ಆರ್ಡಿನೆನ್ಸ್ - ನಾನ್ಸೆನ್ಸ್
ಘೋಷಿತ ಅಪರಾಧಿಗಳಾಗುವ ಸಂಸದರು, ಶಾಸಕರು ನ್ಯಾಯಾಲಯದ ತೀರ್ಪು ಪ್ರಕಟವಾದ ತತ್ಕ್ಷಣದಲ್ಲೇ ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕೆನ್ನುವ ಸುಪ್ರೀಮ್ ಕೋರ್ಟಿನ ಆದೇಶದ ಪರಿಣಾಮವನ್ನು ಅಳಿಸಿ ಹಾಕುವ ಉದ್ದೇಶದ ಸುಗ್ರೀವಾಜ್ಞೆಯನ್ನು ರಾಹುಲ ಗಾಂಧಿ ಅವರೇ ಸ್ವಯಂ ಪ್ರೇರಣೆಯಿಂದ ಆ ಆರ್ಡಿನೆನ್ಸ್ - ನಾನ್ಸೆನ್ಸ್, ಹರಿದು ಹಾಕಲು ಯೋಗ್ಯ ಎಂದು ಶುಕ್ರವಾರ ಗುಡುಗಿದ್ದು ಒಂದು ಮರೆಯಲಾಗದ ರಾಜಕೀಯ ಘಟನೆ.
ರಾಹುಲ ಗಾಂಧಿ ಬಳಸಿದ ಪದಗಳಷ್ಟೇ ಅಲ್ಲ, ಆ ಹೇಳಿಕೆಯನ್ನು ನೀಡುವಾಗ ಅವರು ಪ್ರದರ್ಶಿಸಿದ ಮುಖಭಾವ, ಆಕ್ರೋಶ, ನಡೆದು ಬಂದ ಧಾಟಿ ಎಲ್ಲವೂ ಒಂದು ರೀತಿಯಲ್ಲಿ ರಾಜಕೀಯ ಇತಿಹಾಸದ ಸೃಷ್ಟಿ. ಸುಪ್ರೀಮ್ ಕೋರ್ಟಿನ ತೀರ್ಪಿನ ಪ್ರಕಾರ ಸಂಸದರು ಕ್ರಿಮಿನಲ್ ಆರೋಪದ ಮೇಲೆ ಎರಡು ವರ್ಷಗಳನ್ನು ಮೀರಿದ ಅವಧಿಯ ಜೈಲು ಶಿಕ್ಷೆಗೆ ಗುರಿಯಾದರೆ, ಆ ಕ್ಷಣದಲ್ಲೇ ಅವರು "ಅಪರಾಧಿ" ಆಗುತ್ತಾರೆ. ಅಪರಾಧಿಗಳಿಗೆ ಶಾಸನ ರಚನೆಯ ಸದನಗಳಲ್ಲಿ ಸ್ಥಾನವಿಲ್ಲ ಎನ್ನುವುದೇ ತೀರ್ಪಿನ ತಿರುಳು.
ಆ ಪರಿಣಾಮವನ್ನು ತಪ್ಪಿಸಬೇಕೆನ್ನುವ ಮನಸ್ಸು ಅನೇಕರಲ್ಲಿ ಮೂಡಿರಬೇಕು. ಶಿಕ್ಷೆಯನ್ನು ಮೇಲ್ಮನವಿಯ ಮೂಲಕ ಪ್ರಶ್ನಿಸಲು ಅವಕಾಶವಿರಬೇಕೆಂದು ಅವರು ಅಭಿಪ್ರಾಯ ಪಡುತ್ತಾರೆ. ಆಗಸ್ಟ್ನಲ್ಲೇ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಸಂಸದರಿಗೆ ರಕ್ಷಣೆ ನೀಡುವ ಕಾಯಿದೆಯ ಅಗತ್ಯವನ್ನು ಹೆಚ್ಚು ಕಡಿಮೆ ಎಲ್ಲ ಪಕ್ಷದ ಪ್ರತಿನಿಧಿಗಳೂ ಒಪ್ಪಿದ್ದರು. ಸರ್ಕಾರವೂ ಈ ಅಭಿಪ್ರಾಯವನ್ನು ಒಪ್ಪಿ ಒಂದು ವಿಧೇಯಕವನ್ನು ಸಿದ್ಧಪಡಿಸಿ ಅದನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಸಂಪುಟ ವಿಧೇಯಕದ ಅಂಗೀಕಾರ ವಿಳಂಬವಾಗುವುದೆಂದು ಭಾವಿಸಿ ತತ್ಕ್ಷಣದ ರಾಜಕೀಯ ಉದ್ದೇಶಗಳ ಈಡೇರಿಕೆಗೆ ತುರ್ತು ಶಾಸನದ ಮಾರ್ಗವೇ ಸೂಕ್ತವೆಂದು ಭಾವಿಸಿ, ರಾಷ್ಟ್ರಪತಿಗೆ ಶಾಸನದ ಕರಡನ್ನು ತಲುಪಿಸಿತು.
ಈ "ಪರ್ವಕಾಲದಲ್ಲಿ" ಪ್ರಕಟವಾದ ಸಾರ್ವಜನಿಕ ಅಭಿಪ್ರಾಯ, ಮಾಧ್ಯಮ ಪ್ರಪಂಚದ ಪ್ರಕಟಿತ ವರದಿ ವಿಶ್ಲೇಷಣೆಗಳು ತುರ್ತು ಶಾಸನದ ಪರವಾಗಿರಲಿಲ್ಲ. ಹಿಂದೆ ತಾತ್ವಿಕವಾಗಿ ವಿಧೇಯಕವನ್ನು ಒಪ್ಪಿದ್ದ ರಾಜಕೀಯ ಪಕ್ಷಗಳೂ ತುರ್ತು ಶಾಸನವನ್ನು ವಿರೋಧಿಸಿದವು. ಇಡೀ ದೇಶದಲ್ಲಿ ತುರ್ತು ಶಾಸನಕ್ಕೆ ಕಂಡು ಬಂದ ಪ್ರತಿಕ್ರಿಯೆ, ಜನಸ್ತೋಮಗಳ ನಡುವೆ ರಾಜಕಾರಣಿಗಳ ವರ್ತನೆ - ವಿಚಾರಗಳಲ್ಲಿ ಮೂಡಿರುವ ಹೇಸಿಗೆಯನ್ನು ಪ್ರತಿಬಿಂಬಿಸಿತ್ತು. ಸರ್ಕಾರ, ಸಂಸತ್ತು ಅಪರಾಧಿಗಳ ಸ್ಥಾನ-ಮಾನದ ರಕ್ಷಣೆಗೆ ಮುಂದಾಗಿದೆ ಎನ್ನುವ ಭಾವನೆಯ ಅಲೆಗಳು ಎಲ್ಲ ಕಡೆ ಕಾಣಿಸಿಕೊಂಡವು.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತುರ್ತು ಶಾಸನದ ಕರಡು ತಲುಪಿದ ದಿನವೇ ಅದಕ್ಕೆ ಸಹಿಹಾಕಿ ಹಿಂದಕ್ಕೆ ಕಳಿಸಲಿಲ್ಲ. ಅವರ ಅನುಭವ ಅದನ್ನು ತಡೆದಿತ್ತು. ಪ್ರಧಾನಿ ಮನಮೋಹನ ಸಿಂಗ್ ಅಮೆರಿಕಕ್ಕೆ ಹೋಗಿರುವುದರಿಂದ ಕಪಿಲ್ ಸಿಬಲ್, ಸುಶೀಲ ಕುಮಾರ ಶಿಂಧೆ ಅವರಂತಹ ಹಿರಿಯ ಮಂತ್ರಿಗಳನ್ನು ಆಹ್ವಾನಿಸಿ, ತುರ್ತು ಶಾಸನ ನಿಜಕ್ಕೂ ಅಗತ್ಯವೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟರು.
ಶುಕ್ರವಾರದ ಬೆಳಿಗ್ಗೆಯ ವೇಳೆಗೆ, ತುರ್ತು ಶಾಸನದ ಉದ್ದೇಶವನ್ನು ವಿರೋಧಿಸುವ ಹೇಳಿಕೆಗಳ ಮಹಾಪೂರವೇ ಹರಿದು ಬಂದಿತ್ತು. ಹೇಳಿಕೆಗಳನ್ನು ನೀಡಿದವರಲ್ಲಿ ರಾಹುಲ ಗಾಂಧಿ ಅವರ ಆತ್ಮೀಯರೂ ಇದ್ದರು. ಆ ವೇಳೆಗಾಗಲೇ ಬಿಜೆಪಿ ನಾಯಕರು ರಾಷ್ಟ್ರಪತಿಯನ್ನು ಭೇಟಿ ಮಾಡಿ ತುರ್ತು ಶಾಸನಕ್ಕೆ ಸಹಿ ಹಾಕಬಾರದೆಂದು ಮನವಿ ಮಾಡಿದ್ದರು. ಮಧ್ಯಾಹ್ನದ ವೇಳೆಗೆ ದೆಹಲಿಯ ಪ್ರೆಸ್ಕ್ಲಬ್ನಲ್ಲಿ ಎಲ್ಲ ಪಕ್ಷಗಳ ಅಭಿಪ್ರಾಯ ತಿಳಿಯಲೆಂದು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಗೆ ದಿಢೀರನೆ ನುಗ್ಗಿದ ರಾಹುಲ ಗಾಂಧಿ "ಈ ಆರ್ಡಿನೆನ್ಸ್ ನಾನ್ಸೆಸ್, ನಮ್ಮ ಸರ್ಕಾರ ಮಾಡಿದ್ದು ಸರಿಯಾಗಲಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದು ಹೇಳಿದಾಗ ಆಕಾಶವೇ ಕಳಚಿ ಬೀಳುವಂತಹ ಸಮಯದ ಅನುಭವ ಅಲ್ಲಿ ನೆರೆದಿದ್ದವರಿಗೆ ಆಗಿತ್ತು.
ರಾಹುಲ ಗಾಂಧಿ ಈ ಸಭೆಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡೇ ಬಂದಿದ್ದರು. ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುತ್ತಾ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡ ಬೇಕಾದರೆ, ಇಂತಹ ಸಣ್ಣ - ಪುಟ್ಟ ವಿಚಾರಗಳಲ್ಲಿ ಹೊಂದಾಣಿಕೆ ಮಾಡಿಕೊಂಡರೆ, ಹೋರಾಟ ಸಾಧ್ಯವೇ ಇಲ್ಲ. ಅಂತಹ ತಪ್ಪನ್ನು ಈ ವಿಚಾರದಲ್ಲಿ ನಮ್ಮ ಸರ್ಕಾರವೇ ಮಾಡಿದೆ ಎಂದು ಹೇಳಿ ಹೊರಗೆ ನಡೆದರು. ಈ ಘಟನೆ ರಾಹುಲ ಗಾಂಧಿ ಅವರ ಸಾತ್ವಿಕ ಆಕ್ರೋಶದ ಪ್ರದರ್ಶನ ಅಷ್ಟೇ ಅಲ್ಲ, ರಾಜಕೀಯವಾಗಿ ಅವರು ಹೋರಾಟಕ್ಕೆ ಸಜ್ಜಾಗಿದ್ದಾರೆ ಎನ್ನುವುದಕ್ಕೂ ಸಾಕ್ಷಿಯಂತಿದೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಹುಲ ಗಾಂಧಿ ಅವರನ್ನೇ ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಪ್ರತ್ಯೇಕವಾಗಿ ಘೋಷಿಸಬೇಕಾದ ಅಗತ್ಯವೇ ಇಲ್ಲ ಎನ್ನುವಂತಾಗಿದೆ.
ಇದುವರೆಗೆ ರಾಹುಲ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಕೆಲಸ ಮಾಡಿರುವ ರೀತಿ ನೀತಿಗಳನ್ನು ಒಪ್ಪದೇ ಇರುವವರೂ, ಶುಕ್ರವಾರದ ಅವರ ನಿಲವನ್ನು ಒಪ್ಪದೇ ಬೇರೆ ಮಾರ್ಗವೇ ಇಲ್ಲ. ತುರ್ತು ಶಾಸನದ ಕರಡಿಗೆ ಇನ್ನೂ ರಾಷ್ಟ್ರಪತಿಯ ಅಂಕಿತ ಮುದ್ರೆ ಬಿದ್ದಿಲ್ಲ. ಸದ್ಯಕ್ಕೆ ಅದರ ಕಥೆ ಅಲ್ಲಿಗೇ ಮುಗಿದಂತೆ. ಒಂದೇ ದಿನದಲ್ಲಿ ರಾಹುಲ ಗಾಂಧಿ ತಮ್ಮ ಹಿಂದಿನ ಚಹರೆಯನ್ನು ಬದಲಾಯಿಸಿ, ಹೋರಾಟಗಾರನ ಅವತಾರವನ್ನು ತಾಳಿದ್ದಾರೆ. ಮುಂದೆ ಮೈದಾನ ಉಂಟು, ಕುದುರೆ ಉಂಟು.