ಮತ್ತೆ ಮಿತವ್ಯಯದ ಮಾತು
ಪ್ರಸ್ತುತ ವಿತ್ತೀಯ ವರ್ಷದ ಮೊದಲ ಅರ್ಧಭಾಗ ಮುಗಿಯುತ್ತ ಬಂದಂತೆ, ಕೇಂದ್ರ ಸರ್ಕಾರಕ್ಕೆ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಬೇಕಾದ ಅಗತ್ಯ ಕಂಡು ಬಂದಿದೆ. ಹೀಗಾಗಿ ವಿತ್ತ ಮಂತ್ರಾಲಯದ ಅಧಿಪತಿ ಚಿದಂಬರಮ್ ಅವರು ಮಿತವ್ಯಯ ಸೂತ್ರದ ಸುತ್ತೋಲೆಯನ್ನು ಪ್ರಕಟಿಸಿರುವುದು ಸಾಮಯಿಕ. ಇದು ಅಗತ್ಯವಾಗಿತ್ತು.
ಸಾಮಾನ್ಯವಾಗಿ, ಸರ್ಕಾರಗಳು ಇಂತಹ ಸಮಯದಲ್ಲಿ ಯೋಜನೆಯ ಹೊರತಾದ ಬಾಬಿನ ವೆಚ್ಚವನ್ನು ಶೇಕಡಾ ಹತ್ತರಷ್ಟನ್ನು ಕಡಿಮೆ ಮಾಡಲು ಎಲ್ಲ ಇಲಾಖೆಗಳಿಗೂ ಸೂಚನೆ ನೀಡುತ್ತವೆ. ಇದು ಒಂದು ಮಾಮೂಲಿ ಸೂತ್ರ.
ಅದರಲ್ಲೂ ಹೊಸ ನೇಮಕಗಳು ಬೇಡ, ಆದ್ದೂರಿಯ ಸರ್ಕಾರಿ ಸಮಾರಂಭಗಳು, ವಿಚಾರ ಸಂಕಿರಣಗಳು ಬೇಡ, ಸಾಧ್ಯವಿರುವಷ್ಟೂ ವಾಹನಗಳ ಬಳಕೆಯನ್ನು ಕಡಿಮೆ ಮಾಡಬೇಕು ಎನ್ನುವಂತಹ ಸೂತ್ರ ನಿಜವಾಗಲೂ ತುಂಬಾ ಹಳೆಯ ಕಾಲದ್ದು. ಅದು ಬಳಕೆಯಲ್ಲಿ ತನ್ನ ಅರ್ಥವನ್ನೇ ಕಳೆದುಕೊಂಡಿದೆ.
ಮಿತವ್ಯಯದ ಘೋಷಣೆ, ಸೂತ್ರ ಇವೆಲ್ಲವೂ ಈಗ ಒಂದು ರೀತಿಯಲ್ಲಿ ಅರ್ಥಹೀನ ಎನ್ನುವ ಭಾವನೆ ಬೆಳೆಯುತ್ತಿದೆ. ಯಾಕೆಂದರೆ ಈ ಸೂತ್ರಗಳನ್ನು ಕೆಳಹಂತಗಳಿಗೆ ರವಾನಿಸಿ, ದೆಹಲಿಯ ಮಂತ್ರಾಲಯಗಳಲ್ಲಿ ಹೆಪ್ಪು ಗಟ್ಟಿ ಕೂತಿರುವ ಅಧಿಕಾರ ಕೇಂದ್ರಗಳಲ್ಲಿ ಅದನ್ನು ಪಾಲಿಸದೇ ಹೋದರೆ ಇನ್ನು ಯಾವ ರೀತಿಯ ಸಂದೇಶ ರವಾನೆಯಾಗುವುದು ಸಾಧ್ಯ?
ಮಿತವ್ಯಯದ ಆಚರಣೆ ಪ್ರತ್ಯಕ್ಷವಾಗಿ ಜನರ ಕಣ್ಣಿಗೆ ಕಾಣುವಂತೆ ಕೇಂದ್ರ ಸರ್ಕಾರದ ಸಚಿವಾಲಯಗಳಿಂದಲೇ ಆರಂಭವಾಗಬೇಕು. ಇತರ ಕಾರ್ಯಾಲಯಗಳಿಗೆ ಅದು ಉದಾಹರಣೆಯಂತಿರಬೇಕು.