ತೆಂಗು ರೈತರಿಗೆ ಸಿಕ್ಕೀತೇ ಪರಿಹಾರ?
ಕಲ್ಪತರು ನಾಡೆಂದು ಹೆಸರಾಗಿರುವ ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಕುಣಿಗಲ್, ಚಿಕ್ಕನಾಯ್ಕನಹಳ್ಳಿ ಹಾಗೂ ಶಿರಾ ತಾಲ್ಲೂಕುಗಳಲ್ಲಿ ಹೆಚ್ಚಾಗಿ ತೆಂಗಿನ ಬೆಳೆ ಬೆಳೆಯುತ್ತಾರೆ. ವಿಪರ್ಯಾಸವೆಂದರೆ ಕಳೆದ ಎರಡು ವರ್ಷಗಳಿಂದ ವಾಡಿಕೆಯಂತೆ ಮುಂಗಾರು ಹಾಗೂ ಹಿಂಗಾರು ಮಳೆ ಬಾರದೆ ಕೈ ಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಂಪೂರ್ಣವಾಗಿ ತೆಂಗಿನ ಮರಗಳು ಒಣಗಿವೆ.
ಒಂದೆಡೆ ತೆಂಗಿನಕಾಯಿಗೆ ನುಸಿಪೀಡೆ, ಗರಿಗೆ ಬೆಂಕಿ ರೋಗದಿಂದ ತತ್ತರಿಸುವಾಗ ಮಾರುಕಟ್ಟೆಯಲ್ಲಿ ತೆಂಗಿನಕಾಯಿಯನ್ನು ಕೇಳುವವರೇ ಗತಿಯಿಲ್ಲ. ಇದೀಗ ಫಸಲು ಬಿಡುತ್ತಿದ್ದ ತೆಂಗಿನ ಮರಗಳಲ್ಲಿ ಮಳೆ ಇಲ್ಲದೆ, ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಬೋರ್ವೆಲ್ಗಳಲ್ಲಿ ಅಂತರ್ಜಲ ಕುಸಿತದಿಂದ ತೆಂಗಿನ ಗಿಡಗಳನ್ನು ಕಳೆದುಕೊಂಡಿರುವ ರೈತರ ಪರಿಸ್ಥಿತಿ ಬೆಂಕಿಯಿಂದ ಬಾಣಲಿಗೆ ಬಿದ್ದಂತಾಗಿದೆ.
ಇದುವರೆವಿಗೂ ರಾಜ್ಯ ಸರ್ಕಾರದಿಂದ ತೆಂಗಿನ ಮರ ಒಣಗಿರುವುದಕ್ಕೆ ಪರಿಹಾರ ಸಿಕ್ಕಿಲ್ಲ. ನೆರೆಯ ಕೇರಳ ರಾಜ್ಯದಲ್ಲಿಯೂ ಸಹ ಇದೇ ರೀತಿ ತೆಂಗಿನ ಮರಗಳು ಒಣಗಿ ರೈತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಲ್ಲಿನ ರೈತರಿಗೆ ಪರಿಹಾರ ಘೋಷಿಸಿದೆ. ಅದೇ ರೀತಿ ರಾಜ್ಯದ ರೈತರ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ಪರಿಹಾರ ನೀಡಲು ಮುಂದಾಗಬೇಕು. ಮರವೊಂದಕ್ಕೆ ಕನಿಷ್ಟ 13 ಸಾವಿರ ಪರಿಹಾರ ನೀಡಬೇಕು. ಕೇರಳದ ಮಾದರಿಯಲ್ಲಿ ಮೇಲ್ಕಂಡ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ತೋಟಗಾರಿಕಾಧಿಕಾರಿಗಳಿಗೆ ಆದೇಶಿಸಿ ಜಿಲ್ಲೆಯಲ್ಲಿ ಒಣಗಿರುವ ತೆಂಗಿನ ಮರಗಳ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಬೇಕು. ಅದರ ಆಧಾರದಲ್ಲಿ ಪರಿಹಾರ ಜಾರಿಯಾಗಲಿ.
- ನೇರಲಗುಡ್ಡ ಶಿವಕುಮಾರ್, ಶಿರಾ
ಮೌಢ್ಯ ನಿರ್ಮೂಲನಾ ಕ್ರಮ ಸ್ವಾಗತಾರ್ಹ
ಇತ್ತೀಚಿನ ದಿನಗಳಲ್ಲಿ ಒಂದು ಕಡೆ ಸಾಕ್ಷರತೆ ಯಶಸ್ವಿಯಾಗುತ್ತಿದೆ. ಆದರೆ ಶಿಕ್ಷಿತರಾಗುವಲ್ಲಿ ಸಫಲರಾಗುತ್ತಿದ್ದೇವೆಯೇ? ಸಂವಿಧಾನದ ಆಶಯ, ಸಾಕ್ಷರರಲ್ಲಿ ವೈಜ್ಞಾನಿಕ ಮನೋಭಾವ ಬೆಳಸುವುದೇ ಆಗಿದೆ. ಆದರೆ ಅವರವರ ವೈಯಕ್ತಿಕ ನಂಬಿಕೆಗಳಿಗೆ ಅಡ್ಡಿ ಆಗದಂತೆ ಮೌಢ್ಯವನ್ನು ತೊಲಗಿಸುವ ನಿಟ್ಟಿನಲ್ಲಿ, ಅದರ ಉದ್ದೇಶ ಸರ್ವ ಸಮರ್ಪಕವಾಗಿ ಜಾರಿಗೊಳ್ಳುತ್ತಿಲ್ಲ. ಖಾಸಗಿ ಚಾನಲ್ಗಳಂತೂ ಈ ನಿಟ್ಟಿನಲ್ಲಿ ಜನರ ಮುಗ್ಧತೆ ಹಾಗೂ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು, ಆಕರ್ಷಣೆ ಹಾಗೂ ಜನಪ್ರಿಯತೆಗೋಸ್ಕರ, ಅರ್ಥವಿಲ್ಲದ ಮೂಢ ನಂಬಿಕೆಗಳ ಪ್ರಸಂಗಗಳನ್ನು ಬಿತ್ತರಿಸುತ್ತಲೇ ಇದೆ. ದೃಶ್ಯ ಮಾಧ್ಯಮದ ಪ್ರಭಾವ ಅಪಾರವಾಗಿರುವುದರಿಂದ, ಜನತೆಯೂ ಇದಕ್ಕೆ ಅನಿವಾರ್ಯವಾಗಿ ಬಲಿ ಬೀಳುತ್ತಿದ್ದಾರೆ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಟಿ.ವಿ. ಮಾಧ್ಯಮದಲ್ಲಿ ಪ್ರಚಾರವಾಯಿತೆಂದು, ನಮಗೆ ಸಂಬಂಧಿಸಿದ ದೇವಾಲಯ ಒಂದಕ್ಕೆ ಬೆಳಗ್ಗೆ 6 ಗಂಟೆ ಹೊತ್ತಿಗೆ, ಸುಮಾರು ಸಾವಿರ ಲೀಟರ್ಗೂ ಮಿಕ್ಕಿ ಹಾಲಿನ ಪ್ಯಾಕೆಟ್ಗಳನ್ನು ಭಕ್ತಾದಿಗಳು ತಂದು ಸುರಿದರು. ನಮಗೆ ಅಭಿಷೇಕಕ್ಕೆ ಕೇವಲ 5 ಲೀಟರ್ ಹಾಲು ಸಾಕಿತ್ತು. ಮಿಕ್ಕ 995 ಲೀಟರ್ಗೂ ಮೀರಿ ಹಾಲಿನ ಪ್ಯಾಕೇಟ್ಗಳಲ್ಲಿನ ಹಾಲು ಒಡೆದು ವ್ಯರ್ಥವಾಗಿ ಮೋರಿ ಸೇರಬೇಕಾಯಿತು. ಇಂತಹ ಸಲಹೆ ಯಾವ ಪುರಷಾರ್ಥಕ್ಕಾಗಿ ಮಾಂತ್ರಿಕರು (ಜ್ಯೋತಿಷಿಗಳು) ನೀಡುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಇನ್ನಾದರೂ ಶಿಕ್ಷಣದ ನಿಜ ಆಶಯ ಸಾಕಾರಗೊಳ್ಳಲಿ.
- ಕೆ. ರಘುರಾಂ, ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com