ನನ್ನ ಮಗನನ್ನು ನೋಡಲು ಅಪ್ಪಣೆ ಪಡೆಯಬೇಕೆ?
ಗುರುದಾಸ್ ಬ್ಯಾನರ್ಜಿ ಬಂಗಾಳದ ಒಬ್ಬ ಗೌರವಾನ್ವಿತ ನ್ಯಾಯಾಧೀಶರಾಗಿದ್ದವರು. 1890ರಲ್ಲಿ ಕಲ್ಕತ್ತಾ ವಿಶ್ವ ವಿದ್ಯಾನಿಲಯದ ಪ್ರಥಮ ಭಾರತೀಯ ಉಪಕುಲಪತಿಗಳಾಗಿ ಸೇವೆಸಲ್ಲಿಸಿದವರು. ಅದಕ್ಕೂ ಮೊದಲು ಬೆಂಗಾಲ್ ನ್ಯಾಷ್ನಲ್ ಕಾಲೇಜಿನಲ್ಲಿ ಅರವಿಂದರು ಪ್ರಾಚಾರ್ಯರಾಗಿದ್ದಾಗ ಗುರುದಾಸರು ಅಲ್ಲಿ ಪ್ರಾಧ್ಯಾಪಕರಾಗಿದ್ದರು. ನಂತರದ ದಿನಗಳಲ್ಲಿ ಬಂಗಾಳದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ, ಮುಖ್ಯ ನ್ಯಾಯಾಧೀಶರಾಗಿ ಸಹ ಸೇವೆಸಲ್ಲಿಸಿದರು. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಅವರು ಒಬ್ಬ ದಾದಿಯ ಎದೆ ಹಾಲು ಕುಡಿದು ಬೆಳೆದರು. ಅವರಿಗೆ ಆಕೆಯನ್ನು ಕಂಡರೆ ಅತೀವ ಪ್ರೀತಿ ಮತ್ತು ಗೌರವವಿತ್ತು. ಒಮ್ಮೆ ಅವರು ನ್ಯಾಯಾಲಯದಲ್ಲಿ ಯಾವುದೋ ಮೊಕದ್ದಮೆಯನ್ನು ಗಂಭೀರವಾಗಿ ಆಲಿಸುತ್ತಿದ್ದಾಗ ಬಾಗಿಲಲ್ಲಿ ಒಬ್ಬ ಮುದುಕಿ ಪ್ರವೇಶಿಸಲು ವಿಫಲ ಸಾಹಸ ಮಾಡುತ್ತಿದ್ದಳು. ಬಾಗಿಲಲ್ಲಿದ್ದ ಸಿಬ್ಬಂದಿ ಆಕೆಯನ್ನು ತಡೆಯುತ್ತಿದ್ದುದೂ, ಆ ಮುದುಕಿ ಜೋರಾಗಿ ಕೂಗಿ ಗಲಾಟೆ ಮಾಡುತ್ತಿದ್ದುದೂ ಗುರುದಾಸರ ಕಣ್ಣಿಗೆ ಬಿತ್ತು. ಆಗ ಗುರುದಾಸರು ತಮ್ಮ ಆಸನದಿಂದ ಇಳಿದು ಬಾಗಿಲ ಬಳಿ ಬಂದು ನೋಡುತ್ತಾರೆ, ಆ ಮುದುಕಿ ಬೇರೆ ಯಾರೂ ಅಲ್ಲ, ತನ್ನ ಸಾಕುತಾಯಿ. ಎಷ್ಟೋ ವರ್ಷಗಳ ನಂತರ ಆಕೆಯ ದರ್ಶನಭಾಗ್ಯ ಸಿಕ್ಕಿದೆ. ಕೂಡಲೇ ಆ ವೃದ್ಧೆಯ ಕಾಲಿಗೆ ಬಿದ್ದು ನಮಸ್ಕರಿಸಿದರು. ತಡೆಯುತ್ತಿದ್ದ ಸಿಬ್ಬಂದಿಗೆ ಗದರಿದರು. ಈ ದೃಶ್ಯವನ್ನು ನೋಡಿದ ಎಲ್ಲರಿಗೂ ಆಶ್ಚರ್ಯ. ನ್ಯಾಯಾಧೀಶರೊಬ್ಬರು ಸಾಮಾನ್ಯ ಬಡ ವೃದ್ಧೆಯ ಕಾಲಿಗೆ ನಮಸ್ಕರಿಸುವುದೆಂದರೆ! ಆಗ ಗುರುದಾಸರು, 'ಈಕೆ ನನಗೆ ಪ್ರೀತಿವಾತ್ಸಲ್ಯ ನೀಡಿದ ಸಾಕುತಾಯಿ. ಈಕೆಯ ಕರುಣೆಯಿಂದಲೇ ನಾನಿಂದು ಇಂತಹ ಉನ್ನತ ಹುದ್ದೆಯನ್ನು ಏರಿರುವುದು' ಎಂದು ಹೇಳಿದರು. ಆಗ ಆಕೆ, 'ಯಾರೋ ಹೇಳಿದರು, ನೀನೀಗ ಬಹಳ ದೊಡ್ಡ ಕೆಲಸದಲ್ಲಿದ್ದೀಯ ಅಂತ. ಅದಕ್ಕಾಗಿ ನಿನ್ನನ್ನು ನೋಡಲು ಬಂದೆ. ಆದರೆ ನಿನ್ನನ್ನು ನೋಡಲು ಮೊದಲೇ ಅಪ್ಪಣೆ ತೆಗೆದುಕೊಳ್ಳಬೇಕೆಂಬ ವಿಚಾರ ನನಗೆ ತಿಳಿದಿರಲಿಲ್ಲ.
ನಿನ್ನನ್ನು ನೋಡಲೂ ಅಪ್ಪಣೆ ಪಡೆಯಬೇಕೆ? ಹೇಗಿದ್ದೀ ಮಗೂ?' ಎಂದಾಗ ಆ ಮುದುಕಿಯ ಪ್ರೀತಿಯ ಮಾತುಗಳನ್ನು ಕೇಳಿ ಗುರುದಾಸರ ಕಣ್ಣಲ್ಲಿ ನೀರು ತುಂಬಿ ಬಂತು. ಆ ವೃದ್ಧೆಗೂ ದುಃಖ ತಡೆಯಲಾಗಲಿಲ್ಲ. ಆಕೆ ಪ್ರೀತಿಯಿಂದ ಗುರುದಾಸರನ್ನು ಅಪ್ಪಿ ಅವರ ಹಣೆಗೆ ಮುತ್ತಿಕ್ಕಿದರು. ತಾಯಿ-ಮಗನ ಪ್ರೀತಿ ಮತ್ತು ನ್ಯಾಯಾಧೀಶರ ಮಾತೃ ಭಕ್ತಿಯನ್ನು ನೋಡಿ ಅಲ್ಲಿದ್ದ ಎಲ್ಲರೂ ಮೂಕವಿಸ್ಮಿತರಾದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.