ಧಾರ್ಮಿಕ ಗುರುವಾಗಲು ಪ್ರೇರಣೆಯಾದ ಪ್ರೀತಿ
ಜೆರೂಸಲಮ್ನ ಶ್ರೀಮಂತ ವ್ಯಾಪಾರಿ ಕಲ್ಬಾ ಷಿಬುವ ಅವರ ಮಗಳು ರಾಖೇಲ. ಅವಳು ಬಡವನೂ, ಅವಿದ್ಯಾವಂತನೂ, ಅನಕ್ಷರಸ್ಥನೂ ಆದ ಅಕೀಬಾನನ್ನು ಪ್ರೀತಿಸುತ್ತಿದ್ದಳು. ಇದು ತಂದೆಗೆ ತಿಳಿದು ಆತ ಅವರ ಪ್ರೀತಿಗೆ ಸಮ್ಮತಿಯ ಮುದ್ರೆಯನ್ನೊತ್ತಲಿಲ್ಲ. ಕೊನೆಗೆ ಅಕೀಬನಿಗೆ ಯಾವುದಾದರೂ ಗುರುವಿನ ಬಳಿ ವಿದ್ಯೆ ಕಲಿತು ವಿದ್ವಾಂಸನಾದಮೇಲೆ ಬರಲು ತಿಳಿಸಿ, ನಂತರ ವಿವಾಹವಾಗುವುದಾಗಿ ಹೇಳಿದಳು. ಅದರಂತೆ ಅಕೀಬನು ಗುರುಗಳನ್ನು ಹುಡುಕುತ್ತಾ ಹೊರಟನು. ಇತ್ತ ರಾಖೇಲಳು ಮನೆಯಿಂದ ಹೊರನಡೆದು ಊರಹೊರಗೆ ಗುಡಿಸಲು ಕಟ್ಟಿಕೊಂಡು ತನ್ನ ನೀಳವಾದ ತಲೆಗೂದಲನ್ನು ಕತ್ತರಿಸಿ ಅದನ್ನು ಮಾರಿ ಜೀವಿಸಲು ಪ್ರಾರಂಭಿಸಿದಳು. ಹನ್ನೆರಡು ವರ್ಷ ಅಲ್ಲಲ್ಲಿ ಅಲೆದು ಯಾವ ಗುರುವನ್ನೂ ಕಾಣಲಾಗದೆ ಅಕೀಬಾ ಹಿಂದಿರುಗಿದಾಗ ರಾಖೇಲಳಿಗೆ ತಂದೆ ಹೇಳುತ್ತಿದ್ದ ಮಾತುಗಳು ಅವನ ಕಿವಿಗೆ ಬಿತ್ತು. 'ಇನೆಷ್ಟು ದಿನ ಹೀಗೆ ವನವಾಸ? ಮನೆಗೆ ಬಂದುಬಿಡು' ಎಂದು ಹೇಳುತ್ತಿದ್ದ. ಅದಕ್ಕೆ ರಾಖೇಲ ತಾನು ಅವನಿಗಾಗಿ ಹನ್ನೆರಡು ವರ್ಷಗಳ ಕಾಲ ಕಾದಿರುವುದಾಗಿಯೂ, ಅವನಿಗಾಗಿ ಇನ್ನೂ ಹನ್ನೆರಡು ವರ್ಷ ಕಾಯಲು ಸಿದ್ಧವೆಂದೂ, ಸಕಲ ಧರ್ಮಶಾಸ್ತ್ರವನ್ನೂ ಕಲಿತು ಆತ ಹಿಂದಿರುಗುವವರೆಗೂ ಕಾಯುವುದಾಗಿ ತಿಳಿಸಿದಳು. ಅವಳ ಮಾತುಗಳು ಅಕೀಬನ ಮೇಲೆ ತುಂಬಾ ಪ್ರಭಾವ ಬೀರಿತಲ್ಲದೆ, ಆತ ವಾಪಸ್ಸು ಮರಳಿ ಮತ್ತೆ ಹನ್ನೆರಡು ವರ್ಷಗಳ ಕಾಲ ಅಲ್ಲಲ್ಲಿ ತಿರುಗಿ, ಯೋಗ್ಯ ಗುರುಗಳ ಬಳಿ ವಿದ್ಯೆಕಲಿತು ವಿದ್ವತ್ತನ್ನು ಸಂಪಾದಿಸಿದನು. ಅವನ ವಾಕ್ಚಾತುರ್ಯ, ಸರಳತೆ, ಧಾರ್ಮಿಕ ಜೀವನ ಮತ್ತು ತತ್ವನಿಷ್ಠೆ ವಿದ್ವಾಂಸರ ಸಾಲಿನಲ್ಲಿ ನಿಲ್ಲಿಸಿತು. ಅವನು ಯಹೂದಿಗಳ ಧರ್ಮಗುರುವಾಗಿ ಹೆಸರುಗಳಿಸಿದ. ಅವನು ತನ್ನ ಊರಿಗೆ ಹಿಂದಿರುಗಿದಾಗ ದೊಡ್ಡ ಜನರ ಗುಂಪು ಅಕೀಬನಿಗೆ ಅದ್ಧೂರಿ ಸ್ವಾಗತವನ್ನು ನೀಡಿತು. ಜನಜಂಗುಳಿಯಲ್ಲಿ ಒಬ್ಬ ತೆಳು ದೇಹದ ಮಹಿಳೆ ತಲೆಗೆ ತೇಪೆ ಹಚ್ಚಿದ ಬಟ್ಟೆ ಸುತ್ತಿಕೊಂಡು ಅಕೀಬನ ಹಿಂದಿನಿಂದ ಬಂದು ನಿಲುವಂಗಿಯನ್ನು ಎಳೆದಳು. ಹಿಂದಿರುಗಿ ನೋಡಿದ ಅಕೀಬ ಆಕೆ ತನ್ನ ರಾಖೇಲಳೆಂದು ಗುರುತಿಸಿದ! ಆದರೆ ಅವನ ಸುತ್ತಮುತ್ತಲಿನ ಜನ ಆಕೆಯನ್ನು ಎಳೆದು ಆಚೀಚೆ ತಳ್ಳುವುದನ್ನು ಕಂಡು ಅಕೀಬ ಹೇಳಿದ, 'ಅವಳನ್ನು ತಳ್ಳಬೇಡಿ. ಇವತ್ತು ನಾನೇನಾಗಿದ್ದೇನೋ, ಅದೆಲ್ಲವೂ ಅವಳ ಕಾರಣದಿಂದಲೇ'! ನಂತರ ರಾಖೇಲಳ ತಂದೆ ಆತನನ್ನು ಮನೆಗೆ ಕರೆದೊಯ್ದು ತನ್ನೆಲ್ಲ ಆಸ್ತಿಗೆ ಅಕೀಬನನ್ನು ಉತ್ತರಾಧಿಕಾರಿಯೆಂದು ಘೋಷಿಸಿದ. ಕ್ರಿ.ಶ.128ರಲ್ಲಿ ಹೇಡ್ರಿಯನ್ ಚಕ್ರವರ್ತಿ ಜೆರೂಸಲೆಂಅನ್ನು ವಶಪಡಿಸಿಕೊಂಡು ಯಹೂದಿಗಳಿಗೆ ಹಿಂಸಿಸಲು ಪ್ರಾರಂಭಿಸಿದ. ಅವನ ಉದ್ದೇಶ ಯಹೂದೀ ಧರ್ಮವನ್ನು ನಾಶ ಮಾಡುವುದೇ ಆಗಿತ್ತು. ಆದರೂ ಯಹೂದ್ಯರು ಶಾಂತ ರೀತಿಯಿಂದ ಪ್ರತಿಭಟನೆಯನ್ನು ಮಾಡುವುದನ್ನು ಕಂಡು ಇದಕ್ಕೆ ಅಕೀಬನೇ ಕಾರಣವೆಂದು ತಿಳಿದು ಅವನನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ನಂತರ ಅವನ ಚರ್ಮ ಸುಲಿಸಿ, ಹಿಂಸೆ ನೀಡಿ ಕೊಲ್ಲಲಾಯಿತು. ಹೀಗೆ ಹುತಾತ್ಮನಾದ ಗುರು ಅಕೀಬ ಯಹೂದಿಗಳ ಧರ್ಮಪರಂಪರೆಯಲ್ಲಿ ಇಂದಿಗೂ ಅಮರನಾಗಿದ್ದಾನೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.