ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರೊಫೆಸರರ ಅಸಂಬದ್ಧ ಪ್ರಲಾಪ

Srinivasa Murthy VN
Updated On : 16 Apr 2014, 12:55 pm

ದಿ. 12 ಶನಿವಾರದ ಪತ್ರಪ್ರಭದಲ್ಲಿ ಮೈಸೂರಿನ ಪ್ರೊ. ಜಿ. ಎಚ್. ನಾಯಕ ಅವರ 'ನರೇಂದ್ರ ಮೋದಿಯದ್ದು ವಿನಾಶದ ಹಾದಿ' ಲೇಖನಕ್ಕೆ ಪ್ರತಿಕ್ರಿಯೆಯಾಗಿ ಈ ಪತ್ರ.
ಸನ್ಮಾನ್ಯರು, ಮೋದಿ ಒಬ್ಬ ಯುದ್ಧೋನ್ಮಾದಕ, ಮತಾಂಧ, ದುಷ್ಟ, ದುರಾಲೋಚನೆಯ ವ್ಯಕ್ತಿ ಎಂಬಿತ್ಯಾದಿ ವಿಶೇಷಣಗಳಿಂದ ತಮ್ಮ ಅಸಮಾಧಾನವನ್ನು ಹರವಿಕೊಂಡಿದ್ದಾರೆ. "ಭಾರತದ ಉಪಖಂಡವನ್ನೇ ಯುದ್ಧದ ಸಂಕಷ್ಟಕ್ಕೆ ದೂಡಬಹುದಾದ ದುಷ್ಟ, ದುರಾಲೋಚನೆಯನ್ನು ಮೋದಿ ಹೊಂದಿದ್ದು, ಅಣು ಬಾಂಬುಗಳಿರುವ ದೇಶಗಳು ಯುದ್ಧಕ್ಕೆ ಎದುರಾದರೆ ದೇಶದ ಗತಿಯೇನು? ಎಂದು ಪ್ರಶ್ನಿಸಿದ್ದಾರೆ. ಇಲ್ಲಿ ಮೋದಿ ಯುದ್ಧದಾಹಿಯೆಂಬ ಪ್ರೊಫೆಸರರ ಗ್ರಹಿಕೆಯು ಹಾಸ್ಯಾಸ್ಪದವಾಗಿದೆ. 'ಭಾರತ ಹಾಗೂ ಪಾಕಿಸ್ತಾನ ಯುದ್ಧ ಮಾಡಬೇಕಿರುವುದು ಪರಸ್ಪರರ ಮೇಲಲ್ಲ. ಬದಲಾಗಿ ಅನಕ್ಷರತೆ, ಅನಾರೋಗ್ಯ ಹಾಗೂ ಬಡತನದ ವಿರುದ್ಧವೆಂದು' ಈ ಹಿಂದೆಯೇ ಪ್ರಚಾರ ಸಭೆಯೊಂದರಲ್ಲಿ ಮೋದಿ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದೂ ಮೋದಿಯವರಲ್ಲಿ ಯುದ್ಧೋನ್ಮಾದತನ ಕಂಡಿದ್ದು ಯಾವ ಕಾರಣಕ್ಕೋ ತಿಳಿಯದು. ಅಣ್ವಸ್ತ್ರ ಯುದ್ಧದಿಂದಾಗುವ ಪರಿಣಾಮದ ಆತಂಕ ಪ್ರೊಫೆಸರಿಗಿರುವಂತೆ ಹೆಚ್ಚು ದೇಶಗಳಿಗೂ ಇದ್ದೇ ಇರುತ್ತದಲ್ಲವೇ?
'ಮೋದಿಯಂತಹ ದ್ವೇಷ ಬುದ್ಧಿಯಿಲ್ಲದ ಮನಮೋಹಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರು ದುರ್ಬಲರಾದರೆ, ಅಪಾಯಕಾರಿ ಮೋದಿಗಿಂತ ಲೇಸು' ಎನ್ನುವ ಇವರಿಗೆ, ಕಾಶ್ಮೀರಕ್ಕಷ್ಟೇ ಸೀಮಿತವಾಗಿದ್ದ ಭಯೋತ್ಪಾದಕ ಕೃತ್ಯಗಳು ದೇಶದುದ್ದಕ್ಕೂ ವ್ಯಾಪಿಸಿ ಮನೆಯಂಗಳಕ್ಕೆ ಬಂದು ನಿಂತಿರುವುದಾಗಲಿ, ಭಾರತೀಯ ಯೋಧರ ಶಿರಚ್ಛೇದದ ಘಟನೆಯಾಗಲಿ, ರಕ್ಷಣಾ ಕೇತ್ರದ ಉನ್ನತೀಕರಣದ ಬಗ್ಗೆ ಇರುವ ನಿರ್ಲಕ್ಷ್ಯ, ಉದಾಸೀನತೆ, ಚೀನಾದ ಅತಿಕ್ರಮಣ ಹುಡುಗಾಟಿಕೆ, ಪುಟ್ಟ ಶ್ರೀಲಂಕಾ ಭಾರತಕ್ಕೆ 'ಇಂಗು' ತಿನ್ನಿಸಿ ಮೋಜು ಮಾಡುತ್ತಿರುವ ಪರಿ, ಅಂಗೈಯಷ್ಟು ಅಗಲವಿರುವ ಮ್ಯಾನ್ಮಾರ್‌ನ ಸೈನಿಕರು, ದೇಶದ ಒಳನುಗ್ಗಿ ಧ್ವಜ ನೆಟ್ಟು ತಕರಾರು ತೆಗೆಯುವುದಾಗಲಿ, ಇದೆಲ್ಲವೂ ನೀವು ಲೇಸೆನ್ನುವ ದುರ್ಬಲರ ದುರ್ಬಲ ಆಡಳಿತ ಮತ್ತು ವಿದೇಶಾಂಗ ನೀತಿಯ ಪ್ರತಿಫಲಗಲೇ ಅಲ್ಲವೇ? ದೇಶ ವಿರೋಧಿ ಕೃತ್ಯಗಳು, ಭ್ರಷ್ಟಾಚಾರ, ಭಯೋತ್ಪಾದನೆಯ ವಿರುದ್ಧ ಸೆಣಸಬೇಕಾದ ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ವಿಮುಖಗೊಳಿಸಿ, ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು 'ಅಸ್ತ್ರವಾಗಿ' ಬಳಸುವ ಮೂಲಕ ದೇಶದ ಭದ್ರತೆಯನ್ನು ನಿರ್ಲಕ್ಷಿಸಿ ದ್ವೇಷ ಬುದ್ಧಿ ಪ್ರದರ್ಶಿಸಿದ್ದು ಯಾರು?
ಕೋಮು ಗಲಭೆಗಳು ಎಲ್ಲ ರಾಜ್ಯಗಳಲ್ಲಿಯೂ ಸಂಭವಿಸಿವೆ. ಆಯಾ ರಾಜ್ಯಗಳ ಹೊಣೆ ಹೊತ್ತ ಎಲ್ಲ ಮುಖ್ಯಮಂತ್ರಿಗಳನ್ನೂ ಕೋಮುವಾದಿ ಎಂದು ಕರೆಯಬೇಕಿತ್ತಲ್ಲವೇ? ಬರೀ ಮೋದಿಯವರನ್ನಷ್ಟೇ ಯಾಕೆ? ತನಿಖಾ ಸಂಸ್ಥೆಗಳು, ಸುಪ್ರಿಂಕೋರ್ಟ್ ಮೋದಿಯವರಿಗೆ "ಕ್ಲೀನ್ ಚಿಟ್‌" ನೀಡಿದಾಗ್ಯೂ ಕೂಡ?
ಹಾಗೆಯೇ ಕಾಂಗ್ರೆಸ್ ಕಾರ್ಯಕರ್ತರಿಂದಾದ 1984ರ ಸಿಖ್ ನರಮೇಧವನ್ನೊಮ್ಮೆ ನೆನಪಿಸಿಕೊಳ್ಳಿ. ಇದು ಕೋಮುವಾದಿತನವಲ್ಲವೇ?
"ವಾಜಪೇಯಿಯವರು ಪ್ರೊಖ್ರಾನ್‌ನಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆಯಿಂದಲೇ ಪ್ರೇರಿತವಾಗಿ ಪಾಕಿಸ್ತಾನವೂ ಕೆಲವೇ ತಿಂಗಳುಗಳಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತು" ಎನ್ನುವ ತಮ್ಮ ವಾದದಲ್ಲಿ ಯಾವುದೇ ಹುರುಳಿಲ್ಲ. ಭಾರತಕ್ಕೆ ಅಪಾಯವಿರುವುದು ಪಾಕಿಸ್ತಾನದಿಂದಷ್ಟೇ ಅಲ್ಲ, ಬಲಿಷ್ಠ ಚೀನಾ ಅದಾಗಲೇ ಅಣ್ವಸ್ತ್ರ ಹೊಂದಿದ ರಾಷ್ಟ್ರವಾಗಿ ಭಾರತದ ಅಸ್ತಿತ್ವಕ್ಕೆ ಗಂಡಾಂತರಕಾರಿಯಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖನೀಯ. ಅಣ್ವಸ್ತ್ರ ಸ್ಫೋಟದಂತಹ ಪರೀಕ್ಷೆ ಕೈಗೊಳ್ಳುವುದು ಒಂದೆರಡು ತಿಂಗಳಿನಲ್ಲಿ ಆಗುವ ಕೆಲಸವಲ್ಲ. ಪಾಕಿಸ್ತಾನ ಅಣುಬಾಂಬ್ ಪರೀಕ್ಷಿಸುವ ಸಕ್ಷಮತೆ ಮೊದಲೇ ಹೊಂದಿದ್ದು, ಭಾರತದ ಗುಪ್ತಚರ ಸಂಸ್ಥೆಗಳಿಗೆ ತಿಳಿದ ವಿಷಯವೇ ಆಗಿತ್ತು.
ದೇಶದ ಭದ್ರತೆಗಾಗಿ ವಾಜಪೇಯಿಯವರು ಕೈಗೊಂಡ ಅಣ್ವಸ್ತ್ರ ಪರೀಕ್ಷೆ 'ಅವಿವೇಕಿತನದ್ದು' ಎನ್ನುವುದು ತಮ್ಮ ವಾದವಾದರೆ, ವಾಜಪೇಯಿಯವರು ನಡೆಸಿದ್ದು ಎರಡನೇ ಪರೀಕ್ಷೆ, ಮೊದಲನೇ ಪರೀಕ್ಷೆ ನಡೆದದ್ದು ದಿ. ಇಂದಿರಾಗಾಂಧಿಯವರಿಂದ. ವಾಜಪೇಯಿಯವರು ಮತ್ತು ಇಂದಿರಾಗಾಂಧಿಯವರು ದೇಶದ ಭದ್ರತೆಗಾಗಿ ಕೈಗೊಂಡ ಈ ದಿಟ್ಟ ಹೆಜ್ಜೆಗಾಗಿ ನಾನಂತೂ ಹೆಮ್ಮೆ ಪಡುತ್ತೇನೆ. ಈಗ ತಾವೂ ಕೂಡ ಒಳಗೊಳಗೆ ಹೆಮ್ಮೆ ಪಡಲು ಆರಂಭಿಸಿರಬೇಕೆಂದು ನನ್ನ ತರ್ಕ! ನಿಜವಾದ ಸೆಕ್ಯುಲರ್‌ಗಳ, ಪ್ರಜಾಪ್ರಭುತ್ವವಾದಿಗಳ ವಿವೇಕಯುತ ಮತದಾರರ ತುಳಿಯಬೇಕಾದ ಹಾದಿ ಯಾವುದೆನ್ನುವುದು ಈಗ ತಮಗೂ ಸ್ಪಷ್ಟವಾಗಿರಬೇಕಲ್ಲ?
-ಮಲ್ಲಿಕಾರ್ಜುನ, ಬಾಗಲಕೋಟ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement