗಿ ಹೋದವು. ಈಗ ಇದ್ದಕ್ಕಿದ್ದಂತೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರಿಗೆ, ಸರ್ಕಾರಿ ನೌಕರರಿಗೆ ಉಡುಪು ಸಂಹಿತೆಯನ್ನು ಜಾರಿಗೆ ತರುವ ವಿಚಾರ ಮತ್ತೆ ತಲೆ ಎತ್ತಿದೆ. ಮತ್ತೆ ಮತ್ತೆ ಹಳೆಯ ವಾದ-ವಿವಾದ ನಡೆಯುವ ಸಂಭವವೇ ಹೆಚ್ಚು.
ಸರ್ಕಾರಿ ಕಾರ್ಯಾಲಯಗಳಲ್ಲಿ ಕೆಲಸ ಮಾಡುವವರು, ಅವರ ಸ್ಥಾನ-ಗೌರವಕ್ಕೆ ಚ್ಯುತಿ ಬಾರದಂತೆ, ಸಭ್ಯತೆಯ ಗಡಿ ದಾಟದಂತೆ ಉಡುಪು ಧರಿಸಬೇಕು ಎನ್ನುವ ವಿಚಾರದಲ್ಲಿ ಎರಡು ಮಾತಿಲ್ಲ. ಆದರೆ ಸಭ್ಯತೆಯ ಎಲ್ಲೆಯನ್ನು ನಿರ್ಧರಿಸುವವರು ಯಾರು? ಪುರುಷರಿಗೆ ಷರಾಯಿ, ಶರ್ಟ್ ಅಥವಾ ಪೈಜಾಮಾ, ಜುಬ್ಬ ಆಗಬಹುದು. ಮಹಿಳೆಯರಿಗೆ ಸೀರೆ ಅಥವಾ ಚೂಡಿದಾರ್ ಆಗಬಹುದೆನ್ನುವ ಸ್ಥೂಲ ವಿಚಾರ ಪ್ರಕಟವಾಗಿದೆ.
ಟೀ-ಶರ್ಟ್, ಜೀನ್ಸ್ ಷರಾಯಿ ಸ್ತ್ರೀ ಪುರುಷರಿಬ್ಬರಿಗೂ ಸಲ್ಲದು ಎನ್ನುವ ಮಾತೂ ಕೇಳಿಬರುತ್ತಿದೆ. ಇತ್ತೀಚೆಗೆ ಯುವತಿಯರನ್ನು ಆಕರ್ಷಿಸಿರುವ ಹೊಸ ಮಾದರಿಯ ಲಂಗ ಅಥವಾ ಸ್ಕರ್ಟ್ ನಿಷೇಧವಾಗಬಹುದಂತೆ. ಈ ಪ್ರಸ್ತಾಪದಲ್ಲಿ ಹಳೆಯ ಕಾಲದ ಪಂಚೆ-ಧೋತ್ರಗಳ ಮಾತೇ ಇಲ್ಲ. ಇದು ಲೇವಡಿ ಮಾಡಬಹುದಾದ ವಿಚಾರ ಅಲ್ಲ. ಸಭ್ಯತೆಯ ಸ್ವರೂಪವನ್ನು ವಿವರಿಸಿ ಉಳಿದಿದ್ದನ್ನು ಸಂಬಂಧಪಟ್ಟ ವ್ಯಕ್ತಿಗಳ ವಿವೇಚನೆಗೇ ಬಿಡುವುದು ಒಳಿತು. ಇದೀಗ ಸರ್ಕಾರ ಸುತ್ತೋಲೆಯಲ್ಲಿ ಬದಲಾವಣೆ ಮಾಡಿ ಸಭ್ಯ ಉಡುಪು ಧರಿಸಿ ಎಂದಿರುವುದು ವಿವೇಕದ ನಿರ್ಧಾರ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.