ಮಕ್ಕಳನ್ನು ಹೊಡೆಯಬಾರದು
ಬೆಂಗಳೂರಿನ ಒಂದು ಶ್ರೀಮಂತರ ಶಾಲೆಯಲ್ಲಿ ಬಾಲಕನ್ನೊಬ್ಬ ಕನ್ನಡದಲ್ಲಿ ಮಾತಾಡಿದ್ದಕ್ಕೆ ಶಿಕ್ಷಕರೊಬ್ಬರು ಅವನನ್ನು ಹೊಡೆದ ಪ್ರಕರಣ ವರದಿಯಾಗಿದೆ. ಈ ಪ್ರಕರಣ ಶಾಲೆಯಲ್ಲಿನ ಕ್ಲೋಸ್ ಸರ್ಕ್ಯೂಟ್ ಟಿವಿ ವ್ಯವಸ್ಥೆಯಲ್ಲಿ ದಾಖಲಾಗಿರುವುದರಿಂದ ಅದನ್ನು ಯಾರೂ ಯಾವುದೇ ಕಾರಣಕ್ಕಾದರೂ ಅಲ್ಲಗಳೆಯುವಂತಿಲ್ಲ.
ಈ ಪ್ರಕರಣದಲ್ಲಿ ಕನ್ನಡದಲ್ಲಿ ಮಾತಾಡಿದ್ದೇ ಒಂದು ಅಪರಾಧವಾಯಿತೇನೋ ಎನ್ನುವ ರೀತಿಯಲ್ಲಿ ವರದಿ ಇದ್ದರೂ, ಘಟನೆಗೆ ಜವಾಬ್ದಾರಿಯನ್ನು ಹೊರಬೇಕಾದವರು ಕನ್ನಡದಲ್ಲಿ ಮಾತಾಡಿದ್ದಕ್ಕಾಗಿ ಹೊಡೆಯಲಿಲ್ಲ, ಆದರೆ ಅಶ್ಲೀಲ ಭಾಷೆಯ ಪ್ರಯೋಗದಿಂದ ಉಪಾಧ್ಯಾಯರು ಸಿಟ್ಟಿನಿಂದ ವರ್ತಿಸಿರಬಹುದೆನ್ನುವ ಸಮಾಧಾನ ನೀಡಿರುವುದನ್ನು ಸುತಾರಾಮ್ ಒಪ್ಪಲಿಕ್ಕೆ ಸಾಧ್ಯವಿಲ್ಲ.
ಯಾವುದೇ ಕಾರಣಕ್ಕಾದರೂ ಶಾಲೆಯಲ್ಲಿ ಮಕ್ಕಳನ್ನು ಹೊಡೆಯಬಾರದೆನ್ನುವ ಸುತ್ತೋಲೆಗಳನ್ನು ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೂ ರವಾನಿಸಿದೆ. ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕುರಿತಂತೆ ಹಲವಾರು ತಜ್ಞರ ಸಮಿತಿಗಳ ವರದಿಗಳಲ್ಲೂ ಮಕ್ಕಳಿಗೆ ಎಂತಹ ಶಿಕ್ಷೆ ವಿಧಿಸಬೇಕು ಎನ್ನುವುದರ ಪ್ರಸ್ತಾಪವಿದ್ದೇ ಇರುತ್ತದೆ. ತಪ್ಪು ಮಾಡಿದ ಮಕ್ಕಳಿಗೆ ಹೊಡೆಯುವುದು ನಿಜಕ್ಕೂ ಕ್ರೌರ್ಯದ ಪ್ರದರ್ಶನವೇ. ಇಂತಹ ಶಿಕ್ಷೆ ವಿಧಿಸುವುದು ದೈಹಿಕವಾಗಿ ನೋವನ್ನು ಉಂಟು ಮಾಡುವುದರ ಜತೆಯಲ್ಲೇ ಮಾನಸಿಕ ಆಘಾತಕ್ಕೂ ಅವಕಾಶ ಮಾಡಿಕೊಡಬಹುದು. ಈಗ ವರದಿಯಾಗಿರುವ ಪ್ರಕರಣವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ ತಾನು ಕೈಗೊಂಡ ಕ್ರಮಕ್ಕೂ ಪ್ರಚಾರ ಕೊಡಬೇಕು.