ಕೃಷಿ ಮಾರುಕಟ್ಟೆ: ದೊಡ್ಡ ಕ್ರಾಂತಿ
ಕೃಷಿ ವಲಯದಲ್ಲಿ ಅನೇಕ ಕಡೆಗಳಲ್ಲಿ ಆಗಿರುವ ಕ್ರಾಂತಿಯ ಫಲ ನಿಜವಾಗಲೂ ಕೃಷಿಕರಿಗೆ ಲಭ್ಯವಾಗಬೇಕಾದರೆ, ಅವರ ಮಾಲಿಗೆ ನ್ಯಾಯವಾದ ಅಥವಾ ಸ್ವತಂತ್ರ ಮುಕ್ತ ಪೇಟೆಯ ಬೆಲೆ ದೊರಕಬೇಕು. ಕೃಷಿ ಉತ್ಪನ್ನಗಳ ಮಾರಾಟದ ವ್ಯವಸ್ಥೆಯಲ್ಲಿ ಸಹಕಾರ ಸಂಘಗಳ ಪಾತ್ರ ಬಹುದೊಡ್ಡದು ಹಾಗೂ ನಿರ್ಣಾಯಕ. ಈಗಿನ ಮಾರುಕಟ್ಟೆ ವ್ಯವಸ್ಥೆ ಹೆಚ್ಚು ಕಡಿಮೆ ತುಕ್ಕು ಹಿಡಿದಂತೆ ಆಗಿರುವುದೂ ನಿಜ.
ಈಗ ಚಾಲ್ತಿಯಲ್ಲಿರುವ ಕಾಯಿದೆಯ ಬದಲಾವಣೆಯನ್ನು ಆಸಕ್ತ ಹಿತಗಳು ದೀರ್ಘಕಾಲದಿಂದಲೂ ಪ್ರತಿಭಟಿಸಿಕೊಂಡೇ ಬಂದಿವೆ. ಈಗ ಕರ್ನಾಟಕ ಸರ್ಕಾರ ತಜ್ಞ ವರದಿಯ ಆಧಾರದ ಮೇಲೆ ರಾಜ್ಯದ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಸ್ಥೆಗಳ ಜಾಲವನ್ನು ರೂಪಿಸಿ, ಕೃಷಿಕರ ಉತ್ಪನ್ನದ ಮಾರಾಟಕ್ಕೆ ವಿಶಾಲವಾದ ವೇದಿಕೆಯನ್ನು ರೂಪಿಸಲು ಉದ್ದೇಶಿಸಿರುವುದು ಒಂದು ದೊಡ್ಡ ಕ್ರಾಂತಿಯೇ.
ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರು ಬುಧವಾರ ಪ್ರಕಟಿಸಿದ ಉದ್ದೇಶಿತ ಸುಧಾರಣೆಗಳು ಜಾರಿಗೆ ಬಂದರೆ, ಕೃಷಿಕರಿಗೆ ತಮ್ಮ ಉತ್ಪನ್ನವನ್ನು ರಾಜ್ಯದಲ್ಲಿ ಯಾವ ಪೇಟೆಯಲ್ಲಾದರೂ ಮಾರುವ ಅವಕಾಶ ಸಿಕ್ಕಂತೆ ಆಗುತ್ತದೆ. ಒಂದು ಮಾರುಕಟ್ಟೆಯಲ್ಲಿ ಕೆಲವೇ ದಲ್ಲಾಳಿಗಳು ಗುಂಪು ಕಟ್ಟಿಕೊಂಡು ರೈತರಿಗೆ ಮೋಸ ಮಾಡುವ ಹವ್ಯಾಸ ಹೊಸ ವ್ಯವಸ್ಥೆಯಲ್ಲಿ "ಬಂದ್" ಆದಂತೆಯೇ.
ದಲ್ಲಾಳಿಗಳಿಗೂ, ಒಂದೇ ಲೈಸೆನ್ಸ್ ಪಡೆದು ರಾಜ್ಯದಲ್ಲಿನ ಎಲ್ಲ ಪೇಟೆಗಳಲ್ಲೂ ವ್ಯವಹಾರ ಮಾಡುವ ಅವಕಾಶವೂ ದೊರೆಯುವುದರಿಂದ ವ್ಯಾವಹಾರಿಕ ಸ್ಪರ್ಧೆಯ ವೇದಿಕೆ ವಿಸ್ತಾರವಾಗುತ್ತದೆ. ಅದರಿಂದ ಕೃಷಿ ಉತ್ಪನ್ನಕ್ಕೆ ನ್ಯಾಯವಾದ ಹಾಗೂ ಸ್ಪರ್ಧಾತ್ಮಕ ಮೌಲ್ಯ ಸಿಗುವುದು ಸಾಧ್ಯ.
ಈ ವ್ಯವಸ್ಥೆಗೆ ಆಧುನಿಕ ಸಂಪರ್ಕ ಜಾಲದ ಮೂಲಕ ಕ್ಷಣ ಕ್ಷಣಕ್ಕೂ ನಾನಾ ಪೇಟೆಗಳಲ್ಲಿ ಪ್ರಕಟವಾಗುವ ಬೆಲೆಯ ವಿವರಗಳನ್ನು ತಿಳಿಸುವ ಸಾಧನಗಳು ಬೇಕು.
ಈಗ ಅಂತಹ ತಂತ್ರಜ್ಞಾನ ಲಭ್ಯ. ಅದನ್ನು ಅಳವಡಿಸಿಕೊಂಡು ನೂತನ, ಆಧುನಿಕ, ಹೆಚ್ಚು ಸ್ಪರ್ಧೆಗೆ ಅವಕಾಶವನ್ನು ಒದಗಿಸುವ ವ್ಯವಸ್ಥೆಯನ್ನು ರೂಪಿಸುವುದಕ್ಕೆ ಕಾಯಿದೆಯಲ್ಲಿ ಬದಲಾವಣೆಯಾಗಬೇಕು.
ರೈತರು ತಮ್ಮ ಮಾಲನ್ನು ಶೇಖರಿಸಿರುವ ಉಗ್ರಾಣಗಳಿಂದಲೇ ಮಾಲನ್ನು ಮಾರುವ ವ್ಯವಸ್ಥೆಯನ್ನು ರೂಪಿಸುವುದು ಈಗ ಸಾಧ್ಯ. ರಾಜ್ಯದ ಸಂಪರ್ಕ ಜಾಲದ ಇ-ಹರಾಜು ಸೌಲಭ್ಯವನ್ನು ರಾಷ್ಟ್ರೀಯ ಜಾಲದ ಜತೆ ಜೋಡಿಸಿದರೆ, ದೇಶದ ಎಲ್ಲ ರೈತರಿಗೂ ಅಖಿಲ ಭಾರತ ಮಾರಾಟ ಜಾಲದ ಸೌಲಭ್ಯ ಸಿಕ್ಕಿದಂತಾಗುತ್ತದೆ.
ಕರ್ನಾಟಕದಲ್ಲಿ ರಾಜ್ಯದ್ದೇ ಆದ ಒಂದು ಕೃಷಿ ನೀತಿಯನ್ನು ರೂಪಿಸಲಾಗಿತ್ತು. ಅದರಿಂದ ನಿರೀಕ್ಷಿಸಿದಷ್ಟು ಪ್ರತಿಫಲ ಸಿಗದೇ ಹೋದರೂ, ರೈತರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿತ್ತು. ಅನಂತರದ ದಿನಗಳಲ್ಲಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯ ಪ್ರಯತ್ನ ನಡೆಸಿದರು. ನಿಜ. ಪ್ರತ್ಯೇಕ ಕೃಷಿ ಬಜೆಟ್‌ನಲ್ಲಿ ವಿಶೇಷವೇನೂ ಇರಲಿಲ್ಲ ಎನ್ನಬಹುದಾದರೂ ಕೃಷಿಗೆ ಕೊಡಬೇಕಾದ ಪ್ರಾಮುಖ್ಯ ಹಾಗೂ ಆದ್ಯತೆಗೆ ಸಾಕಷ್ಟು ಪ್ರಚಾರ ಸಿಕ್ಕಿತ್ತು.
ಈಗಿನ ಕೃಷಿ ಉತ್ಪನ್ನಗಳ ಇ-ಹರಾಜು ಅಖಿಲ ಭಾರತ ಸಂಪರ್ಕ ಜಾಲದ ಮೂಲಕ ರೈತರ ಕೈಗೆ ಎಟುಕಲಿರುವ ಅಖಿಲ ಭಾರತ ಮಾರುಕಟ್ಟೆಯ ಸೌಲಭ್ಯಗಳಿಂದ ಕೃಷಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಉದ್ದೇಶ ಸರಿಯಾಗಿ ಈಡೇರಿದರೆ ರೈತರಿಗೆ ಮೋಸ ಮಾಡುವುದು ಸಾಧ್ಯವೇ ಇಲ್ಲ. ಆದರೆ ವ್ಯವಸ್ಥೆಯ ಮೇಲ್ವಿಚಾರಣೆಗೆ ನೇಮಕವಾಗುವ ಸಿಬ್ಬಂದಿ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕಷ್ಟೇ.