ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 19 Sept 2013, 8:59 am

ರಾಮನಗರದಿಂದ ಮಾಗಡಿ ಶ್ರೀನಿವಾಸ್ ಪತ್ರ ಬರೆಯುತ್ತಾರೆ. 'ಹತ್ಯಾಚಾರ' ಎಂಬ ಪದ ಬಳಕೆ (ಹೊಸ ಪ್ರಯೋಗ)ಯಿಂದ ವಾಚಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದೀರಿ. ಈ ರೂಪದಲ್ಲಾದರೂ ಭಾಷೆಯ ಬಗ್ಗೆ ಅಧ್ಯಯನ, ಕಾಳಜಿ ಮೂಡಿಸುತ್ತಿರುವ ತಮಗೆ ಅಭಿನಂದನೆಗಳು, ಧನ್ಯವಾದಗಳು'.
'ಸೆ.13ರಂದು ತಾವು ಹೊಸ ಪ್ರಯೋಗಗಳ ಬಗ್ಗೆ ವಿವರಿಸಿದ್ದೀರಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿನ ಪ್ರಯೋಗದ ಬಗ್ಗೆಯೂ ಪ್ರಸ್ತಾಪಿಸಿದ್ದೀರಿ. ಇವುಗಳಲ್ಲಿ ಬಹುಪಾಲು ಒಪ್ಪುವ ವಿಚಾರಗಳೇ. ಆದರೆ, ಮತ್ತೊಂದು ಮಾಹಿತಿ ನೀಡಲು ಬಯಸುತ್ತಿದ್ದೇನೆ. ಇಂಗ್ಲೀಷಿನ 'brunch'(ಬ್ರಂಚ್) ಪದಬಳಕೆ ಹೊಸತಿರಬಹುದು. ಆದರೆ ಇಂತಹ ಪ್ರಯೋಗಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಒಂದು ಉದಾಹರಣೆಯನ್ನು ನೀಡುವುದಾದರೆ; Moped (ಮೊಪೆಡ್) ಎಂಬ ಪದವು 'ಮೋಟಾರೈಸ್ಡ್ ಪೆಡಲ್ ಸೈಕಲ್‌' ಎಂಬ 3 ಪದಗಳ ಮಿಶ್ರಣ. ಹೀಗೆ ಒಂದೊಂದು ಪ್ರಯೋಗವು ಆಯಾ ಭಾಷೆಯ ಜಾಯಮಾನಕ್ಕೆ ಒಗ್ಗುವಂತಿರಬೇಕು. ಕೆಲವು ವಿಚಾರಗಳಲ್ಲಿ ಒಂದೊಂದು ಭಾಷೆಯ ಪ್ರಯೋಗ ಇನ್ನೊಂದು ಭಾಷೆಗೆ ಒಗ್ಗದೆಯೂ ಇರಬಹುದು'.
'ಇಂಗ್ಲೀಷ್ ಭಾಷಾ ತಜ್ಞರೇ ಹೇಳುವಂತೆ; ಅದೊಂದು ಅತಾರ್ಕಿಕವಾದ ಭಾಷೆ. ಕನ್ನಡದಲ್ಲಿ 'ಕ'ಗೆ ಕೊಂಬು ಕೊಟ್ಟರೆ, 'ಕು' ಆಗುತ್ತದೆ. 'ಪ'ಗೆ ಕೊಟ್ಟರೆ ಪು ಆಗುತ್ತದೆ. ಆದರೆ ಇಂಗ್ಲೀಷ್‌ನಲ್ಲಿ ಹಾಗಿಲ್ಲವಲ್ಲ. Cut(ಕಟ್), Put   (ಪಟ್) ಎಂದು ಹೇಳುವುದಿಲ್ಲ. Put (ಪುಟ್)? ಎಂದೇ ಹೇಳಬೇಕು. ಈ ಅವಸ್ಥೆಯನ್ನು ನೋಡಿಯೇ ಒಬ್ಬ ವಿದ್ವಾಂಸರು  ghoti ಪದವನ್ನು  ಫಿಷ್ ಎಂದು ಉಚ್ಚರಿಸುತ್ತಾ; ಒಂದು ತರ್ಕವನ್ನು ಮುಂದಿಡುತ್ತಾರೆ.    gh-Rough   ಎಂಬಲ್ಲಿ ಫ್ ಶಬ್ದ o-women ಇದೆ.  'o'   sound  (ವಿಮೆನ್) ಎಂಬಲ್ಲಿ ti-National(ಷ) ಸೌಂಡ್ ಇದೆ. ಇವೆಲ್ಲವನ್ನು ಬಳಸಿ  ghotiಯನ್ನು Fish   ಎಂದು ಸಂಬೋಧಿಸಬಾರದೇಕೆ? ಎಂಬ ವಾದ ಅವರದ್ದು. ಹೀಗೆ ನೋಡಿದಾಗ ಕನ್ನಡದಲ್ಲಿ ಇಂತಹ ಅತಾರ್ಕಿಕ ವಾದಕ್ಕೆ ಅವಕಾಶವೇ ಇಲ್ಲ. ಅದಕ್ಕೆ ಕನ್ನಡಭಾಷೆಗೆ ತನ್ನದೇ ಆದ ನೆಲೆ-ಬೆಲೆ ಎರಡೂ ಇದೆ'.
'ಇಲ್ಲಿ ಹತ್ಯಾಚಾರ ಎಂಬ ಪದದಲ್ಲಿ ನಾವು ಅರ್ಥೈಸಿಕೊಳ್ಳುವ ಮನೋಭಾವ ಬದಲಾದರೆ, ಬಹುಶಃ ಇಷ್ಟೊಂದು ಗೊಂದಲ ಮೂಡುವುದಿಲ್ಲವೆಂಬ ಭಾವನೆ ನನ್ನದು. ಅರ್ಥಾನುಸಾರವಾಗಿ ಈ ಪದಬಳಕೆ ಸಾಧುವಾದದ್ದೇ. ಆದರೆ ಶಾಬ್ದಿಕ ಹಾಗೂ ವ್ಯಾಕರಣದ ದೃಷ್ಟಿಯಿಂದ ಸ್ವಲ್ಪ ಗೊಂದಲವಾಗುತ್ತದೆ. ಅತಿ (ಕೆಟ್ಟ)೤ಆಚಾರ ಅತ್ಯಾಚಾರ. ಇಲ್ಲಿ ಎರಡು ಅರ್ಥಗರ್ಭಿತ ಪದಗಳು ಯಣ್ ಸಂಧಿಯಾಗಿ ಅತ್ಯಾಚಾರ ಪದವಾಗಿದೆ. ಆದರೆ ಹತ್ಯಾಚಾರವನ್ನು ಬಿಡಿಸಲು ಹೋದರೆ, ಅರ್ಥ ಕೆಡುತ್ತದೆ. ಇದನ್ನು ಹತ್ಯೆಯ೤  ಆಚಾರ ಎಂದು ವಿಗ್ರಹ ವಾಕ್ಯ ಮಾಡಿಕೊಳ್ಳಬಹುದೇನೋ! ಈ ಗೊಂದಲದಿಂದಲೇ ಇಷ್ಟೊಂದು ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿರುವುದು. ಮತ್ತೊಂದು ವಿಚಾರ. ಸೃಜನಶೀಲತೆ, ಪದ ಚಮತ್ಕಾರ, ಸಾರ ಸಂಗ್ರಹ ಈ ವಿಷಯಗಳ ದೃಷ್ಟಿಯಿಂದ ಇಂತಹ ಪದಗಳ ಬಳಕೆ ಅಪೇಕ್ಷಣೀಯ. ಒಂದೇ ಪದದಲ್ಲಿ ಹಲವಾರು ಅರ್ಥ ನೀಡುವ ಶೀರ್ಷಿಕೆ ನೀಡುವುದು ಪತ್ರಕರ್ತರ ಜಾಣ್ಮೆಗೆ ಸವಾಲು. ಅದನ್ನು ಸಹಿಸಿಕೊಳ್ಳುವ ತಾಳ್ಮೆ ನಮಗೂ ಇರಬೇಕು. ಹತ್ಯಾಚಾರವೆಂಬ ಪದವು ನಿಷಿದ್ಧವೇನಲ್ಲ. ಇದನ್ನು ಹೊಸಪದವನ್ನಾಗಿ ಸ್ವೀಕರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಕೇವಲ ಪದ ಬಿಡಿಸಿ ಅರ್ಥ ಹುಡುಕಲು ಹೋದರೆ, ಈ ಗೊಂದಲ ಸಹಜವೇ. ಅರ್ಥದ ದೃಷ್ಟಿಯಿಂದ ಈ ಪ್ರಯೋಗ ನಿಜಕ್ಕೂ ಸ್ತುತ್ಯಾರ್ಹ'.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement