ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹಣದ ಅತಿಪ್ರಸರಣದ ಪಿಡುಗು

Srinivasa Murthy VN
Updated On : 17 Sept 2013, 11:02 am

ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ರಘುರಾಮ ರಾಜನ್ ಅವರು ಕೈಗೊಂಡ ಕೆಲವು ದಿಟ್ಟ ಕ್ರಮಗಳಿಂದ ಇಳಿಯುತ್ತಿದ್ದ ರುಪಾಯಿ ಮೌಲ್ಯ ಸ್ವಲ್ಪ ಚೇತರಿಸಿಕೊಂಡ ಅನಂತರ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸುವ ನಿರ್ಧಾರವೂ ಪ್ರಕಟವಾಗಬಹುದೆನ್ನುವ ಆಸೆ ಚಿಗುರಿತ್ತು.
ರಘುರಾಮ ರಾಜನ್ ಅವರ ಮೊಟ್ಟ ಮೊದಲ ತ್ರೈಮಾಸಿಕ ಹಣ ನೀತಿಯ ನಿರೂಪಣೆ ಸೆಪ್ಟೆಂಬರ್ 23ಕ್ಕೆ ನಿಗದಿಯಾಗಿರುವುದರಿಂದ ಆ ಘಟನೆಗೆ ವಾಣಿಜ್ಯೋದ್ಯಮ ವಲಯದಲ್ಲಿ ಮಹತ್ವ ಸಿಕ್ಕಿತ್ತು. ಆದರೆ ಅನಿರೀಕ್ಷಿತವಾಗಿ ಆಹಾರ ಧಾನ್ಯಗಳು ಹಾಗೂ ಈರುಳ್ಳಿಯ ಬೆಲೆ ವಿಪರೀತವಾಗಿ ಹೆಚ್ಚಿ, ಹಣದ ಅತಿಪ್ರಸರಣದ ಹೆಚ್ಚಳದ ವೇಗದ ದರ (ಇನ್‌ಫ್ಲೇಷನ್) ಹೆಚ್ಚಾಗಿರುವುದರಿಂದ ನೂತನ ಗವರ್ನರ್ ಅವಕಾಶವನ್ನು ಕಳೆದುಕೊಳ್ಳಬೇಕಾದೀತು ಎಂಬ ಶಂಕೆ ಮೂಡಿದೆ.
ಈರುಳ್ಳಿಯ ಬೆಲೆ ಈಗ ಮುಗಿಲನ್ನೇ ಮುತ್ತಿಡುವುದಕ್ಕೆ ಹೊರಟಂತಿದೆ. ದೇಶದ ಅತಿ ದೊಡ್ಡ ಈರುಳ್ಳಿ ಪೇಟೆಯಾದ, ಮಹಾರಾಷ್ಟ್ರದ ಲಾಸಲಗಾಂವದಲ್ಲಿ ಬೆಲೆ ಕ್ವಿಂಟಾಲಿಗೆ 5300-5400 ರ ಹಂತ ಮುಟ್ಟಿತ್ತು. ಕರ್ನಾಟಕದ ಈರುಳ್ಳಿಯ ಹೊಸ ಬೆಳೆ ಈಗಷ್ಟೇ ಪೇಟೆಗೆ ಬರುತ್ತಿರುವುದು.
ಜಗತ್ತಿನಲ್ಲಿ ಭಾರತ ಚೀನದ ಅನಂತರ ಅತಿ ಹೆಚ್ಚು ಈರುಳ್ಳಿಯನ್ನು ಬೆಳೆಯುವ ರಾಷ್ಟ್ರ. ಈಗ ಪೂರೈಕೆ ಕಡಿಮೆಯಾಗಿದೆ. ಆಫ್ಘಾನಿಸ್ಥಾನ, ಪಾಕಿಸ್ತಾನ, ಚೀನಾಗಳಿಂದ ಈರುಳ್ಳಿಯ ಆಮದಿಗೆ ಕ್ರಮ ಕೈಗೊಂಡಿದ್ದರೂ ಅದರ ಪರಿಣಾಮ ಈಗಲೇ ಕಂಡು ಬರಲಿಕ್ಕಿಲ್ಲ. ಹಣದ ಅತಿಪ್ರಸರಣದ ನಿಯಂತ್ರಣ ರಿಸರ್ವ್ ಬ್ಯಾಂಕಿನ ಪ್ರಾಥಮಿಕ ಕರ್ತವ್ಯಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಬಡ್ಡಿ ದರದ ಇಳಿತ ಸದ್ಯಕ್ಕೆ ಅಸಾಧ್ಯ ಎನಿಸುತ್ತಿದೆ. ಆದರೂ ರಘುರಾಮ ರಾಜನ್ ಏನಾದರೂ ಉಪಾಯ ಹುಡುಕಿ, ಬಡ್ಡಿ ದರವನ್ನು ಇಳಿಸಬೇಹುದೇ? ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement