ಅಜಂಖಾನ್ರಂಥವರಿಗೆ ಬುದ್ಧಿ ಬರುವುದೇ?
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮುಖಂಡರುಗಳ ವಿವಾದಾತ್ಮಕ ಹೇಳಿಕೆಗಳು ಮುಗಿಲು ಮುಟ್ಟುತ್ತಿವೆ. ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ "ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟವರು ಹಿಂದುಗಳಲ್ಲ, ಮುಸ್ಲಿಂ ಯೋಧರು" ಎಂದು ವಿವಾದಾತ್ಮಕ ಹೇಳಿಕೆ ನೀಡಿ ತಾವೊಬ್ಬ ಮಹಾನ್ ಮುಸ್ಲಿಂ ಮುಖಂಡ ಎಂದು ಬಿಂಬಿಸಲು ಹೊರಟಿದ್ದಾರೆ. ಒಬ್ಬ ವ್ಯಕ್ತಿ ಭಾರತೀಯ ಸೇನೆ ಸೇರಿದ್ದಾನೆಂದರೆ ಆತನನ್ನು ಹಿಂದು ಸೈನಿಕನೆಂದೋ, ಮುಸ್ಲಿಂ ಸೈನಿಕನೆಂದೋ, ಕ್ರಿಶ್ಚಿಯನ್ ಸೈನಿಕನೆಂದೋ ಅಥವಾ ಇನ್ಯಾವುದೋ ಧರ್ಮದ ಸೈನಿಕನೆಂದೋ ಗುರುತಿಸಬಾರದು. ಆತ ಭಾರತಕ್ಕೆ ರಕ್ಷಣೆ ಒದಗಿಸುವ ಭಾರತೀಯ ಸೈನಿಕ ಮಾತ್ರ. ಸೇನೆಯಲ್ಲಿ ಧರ್ಮ/ಜಾತಿಯ ವಿಚಾರ ನಗಣ್ಯ. ಆತ ಕೇವಲ ಭಾರತಕ್ಕಾಗಿ ದುಡಿವ, ಮಡಿವ ಹೆಮ್ಮೆಯ ಭಾರತೀಯ ಸೈನಿಕ ಎಂಬುದು ಅಜಂಖಾನ್ರಂಥವರಿಗೆ ಅರ್ಥವಾಗಬೇಕಿದೆ. ಅದು ಬಿಟ್ಟು ಓಟಿನಾಸೆಗಾಗಿ ಸೈನಿಕರಲ್ಲೂ ಧರ್ಮ ಹುಡುಕಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಇಂಥ ನೀಚರಿಗೆ ಧಿಕ್ಕಾರವಿರಲಿ.
- ಎಲ್.ವಿ. ಕುಮಾರಸ್ವಾಮಿ, ಹಿರಿಯೂರ
ಮತದಾನ ಬಹಿಷ್ಕಾರ ಬೇಡ
ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ತನಕ ಚುನಾವಣೆಗಳು ಬಂದಾಗ ಅನೇಕ ಗ್ರಾಮ, ಊರಿನವರು ಮತದಾನಕ್ಕೆ ಬಹಿಷ್ಕಾರ ಹಾಕುತ್ತಾರೆ. ತಮ್ಮ ಊರಿನ ಅನಭಿವೃದ್ಧಿಯಿಂದ ಕಂಗೆಟ್ಟು ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ಮತದಾನ ಬಹಿಷ್ಕಾರ ಮಾಡುತ್ತಾರೆ. ಇದರಿಂದ ಯಾವ ಜನಪ್ರತಿನಿಧಿಗಳೂ ಪಾಠ ಕಲಿಯುವುದಿಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ದೇಶದಲ್ಲಿ ಮತದಾರರೇ ನಿರ್ಣಾಯಕರು. ಪ್ರತೀ ಮತದಾರರು ಚುನಾವಣೆಯ ದಿನ ಮತದಾನದಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಪ್ರತಿನಿಧಿಯನ್ನು ಆಯ್ಕೆ ಮಾಡುವುದು ಜನತೆಯ ಹಕ್ಕು ಮತ್ತು ಜವಾಬ್ದಾರಿ.
-ರಾಜು ಕಾಂಬಳೆ, ಧಾರವಾಡ
ಈ ಗೊಂದಲಕ್ಕೆ ಮಂಗಳ ಹಾಡುವುದು ಸಾಧ್ಯವೇ?
4.4.14ರ ಕನ್ನಡಪ್ರಭದಲ್ಲಿ ಲಿಂಗರಾಜು ಡಿ. ನೊಣವಿನಕೆರೆಯವರು ಬರೆದಿರುವಂತೆ 'ದೇವರ ಮತ್ತು ಜೇಡರ' ಎಂಬ ಗೊಂದಲಗಳಿಗೆ ಮಂಗಳಹಾಡಿ ದಾಸಿಮಯ್ಯ ಮುಖ್ಯವೆಂದಾಗಲಿ, ಎನ್ನುವುದು ಹೇಗೆ ಸಾಧ್ಯ? ಇತಿಹಾಸಕಾರರು, ಸಂಶೋಧಕರು, ಚಿಂತಕರು 'ದಾಸಿಮಯ್ಯ' ಎನ್ನುವವರು ಬೇರೆ ಬೇರೆ ಕಾಲಗಳಲ್ಲಿ ಇದ್ದರೆಂದೂ, ಮುಖ್ಯವಾಗಿ 'ಜೇಡರ ದಾಸೀಮಯ್ಯ'ನವರೇ ವಚನಕಾರರು ಮತ್ತು ಬಸವಣ್ಣನವರ ಸಮಕಾಲೀನರೆಂದೂ ಹೇಳುತ್ತಾರೆ. ಮಾತೆ ಮಹಾದೇವಿಯವರು ತಮ್ಮ "ಜೇಡರ ದಾಸಿಮಯ್ಯನ ವಚನಗಳು" ಕೃತಿಯಲ್ಲಿ ನಾಲ್ಕಾರು ಆಧಾರಗಳನ್ನು ಕೊಟ್ಟು ಅದನ್ನು ಸಮರ್ಪಿಸಿದ್ದಾರೆ. ಲಿಂಗರಾಜು. ಡಿ. ಅವರು ತಮ್ಮ ಲೇಖನದಲ್ಲಿ ಆ ಕೃತಿಯ ಬಗ್ಗೆ ಏಕೆ ಪ್ರಸ್ತಾಪಿಸಿಲ್ಲವೋ?
-ಡಿ. ಗುರುಮಲ್ಲಪ್ಪ ದೊಡ್ಡಪುರ, ತಾಳವಾಡಿ ಪಿರ್ಕ.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com