ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರಲಾಪದ ಹಿಂದಿರುವ ಹುಳುಕು

Srinivasa Murthy VN
Updated On : 22 Sept 2013, 9:50 am

ಸೆಪ್ಟೆಂಬರ್22ರ 'ಕನ್ನಡ ಪ್ರಭ'ದಲ್ಲಿ ನಮ್ಮ ಪ್ರಮುಖ ಎಡ(ಬಿಡಂಗಿ)ಪಂಥೀಯ ಸಾಹಿತಿಗಳು ಜಂಟಿಯಾಗಿ 'ಮಾಧ್ಯಮಗಳಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ದುರುಪಯೋಗ' ಕುರಿತಾಗಿ ಅಲವತ್ತುಕೊಂಡಿದ್ದಾರೆ. ಮಾಧ್ಯಮಗಳಲ್ಲಿನ ಅಭಿಪ್ರಾಯ ಸ್ವಾತಂತ್ರ್ಯ 'ರಿವರ್ಸ್‌' ಹೊಡೆದಾಗ ಇವರಿಗೆ ಅದರ ದುರುಪಯೋಗದ ಬಗ್ಗೆ ಜ್ಞಾನೋದಯವಾಗಿದ್ದು ನೋಡಿ ಮರುಕವೆನಿಸಿತು. ಇದೇ ಮಾಧ್ಯಮದಲ್ಲಿ ತಮ್ಮ ಓತಪ್ರೇತ ಉವಾಚಗಳಿಗೆ ಅವಿಚ್ಛಿನ್ನ ಪ್ರಚಾರ ದೊರೆಯುತ್ತಿದ್ದಾಗ ಪ್ರಸನ್ನವದನರಾಗಿ ಅನುಭವಿಸುತ್ತಿದ್ದ 'ಸುಖ'ಕ್ಕೆ ಸಂಚಕಾರ ಒದಗುತ್ತಿದೆಯೆಲ್ಲಾ ಎಂಬ ಅವ್ಯಕ್ತ ಭಯವೇ ಈ ಪ್ರಲಾಪಗಳಿಗೆ ಕಾರಣ ಎಂಬುದನ್ನು ಅರಿಯದಷ್ಟು ದಡ್ಡರೇನಲ್ಲ ಜನರು. ಪ್ರಗತಿ ಶೀಲತೆ, ಬಂಡಾಯ, ನವೋದಯದ ಹೆಸರಿನಲ್ಲಿ ನಡೆಸುತ್ತಿದ್ದ ಅಕ್ಷರ ದಬ್ಬಾಳಿಕೆಗಳಿಗೆಲ್ಲಾ ಪುಟಗಟ್ಟಳೆ ಪ್ರಚಾರ ಕೊಟ್ಟು ಇವರನ್ನೆಲ್ಲಾ ದೊಡ್ಡವರನ್ನಾಗಿಸಿದ್ದು ಇದೇ ಮಾಧ್ಯಮಗಳ ಅಭಿಪ್ರಾಯ ಸ್ವಾತಂತ್ರ್ಯದ ವೇದಿಕೆಗಳೇ ಅಲ್ಲವೇ? ಆಗ ಇವರಿಗೆ ಮಾಧ್ಯಮಗಳಲ್ಲಿನ ಏಕಭಿಪ್ರಾಯ ಶೈಲಿ ಬಗ್ಗೆ ಧ್ವನಿಯೆತ್ತಬೇಕೆಂದು ಅನ್ನಿಸಲೇ ಇಲ್ಲ ಅಲ್ಲವೇ? ಒಬ್ಬ ವ್ಯಕ್ತಿಯ ವೈಭವೀಕರಣ, ವಿರೋಧಿಗಳ ಹಳಿಯುವಿಕೆ, ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಬೊಬ್ಬಿಡುವ ಇವರಿಗೆ ಒಬ್ಬ ವ್ಯಕ್ತಿಯನ್ನು ಯಾವುದೇ ಸಾಕ್ಷಾಧಾರಗಳು ಇಲ್ಲದೇ ಹೋದರೂ ಅಪರಾಧಿಯೆಂದು ಗಣಿಸಿ ಗಲ್ಲಿಗೇರಿಸಿ ಬಿಡಲು ತಾವೇ ಜಡ್ಜ್, ಜ್ಯೂರಿ, ಪ್ರಾಸಿಕ್ಯೂಟರ್ ಆಗಿ ನಿರ್ಧರಿಸುವ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಹರಿಹಾಯುತ್ತಿದ್ದಾಗ ಅದು ಪ್ರಜಾಪ್ರಭುತ್ವದ ತತ್ವಗಳಿಗ್ಗೆ ವಿರುದ್ಧವಾದದ್ದು ಎಂದು ಅನ್ನಿಸಲೇ ಇಲ್ಲ ಏಕೆ? ಬಂಡಾಯ ಸಾಹಿತ್ಯ ಸಮ್ಮೇಳನವೊಂದರಲ್ಲಿ ಎಡಚರೊಬ್ಬರು 'ಪುರೋಹಿತಶಾಹಿಗಳನ್ನು ಕಂಡೊಡನೆ ನಿಮ್ಮ ಬೂಟಿನ ಲೇಸನ್ನು ಸಡಲಿಸಿ' ಎಂದು ಅಪ್ಪಣೆ ಕೊಡಿಸಿದ್ದರಲ್ಲಾ, ಆಗ ಈ ರೀತಿಯ ಅಪಾಯಗಳು ಕಂಡಿರಲಿಲ್ಲ ಅಲ್ಲವೇ? ಇವರದೇ ಗುಂಪಿನ ನಕ್ಸಲ್ ಹಿತೈಷಿ ಪತ್ರಕರ್ತೆ, ನಾಡಿನ ಹಲವಾರು ಜನ ಪೂಜ್ಯ ಭಾವನೆಯಿಂದ ನೋಡುವ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳನ್ನು, ಪೇಜಾವರ ಮಠಾಧೀಶರನ್ನು ಯಾವ್ಯಾವ ಭಾಷೆ ಬಳಸಿ ನಿಂದಿಸಿದ್ದರು ಎಂಬುದು ನೆನಪಿದೆಯೇ ಅಥವಾ ಜಾಣಮರೆವೋ? ಆಗ ಮಾಧ್ಯಮಗಳಿಗೆ 'ಸ್ವಯಂ ನಿಯಂತ್ರಣ' ಇರಬೇಕೆಂದು ಪತ್ರಿಕಾ ಹೇಳಿಕೆ ಕೊಟ್ಟ ನೆನಪಿಲ್ಲವಲ್ಲ. ಈಗ ಇತಿಹಾಸದ ಚಕ್ರಗಳು ತಿರುಗುತ್ತಿವೆ. ತಲೆಗೆ ಹಾಕಿದ ನೀರು ಕೆಳಗೆ ಇಳಿಯಲೇ ಬೇಕು. ಅಂತರ್ಜಾಲ ಕ್ರಾಂತಿಯಾದ ಮೇಲೆ ನಿಮ್ಮ ಹುಸಿ ವಾದಸರಣಿಗಳನ್ನು ಖಂಡತುಂಡವಾಗಿ ಖಂಡಿಸಿ ನಮ್ಮ ಅಭಿಪ್ರಾಯ ಹೇಳುವ ಮುಕ್ತ ಸ್ವಾತಂತ್ರ್ಯ ಮಾಧ್ಯಮ ಒದಗಿಸಿದೆ. ನಿಮ್ಮ ಅಭಿಪ್ರಾಯಗಳೂ ಅದೇ ಸ್ವಾತಂತ್ರ್ಯದಡಿಯಲ್ಲಿ ಪ್ರಕಟಗೊಳ್ಳುತ್ತಿವೆ. ನಿಮ್ಮ ಆಟಾಟೋಪಗಳನ್ನು ಸಮರ್ಥಿಸಿಕೊಳ್ಳುವ ಇರಾದೆ ಇದ್ದಲ್ಲಿ ಅಭಿಪ್ರಾಯ ಮಂಡಿಸುವ ನಿಮ್ಮ ಸ್ವಾತಂತ್ರ್ಯಕ್ಕೆ ಯಾರು ಅಡ್ಡಿ ಬಂದಿದ್ದಾರೆ? ನಿಮ್ಮ ನಿಲುವುಗಳನ್ನು ಖಂಡಿಸದೇ, ವಿಮರ್ಶಿಸದೇ ಒಪ್ಪಿಕೊಳ್ಳಬೇಕೆಂಬ ಇರಾದೆ ಮಾತ್ರ ಬೇಡ. ನಿಮ್ಮ ಒಲವು ನಿಲುವುಗಳಿಗೆ ವಿರುದ್ಧವಾದ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ ಎಂದು ಕೈಕೈ ಹಿಸುಕಿಕೊಳ್ಳುವ ನಿಮ್ಮ ಮನಸ್ಥಿತಿಗೆ ಅಯ್ಯೋ ಪಾಪ ಎನ್ನಬಹುದಷ್ಟೆ.
-ಅ.ಸು. ರವೀಂದ್ರ, ಶಿವಮೊಗ್ಗ

ಬದಲಾವಣೆ ಒಪ್ಪದ ಬುದ್ಧಿಜೀವಿ ಗೋಳಾಟ

ಮಾಧ್ಯಮಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತೇಜೋವಧೆಯಾಗುತ್ತಿದೆ ಎಂದು ಕೆಲ ಮಹಾಪುರುಷರು ಅಲವತ್ತುಕೊಂಡಿದ್ದಾರೆ. ಈ  ಮಹಾಪುರುಷರು ಯಾರನ್ನು ಗುರಿಯಾಗಿಸಿ ಈ ಹೇಳಿಕೆ ಬಿಟ್ಟಿದ್ದಾರೆಯೋ, ಇಂದು ಆ ರೀತಿ ಪ್ರಲಾಪನೆಯ ಪರಿಸ್ಥಿತಿ ನಿರ್ಮಾಣಗೊಳ್ಳಲೂ ಈ ಮಹಾಪುರುಷರೇ ಕಾರಣಿಕರ್ತರಾಗಿದ್ದಾರೆ. ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳಾಗುವವರೆಗೂ ಸಾಹಿತ್ಯದ ವಲಯದಲ್ಲಿ, ಸಾಂಸ್ಕೃತಿಕ ವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಹೀಗೆ ಎಲ್ಲ ಸಾಮಾಜಿಕ ವಲಯಗಳಲ್ಲಿ ಎಡಪಂಥೀಯ ಒಲವುಳ್ಳ ಮತ್ತು ಪಕ್ಕಾ ಎಡಪಂಥೀಯ ಜನರನ್ನು, ಅವರ ಬಳಗವನ್ನು, ಅವರಿಗೆ ಬಹುಪರಾಕು ಹಾಕಿದವರನ್ನೂ ತುಂಬಲಾಯಿತು. ಎಲ್ಲೆಡೆ ಅಧಿಕಾರ ಸ್ಥಾನಗಳಲ್ಲಿ, ಆರ್ಥಿಕ ಲಾಭ ಬಂದೊದಗುವ ಆಯಕಟ್ಟಿನ ಸ್ಥಳಗಳಲ್ಲೂ ತುಂಬಿರುವುದರ ಪರಿಣಾಮವಾಗಿ ಮತ್ತು ಎಡಪಂಥೀಯ ನಿಯಮಗಳನ್ನು ಸಮಂಜಸವಾಗಿ ಅನುಷ್ಠಾನಕ್ಕೆ ತರುವಲ್ಲಿ ಆ ಜನರು ಸೋತಿರುವುದರಿಂದ, ಸಾಮಾನ್ಯ ಜನರು ಸಹಜ ಆಸೆಯಿಂದ ಪರ್ಯಾಯವಾಗಿ ನಿಧಾನವಾಗಿ ಬಲಪಂಥೀಯತೆಯೆಡೆಗೆ ವಾಲಿದರು.  ಅಧಿಕಾರ ಬಲ, ಆರ್ಥಿಕ ಬಲ ಪಡೆದ ಬಲಪಂಥೀಯರು ಅಲ್ಪ ಸ್ವಲ್ಪ ಎಡಪಂಥೀಯ ಧೋರಣೆಗಳನ್ನು ತಮ್ಮ ಪರಿಧಿಯಲ್ಲಿ ಹೊಸ ಹೊಸ ಹೆಸರುಗಳನ್ನಿಟ್ಟು ಅನುಷ್ಠಾನಗೊಳಿಸಿ ಸಾಮಾನ್ಯ ಪ್ರಜಾಜನರಿಗೆ ಅಲ್ಪ ಸ್ವಲ್ಪ ನೆಮ್ಮದಿಯ ಜೀವನವನ್ನು ತಂದಿಟ್ಟರು. ಈ ಎಲ್ಲಾ ಬೆಳವಣಿಗೆಗಳಿಂದ ಮತ್ತು ಆಧುನಿಕ ಶಿಕ್ಷಣ ಸೌಲಭ್ಯದಿಂದ  ಜಾಗ್ರತಗೊಂಡ ಪ್ರಜಾಜನರು ಬಲಪಂಥೀಯರನ್ನು ಒಪ್ಪತೊಡಗಿದ್ದಾರೆ. ಇದು ಎಡಪಂಥೀಯರಿಗೆ ಮತ್ತು ಅವರ ಹಿಂಬಾಲಕರಿಗೆ ನುಂಗಲಾರದ ತುತ್ತಾಗಿದೆ. ಗಳಿಸಿದ ಅಧಿಕಾರ ಉಳಿಸಿಕೊಳ್ಳದವರಾಗಿದ್ದಾರೆ, ಅಧಿಕಾರ ಇಲ್ಲದೆಡೆ ಅಧಿಕಾರ ಗಳಿಸುವ ಯಾವುದೇ ಆಶಾ ಭಾವನೆ ಕಾಣಬರುತ್ತಿಲ್ಲ. ಈ ಎಲ್ಲ ಬೆಳವಣಿಗೆಗಳು ಎಡಪಂಥೀಯರನ್ನು, ಅವರ ಹಿಂಬಾಲಕರನ್ನು ನಿರಾಸೆಯ ಪ್ರಪಾತಕ್ಕೆ ದೂಡುತ್ತಿವೆ. ಆ ರೀತಿಯ ನಿರಾಸೆಯೇ ಈ ಮಹಾನುಭಾವರ ಪ್ರಲಾಪ ಪ್ರಕಟಣೆಗೆ ಕಾರಣವಾಗಿದೆ. ಬದಲಾವಣೆ ಜಗದ ನಿಯಮ. ಬದಲಾವಣೆ ಯಾರೊಬ್ಬರನ್ನೂ ಹೇಳಿ, ಕೇಳಿ ಬರುವುದಿಲ್ಲ. ಅಧಿಕಾರ ಮದ, ಆರ್ಥಿಕ ಮದ ಇಂದಿನ ಮಹಾಶಯರ ಹತಾಶೆಯ ಪ್ರಕ್ರಿಯೆಗಳಿಗೆ ಕಾರಣ.
-ಹರಿಹರ ಭಟ್, ಬೆಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement