ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಕ್ರಮ ಗಣಿಗಾರಿಕೆ, ಕೆಪಿಎಸ್‌ಸಿ ಅವಾಂತರದ ತ್ವರಿತ ವಿಚಾರಣೆ

Srinivasa Murthy VN
Updated On : 22 Sept 2013, 9:45 am

ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಈಗ ನಿಜವಾಗಲೂ ಸುದ್ದಿಯ ಕೇಂದ್ರವಾಗಿರುವುದು ಅಕ್ರಮ ಗಣಿಗಾರಿಕೆ ಹಾಗೂ ಲೋಕಸೇವಾ ಆಯೋಗದಲ್ಲಿ ಕಂಡು ಬಂದಿರುವ ಭ್ರಷ್ಟಾಚಾರದ ಆರೋಪಗಳು.
ನಿಜ. ಇದೇನೂ ಹೊಸ ವಿಚಾರಗಳಲ್ಲ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಅನಂತರದ ಘಟನೆಗಳಿಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಈಗಿನ ಸರ್ಕಾರ ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆ, ವಿಚಾರಣೆಗೆ ಏರ್ಪಾಟು ಮಾಡುವುದರಲ್ಲಿ ಹಿಂದೆ ಮುಂದೆ ನೋಡಬೇಕಾಗಿಲ್ಲ.
ಅಕ್ರಮ ಗಣಿಗಾರಿಕೆಯಲ್ಲಿನ ಲೂಟಿ, ಅದಕ್ಕೆ ಹೊಂದಿಕೊಂಡಂತೆಯೇ ಇರುವ ಬೇಲೆಕೇರಿ ರೇವಿನ ಮೂಲಕ ಅದಿರನ್ನು ಮೋಸದ ಹಾದಿಯಲ್ಲಿ ರಫ್ತು ಮಾಡಿದ್ದು, ಹೆಚ್ಚು ಕಡಿಮೆ ಈಗ ಹಳೆಯ ವಿಚಾರಗಳೇ. ಸರ್ಕಾರದ ಬಳಿ ಲೋಕಾಯುಕ್ತ ವರದಿ ಇದೆ. ಈಗಾಗಲೇ ಅನೇಕ ಪ್ರಕರಣಗಳಲ್ಲಿ ಸಿಐಡಿ, ಸಿಬಿಐ ದಳಗಳು ತಮ್ಮ ತನಿಖೆ ಮುಗಿಸಿ ವರದಿಗಳನ್ನು ಸಲ್ಲಿಸಿವೆ. ಇನ್ನು ಉಳಿದಿರುವುದು ಸರ್ಕಾರ ವಿಶೇಷ ನ್ಯಾಯಾಲಯಗಳಿಗೆ ಅಧಿಕಾರ ನೀಡಿ ಕ್ಷಿಪ್ರ ವಿಚಾರಣೆಗೆ ಅವಕಾಶ ಮಾಡಿಕೊಡುವುದು.
ವಿಶೇಷ ನ್ಯಾಯಾಲಯಗಳ ರಚನೆಯನ್ನು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ವಚನ ನೀಡಿದ್ದಾರೆ. ಅದನ್ನು ತತ್‌ಕ್ಷಣದಲ್ಲೇ ಈಡೇರಿಸಬೇಕು. ಇದುವರೆಗೆ ಸಾಕು - ಬೇಕಾದಷ್ಟು ಕಾಲಹರಣವಾಗಿದೆ. ಇನ್ನಾದರೂ ಆ ಪ್ರವೃತ್ತಿಯನ್ನು ದಮನ ಮಾಡಬೇಕು. ನ್ಯಾಯಾಲಯಗಳಲ್ಲಿನ ವಿಚಾರಣೆ ಎಂದರೆ ಅದೊಂದು ಕೆಂಪು ಪಟ್ಟಿಯ ಜತೆ ನಡೆಸಬೇಕಾದ ಹೋರಾಟವೇ. ವಿಷಯ ಜ್ಞಾನವಿರುವ ವಿಶೇಷ ಪ್ರಾಸಿಕ್ಯೂಟರ್‌ಗಳನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಈ ಪ್ರಕರಣದಲ್ಲಿ ಸಂಬಂಧಪಟ್ಟವರಲ್ಲಿ ಬಹುಮಂದಿ ಅತಿ ಶ್ರೀಮಂತರು, ಬಲಾಢ್ಯರು ಹಾಗೂ ಚಾಣಾಕ್ಷರು. ಅಂತಹವರ ಮೇಲಿನ ಆರೋಪಗಳ ವಿಚಾರಣೆ ನಡೆಸುವ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟವರೆಲ್ಲರೂ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಅಕ್ರಮ ಗಣಿಗಾರಿಕೆಯಲ್ಲಿ ರಾಜಕಾರಣಿಗಳ ಪಾತ್ರವೂ ಇರುವುದರಿಂದ ಇಲ್ಲಿ ಪಕ್ಷಪಾತದ ಆರೋಪಕ್ಕೆ ಅವಕಾಶವಿರದಂತೆ ಸರ್ಕಾರ ವರ್ತಿಸಬೇಕಾಗಿದೆ.
ಲೋಕಸೇವಾ ಆಯೋಗದಲ್ಲಿ ಕಂಡುಬಂದಿರುವ ಭ್ರಷ್ಟಾಚಾರದ ಆರೋಪಗಳು ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುವಂತಹದ್ದು. ಈಗ ಬೆಳಕಿಗೆ ಬಂದಿರುವ ಪ್ರಕರಣಗಳನ್ನು ಜನರಲ್ಲಿ ವಿಶ್ವಾಸ ಮೂಡುವಂತಹ ರೀತಿಯಲ್ಲಿ ನಿಭಾಯಿಸುವುದು ಸರ್ಕಾರದ ಆದ್ಯತೆಯಾಗಬೇಕು. ಇಲ್ಲಿ ಎಡರು-ತೊಡರುಗಳು ಬಂದರೆ ಸರ್ಕಾರಕ್ಕೆ ಸರ್ಕಾರವೇ ಅಪರಾಧಿಯ ಸ್ಥಾನದಲ್ಲಿ ನಿಲ್ಲಬೇಕಾದೀತು.
2011 ರ ಪ್ರೊಬೇಷನರಿ ಗೆಜೆಟೆಡ್ ಅಧಿಕಾರಿಗಳ ನೇಮಕದ ಪ್ರಕರಣದಲ್ಲಿ ಆಯೋಗದ ಅಧ್ಯಕ್ಷ ಗೋನಾಲ ಭೀಮಪ್ಪ ಅವರೂ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಗುರ್ತಿಸಲಾಗಿದೆ. ಅವರೆಲ್ಲರ ವಿರುದ್ಧದ ಆರೋಪಗಳನ್ನು ವಿವರವಾಗಿ ತನಿಖೆಗೆ ಒಳಪಡಿಸಿರುವ ಸಿಐಡಿ ದಳ ಕರಡು ಆರೋಪಗಳ ಪಟ್ಟಿಯನ್ನು ಸರ್ಕಾರಕ್ಕೆ ತಲುಪಿಸಿ, ಅವರೆಲ್ಲರ ವಿರುದ್ಧ ಮೊಕದ್ದಮೆಗಳನ್ನು ಹೂಡಲು ಅನುಮತಿಯನ್ನು ಕೇಳಿದೆ. ಆರೋಪಗಳ ಪಟ್ಟಿಯ ದಾಖಲೆಗಳು ಸುಮಾರು ಆರುಸಹಸ್ರ ಪುಟಗಳಷ್ಟಿದೆ ಎಂದು ವರದಿಗಳು ತಿಳಿಸಿವೆ. ಅಷ್ಟು ದೊಡ್ಡ ಪ್ರಮಾಣದ ದಾಖಲೆಯನ್ನು ಓದಿ, ಅನಂತರ ಕಾಯಿದೆಯ ವಿಧಿನಿಯಮಗಳಂತೆ ಕ್ರಮ ಕೈಗೊಳ್ಳುವುದು ಸಾಮಾನ್ಯವಾದ ಕೆಲಸವಲ್ಲ. ಇಲ್ಲಿ ಎಲ್ಲಾದರೂ ಸ್ವಲ್ಪ ತಪ್ಪಾದರೂ, "ತಾಂತ್ರಿಕ ಕಾರಣಗಳಿಂದ, ಅಥವಾ ನಂಬಲರ್ಹವಾದ ಸಾಕ್ಷ್ಯ- ಆಧಾರಗಳ ಅಭಾವದಿಂದ" ಮೊಕದ್ದಮೆ ಬಿದ್ದು ಹೋಗುವ ಅಪಾಯವಿದೆ. ಇದನ್ನು ತಪ್ಪಿಸಲು ಸರ್ಕಾರದ ಪರವಾಗಿ ಕೇಸುಗಳನ್ನು ನಡೆಸಲು ಚಾಣಾಕ್ಷರೇ ಬೇಕು. ಇದು ಸರ್ಕಾರದ ಪ್ರತಿಷ್ಠೆಯ ಪ್ರಶ್ನೆ. ಯಾವುದೇ ಕಾರಣಕ್ಕೂ ಆಲಸ್ಯಕ್ಕೆ ಅವಕಾಶವನ್ನು ಕೊಡಬಾರದು.
ಈಗಾಗಲೇ ಪ್ರಕಟವಾಗಿರುವ ನೇಮಕಗಳನ್ನು ರದ್ದುಪಡಿಸಿ, ಆ ವ್ಯಕ್ತಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯ ಮಾಪನಕ್ಕೆ ಒಪ್ಪಿಸಿ, ಹೊಸ ಸಂದರ್ಶನಕ್ಕೆ ವ್ಯವಸ್ಥೆ ಮಾಡುವ ವಿಚಾರ ಒಳ್ಳೆಯದೇ. ನೂತನ ಸಂದರ್ಶನ ಮಂಡಳಿಯಲ್ಲಿ ಲೋಕಸೇವಾ ಆಯೋಗದ ಸದಸ್ಯರನ್ನು ಹೊರತುಪಡಿಸಿ ವಿಷಯ ತಜ್ಞರನ್ನೇ ನೇಮಿಸಬೇಕೆನ್ನುವ ಚಿಂತನೆಯೂ ಸ್ವಾಗತಾರ್ಹವೇ. ಲೋಕಸೇವಾ ಆಯೋಗದಲ್ಲಿ ಈಗ ನಡೆದಿರುವ ತನಿಖೆ, ಮುಂದೆ ನಡೆಯಲಿರುವ ವಿಚಾರಣೆಗೆ ಜನಾಂಗೀಯ ಬಣ್ಣವನ್ನು ಲೇಪಿಸುವ ಪ್ರಯತ್ನ ನಡೆದಿರುವಂತಿದೆ. ಅದನ್ನು ಯಾರೇ ನಡೆಸಿರಲಿ, ಅದು ಅಕ್ಷಮ್ಯ. ಇದು ಕರ್ನಾಟಕದ ಆಡಳಿತ ವ್ಯವಸ್ಥೆಯ ಪ್ರತಿಷ್ಠೆಯ ಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement