ಈ ಹಳ್ಳಿಯಲ್ಲಿ 60 ಮಂದಿ ಲಕ್ಷಾಧೀಶರು!
ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ಒಂದು ಕುಗ್ರಾಮ ಹೈವೇರ್ ಬಜಾರ್. ಬಂಜರು ಭೂಮಿ, ಬಡಕಲು ದನಕರುಗಳು, ಬಡತನದ ಬೇಗೆ ಸಹಿಸಲಾಗದೆ ಜನ ಗುಳೆ ಹೋಗುತ್ತಿದ್ದ ಈ ಗ್ರಾಮದಲ್ಲಿ ಮದ್ಯವ್ಯಸನ ಮತ್ತು ಅಪರಾಧ ಹೆಚ್ಚಾಗಿತ್ತು. ಅಕ್ಷರಸ್ಥರ ಸಂಖ್ಯೆ ಅಷ್ಟಕ್ಕಷ್ಟೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿಗೂ ತತ್ವಾರ. ಜನರ ತಲಾ ಆದಾಯ ಕೇವಲ 830 ರು.ಗಳು. ಇದು 1995ರಲ್ಲಿ ಇದ್ದಂತಹ ದಾರುಣ ಪರಿಸ್ಥಿತಿ. ಆದರೆ ಈಗ ಅಲ್ಲಿ ನಂಬಲಾಗದ ಬದಲಾವಣೆಯಾಗಿದೆ. ಅಲ್ಲಿನ 235 ಕುಟುಂಬಗಳ 1250 ಜನ ಸುಖ, ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ದನಕರುಗಳು ಮೈತುಂಬಿಕೊಂಡು ಹಾಲು ಕೊಡುತ್ತಿವೆ. ಭೂಮಿ ಫಲವತ್ತಾಗಿದ್ದು ಸದಾ ಪೈರು ಪಚ್ಚೆಗಳಿಂದ ಕಂಗೊಳಿಸುತ್ತಿವೆ. ಪಾನನಿರೋಧವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಕುಡಿಯುವ ನೀರಿಗೆ ಮತ್ತು ವ್ಯವಸಾಯಕ್ಕೆ ಸಾಕಷ್ಟು ನೀರು ದೊರೆಯುತ್ತಿದೆ. ಪ್ರತಿ ಮನೆಗೂ ಶೌಚಾಲಯವಿದೆ, ಸುಸಜ್ಜಿತ ಶಾಲೆ ತಲೆಯೆತ್ತಿದೆ. ಗುಳೆ ಹೋಗಿದ್ದ ಜನ ಹಳ್ಳಿಗೆ ವಾಪಸ್ಸಾಗಿದ್ದಾರೆ. ಜನರ ತಲಾ ಆದಾಯವೀಗ ಸರಾಸರಿ 30 ಸಾವಿರ. ಈ ಹಳ್ಳಿಯಲ್ಲೀಗ 60 ಜನ ಲಕ್ಷಾಧೀಶರಿದ್ದಾರೆ. ದೇಶದ ಗಮನ ಸೆಳೆದ ಈ ಗ್ರಾಮಕ್ಕೀಗ ಸಂಶೋಧಕರು, ಸರ್ಕಾರದ ಅಧಿಕಾರಿಗಳು ಬಂದು ಈ ಬದಲಾವಣೆಯನ್ನು ಅಚ್ಚರಿಯಿಂದ ನೋಡುತ್ತಾರೆ. ಈ ಬದಲಾವಣೆಗೆ ಮೂಲ ಕಾರಣ ಪುರುಷ ಈ ಗ್ರಾಮದ ಸರಪಂಚ್ ಪೋಪಟ್ರಾವ್ ಪವಾರ್. ಗ್ರಾಮದ ಏಕೈಕ ಸ್ನಾತಕೋತ್ತರ ಪದವೀಧರ. ಎಲ್ಲರಂತೆ ಆತನ ಮನೆಯವರೂ ತಮ್ಮ ಮಗ ಪಟ್ಟಣಕ್ಕೆ ಹೋಗಿ ಸರ್ಕಾರಿ ನೌಕರಿ ಸೇರಲೆಂದು ಬಯಸಿದ್ದರು. ಆದರೆ ಪವಾರ್ ತನ್ನ ಹಳ್ಳಿಯ ದಾರುಣ ಸ್ಥಿತಿ ನೋಡಿ ಚುನಾವಣೆಯಲ್ಲಿ ಸ್ಫರ್ಧಿಸಿ ಅವಿರೋಧವಾಗಿ ಸರಪಂಚ್ ಆಗಿ ಚುನಾಯಿತನಾದ. ಆತ ಮೊದಲು ಮಾಡಿದ ಕೆಲಸವೆಂದರೆ ಹಳ್ಳಿಯಲ್ಲಿದ್ದ 22 ಕಳ್ಳಭಟ್ಟಿ ಕೇಂದ್ರಗಳನ್ನು ಮುಚ್ಚಿಸಿದ್ದು. ನಿಗದಿತವಾಗಿ ಗ್ರಾಮಸಭೆಯನ್ನು ನಡೆಸಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಿದ್ದು. ಮಳೆಗಾಲದಲ್ಲಿ ವೃಥಾ ಹರಿದುಹೋಗುವ ನೀರನ್ನು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚಿಸಿದ್ದಲ್ಲದೆ, ಅರಣ್ಯ ಬೆಳವಣಿಗೆಗೆ ಒತ್ತು ನೀಡಿದ್ದು. ಸಾಮೂಹಿಕ ಶ್ರಮದಾನದ ಮೂಲಕ ಹಳ್ಳಿಯ ಸ್ವಚ್ಛತೆ ಹೆಚ್ಚಿದೆ. ಪರಸ್ಪರ ಸಹಕಾರದಿಂದ ವ್ಯವಸಾಯ ಮಾಡುವುದರಿಂದ ರೈತ ಕಾರ್ಮಿಕರ ಸಮಸ್ಯೆ ಇಲ್ಲಿಲ್ಲ. ಸರ್ಕಾರದ ಅನುದಾನವನ್ನು ಸಂಪೂರ್ಣವಾಗಿ ಬಳಸಿ ಪಾರದರ್ಶಕ ಲೆಕ್ಕ ಪತ್ರವನ್ನಿಡಲಾಗಿದೆ. ಈ ಬಗ್ಗೆ ಗ್ರಾಮದ ಯಾರು ಬೇಕಾದರೂ ಯಾವಾಗ ಬೇಕಾದರೂ ಪರಿಶೀಲಿಸಬಹುದಾಗಿದೆ. ಗ್ರಾಮದಲ್ಲಿ ಒಂದೇ ಒಂದು ಸಾರ್ವಜನಿಕ ಗಣಪತಿಯನ್ನಿಟ್ಟು ಅದರಿಂದ ಉಳಿತಾಯವಾದ ಹಣವನ್ನು ಕಾರ್ಗಿಲ್ ಹುತಾತ್ಮರಿಗೆ, ಲಾತೂರ್ ಸಂತ್ರಸ್ತರಿಗೆ ನೀಡಲಾಗಿದೆ. ಅಚ್ಚುಕಟ್ಟಾದ ಮಾರುಕಟ್ಟೆ, ಭವ್ಯವಾದ ಗ್ರಾಮ ಪಂಚಾಯ್ತಿ ಕಟ್ಟಡ, ಉತ್ತಮ ರಸ್ತೆಗಳು, ಸದಾಕಂಗೊಳಿಸುವ ಹೊಲಗದ್ದೆಗಳು, ಹಸಿರಾದ ಅರಣ್ಯ ಇವೆಲ್ಲಾ ಲಭ್ಯವಾಗಿರುವುದು ಪೋಪಟ್ ರಾವ್ನಿಂದ. ಮಹಾರಾಷ್ಟ್ರ ಸರ್ಕಾರ ಈ ಗ್ರಾಮವನ್ನು ಮಾದರಿ ಹಳ್ಳಿಯೆಂದು ಪುರಸ್ಕರಿಸಿದೆ. ಅಂದಹಾಗೆ ಈ ಗ್ರಾಮ ಅಣ್ಣಾಹಜಾರೆಯವರ ರಣಗಾಂವ್ ಸಿದ್ಧಿಯಿಂದ 35 ಕಿ.ಮೀ.ದೂರದಲ್ಲಿದೆ!
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.