ವಾಮಪಂಥ-ಬಲಪಂಥ ವಿವಾದದಲ್ಲಿ ಮೋದಿ
2014ರ ಲೋಕಸಭೆ ಚುನಾವಣೆಯ ಪ್ರಕ್ರಿಯೆ ಈಗಾಗಲೇ ಹೆಚ್ಚು ಕಡಿಮೆ ಅರ್ಧ ದಾರಿಯನ್ನು ಕ್ರಮಿಸಿ, ಇನ್ನು ಇಪ್ಪತ್ತು ದಿನಗಳಲ್ಲಿ ಪೂರ್ಣವಾಗುವ ಹಂತವನ್ನು ತಲುಪಿದೆ. ಚುನಾವಣೆಯ ಕಣದಲ್ಲಿ ಹಲವು ಬಗೆಯ ಸಿದ್ಧಾಂತಗಳನ್ನು ನಂಬಿರುವ ಶಕ್ತಿಗಳು, ವ್ಯಕ್ತಿಗಳು ಇದ್ದರೂ, ಮೂಲತಃ ದೆಹಲಿಯಲ್ಲಿನ ಅಧಿಕಾರವನ್ನು ಹಿಡಿಯಲು ಖಡಾಖಡಿ ಹೋರಾಟ ನಡೆದಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ಕೂಟಗಳ ನಡುವೆಯೇ.
ಸೋನಿಯಾ ಗಾಂಧಿ- ರಾಹುಲ ಗಾಂಧಿ ಅವರಿಂದ ಹಿಡಿದು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರವರೆಗೂ, ಆ ಪಕ್ಷದ ಪ್ರಚಾರಕರು ಈಗಿನ ಹೋರಾಟ ಸಮಾಜವನ್ನು ಹೋಳು ಮಾಡುವವರು ಹಾಗೂ ಎಲ್ಲರನ್ನೂ ಒಂದು ಗೂಡಿಸುವವರ ನಡುವೆ ಎಂದೇ ಪ್ರಚಾರ ಮಾಡುತ್ತಿದ್ದಾರೆ. ಒಡೆಯುವವರು ಯಾರು, ಕಟ್ಟುವವರು ಯಾರು ಎನ್ನುವುದನ್ನು ವಿವರಿಸುವ ಗೋಜಿಗೇ ಹೋಗಿಲ್ಲ. ಬಿಜೆಪಿಯ ಪ್ರಚಾರಕರು ಚರ್ಚೆಯಲ್ಲಿ ನೇರವಾಗಿ ಪಾಲುಗೊಳ್ಳುತ್ತಿಲ್ಲ. ಅವರ ಮೇಲಿನ "ಸಮಾಜವನ್ನು ಒಡೆಯುವವರು" ಎನ್ನುವ ಆರೋಪವನ್ನು ಅಪ್ಪಟ ಅಪಪ್ರಚಾರವೆಂದು ಆ ಪಕ್ಷ ತಿರಸ್ಕರಿಸಿದೆ. ಆ ವಿಚಾರದಲ್ಲಿ ಚರ್ಚೆ ಅನಗತ್ಯ ಎನ್ನುವುದು ಅವರ ವಾದ.
ಸಮಾಜವನ್ನು ಒಂದುಗೂಡಿಸುವುದು ಎಂದರೆ ಒಂದು ಜನವರ್ಗದ ತುಷ್ಟೀಕರಣ ಅಲ್ಲ ಎನ್ನುವ ಮಾತನ್ನು ಲಾಗಾಯ್ತಿನಿಂದಲೂ, ಜನಸಂಘ, ಬಿಜೆಪಿ ನಾಯಕರುಪ್ರತಿಪಾದಿಸಿದ್ದಾರೆ. ಅಲ್ಲಿಗೇ ಆ ಚರ್ಚೆ ಮುಗಿಯುವುದಿಲ್ಲ.
ಈಗಾಗಲೇ ಹಲವು ಬಾರಿ ಚರ್ಚಿಸಿರುವಂತೆ ಈಗಿನ ಚುನಾವಣಾ ಪ್ರಚಾರ ಸಮರದಲ್ಲಿ ಬಿಜೆಪಿ ಪ್ರಚಾರಕರು, ಕಾಂಗ್ರೆಸ್ ನಾಯಕರು ನರೇಂದ್ರ ಮೋದಿ ಅವರನ್ನೇ ಕೇಂದ್ರ ವ್ಯಕ್ತಿಯನ್ನಾಗಿ ಮಾಡಿರುವುದರಿಂದ, ಮೋದಿ ಅವರಿಗೆ ಯಾವ ಸಿದ್ಧಾಂತದಲ್ಲಿ ನಂಬಿಕೆ ಇದೆ ಎನ್ನುವುದು ಮುಖ್ಯವಾಗುತ್ತದೆ. ಆದರೆ ಆ ಪ್ರಶ್ನೆಗೆ ನರೇಂದ್ರ ಮೋದಿ ಅವರು ಇದುವರೆಗೆ ಮಾಡಿರುವ ಮುನ್ನೂರಕ್ಕೂ ಹೆಚ್ಚು ಭಾಷಣಗಳಲ್ಲಿ ಉತ್ತರ ಸ್ಪಷ್ಟವಾಗಿ ಸಿಗುವುದಿಲ್ಲ. ಮಾಧ್ಯಮ ಪ್ರಪಂಚದ ಒಂದು ದೊಡ್ಡ ಹಾಗೂ ಪ್ರಭಾವಿ ವಿಭಾಗ ಈಗಿನ ಸಮರವನ್ನು ವಾಮಪಂಥೀಯ- ಬಲಪಂಥೀಯ ಸಿದ್ಧಾಂತಗಳ ನಡುವಣ ಸಮರವೆಂದೇ ಬಿಂಬಿಸುತ್ತಿರುವುದು ಸಹಜ. ಅದೇ ಅಭಿಪ್ರಾಯ ವಿದೇಶೀ ಮಾಧ್ಯಮದಲ್ಲೂ ಪ್ರಕಟವಾಗಿರುವುದು ನಿಜ. ಆದರೆ ಭಾರತೀಯ ವಿಶ್ಲೇಷಕರು ಬಿಜೆಪಿ ಹಾಗೂ ಮೋದಿ ಅವರಿಗೆ ಬಲಪಂಥೀಯ ಹಣೆ ಪಟ್ಟಿಯನ್ನು ಅಂಟಿಸಿದಷ್ಟೇ ಸರಳವಾಗಿ ಕಾಂಗ್ರೆಸ್ಸಿಗೆ ವಾಮಪಂಥೀಯ ಹಣೆ ಪಟ್ಟಿಯನ್ನು ಅಂಟಿಸಿಲ್ಲ. ಕಾಂಗ್ರೆಸ್ನ ಆರ್ಥಿಕ ನೀತಿ ಸ್ಪಷ್ಟವಾಗಿ "ಇಸಂ"ಗಳ ಆಧಾರದ ಮೇಲೆ ಹೊಗಳಿಕೆ ಅಥವಾ ತೆಗಳಿಕೆಗೆ ನಿಲುಕುವಂತಹದ್ದಲ್ಲ. ದೇಶದಲ್ಲಿ ಈಗ ದುರ್ಬಲವಾಗಿದ್ದರೂ ಒಂದು ಸಿದ್ಧಾಂತವಾಗಿ ವಾಮಪಂಥವನ್ನು ಒಪ್ಪುವ ಪಕ್ಷಗಳು- ಶಕ್ತಿಗಳು ಇವೆ. ಈಗಿನ ಪ್ರಚಾರ ಸಮರದಲ್ಲಿ ಅವರ ಪಾತ್ರ ತುಂಬಾ ಕಡಿಮೆ.
ಈ ಹಿನ್ನೆಲೆಯಲ್ಲಿ ನರೇಂದ್ರ ಮೇದಿ ಅವರ ಒಂದು ಟಿವಿ ಸಂದರ್ಶನ (ಟಿವಿ-18 ಸಿಎನ್ಬಿಸಿ) ಪ್ರಸ್ತುತವಾಗುತ್ತದೆ. ಆ ಸಂದರ್ಶನದಲ್ಲಿ ವಾಮಪಂಥ, ಬಲಪಂಥಗಳ ಚಿಂತನೆಯ ಪ್ರಸ್ತಾಪವಿಲ್ಲ, ನೇರವಾದ ಪ್ರಶ್ನೆಗೆ ನೇರವಾದ ಉತ್ತರದ ಸ್ವರೂಪದಲ್ಲೇ ಇರುವ ಸಂದರ್ಶನ ಅದು.
ಚಿಲ್ಲರೆ ವ್ಯಾಪಾರದ ವಲಯದಲ್ಲಿ ವಿದೇಶಿ ನೇರ ಬಂಡವಾಳದ ಪಾತ್ರ ಈಗ ಬಹು ಚರ್ಚಿತ ವಿಷಯವಾಗಿದೆ. ಆ ವಿಚಾರದಲ್ಲಿ ಮೋದಿ ಅವರ ಅಭಿಪ್ರಾಯ ಸ್ಪಷ್ಟ. ಚಿಲ್ಲರೆ ವಲಯದಲ್ಲಿ ಮಾತ್ರ ಯಾಕೆ, ಇತರ ವಲಯಗಳಲ್ಲೂ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಮರು ಚಿಂತನೆ ಅಗತ್ಯ. ಆ ನೀತಿ ಭಾರತೀಯ ವಸ್ತುಗಳ ತಯಾರಿಕಾ ಉದ್ಯಮಕ್ಕೆ ಮಾರಕವಾಗಬಾರದು.
ಮೋದಿ ಅವರು ಆರ್ಥಿಕ ವಲಯದಲ್ಲಿ ಬಲಪಂಥೀಯ, ಕಾರ್ಪೊರೇಟ್ ವಲಯದ ಸ್ನೇಹಿತ ಎನ್ನುವ ಮಾತು ವಿಪರೀತವಾಗಿ ಪ್ರಚಾರದಲ್ಲಿದೆ. ಮೋದಿ ತಾವು ಉದ್ಯಮಿಗಳ ಪರ ಎನ್ನುವುದನ್ನು ನೇರವಾಗಿ ತಿರಸ್ಕರಿಸಿದ್ದಾರೆ. ಅವರದ್ದು "ಜನಪರ" ನೀತಿ. ಸಬ್ಸಿಡಿಗಳಿಗೆ ಮೋದಿ ವಿರುದ್ಧವಾಗಿದ್ದಾರೆನ್ನುವ ಪ್ರಚಾರವಿದೆ. ಮೋದಿ ಸಬ್ಸಿಡಿಗಳಿಗೆ ವಿರೋಧವಾಗಿಲ್ಲ. ಆದರೆ ಅದರಿಂದ ಜನ ಸಾಮಾನ್ಯ ವರ್ಗಗಳಿಗೆ ಉಪಯೋಗವಾಗಬೇಕು. ನೀತಿ ಪರಿಣಾಮಕಾರಿಯಾಗಿರಬೇಕು ಎನ್ನುತ್ತಿದ್ದಾರೆ ಮೋದಿ.
ಸರ್ಕಾರಿ ಉದ್ಯಮಗಳಿಗೆ ಸಂಬಂಧಿಸಿದಂತೆ ಅವರ ನಿಲವು! ಅಲ್ಲಿ ಅದಕ್ಷತೆ- ಸ್ವಜನಪಕ್ಷಪಾತ ಅಸಹನೀಯ.
ಸಾಮಾನ್ಯ ಸೇವಾ ತೆರಿಗೆಯ ವಿವಾದದ ವಿಚಾರ ಕುರಿತು ಮೋದಿ, ಆ ನೀತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ನಂಬಿಕೆ- ವಿಶ್ವಾಸವಿದೆ ಎಂದಿದ್ದಾರೆ. ಆದರೆ ಈಗ ಆಗುತ್ತಿರುವಂತೆ ದೆಹಲಿಯ ಕೇಂದ್ರ ಸರ್ಕಾರ ರಾಜ್ಯಗಳ ಸಂವಿಧಾನದತ್ತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮುಂದುವರಿಯಬಾರದು ಎಂದಿದ್ದಾರೆ.
ಆ ಸಂದರ್ಶನದಲ್ಲಿ ಯೋಜನಾ ಬದ್ಧ ಪ್ರಗತಿ, ದುರ್ಬಲರಿಗೆ ನೆರವು, ಕಷ್ಟ ಕಾಲದಲ್ಲಿ ಔದ್ಯಮಿಕ ವಲಯಕ್ಕೆ ಸರ್ಕಾರದಿಂದ ಸೂಕ್ತ ರೀತಿಯ ಉತ್ತೇಜನ ಇಂತಹ ವಿಷಯಗಳ ಪ್ರಸ್ತಾಪವೂ ಇದೆ. ಈ ವಿಚಾರಗಳಲ್ಲಿ ಮೋದಿ ಅವರ ಮಾತು: ನೀತಿ ಸರಿ, ಆದರೆ ಕೇಂದ್ರ ಸರ್ಕಾರ ಈಗ ಜಾರಿಗೊಳಿಸಿದಂತೆಯೇ ಆ ನೀತಿಯನ್ನು ಜಾರಿಗೊಳಿಸಿದರೆ ಅಪಾಯವಿದೆ. ಪ್ರಾಮಾಣಿಕತೆಗೆ, ದಕ್ಷತೆಗೆ ಉತ್ತೇಜನವಿಲ್ಲದ ವ್ಯವಸ್ಥೆ ಅವ್ಯವಸ್ಥೆಯೇ. ಆ ಸಂದರ್ಶನ ನೋಡಿದ ಅನಂತರ ಯಾರಿಗಾದರೂ ಮೋದಿ ಅವರು ಬಲಪಂಥೀಯರೇ ಎನ್ನುವ ಪ್ರಶ್ನೆಗೆ ಹೌದು ಎನ್ನುವ ಉತ್ತರ ಕೊಡಲು ಕಷ್ಟವಾದೀತು.