ವಿನಾಶವೆಂಬ ವಿತಂಡವಾದ
ಶನಿವಾರದ ಪತ್ರಪ್ರಭದಲ್ಲಿ ಪ್ರೊ. ಜಿ. ಎಚ್. ನಾಯಕರ ಲೇಖನ ಸಂಪೂರ್ಣ ಮಿಥ್ಯೆ ಮತ್ತು ಕಪೋಲ ಕಲ್ಪನೆಗಳ ಕೆಟ್ಟ ಮಿಶ್ರಣ. ಅವರ ಅನಿಸಿಕೆಗಳು ತೀರಾ ಅಪ್ರಬುದ್ಧ.
-ಬಾಬರಿ ಮಸಿದಿಯೇ ದ್ವೇಷದ ಸಂಕೇತ. ಭಾರತದೇಶದಲ್ಲಿ ಮುಸ್ಲಿಮರು ನೂರಾರು ನಮ್ಮ ದೇವಾಲಯಗಳನ್ನು ನಾಶಮಾಡಿ ಮಸೀದಿಯನ್ನು ಕಟ್ಟಿದರು. ಇದು ಪ್ರೀತಿಯ ಸಂಕೇತವೇ? ತಮ್ಮ ಧರ್ಮದ, ಜನಗಳ ಬಗ್ಗೆ ಪ್ರೀತಿ ಇಲ್ಲದವರು ಮಾತ್ರ ಇಂತಹ ಪೊಳ್ಳು ಉಪದೇಶವನ್ನು ಹಿಂದುಗಳಿಗೆ ಮಾತ್ರ ನೀಡಬಹುದು.
-ದೇಶವನ್ನು ಈ ದುಸ್ಥಿತಿಗೆ ಕಾರಣವಾದದ್ದು ದುರ್ಬಲ ಕಾಂಗ್ರೆಸ್. ಪಾಕಿಸ್ತಾನವನ್ನು ಅಲ್ಲದೆ ಕಾಶ್ಮೀರವನ್ನು ದಾನಮಾಡಿದವರು ಯಾರು? ಆಗೇನು ಮೋದಿ ಪ್ರಧಾನಮಂತ್ರಿಯಾಗಿದ್ದರೆ? ಚೀನಾ ಯುದ್ಧದಲ್ಲಿ ತಕ್ಕ ಸಲಕರಣೆಗಳನ್ನು, ಆಯುಧಗಳನ್ನು ಒದಗಿಸದೇ ನಮ್ಮ ಸೈನಿಕರನ್ನು ಬಲಿ ಕೊಟ್ಟು ಸೈನ್ಯದ ಅಂತಃಸ್ಥೈರ್ಯವನ್ನು ಉಡಗಿಸಿದ್ದವರು ಯಾರು? ಭಾರತದ ಮೇಲೆ ನಿರಂತರ ದಾಳಿಯನ್ನು ಮಾಡುತ್ತಿರುವ ಪಾಕ್ಪ್ರೇರಿತ ದಾಳಿಗೆ ನೀರೆರೆದವರು ಯಾರು? ಈ ವಿಷಯಕ್ಕೆ ವಾಜಪೇಯಿ ಅವರನ್ನು ಹೊಣೆ ಮಾಡುತ್ತಿರುವದು ಸರಿಯೇ?
-ಗೋಧ್ರಾದಲ್ಲಿ ರೈಲನ್ನು ದ್ವೇಷದ ಕಾರಣದಿಂದ ಸುಡದೆ ಇದ್ದರೆ, ದಂಗೆಗಳ ಪ್ರಶ್ನೆಯೇ ಇರುತ್ತಿರಲಿಲ್ಲ. ಆ ಘಟನೆಯನ್ನು ಪ್ರಸ್ತಾಪಿಸದೆ ಮೋದಿಯಿಂದ ದೇಶ ನಾಶ ಅಂತ ಬೊಬ್ಬೆ ಹೊಡೆಯುವವರಿಗೆ ಏನನ್ನೋಣ?
-ಜಿ. ಎಚ್. ನಾಯಕರೇ ಮೊದಲಾದ 'ಸೆಕ್ಯುಲರ್' ಪಾಳೆಯದವರಿಗೆ ಇಲ್ಲಿಯವರೆಗೆ ಇಲ್ಲದ ವಾಜಪೇಯಿ ಪ್ರೀತಿ ಎಲ್ಲಿಂದ ಬಂತು? ರಾಜಧರ್ಮವೆಂದರೆ ಏನು? ರಾಜಧರ್ಮವೆಂದರೆ ಇಲ್ಲಿಯ ಮೂಲ ಧರ್ಮವನ್ನು ಕಾಪಾಡು ಎಂದು ಸೋಗಲಾಡಿ ಜಾತ್ಯತೀತರಿಗೆ ತಿಳಿದಿಲ್ಲವೇ? ಮೋದಿ ಪಾಲಿಸುತ್ತಿರುವದು ಅದನ್ನೇ.
- ಪ್ರಕಾಶ ವಾಟವೆ, ಬೆಂಗಳೂರು
ಕ್ರಿಮಿನಲ್ಗಳಲ್ಲಿ ವ್ಯತ್ಯಾಸ ಕಾಣಬೇಕು
ಸುಲಿಗೆ, ಕೊಲೆ, ಅತ್ಯಾಚಾರ, ವಂಚನೆ ಇವುಗಳಲ್ಲಿ ಭಾಗವಹಿಸಿರುವುದು ಖಾತರಿಯಾದಲ್ಲಿ ಅಂತಹವರನ್ನು ಚುನಾವಣಾ ಕಣಕ್ಕೇ ಇಳಿಸಬಾರದು ಎಂಬ ಕೂಗು ಸಾರ್ವಜನಿಕರಲ್ಲಿ ಗಟ್ಟಿಯಾಗಿದೆ. ಕೊನೆಯದಾಗಿ ಸುಪ್ರೀಂ ಕೋರ್ಟ್ ಸಹ ರಾಜಕೀಯ ಶುದ್ಧೀಕರಣಕ್ಕೆ ಅಗತ್ಯವಾಗುವ ತೀರ್ಪುಗಳನ್ನು ನೀಡಿದೆ. ಅನೇಕ ವೇಳೆ ಜನಪರ ಕಾರ್ಯಗಳಲ್ಲಿ ತೊಡಗಿದವರು ಶಾಂತಿಯಿಂದ ಪ್ರತಿಭಟನೆ ಮಾಡದೆ ಸಣ್ಣ ಪುಟ್ಟ ಗಲಭೆಗಳನ್ನೆಬ್ಬಿಸಿ ಪೊಲೀಸರ ಅತಿಥಿಗಳಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಪ್ರಕರಣಗಳಿವೆ. ಅವರನ್ನೂ ಮತ್ತು ಕೊಲೆ, ಸುಲಿಗೆ, ಅತ್ಯಾಚಾರ, ವಂಚನೆ ಇಂತಹ ಕೆಲಸಗಳನ್ನು ಮಾಡಿ ಸಮಾಜಕ್ಕೆ ದ್ರೋಹ ಮಾಡಿದವರನ್ನು ಒಂದೇ ರೀತಿ ಕಾಣಬಾರದು. ಸಮಾಜ ದ್ರೋಹಿ ಮತ್ತು ದೇಶದ್ರೋಹಿ ಕೆಲಸಗಳಲ್ಲಿ ತೊಡಗಿದವರಿಗೆ ಉಗ್ರ ಶಿಕ್ಷೆಯಾಗುವುದರ ಜೊತೆಗೆ ಅವರನ್ನು ಚುನಾವಣಾ ಸ್ಪರ್ಧೆಯಿಂದ ದೂರ ಇಡುವಂತೆ ಕಾಯಿದೆ ಹೊರಡಿಸಬೇಕು. ಅವರ ಮೇಲಿನ ಆರೋಪ ನ್ಯಾಯಾಲಯದಲ್ಲಿ ಸಾಬೀತಾದಲ್ಲಿ ಅಂತಹವರಿಗೆ ಇರುವ ಮತದಾನದ ಹಕ್ಕನ್ನೂ ಕಿತ್ತುಕೊಳ್ಳಬೇಕು. ಸಾಧ್ಯವಾದಷ್ಟು ಮಟ್ಟಿಗೂ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ ರಾಜಕೀಯ ಆರೋಪಗಳನ್ನು ಹೊತ್ತಿರುವವರ ವಿಚಾರಣೆ ನಡೆಸಿ ಶೀಘ್ರ ತೀರ್ಪು ನೀಡಬೇಕು. ಎಷ್ಟೋ ಆರೋಪಗಳು ರಾಜಕೀಯ ಪ್ರೇರಿತವಾಗಿರುತ್ತವೆ. ರಾಜಕೀಯ ಪ್ರೇರಿತವಾಗಿರುವ ಪ್ರಕರಣಗಳನ್ನು ವಿಳಂಬವಾಗಿ ವಿಚಾರಣೆ ಮಾಡಿದಲ್ಲಿ ತಿಳಿಗೇಡಿಗಳ ಉದ್ದೇಶ ಸಾಧನೆಯಾಗುತ್ತದೆ. ಅದಕ್ಕೆ ಖಂಡಿತಾ ಅವಕಾಶ ನೀಡಬಾರದು.
- ಕೆ.ವಿ. ಸೀತಾರಾಮಯ್ಯ, ಹಾಸನ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com