ತಪ್ಪಾಯ್ತು ತಿದ್ಕೋತೀವಿ
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಮಾ.9ರಂದು 'ಖುಷಿ' ಪುರವಣಿಯಲ್ಲಿ 'ಜೋಕ್ಸ್ ಫಿಯರ್' ಅಂಕಣದಲ್ಲಿ ಕಂಜೂಸ್ತನಕ್ಕೆ ನಿದರ್ಶನವಾಗಿ 'ಕರಿಯಪ್ಪನ ತಾತ ನಿಧನ. ಮದುವೆ ಕಾರು ಮಾರಾಟಕ್ಕಿದೆ' ಎಂಬುದನ್ನು ಪ್ರಕಟಿಸಿದ್ದೀರಿ. ಇದು ಜಾಹೀರಾತು ನಿಯಮಕ್ಕೆ ಒಗ್ಗುವಂತಹುದಲ್ಲ. ವಿಭಿನ್ನ ಪ್ರಕಾರದ ಜಾಹೀರಾತುಗಳನ್ನು ಒಂದೇ ಶೀರ್ಷಿಕೆಯಲ್ಲಿ ಪ್ರಕಟಿಸಲೂಬಾರದು. ಶ್ರದ್ಧಾಂಜಲಿ ಜಾಹೀರಾತಿನಲ್ಲಿ ವಸ್ತುವಿನ ಮಾರಾಟದ ವಿಷಯವಾಗಲೀ, ನೌಕರಿಗೆ ಸಂಬಂಧಪಟ್ಟ ಜಾಹೀರಾತಿನಲ್ಲಿ, ವಸ್ತುವಿಗೆ ಸಂಬಂಧಪಟ್ಟ ಯಾವುದೇ ವಿಷಯ ಪ್ರಕಟವಾಗುವ ಹಾಗಿಲ್ಲ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಮೊದಲನೆಯದಾಗಿ ಜಾಹೀರಾತಿನ ದರಗಳಲ್ಲಿಯ ಅಂತರ, ಎರಡನೆಯದಾಗಿ 'ಟಾರ್ಗೆಟ್ ಆಡಿಯನ್ಸ್' (Target Audience) ವಿಭಿನ್ನ. ಒಂದು ವೇಳೆ ಈ ರೀತಿ ಪ್ರಕಟವಾದರೆ, ಪತ್ರಿಕೆಯೇ ಹಾಸ್ಯಕ್ಕೆ ಗುರಿಯಾದೀತು' ಎಂದಿದ್ದಾರೆ.
ಸ್ವಾಮಿ ಅದು ಹಾಸ್ಯಕ್ಕಾಗಿ ಮಾತ್ರ. ಕಂಜೂಸ್ ಮನುಷ್ಯ ಒಂದೇ ಜಾಹೀರಾತು ದುಡ್ಡಿನಲ್ಲಿ ಎರಡು ಜಾಹೀರಾತು ಪ್ರಕಟಿಸಿ ಆದ ಹಾಸ್ಯವನ್ನು ಅಲ್ಲಿ ವಿವರಿಸಲಾಗಿದೆ ಅಷ್ಟೇ. ಹಾಸ್ಯವನ್ನೂ ಇಷ್ಟು ಸೀರಿಯಸ್ಸಾಗಿ ತೆಗೆದುಕೊಂಡರೆ ಆರೋಗ್ಯಕ್ಕೆ ಹಾನಿಕರ.
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಮಾ. 26ರ ಸಂಚಿಕೆಯ ಪುಟ 6ರಲ್ಲಿ 'ಉಡುಪಿ-ಚಿಕ್ಕಮಗಳೂರು ಸಮಸ್ಯೆ ನೂರಾರು' ಶೀರ್ಷಿಕೆಯ ಲೇಖನದ 3ನೇ ಪ್ಯಾರಾದಲ್ಲಿ ಜನರಿಗೆ ಯಾವ ಭರವಸೆ ನೀಡುತ್ತಿದ್ದೀರಿ? ಉಪಶೀರ್ಷಿಕೆಯ ಲೇಖನ ಪ್ರಕಟವಾಗಿದ್ದು ಅದರ ಕೆಳಗೆ ಮತ್ತೆ ಅದೇ ಉಪಶೀರ್ಷಿಕೆ ಹಾಗೂ ಅದೇ ಲೇಖನ ಪ್ರಕಟವಾಗಿದೆ. ಆದರೆ 3ನೇ ಬಾರಿ ಪ್ರಕಟಗೊಂಡಿರುವ ಲೇಖನದಲ್ಲಿ ಮುಂದುವರೆದು ವಿದ್ಯುತ್ ಅಭಾವ ಸಮಸ್ಯೆಗಳಿಗೆ ಇಷ್ಟು ವರ್ಷ ಆಳಿದ ಕಾಂಗ್ರೆಸ್ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ಎಂದು ಲೇಖನ ಮುಂದುವರಿದಿದೆ. ಒಂದೇ ವಿಷಯವಾಗಿ ಎರಡು ಬಾರಿ ಲೇಖನ ಪ್ರಕಟಗೊಂಡಿದೆಯಲ್ಲವೇ?' ಎಂದಿದ್ದಾರೆ.
ಮೈಸೂರಿನಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ-'ಏ.2ರಂದು ಮುಖಪುಟದಲ್ಲಿ ಸುದ್ದಿಯೊಂದಿತ್ತು. 'ಮೋದಿ ಪ್ರಧಾನಿಯಾದ್ರೆ ವೀಸಾ ರದ್ದು' ಶೀರ್ಷಿಕೆಯಿತ್ತು. ಅದರೊಳಗೆ ಅವರು ಪ್ರಧಾನಿಯಾದ್ರೆ ವೀಸಾ ನಿಷೇಧ ತನ್ನಿಂತಾನೇ ರದ್ದಾಗುತ್ತದೆ ಎಂದಿದೆ. ವೀಸಾ ರದ್ದು ಎನ್ನುವುದಕ್ಕೂ ವೀಸಾ ನಿಷೇಧ ರದ್ದು ಎನ್ನುವುದಕ್ಕೂ ವ್ಯತ್ಯಾಸವಿಲ್ಲವೇ?' ಎಂದಿದ್ದಾರೆ.
ವೀಸಾ ರದ್ದಾಗುವುದಕ್ಕೂ, ವೀಸಾ ನಿಷೇಧ ರದ್ದಾಗುವುದಕ್ಕೂ ವ್ಯತ್ಯಾಸವಿದೆ. ತಪ್ಪಾಗಿರುವುದು ನಿಜ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗಡೆ ಅವರು ಬರೆಯುತ್ತಾರೆ- 'ಕ.ಪ್ರ. 3ನೇ ಪುಟದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ದೇಶದ ಆತ್ಮವಿಶ್ವಾಸ ಕಾಂಗ್ರೆಸ್ನಿಂದ ನಾಶ ಎನ್ನುವ ಸುದ್ದಿಯಲ್ಲಿ ಸಿಖ್ಗಳ ಹತ್ಯೆ ಆದಾಗ ಪ್ರಧಾನಿಯಾಗಿದ್ದ ರಾಹುಲ್ಗಾಂಧಿ ಎಂದಿದೆ. ರಾಜೀವ್ಗಾಂಧಿ ಎಂದಾಗಬೇಕಿತ್ತು' ಎಂದಿದ್ದಾರೆ.
-ವಿಶ್ವೇಶ್ವರಭಟ್