ರೋಗಿಗಳ ಸೇವೆಗೆ ಸದಾ ಸಿದ್ಧ ಈ ರಶೀದ್ ಭಾಯ್
ಅಲಿಘರ್ ಅಂದಾಕ್ಷಣ ನಮಗೆ ನೆನಪಾಗುವುದು ಮುಸ್ಲಿಂ ವಿಶ್ವವಿದ್ಯಾಲಯ. ಈ ವಿಶ್ವ ವಿದ್ಯಾಲಯದ ಪದವೀಧರನೊಬ್ಬ ತನ್ನ ಜೀವನವನ್ನು ಬಡವರ, ರೋಗಿಗಳ ಸೇವೆಗೆ ಮೀಸಲಾಗಿಟ್ಟಿದ್ದಾನೆಂದರೆ ಅದು ಸಾಮಾನ್ಯ ವಿಷಯವಲ್ಲ. ನವಾಬ್ ಸಾಬ್ ಎಂದೇ ಕರೆಯಲ್ಪಡುವ ರಶೀದ್‌ಘನಿ ಖಾನ್ ಒಬ್ಬ ಅಪರೂಪದ ವ್ಯಕ್ತಿ. ಕಳೆದ ಹನ್ನೊಂದು ವರ್ಷಗಳಿಂದ ಇವನ ಜೀವನದ ಬಹುತೇಕ ಪಾಲು ರೋಗಿಗಳ ಸೇವೆಗೆ ಮೀಸಲಾಗಿದೆ. ಹಾಗಂತ ಈತ ವೈದ್ಯನಲ್ಲ, ಆದರೆ ಪ್ರತಿ ಕ್ಷಣವೂ ವೈದ್ಯಕೀಯ ಚಿಕಿತ್ಸೆಗಾಗಿ ನೆರವು ಕೋರಿ, ಸಲಹೆ ಯಾಚಿಸಿ ಜನ ಫೋನ್ ಮಾಡುತ್ತಲೇ ಇರುತ್ತಾರೆ. ಈತನ ಮೊಬೈಲ್ ರಿಂಗಣಿಸುತ್ತಲೇ ಇರುತ್ತದೆ. ಅವರ ಎಲ್ಲ ಸಮಸ್ಯೆಗಳನ್ನು ಸಾವಧಾನ ಚಿತ್ತದಿಂದ ಆಲಿಸಿ, ಅವರಿಗೆ ಮಾರ್ಗದರ್ಶನ ಮಾಡುವುದು, ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೈದ್ಯರ ಸಲಹೆ ಪಡೆಯುವುದು, ಚಿಕಿತ್ಸೆ ಕೊಡಿಸುವುದು - ಹೀಗೆ ಈತ ರೋಗಿಗಳ ಸೇವೆಗೆ ಸದಾ ಸಿದ್ಧ. ಬಡ, ಅನಕ್ಷರಸ್ಥ ರೋಗಿಗಳ ಬಗ್ಗೆ ರಶೀದ್‌ಗೆ ಹೆಚ್ಚು ಕಾಳಜಿ. ಯಾವುದೋ ಕುಗ್ರಾಮದಿಂದ ಬಂದ ರೋಗಿಗಳನ್ನು ವಿಚಾರಿಸಿ, ಅವರ ಚಿಕಿತ್ಸೆಗೆ ನೆರವಾಗುವ ರಶೀದ್, ದಿನದ ಇಪ್ಪತ್ತನಾಲ್ಕು ಗಂಟೆಯೂ ಸೇವೆಗೆ ಸಿದ್ಧನಾಗಿರುತ್ತಾನೆ. ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಅವರ ಬಳಿ ತನ್ನ ರೋಗಿಗಳನ್ನು ಒಯ್ದು ಸಲಹೆ, ಚಿಕಿತ್ಸೆ ಕೊಡಿಸುತ್ತಾನೆ. ಅನೇಕ ಶಸ್ತ್ರಚಿಕಿತ್ಸೆಗೂ ನೆರವಾಗಿದ್ದಾನೆ. ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ಕೊಡಿಸಿದ್ದಾನೆ. ರಶೀದ್‌ನಿಂದ ವ್ಯೆದ್ಯರಿಗೆ ಕರೆಬಂತೆಂದರೆ ಮೊದಲು ಆತನಿಗೇ ಅವರು ಆದ್ಯತೆ ನೀಡಿ ಸಹಕರಿಸಲು ಮುಂದಾಗುತ್ತಾರೆ. ರಶೀದ್‌ನ ತಂದೆ ಎ.ಜೆ.ಖಾನ್ ಅವರಿಗೆ ತಮ್ಮ ಮಗ ವೈದ್ಯನಾಗಬೇಕೆಂಬ ಆಸೆಯಿತ್ತು. ಆದರೆ ಈ ರೀತಿಯ ಸೇವೆಯಿಂದ ತನ್ನ ತಂದೆಯ ಆಸೆಯನ್ನು ನೆರವೇರಿಸುತ್ತಿದ್ದಾನೆ ರಶೀದ್. "ನಾನು ವೈದ್ಯನಾಗಿದ್ದರೆ, ಒಬ್ಬ ಫಿಸಿಷಿಯನ್ ಅಥವಾ ಸರ್ಜನ್ ಆಗಿ ನನ್ನ ಸೇವೆಯನ್ನು ಸೀಮಿತಗೊಳಿಸಿಕೊಳ್ಳಬೇಕಾಗಿತ್ತು. ಆದರೆ, ಈಗ ಹಾಗಲ್ಲ. ಎಲ್ಲ ರೋಗಿಗಳ ಸಂಪರ್ಕವನ್ನೂ ಹೊಂದಿ ಅವರೆಲ್ಲರ ಸೇವೆ ಮಾಡುವ ಅವಕಾಶ ದೊರೆತಿದೆ" ಎನ್ನುತ್ತಾನೆ. ಕಿಡ್ನಿ ಸಮಸ್ಯೆಯಿರಬಹುದು, ಹೃದಯ ಶಸ್ತ್ರ ಚಿಕಿತ್ಸೆ ಇರಬಹುದು, ಕ್ಯಾನ್ಸರ್ ಇರಬಹುದು, ಎಲ್ಲ ರೋಗಿಗಳ ಆಶಾಕಿರಣ ರಶೀದ್. ಹೀಗಾಗಿ ಕೆಲವು ರೋಗಿಗಳಿಗೆ ಈತ ದೈವ ಸಮಾನ. 'ರಶೀದ್ ಭಾಯ್' ಇಲ್ಲದಿದ್ದರೆ ತಾವು ಇಂದು ಜೀವಿಸುತ್ತಲೇ ಇರುತ್ತಿರಲಿಲ್ಲವೆಂದು ಹಲವರು ಉದ್ಗರಿಸುತ್ತಾರೆ. ಪಿತ್ರಾರ್ಜಿತ ಆಸ್ತಿ ಹೊಂದಿರುವ ರಶೀದ್‌ಗೆ ತಿಂದುಣ್ಣಲು ಯಾವ ಸಮಸ್ಯೆಯೂ ಇಲ್ಲ. ಹೀಗಾಗಿ ತನ್ನಲ್ಲಿ ಉಳಿಯುವ ದುಡಿಮೆಯ ಹಣವನ್ನು ರೋಗಿಗಳ ಸೇವೆಗೆ ಮೀಸಲಾಗಿಟ್ಟಿದ್ದಾನೆ. ಇದೀಗ ದೂರದೂರಿಂದ ಬರುವ ರೋಗಿಗಳಿಗೆ ರಾತ್ರಿ ತಂಗಲು ಅನುಕೂಲವಾಗುವಂತೆ ಒಂದು ತಾಣವನ್ನು ನಿರ್ಮಿಸಿ ನೆರವಾಗಿದ್ದಾನೆ. ರಶೀದ್‌ನ ಕೆಲಸಕ್ಕೆ ಆತನ ವೈದ್ಯ ಪತ್ನಿ ಡಾ.ರೇಶ್ಮಾ ಖಾನ್ ಸಹಕರಿಸುತ್ತಿದ್ದಾಳೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.