ರಾಷ್ಟ್ರೀಯ ಸಮನ್ವಯ ಮಂಡಳಿ
ಕೋಮು ಸೌಹಾರ್ದವನ್ನು ಕಾಪಾಡುವ ವಿಚಾರದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುವ ಸಂಸ್ಥೆಯ ಸ್ವರೂಪದ ರಾಷ್ಟ್ರೀಯ ಸಮನ್ವಯ ಮಂಡಳಿ, ಒಂದು ಕಾಲದಲ್ಲಿ ಇಡೀ ದೇಶದ ಸಾರ್ವಜನಿಕ ಅಭಿಪ್ರಾಯಗಳ ಸಂಗಮವೆನ್ನುವ ಪ್ರತಿಷ್ಠೆಯನ್ನು ಪಡೆದಿತ್ತು. ಕೇಂದ್ರದ ಪ್ರತಿನಿಧಿಗಳು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ಈ ರಾಷ್ಟ್ರೀಯ ಮಂಡಳಿಗೆ ಇದ್ದ ಗೌರವ-ಪ್ರತಿಷ್ಠೆ ಈಗ ಮುಕ್ಕಾಗಿದೆ.
ದೇಶದ ಹದಿಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೋಮವಾರದ ಸಭೆಗೆ ಹೋಗಿರಲಿಲ್ಲ. ಅದರಲ್ಲಿ ಒಬ್ಬಿಬ್ಬರಿಗೆ ಕಾರ್ಯದ ಒತ್ತಡ ಇರಬಹುದು. ಆದರೆ ಮಧ್ಯ ಪ್ರದೇಶದ ಶಿವರಾಜಸಿಂಗ್ ಚೌಹಾಣ್ ಅವರನ್ನು ಬಿಟ್ಟರೆ ಉಳಿದ ಬಿಜೆಪಿ ಮಂತ್ರಿಗಳು ಯಾರೂ ಸಭೆಯಲ್ಲಿ ಇರಲಿಲ್ಲ. ಮಮತಾ ಬ್ಯಾನರ್ಜಿ, ಜಯಲಲಿತಾ ಅವರೂ ಇರಲಿಲ್ಲ. ಬಿಜೆಪಿಯ ಪರವಾಗಿ ಆಡ್ವಾಣಿ, ಸುಷ್ಮಾಸ್ವರಾಜ್, ಅರುಣ ಜೇಟ್ಲಿ ಅವರು ಸಭೆಗೆ ಬಂದಿದ್ದರೂ, ಕೇಂದ್ರ ಸರ್ಕಾರದ ನಾಯಕರು ಬಿಜೆಪಿ ನಾಯಕರಿಗೆ ಈ ಸಭೆಯಲ್ಲಿ ವಿಶ್ವಾಸವೇ ಇಲ್ಲ ಎನ್ನುವ ರೀತಿಯಲ್ಲಿ ಮಾತಾಡಿದ್ದು ಸರಿಯಲ್ಲ.
ಕಾಂಗ್ರೆಸ್ ಈ ಮಂಡಳಿಗೆ ಕೊಟ್ಟಿರುವ ಗೌರವವಾದರೂ ಎಷ್ಟು? ಕೇಂದ್ರ ಸರ್ಕಾರದ ಉಪದೇಶವನ್ನು ರಾಜ್ಯಗಳು ಪೂರ್ಣವಾಗಿ ಒಪ್ಪಬೇಕೆಂದು ಭಾವಿಸಿ, ಅದೇ ರೀತಿ ಕೇಂದ್ರ ಮಂತ್ರಿಗಳು ವರ್ತಿಸಿದರೆ ಅದು ಒಕ್ಕೂಟ ರಾಜ್ಯದ ಕಲ್ಪನೆಯನ್ನೇ ದುರ್ಬಲಗೊಳಿಸಿದಂತೆ ಆದೀತು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಅನೇಕ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯಲ್ಲಿನ ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದು ದೂರಿದ್ದಾರೆ. ಅಂತಹ ಮಾತನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಬೇರೆ ಸಂದರ್ಭಗಳಲ್ಲಿ ಆಡಿರುವುದೂ ಉಂಟು. ಕೇಂದ್ರ ಸರ್ಕಾರ ಎರಡು ವರ್ಷಗಳ ಕಾಲ ರಾಷ್ಟ್ರೀಯ ಸಮನ್ವಯ ಮಂಡಳಿಯ ಅಸ್ತಿತ್ವವನ್ನೇ ಮರೆತುಬಿಟ್ಟಂತಿತ್ತು. ಉತ್ತರ ಪ್ರದೇಶದ ಮುಜಫರದಲ್ಲಿ ದೊಡ್ಡ ರೀತಿಯಲ್ಲಿ ಕೋಮು ಸೌಹಾರ್ದದ ವ್ಯವಸ್ಥೆ ಕುಸಿದು ಬಿದ್ದು, ಕೋಮು ಸಂಘರ್ಷದ ಪ್ರಕರಣಗಳು ನಡೆದಾಗಲೇ ಕೇಂದ್ರಕ್ಕೆ ಈ ಮಂಡಳಿಯ ನೆನಪಾಗಿದ್ದು.
ಮುಜಫರಪುರದ ಘಟನೆಗಳನ್ನು ಪ್ರಾಂಜಲ ಮನಸ್ಸಿನಿಂದ ಅಧ್ಯಯನ ನಡೆಸಿರುವ ಕೆಲವು ಹಿರಿಯರ ಪ್ರಕಾರ ಅಲ್ಲಿನ ಗಲಭೆಗಳಲ್ಲಿ ಕೋಮುಗಳ ನಡುವಣ ಜಗಳದಲ್ಲಿ ಜಾತಿಯ ಪಿಡುಗಿನ ಪ್ರವೇಶವಾಗಿರುವುದು ನಿಜಕ್ಕೂ ಅಪಾಯಕಾರಿಯಾದ ಬೆಳವಣಿಗೆ. ಇದನ್ನು ಒಬ್ಬ ಸಮಾಜಶಾಸ್ತ್ರ ಅಧ್ಯಾಯಿ "ಕೋಮು ಗಲಭೆಯ ಜನತಾಂತ್ರೀಕರಣ" ಎಂದಿದ್ದಾರೆ. ಕೇಂದ್ರಕ್ಕೆ ಇಂತಹ ಸೂಕ್ಷ್ಮ ವಿಚಾರಗಳನ್ನು ತಿಳಿಸುವವರು ಯಾರು?