ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 7 Feb 2014, 10:55 am

ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಫೆ.3ರಂದು ನಾನು ಬರೆದ ಪತ್ರ ''ಗೋಡೆಬರಹ' ಅಂಕಣದಲ್ಲಿ ಪ್ರಕಟವಾಗಿದೆ. ಪತ್ರದ 3ನೇ ಕಲಂನಲ್ಲಿ, 'ಮಹಾದೇವಿ ದೇವಲೋಕ ಪ್ರೇಮಲೋಕ ನನ್ನಯೀಗ' ಎಂದು ತಪ್ಪಾಗಿ ಬರೆಯಲಾಗಿದೆ. ಅದು 'ನನ್ನಮನೆಯೀಗ' ಎಂದಾಗಬೇಕಿತ್ತು' ಎಂದಿದ್ದಾರೆ.
ಬೆಳಗಾವಿಯಿಂದ ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಭಾವಿ ಅವರು ಬರೆಯುತ್ತಾರೆ- 'ಫೆ.4ರಂದು ಪುಟ 10ರಲ್ಲಿ 'ಜನರ ಮೂಗಿಗೆ ಯುಪಿಎ ತುಪ್ಪ' ಶೀರ್ಷಿಕೆಯ ಮೂರನೇಯ ಪ್ಯಾರಾದಲ್ಲಿ, 'ಇತ್ತೀಚೆಗಷ್ಟೇ ದೆಹಲಿಯ ಆಪ್ ಸರ್ಕಾರ ಸಿಎನ್‌ಜಿ ದರ ಏರಿಕೆ ನಿರ್ಧಾರವನ್ನು ಏರಿಕೆ ಮಾಡಿತ್ತು. ಇದನ್ನು ವಿರೋಧಿಸಿದ್ದ ಕೇಜ್ರಿವಾಲ್ ಸರ್ಕಾರ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು' ಎಂದು ಪ್ರಕಟಿಸಿದ್ದೀರಿ. ನಿಮ್ಮ ಪ್ರಕಾರ ಆಪ್ ಸರ್ಕಾರ ಹಾಗೂ ಕೇಜ್ರಿವಾಲ್ ಸರ್ಕಾರ ಬೇರೆ ಬೇರೆ ಎಂದಾಯಿತು. ದರ ಏರಿಕೆ ನಿರ್ಧಾರವನ್ನು ಏರಿಕೆ ಮಾಡಿತ್ತು ಎಂಬುದರ ಅರ್ಥ ತಿಳಿಯಲಿಲ್ಲ' ಎಂದಿದ್ದಾರೆ.
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಸಿಎನ್‌ಜಿ ದರವನ್ನು ಏರಿಸಿತ್ತು. ಅದನ್ನು ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ವಿರೋಧಿಸಿತ್ತು ಎಂದಾಗಬೇಕಿತ್ತು. ಅದನ್ನು ಗೊಂದಲಮಯವಾಗಿ ಬರೆಯಲಾಗಿದೆ. 'ಸಿಎನ್‌ಜಿ ದರ ಏರಿಕೆ ಮಾಡಿತ್ತು' ಮತ್ತು 'ಸಿಎನ್‌ಜಿ ದರ ಏರಿಕೆ ಮಾಡಲು ನಿರ್ಧರಿಸಿತ್ತು' ಎಂಬುದನ್ನು ಕೂಡಿಸಿ ಬರೆದು ವಾಕ್ಯ ಗೊಂದಲಮಯವಾಗಿದೆ.
ಬರೆಯುವಾಗ ವಾಕ್ಯ ರಚನೆ ಕುರಿತು ಸ್ಪಷ್ಟನೆ ಇರದಿದ್ದರೆ ಮತ್ತು ಬರೆದಿದ್ದನ್ನು ಇನ್ನೊಮ್ಮೆ ಓದದಿದ್ದರೆ ಈ ರೀತಿಯ ತಪ್ಪುಗಳಾಗುತ್ತವೆ.
ಬಾಗಲಕೋಟ ಜಿಲ್ಲೆ ಹುನಗುಂದದಿಂದ ಸಂಗಪ್ಪ ಗಾಣಿಗೇರ ಅವರು ಬರೆಯುತ್ತಾರೆ- 'ಜ.27ರಂದು ಪುಟ 6ರಲ್ಲಿ 'ಸ್ವಂತ ಮನೆಗೊಂದು ನ್ಯಾಯ, ಸರಕಾರಿ ಕಟ್ಟಡಕ್ಕೊಂದು ನ್ಯಾಯ' ಎಂಬ ಪಿ. ತ್ಯಾಗರಾಜರ ಲೇಖನದಲ್ಲಿ ಒಂದನೇ ಕಾಲಂನಲ್ಲಿ 'ಅಧಿಕಾರ ಕೈಗೆ ಬಂದ ತಕ್ಷಣ, ಮೈಮೇಲೆ ದೇವರು ಬಂದಂತೆ ಅಡಗಿಬಿಡುತ್ತಾರೆ' ಎಂಬುದು 'ಆಗಿಬಿಡುತ್ತಾರೆ' ಅಂತಾಗಬೇಕಿತ್ತು.'
'ಅದೇ ಪುಟದಲ್ಲಿ 'ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಅರಳಿದ ಶಿರವಾಲ್‌' ಎಂದು ಡಾ.ಶಾಲಿನಿ ರಜನೀಶ್ ಅವರ ಲೇಖನದಲ್ಲಿ 'ಶಿರವಾಲ್‌' ಎಂದು ಬರೆಯುವುದು ತಪ್ಪು ಅನಿಸುತ್ತದೆ. ಅದು ಶಿರವಾಳ ಅಂತಾಗಬೇಕಿತ್ತಲ್ಲವೇ? ಬಹುಶಃ ಇಂಗ್ಲಿಷ್‌ನಲ್ಲಿ ಝ್ಝ್ಠಢಿಛಟ ಎಂಬುದರ ಭಾಷಾಂತರ ದೋಷವಿರಬಹುದು.'
'ಇನ್ನು ಆ ಲೇಖನದ ಮೂರನೇ ಕಾಲಮ್ಮಿನಲ್ಲಿ 'ಅಲ್ಲಿ ರಾಷ್ಟ್ರಕೂಟರ ಕಾಲದ ಏಳು ಶಾಸನಗಳು1537ಎಡಿ ಕಾಲದ ಒಂದು ಶಾಸನವೂ ಇದೆ' ಎಂಬಲ್ಲಿ 'ಶಿಲಾಹಾರದ' ಎಂಬುದು ಶಿಲಾಹಾರರ ಎಂದಾಗಬೇಕಿತ್ತು. ಇನ್ನು 1537ಎಡಿ ಕಾಲದ ಒಂದು ಶಾಸನವು ಎಂಬುದು ರಾಷ್ಟ್ರಕೂಟರಿಗೆ ಸಂಬಂ ಧಿಸಿದ್ದಲ್ಲ. ಯಾಕಂದ್ರೆ ಕ್ರಿ.ಶ. 1537 ವಿಜಯನಗರದ ಅರಸರ ಕಾಲವದು. ರಾಷ್ಟ್ರಕೂಟರ ಆಡಳಿತವು 10ನೇ ಶತಮಾನಕ್ಕೆ ಸಂಬಂಧಿಸಿದಂತೆ ಇದೆ ಎಂಬುದು ನನ್ನ ಅಂಬೋಣ.'
'ಇದರಂತೆ ರಾಷ್ಟ್ರಕೂಟರ ರಾಜಧಾನಿಯ ಹೆಸರನ್ನು 'ಮಲ್ಕೇಡ' ಅಂತ ತಪ್ಪಾಗಿ ಮುದ್ರಿಸಲಾಗಿದೆ. ಅದು 'ಮಳಖೇಡ' ಅಂತಾಗಬೇಕಿತ್ತು' ಎಂದಿದ್ದಾರೆ.

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement