ದಾಖಲೆ ಮತದಾನ - ಪೇಟೆ ಪರಿಣಾಮ
ಬುಧವಾರ ಮುಕ್ತಾಯವಾದ ಲೋಕಸಭೆ ಚುನಾವಣೆಯ ಮತದಾನದಲ್ಲಿ ಜನಸಂಖ್ಯೆಯ ದೃಷ್ಟಿಯಿಂದ ದೇಶದ ಪ್ರಮುಖ ಪ್ರದೇಶಗಳೆಂದು ಪರಿಗಣಿಸಬಹುದಾದ ಕ್ಷೇತ್ರಗಳಲ್ಲಿ ಹೊಸ ದಾಖಲೆಗಳೇ ಸೃಷ್ಟಿಯಾಗಿವೆ.
ಈ ಪ್ರದೇಶದಲ್ಲಿ ಚುನಾವಣೆಯಲ್ಲಿ ತೀವ್ರವಾದ ಸ್ಪರ್ಧೆ ಇದ್ದಿದ್ದರಿಂದ ಸಂಬಂಧಪಟ್ಟ ಪಕ್ಷಗಳೆಲ್ಲವೂ ಹರಸಾಹಸ ಪಟ್ಟು ಮತದಾರರನ್ನು ಮತಗಟ್ಟೆಗಳಿಗೆ ಕರೆ ತರುವುದರಲ್ಲಿ ಯಶಸ್ವಿಯಾಗಿವೆ.
ಅಷ್ಟೇ ಅಲ್ಲ. ಚುನಾವಣೆ ಆಯೋಗ, ಮತದಾರರ ಪಟ್ಟಿಯ ತಯಾರಿಕೆಯಿಂದ ಹಿಡಿದು ಮತದಾನದ ಕೊನೆಯ ಹಂತದವರೆಗೂ ಎಚ್ಚರಗಣ್ಣಿನಿಂದ ವರ್ತಿಸಿದ್ದೂ ನಿಜ. ಮತದಾನದ ಅಗತ್ಯ ಹಾಗೂ ಅದು ನಾಗರಿಕರ ಕರ್ತವ್ಯ ಎನ್ನುವ ಸಂದೇಶವನ್ನು ಎಲ್ಲ ಜನವರ್ಗಗಳಿಗೂ ತಲುಪುವ ರೀತಿಯಲ್ಲಿ ಸಾಕಷ್ಟು ಪ್ರಚಾರವನ್ನು ಆಯೋಗ ಮಾಡಿತ್ತು.
ಅಧಿಕ ಮತದಾನದಿಂದ ಯಾವ ಪಕ್ಷಕ್ಕೆ ಹೆಚ್ಚು ಲಾಭ ಎನ್ನುವ ಲೆಕ್ಕಾಚಾರ ಆಯಾ ಪಕ್ಷಗಳಲ್ಲಿ ನಾನಾ ಜನವರ್ಗಗಳು ಇಟ್ಟಿರಬಹುದಾದ ವಿಶ್ವಾಸವನ್ನೇ ಅವಲಂಬಿಸಿದೆ. ಈ ಲೆಕ್ಕಾಚಾರ ಮೇ ಮಧ್ಯ ಭಾಗದವರೆಗೂ ನಡೆಯುವುದು ಸಹಜವೇ.
ಮತದಾನದ ದಿನ ಷೇರು ಬಜಾರಿನ ಸೂಚ್ಯಂಕಗಳೂ ದಾಖಲೆ ಸ್ಥಾಪಿಸುವ ರೀತಿಯಲ್ಲೇ ಮೇಲೇರಿದ್ದೂ ಗಮನಾರ್ಹವೇ. ಪೇಟೆಯ ಜನರ ದೃಷ್ಟಿಯಲ್ಲಿ ಅಧಿಕ ಮತದಾನದ ಅಂತಿಮ ಪರಿಣಾಮದ ಸ್ವರೂಪ ಪೇಟೆಗೆ ಅನುಕೂಲ ಎನ್ನುವ ಭಾವನೆಯ ಪ್ರದರ್ಶನವಾಗಿರುವಂತಿದೆ. ಅದನ್ನು ಒಪ್ಪಲೇಬೇಕು.