ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆಕಾಶ ತೋರಿಸಿ ವಾಸ್ತವ ಮರೆಸುವ ಯತ್ನ

Srinivasa Murthy VN
Updated On : 18 Sept 2013, 10:44 am

ರಾಜಸ್ಥಾನದಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಬಡತನಕ್ಕೆ ನಿರುದ್ಯೋಗ ಸಮಸ್ಯೆ ಕಾರಣವಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದ್ದಾರೆ. ನಿರುದ್ಯೋಗ ಸಮಸ್ಯೆ ಪರಿಹರಿಸಲು ಆಗದಿರುವುದಕ್ಕೆ ಇಂತಹ ಹೇಳಿಕೆಯನ್ನಾದರೂ ನೀಡಿ ಸಮಸ್ಯೆಯನ್ನು ಅದರ ಪಾಡಿಗೆ ಅದನ್ನು ಬಿಡುವ ಅನಿವಾರ್ಯತೆ ಕಾಂಗ್ರೆಸ್‌ಗೆ ಬಂದಿದೆ. ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಕೇಳಿ ಸಂತೋಷಪಡಬೇಕು ಅಥವಾ ಸಮಾಧಾನ ಪಟ್ಟುಕೊಳ್ಳಬೇಕು. ಪ್ರತಿಯೊಬ್ಬ ಕೂಲಿ ಕಾರ್ಮಿಕನು ವಿಮಾನದಲ್ಲಿ ಪ್ರಯಾಣಿಸುವಂತಾಗಬೇಕು ಎಂದು ಹೇಳಿದ್ದಾರೆ. ಒಂದು ರೂಪಾಯಿಗೆ ಒಂದು ಕೆಜಿ ಅಕ್ಕಿಯನ್ನು ನೀಡುವ ಯೋಜನೆಯಂತೆ, ಒಂದು ರೂಪಾಯಿಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ವಿಮಾನದಲ್ಲಿ ಪ್ರಯಾಣಿಸುವಂತೆ ಆದೇಶ ಹೊರಡಿಸಿದರೆ ಅದೂ ಸಾಧ್ಯವಾಗುತ್ತದೆ. ಚುನಾವಣಾ ಸಮಯವೆಂದರೆ ಹಿತಕರವಾದ ಭಾಷಣಗಳು ಎಲ್ಲಾ ರಾಜಕಾರಣಿಗಳಿಂದಲೂ ಬರುತ್ತವೆ. ಮುಗಿಲು ಮುಟ್ಟುತ್ತಿರುವ ಬಸ್ ಪ್ರಯಾಣ ಶುಲ್ಕವನ್ನು ನೆನೆಸಿಕೊಂಡರೆ, ಕೂಲಿ ಕಾರ್ಮಿಕರಿಗಿರಲಿ ಮಧ್ಯಮ ವರ್ಗದ ಜನರಿಗೂ ವೋಲ್ವೊ ಅಥವಾ ರಾಜಹಂಸಗಳಂತಹ ಬಸ್ಸುಗಳಲ್ಲಿ ಪ್ರಯಾಣ ಮಾಡುವುದಕ್ಕೆ ಲೆಕ್ಕಾಚಾರ ಹಾಕಬೇಕಾದ ಸ್ಥಿತಿ ಇದೆ.  
ಕೋಟ್ಯಂತರ ಜನರಿರುವ ನಮ್ಮ ದೇಶದಲ್ಲಿ ದೇಶದ ಅಧಿಕ ಸಂಪತ್ತು ಸಾವಿರಾರು ಜನಗಳ ಮುಷ್ಠಿಯಲ್ಲಿದೆ.  ಹಗರಣಗಳಿಂದ ದೇಶದ ಸಂಪತ್ತು ಲೂಟಿಯಾಗುತ್ತಿದೆ. ದೇಶದ ಸಂಪತ್ತು ಕೆಲವರ ಸ್ವತ್ತಾಗಿರುವುದರಿಂದ ಮೂಲಭೂತ ಸೌಕರ್ಯಗಳನ್ನು ಜನರಿಗೆ ಒದಗಿಸಲು ಸರಕಾರಕ್ಕೆ ಬಡತನ ಬಂದಿದೆ. ಕಾಂಗ್ರೆಸ್ ನಾಯಕತ್ವದ ಯುಪಿಎ ಅಧಿಕಾರಕ್ಕೆ ಬಂದು 10 ವರ್ಷಗಳಾಗುತ್ತಾ ಬಂದಿದೆ. ಆದರೆ ಕೂಲಿ ಕಾರ್ಮಿಕರು ವಿಮಾನದಲ್ಲಿ ಪ್ರಯಾಣ ಮಾಡುವ ಕನಸನ್ನು ರಾಹುಲ್ ಗಾಂಧಿಯವರು ಈಗ ಕಾಣುತ್ತಿದ್ದಾರೆ.  
ಇನ್ನೊಂದೆಡೆ ರೋಟಿನ್ ಚೆಕ್‌ಅಪ್‌ಗೆ ಸೋನಿಯಾ ಗಾಂಧಿಯವರು ಆಗಾಗ್ಗೆ ಅಮೆರಿಕಾಗೆ ಹೋಗುತ್ತಾರೆ.  ಭಾರತದಲ್ಲಿ ಆರೋಗ್ಯ ಪರೀಕ್ಷೆಗೆ ಸಮರ್ಥ ಆಸ್ಪತ್ರೆಗಳಾಗಲಿ ಅಥವಾ ವೈದ್ಯರಾಗಲಿ ಇಲ್ಲವೇ? ಬಡವರು ಅನೇಕ ವೇಳೆ ಸಣ್ಣ ಪುಟ್ಟ ಕಾಯಿಲೆಗಳಿಗೂ ಹಣ ನೀಡಲು ಸಾಧ್ಯವಾಗದೆ ಜೀವವನ್ನೇ ಪಣವನ್ನಿಡುತ್ತಿದ್ದಾರೆ. ಅವರಿಗೆ ವಿದೇಶದಲ್ಲಿ ಬೇಡ, ಅವರಿರುವಂತಹ ಸ್ಥಳಗಳಲ್ಲಿಯೇ ಉಚಿತ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೇ? ರಾಜಕಾರಿಣಿಗಳ ಹಾಗೂ ಅಧಿಕಾರಿಗಳ ಒಡಲಿನಲ್ಲಿರುವ ಅಕ್ರಮ ಸಂಪತ್ತನ್ನು ಮತ್ತು ವಿದೇಶಿ ಬ್ಯಾಂಕ್‌ಗಳ ಕಪ್ಪುಹಣವನ್ನು ಭಾರತಕ್ಕೆ ತಂದರೆ ದೇಶದ ಬಡತನ ನೀಗುತ್ತದೆ. ಇದನ್ನು ಮಾಡುವ ರಾಜಕೀಯ ಇಚ್ಛಾಶಕ್ತಿ ಇಲ್ಲದವರು ಕೂಲಿ ಕಾರ್ಮಿಕರನ್ನು ವಿಮಾನದಲ್ಲಿ ಪ್ರಯಾಣಿಸುವಂತೆ ಅವಕಾಶ ಮಾಡಿ ಕೊಡುವರೇ?
-ಕೆ.ವಿ. ಸೀತಾರಾಮಯ್ಯ, ಹಾಸನ

ಇದೆಂತಹ ನ್ಯಾಯದ ತಕ್ಕಡಿ!

ಕರ್ನಾಟಕದ ಹುಲಿ ರಕ್ಷಿತಾರಣ್ಯದ ಪ್ರದೇಶದಲ್ಲಿ ಕಳೆದ ವರ್ಷ ಹಳ್ಳಿಯ ಬಡವನೊಬ್ಬ ಕಾಲಿಟ್ಟನೆಂದು ಅರಣ್ಯ ರಕ್ಷಕರು ಆತನನ್ನು ಹಿಡಿದೆಳೆದು ಬಂಧನದಲ್ಲಿಟ್ಟು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ನ್ಯಾಯಾಲಯ ಆತನಿಗೆ ಒಂದು ವರ್ಷ ಕಠಿಣ ಸಜೆ, ಮೂರು ಸಾವಿರ ದಂಡ ವಿಧಿಸಿತು. ರಾಜಸ್ತಾನದಲ್ಲಿ ಸಂತತಿ ವಿನಾಶದ ಅಂಚಿನಲ್ಲಿರುವ ಅಪರೂಪದ ಕೃಷ್ಣ ಮೃಗಗಳನ್ನು ಬೇಟೆಯಾಡಿ ಕೊಂದು ಪ್ರಸಿದ್ಧ ಹಿಂದೀ ಸಿನಿಮಾ ನಟನಿಗೆ ಕೆಲವು ವರ್ಷ ಸಂದರೂ ನ್ಯಾಯಾಲಯದ ತೀರ್ಪು ಇನ್ನೂ ಹೊರಬಂದಿಲ್ಲ. ಕಳೆದ ವರ್ಷ ದಿಲ್ಲಿಯಲ್ಲಿ ನಡೆದ ಭೀಕರ ರೇಪ್ ಹಗರಣದಲ್ಲಿ ಪಾಲುದಾರನಾಗಿ ಯುವತಿಯ ಮರಣಕ್ಕೆ ಕಾರಣರಾದವರಲ್ಲಿ ಅಪ್ರಾಪ್ತ ವಯಸ್ಕನೆಂಬ ನೆಪದಲ್ಲಿ ಒಬ್ಬನಿಗೆ ಕೇವಲ ಮೂರು ವರ್ಷ ಶಿಕ್ಷೆಯಾಯಿತು. ಕೋಟಿ ಕೋಟಿ ದುಡ್ಡು ನುಂಗಿದ ರಾಜಕೀಯ ಪುಢಾರಿಗಳಿಗೆ ಶಿಕ್ಷೆ ಆಗುವುದಕ್ಕೆ ಯುಪಿಎಯೇ "ಭಾರತ ನಿರ್ಮಾಣ" ಆಗಬೇಕೇನೋ? ಆ ಮೊದಲು "ಭಾರತ ನಿರ್ಯಾಣ" ಆದರೆ ಯಾರಿಗೂ ಏನೂ ಇಲ್ಲ.   
-ಎಂ.ವಿ. ಭಟ್, ಬೆಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement