ಶುದ್ಧ ಕುಡಿಯುವ ನೀರು ಒದಗಿಸುವ ಯುವಕರು
ಖರಗ್ಪುರದ ಐಐಟಿ ಪದವೀಧರ, ವಿದೇಶಿ ಕಂಪನಿಯಲ್ಲಿ ಉತ್ತಮವಾದ ಕೆಲಸದಲ್ಲಿದ್ದ ಸುದೇಶ್ ಮೆನನ್ ಭಾರತಕ್ಕೆ ಬಂದಾಗ ಡಾ.ರೆಡ್ಡಿ ಲ್ಯಾಬೊರೇಟರಿಯ ಡಾ.ಅಂಜಿರೆಡ್ಡಿಯವರನ್ನು ಭೇಟಿಯಾದ. ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ ಪರಿಶುದ್ಧ ಕುಡಿಯುವ ನೀರನ್ನು ಅವರು ದಿನಬಳಕೆಗೂ ಉಪಯೋಗಿಸುವುದನ್ನೂ, ಭಾರತದಲ್ಲಿ ಮಾತ್ರ ಕುಡಿಯಲೂ ಸಹ ಕಲುಷಿತ ನೀರನ್ನು ಉಪಯೋಗಿಸುವುದರ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಕುಡಿಯಲು ಪರಿಶುದ್ಧ ನೀರು ಪೂರೈಸುವ ಬಗ್ಗೆ ಆಲೋಚಿಸತೊಡಗಿದ. ಆಗ ಆತ ತನ್ನ ಕೆಲಸಕ್ಕೆ ರಾಜಿನಾಮೆ ನೀಡಿ ತನ್ನ ಮತ್ತಿಬ್ಬರು ಉತ್ತಮ ನೌಕರಿಯಲ್ಲಿದ್ದ ಗೆಳೆಯರಾದ ಮೋಹನ್ ರಣಬೋರೆ ಮತ್ತು ಇಂದ್ರಾನಿಲ್ ದಾಸ್ ಅವರೊಡನೆ ಸೇರಿ 'ವಾಟರ್‌ಲೈಫ್ ಇಂಡಿಯಾ ಪ್ರೈ.ಲಿ' ಸಂಸ್ಥೆಯನ್ನು ಸ್ಥಾಪಿಸಿದ. ಅದರ ಮೂಲ ಉದ್ದೇಶವೇ ಗ್ರಾಮೀಣ ಭಾಗದ ಜನರಿಗೆ ಪರಿಶುದ್ಧ ನೀರನ್ನು ಒದಗಿಸುವುದು. ಅದಕ್ಕಾಗಿ ಪ್ರತಿ ಗ್ರಾಮದಲ್ಲಿಯೂ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಯೋಜನೆಯನ್ನು ಆ ಗುಂಪು ಕೈಗೊಂಡಿತು. ಮೊದಲು ಪಶ್ಚಿಮ ಬಂಗಾಲದ 250 ಹಳ್ಳಿಗಳ ಸುಮಾರು ಐವತ್ತು ಸಾವಿರ ಜನರಿಗೆ ಯೋಜನೆಯ ಲಾಭ ದೊರೆಯುವಂತೆ ನೋಡಿಕೊಂಡರು. ನಂತರ ಈ ಯೋಜನೆಯನ್ನು ಭಾರತದ ಎರಡುಸಾವಿರ ಹಳ್ಳಿಗಳಿಗೆ ವಿಸ್ತರಿಸಿದರು. ಹತ್ತು ಲೀಟರ್ ಕುಡಿಯುವ ನೀರಿಗೆ ಮೂರು ರುಪಾಯಿ, ಇಪ್ಪತ್ತು ಲೀಟರ್‌ಗೆ ಐದು ರುಪಾಯಿ ದರದಲ್ಲಿ ನೀರನ್ನು ಸರಬರಾಜುಮಾಡಲಾಗುತ್ತದೆ. ನೀರಿನಲ್ಲಿರುವ ನೈಟ್ರೇಟ್ ಮತ್ತು ಫ್ಲೋರೈಡ್‌ಗಳನ್ನು ಸ್ವಚ್ಛಗೊಳಿಸಿ ಅದನ್ನು ಕುಡಿಯಲು ಯೋಗ್ಯವಾದ ನೀರನ್ನಾಗಿ ಪರಿವರ್ತಿಸಿ ಸರಬರಾಜು ಮಾಡುವ ಯೋಜನೆ ಈಗ ಎಲ್ಲಡೆ ಪ್ರಖ್ಯಾತಿ ಪಡೆದು ಒಂದೇ ವರ್ಷದಲ್ಲಿ 5 ಕೋಟಿ ರುಪಾಯಿ ವಹಿವಾಟನ್ನು ಸುದೇಶ್‌ನ ಕಂಪನಿ ನಡೆಸಿದೆ. ಮುಂದಿನ ಮೂರುವರ್ಷಗಳಲ್ಲಿ ಈ ವಹಿವಾಟನ್ನು 500 ರಿಂದ 600 ಕೋಟಿ ರುಪಾಯಿಗೆ ಒಯ್ಯುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಭಾರತದ ಬಹುತೇಕ ಹಳ್ಳಿಗಳಿಗೆ ಈ ಯೋಜನೆಯ ಲಾಭ ದೊರೆಯುವಂತೆ ಈ ಮೂವರು ಗೆಳೆಯರು ಶ್ರಮಿಸುತ್ತಿದ್ದಾರೆ. ಭಾರತದಲ್ಲಿ ಯಶಸ್ಸು ಗಳಿಸಿದ ಯೋಜನೆಯಿಂದ ಆಕರ್ಷಿತವಾದ ಇಂಡೋನೇಷಿಯಾ ಮತ್ತು ಬಾಂಗ್ಲಾದೇಶಗಳು ವಾಟರ್‌ಲೈಫ್‌ಗೆ ಆಹ್ವಾನ ನೀಡಿ, ತಮ್ಮ ದೇಶದಲ್ಲಿಯೂ ಈ ರೀತಿಯ ಘಟಕಗಳನ್ನು ತೆರೆಯಲು ಮನವಿ ಮಾಡಿವೆ. ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸುದೇಶ್, ಮೋಹನ್ ಮತ್ತು ಇಂದ್ರಾನಿಲ್ ನಿದರ್ಶನವಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.