ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾರ್ಮಿಕ ಕಾಯಿದೆ ಮಾರ್ಪಾಟು: ಆರಂಭದ ಒಪ್ಪಿಗೆ

Srinivasa Murthy VN
Updated On : 1 Aug 2014, 11:50 am

ಕಳೆದ ಎರಡು ದಶಕಗಳಿಂದಲೂ ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಔದ್ಯಮೀಕರಣದ ಕ್ರಾಂತಿಗೆ ಓಬಿರಾಯನ ಕಾಲದ ಕಾರ್ಮಿಕ ಕಾಯಿದೆಗಳು ಅಡ್ಡಿಯಾಗಿವೆ ಎಂದು ಹೇಳಿದರೂ, ಕಾಯಿದೆಯ ಸುಧಾರಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲೇ ಇಲ್ಲ.
ಈಗಿನ ಕಾಯಿದೆಯ ಅರಾಜಕತೆಯಲ್ಲಿ ಆರಾಮವಾಗಿರುವ ಸಂಘಟಿತ ಉದ್ಯಮ ವಲಯದ ಸಂಘಟಿತ ಕಾರ್ಮಿಕ ಸಂಘಟನೆಗಳ ಓಟು ಬ್ಯಾಂಕಿಗೆ ಹೆದರಿ ರಾಜಕಾರಣಿಗಳು ಮೈದಾನದಲ್ಲಿ ಹೇಳಿದ ಸುಧಾರಣೆಯ ಮಾತನ್ನು ಸಂಸದೀಯ ಸದನಗಳಲ್ಲಿ ಆಡಲಿಲ್ಲ.
ಈ ವರ್ಷದ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ, ಭಾರತೀಯ ಜನತಾ ಪಾರ್ಟಿ ಈ ವಿಚಾರದಲ್ಲಿ ಸ್ಪಷ್ಟವಾದ ನಿಲವನ್ನು ಸ್ವೀಕರಿಸಿತ್ತು. ಅದರಂತೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಎರಡನೇ ತಿಂಗಳಲ್ಲೇ ನಾಲ್ಕು ಪ್ರಮುಖ ಕಾಯಿದೆಗಳನ್ನು ಮಾರ್ಪಾಟು ಮಾಡುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಕೈಗೊಂಡಿದೆ.
ನಿಜ. ಈಗಿನ ಸರ್ಕಾರ ತರಲು ನಿರ್ಧರಿಸಿರುವ ಬದಲಾವಣೆ "ಉದ್ಯಮ ಸ್ನೇಹಿ". ಅಂದರೆ ನೌಕರಿಗಳ, ಉದ್ಯೋಗಗಳ ಸೃಷ್ಟಿಗೆ ಇದ್ದ ಅಡಚಣೆಯನ್ನು ತೆಗೆದು ಹಾಕುವುದೇ ಬದಲಾವಣೆಯ ಉದ್ದೇಶ.
ಕೈಗಾರಿಕಾ ವಿವಾದಗಳ ಕಾಯಿದೆ, ಕಾರ್ಖಾನೆಗಳ ಕಾಯಿದೆ, ಗುತ್ತಿಗೆ ಕಾರ್ಮಿಕರ ಕಾಯಿದೆ ಹಾಗೂ ಅಪ್ರೆಂಟಿಸ್ ಕಾಯಿದೆಗಳಿಗೆ ಬದಲಾವಣೆ ತರುವ ಉದ್ದೇಶ ಪ್ರಕಟವಾಗಿದೆ. ಸಾಧ್ಯವಾದರೆ ಈ ಬದಲಾವಣೆ ವಿಧೇಯಕಗಳನ್ನು ಸಂಸತ್ತಿನ ಈಗಿನ ಅಧಿವೇಶನದಲ್ಲೇ ಮಂಡಿಸುವ ಉದ್ದೇಶವೂ ಪ್ರಕಟವಾಗಿದೆ.
ನಿಜ. ರಾಜಕೀಯ ದೃಷ್ಟಿಯಿಂದ ಈ ನಿರ್ಧಾರ ತುಂಬಾ ಸೂಕ್ಷ್ಮವಾದದ್ದು. ಈಗ ಉದ್ಯೋಗ ಗಳಿಸಿರುವ ವರ್ಗಗಳ ಕೋಪಕ್ಕೆ - ವಿರೋಧಕ್ಕೆ ಪಾತ್ರವಾಗುವಂತಹ ಬದಲಾವಣೆಗಳಿವು. ಕೇಂದ್ರ ಸರ್ಕಾರದ ವಕ್ತಾರರ ಪ್ರಕಾರ, ಈ ಬದಲಾವಣೆಗಳಿಂದ ಈಗಿನ ನೌಕರರ ಹಿತಕ್ಕೆ ಧಕ್ಕೆ ಬರುವುದಿಲ್ಲ. ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯ ಉದ್ಯೋಗಿಗಳಿಗೆ ಅವಕಾಶ ಮಾಡಿಕೊಡುವ ವಿಧಿ-ನಿಯಮಗಳನ್ನು ರೂಪಿಸಲಾಗಿದೆ.
ನೌಕರಿಗಳ ಸೃಷ್ಟಿಗೆ ಅನುಕೂಲವಾಗುವಂತಹ ವಾತಾವರಣವನ್ನು ರೂಪಿಸುವ ಪ್ರಯತ್ನ ಇದು ಎನ್ನುವುದು ಸರ್ಕಾರದ ವಾದ. ಅದನ್ನು ವಾಣಿಜ್ಯೋದ್ಯಮಿಗಳು ಒಪ್ಪಿಕೊಂಡರೂ, ಸಂಘಟಿತ ನೌಕರ -ಕಾರ್ಮಿಕ ವಲಯದ ಪ್ರತಿನಿಧಿಗಳು ವಿರೋಧಿಸಿವೆ. ಇದು ಸಹಜವಾದ ಪ್ರತಿಕ್ರಿಯೆ. ನಿರೀಕ್ಷಿತವಾದದ್ದೇ. ಈಗ ಜಾರಿಯಲ್ಲಿರುವ ಕೆಲವು ಕಾಯಿದೆಗಳು ಹತ್ತೊಂಬತ್ತನೆಯ ಶತಮಾನದ್ದು ಎನ್ನುವ ಅರಿವು ಇದ್ದರೂ ಸಂಘಟಿತ ನೌಕರರು ಬದಲಾವಣೆಗೆ ಸಿದ್ಧರಿಲ್ಲ.
  ನಿಜ. ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದಂತೆ ಈಗಿನ ಬದಲಾವಣೆ ಸಮಗ್ರ ಸ್ವರೂಪದ್ದಲ್ಲ. ಕ್ರಾಂತಿಕಾರಿ ಬದಲಾವಣೆಯಂತೂ ಅಲ್ಲ. ಇದು ಆರಂಭದ ಸೂಚನೆ ಅಷ್ಟೇ. ಸರ್ಕಾರದ ಸಮಸ್ಯೆ ನೌಕರ-ಕಾರ್ಮಿಕ ಸಂಘಟನೆಯ ವಿರೋಧ ಅಲ್ಲ. ಆದರೆ ಆಳುವ ಕೂಟಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದೇ ಇರುವುದರಿಂದ ಬದಲಾವಣೆಯ ಕ್ರಮಗಳನ್ನು ಸಂಸತ್ತು ಅಂಗೀಕರಿಸುವಂತೆ ಮಾಡುವುದೇ ಸಮಸ್ಯೆ.
ಈ ವಿಚಾರದಲ್ಲಿ ವಾಮಪಂಥೀಯರು ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಡಲೂಬಹುದು. ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ, ಬದಲಾವಣೆಯ ಸ್ವರೂಪದ ವಿವರಗಳನ್ನು ತಿಳಿಸುವಾಗ ಅಸಂಘಟಿತ ಉದ್ಯಮ ಹಾಗೂ ಶ್ರಮಿಕ ವರ್ಗದ ಹಿತದ ಕಡೆಗೆ ಗಮನ ಕೊಡಬೇಕು. ದೇಶದ ಸಂಘಟಿತ ಕಾರ್ಮಿಕ ವಲಯ, ಅಸಂಘಟಿತ ಶ್ರಮಿಕ ವಲಯಕ್ಕೆ ಹೋಲಿಸಿದರೆ, ಜನಸಂಖ್ಯೆಯ ಒಂದು ಅತಿ ಚಿಕ್ಕಿ ಪಾಲು ಎನ್ನುವುದನ್ನು ಮರೆಯಬಾರದು.
ಇಪ್ಪತ್ತು ವರ್ಷಗಳ ಅನಂತರ ಮೋದಿ ಸರ್ಕಾರ ದಿಟ್ಟ ಹೆಜ್ಜೆಯನ್ನಂತೂ ಇಟ್ಟಿದೆ. ಪ್ರಗತಿಗೆ ಯಥಾಸ್ಥಿತಿಯ ಬದಲಾವಣೆ ಅಗತ್ಯ ಎನ್ನುವುದು ನಿಸರ್ಗದ ನಿಯಮ. ಅದನ್ನು ಒಪ್ಪಲೇಬೇಕು. ಇಲ್ಲದಿದ್ದರೆ ಅರಾಜಕತೆಯೇ ಗತಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement