ತಪ್ಪಾಯ್ತು ತಿದ್ಕೋತೀವಿ
ಗೌರಿಬಿದನೂರಿನಿಂದ ಕೆ.ಎ. ರವೀಂದ್ರನಾಥ್ ಅವರು ಬರೆಯುತ್ತಾರೆ- 'ಮಾ.31ರಂದು ಕ.ಪ್ರ.ದ 2ನೇ ಪುಟದ ಕೋಲಾರ ವಿಭಾಗದಲ್ಲಿ ಪ್ರಕಟವಾದ 'ಕುಟುಂಬ ರಾಜಕಾರಣಕ್ಕೆ ಬೇಸತ್ತು ಬಿಜೆಪಿಗೆ' ಎಂಬ ಬರಹದಲ್ಲಿ (ಜೆಡಿಎಸ್ ಮಾಜಿ ಶಾಸಕಿಯಾದ ಜ್ಯೋತಿರೆಡ್ಡಿರವರು ಬಿಜೆಪಿಗೆ ಸೇರಿದ ಸಂದರ್ಭದಲ್ಲಿ) 3ನೇ ಪ್ಯಾರಾದಲ್ಲಿ - 'ಇಂದು ಮಧ್ಯಾಹ್ನ 12.30 ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಗೊಂಡ ನಂತರ ಅವರು ಸುದ್ದಿ ಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದರು' ಎಂದಿದೆ.'
'ಆದರೆ ಈ ಪದಗಳು ಮಧ್ಯಾಹ್ನ 12.30ರ ಸಮಯದಲ್ಲಿ ಮತ್ತು ಮುಖಂಡರ ಸಮ್ಮುಖದಲ್ಲಿ ಎಂದಿರಬೇಕು. ಹಾಗೂ ಇದೇ ಪುಟದಲ್ಲಿ "ದೇಶದ ಎಲ್ಲ ಸಮಸ್ಯೆಗಳಿಗೆ ಮೋದಿಯಿಂದ ಪರಿಹಾರ" ಎಂಬ ಬರಹದಲ್ಲಿ 3ನೇ ಪ್ಯಾರಾದಲ್ಲಿ, 'ವಾಜಪೇಯಿ ನಂತರ ದೇಶದ ಜ್ವಲಂತ ಸಮಸ್ಯೆ ನಿವಾರಣೆ ಮಾಡಲು ಬೇರೆ ಯಾರಿಂದಲ್ಲೂ ಆಗಲಿಲ್ಲ' ಎಂದಿದೆ. ಆದರೆ ಈ ಪದವು ಯಾರಿಂದಲೂ ಆಗಲಿಲ್ಲ ಎಂದಿರಬೇಕು.'
'ಇದೇ ಪುಟದ 4ನೇ ಪ್ಯಾರಾದ 4ನೇ ಸಾಲಿನಲ್ಲಿ 'ಕೆ.ಎಚ್. ಮುನಿಯಪ್ಪ ಜಿಲ್ಲೆಗೆ ಶಾಶ್ವತ ನೀರಾವರಿ ಸಲವತ್ತು ಕಲ್ಪಿಸಲು ವಿಫಲರಾಗಿದ್ದಾರೆಂದು ದೂರಿದರು' ಎಂದಿದೆ. ಆದರೆ ಈ ಪದವು 'ಸವಲತ್ತು' ಎಂದಿರಬೇಕು. 7ನೇ ಸಾಲಿನಲ್ಲಿ ನಗರ ಘಟಕದ ಅಧ್ಯಕ್ಷ ಜಜಯಂತಿಲಾಲ್ ಎಂದಿದೆ. ಆದರೆ ಈ ಪದವು ಜಯಂತಿಲಾಲ್ ಎಂದಿರಬೇಕು. ಪ್ಯಾರಾದ ಕೊನೆಯಲ್ಲಿ ನಂದಿಶ್ ಇದ್ದರು ಎಂದಿದೆ. ಈ ಪದ ನಂದೀಶ್ ಎಂದು ಇರಬೇಕು.'
'ಇದೇ ಕೋಲಾರ ವಿಭಾಗದಲ್ಲಿ "ಕುರುಡುಮಲೆಯಲ್ಲಿ ಯುಗಾದಿ ಕಾಣಲಿಲ್ಲ" ಎಂಬ ಬರಹದ ಪ್ರಾರಂಭದಲ್ಲಿ ಮುಡಣಬಾಗಿಲು ಎಂದಿದೆ. ಈ ಪದ ಸರಿಯೇ? ಇದೇ ಪುಟದಲ್ಲಿ 'ಕುಡಿವ ನೀರಿಗೆ ಚರಂಡಿ ನೀರು ಮಿಶ್ರ': ಆರೋಪ ಎಂಬ ಬರಹದಡಿಯಲ್ಲಿ 7ನೇ ಸಾಲಿನಲ್ಲಿ ಪೈಪ್ ಹೊಡೆದು ಒಳಚರಂಡಿ ನೀರು ಮಿಶ್ರಣವಾಗಿ ಮೋರಿ ನೀರು ಕುಡಿಯುವ ದುಸ್ಥಿತಿ ಒದಗಿದೆಯೆಂದು ನಿವಾಸಿಗಳು ಆರೋಪಿಸಿದ್ದಾರೆ ಎಂದಿದೆ. ಆದರೆ ಈ ಪದಗಳು ಪೈಪ್ ಒಡೆದು ಮತ್ತು ದುಃಸ್ಥಿತಿ ಎಂದಿರಬೇಕು.'
'ಪುಟ 9ರಲ್ಲಿ 'ಚುನಾವಣೆ ಬೇಗೆ: ಬತ್ತಿದ ಗಂಗೆ' ಎಂಬ ಬರಹದಡಿಯಲ್ಲಿ 2ನೇ ಪ್ಯಾರಾದಲ್ಲಿ ಎಲ್ಲೆಡೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಲೋಕಸಭಾ ಚುನಾವಣೆಯಲ್ಲಿ ಬ್ಯೂಸಿ ಎಂದಿದೆ. ಆದರೆ ಈ ಪದ 'ಬಿಝಿ' ಎಂದಿರಬೇಕಲ್ಲವೇ? ಹಾಗೂ ನೀರಿರುವ ಛಾಯಾಚಿತ್ರದ ಪಕ್ಕದಲ್ಲಿ ಮಂಜುಳಾ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕಿಯವರು ನವೀಗ ಚುನಾವಣಾ ಸೇವೆಯಲ್ಲಿ ಮಗ್ನರಾಗಿದ್ದೇವೆ ಎಂದಿದೆ. ಈ ಪದವು ನಾವೀಗ ಎಂದಿರಬೇಕು' ಎಂದಿದ್ದಾರೆ.
ಸಣ್ಣ ತಪ್ಪುಗಳು ಕೂಡ ಸಿಗಬಾರದು ಎಂದು ಓದುಗರು ಆಶಿಸುವುದರಲ್ಲಿ ತಪ್ಪಿಲ್ಲ. ಆದರೆ ಇಂತಹ ಸಣ್ಣ ಸಣ್ಣ ತಪ್ಪುಗಳು ಕಂಡೇ ಕಾಣುತ್ತವೆ. ಅನರ್ಥವಾಗುವಂತಹ, ಗಂಭೀರವಾದ ತಪ್ಪುಗಳನ್ನು ಓದುಗರು ಗುರುತಿಸಿ ಕಳುಹಿಸಿದರೆ ಎಲ್ಲ ಓದುಗರಿಗೂ ಸಹಾಯವಾಗುತ್ತದೆ. ಪತ್ರಿಕೆಯ ಜತೆಗೆ ಓದುಗರೂ ತಿದ್ದಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.
-ವಿಶ್ವೇಶ್ವರಭಟ್