ಪತ್ರಿಕೋದ್ಯಮದ ದುರ್ಬಳಕೆ ಅಕ್ಷಮ್ಯವಾಗಬೇಕು
ಧುರ್ಯೋಧನನ ಆತಿಥ್ಯವನ್ನು ಸ್ವೀಕರಿಸಿದ ದೂರ್ವಾಸರು ದುರ್ಯೋಧನನಿಗೆ ವರ ಕೇಳಲು ಹೇಳಿದಾಗ ಅವನು ಕೇಳಿದ್ದು ದ್ರೌಪದಿಯ ಊಟವಾದ ನಂತರ ಅವರ ಮನೆಗೆ ಊಟಕ್ಕೆ ಹೋಗುವಂತೆ ಕೇಳುತ್ತಾನೆ. ಆ ಮೂಲಕ ಅವರಿಗೆ ಆತಿಥ್ಯ ಸಿಗದೆ ಶಾಪ ಸಿಗಲಿ ಎಂಬ ದುರುದ್ದೇಶದಿಂದ. ಅಕಸ್ಮಾತ್ ಆಗಲೇ ಯುಧ್ಧ ಗೆಲ್ಲಬೇಕು ಎಂದು ಕೇಳಿದ್ದರೆ ಕುರುಕ್ಷೇತ್ರವೇ ನಡೆಯುತ್ತಿರಲಿಲ್ಲ. ಆದರೆ 'ಇನ್ನೊಬ್ಬರಿಗೆ ಕೆಟ್ಟದಾಗಲಿ' ಎಂಬ ನಕಾರಾತ್ಮಕ ಧೋರಣೆಯಿಂದ ಕೂಡಿದ ದುರ್ಯೋಧನ ನಾಶವನ್ನು ಹೊಂದಿದ ಎಂಬ ಕಥೆಯನ್ನು ಕೇಳಿದ್ದೆವು. ಆದರೆ ಈಗಲೂ ಅದು ಎಷ್ಟು ಪ್ರಸ್ತುತ ಎಂದೆನಿಸುತ್ತಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಆರೆಸ್ಸಸ್, ವಿಎಚ್ಪಿ , ಭಜರಂಗದಳ ಮುಂತಾದ ಹಿಂದೂ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ವಿರೋಧಿ ಶಕ್ತಿಗಳು ಆ ಮೂಲಕ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತರುವ ಯೋಜನೆ ಹಾಕಿಕೊಂಡಿರುವುದು ಗೋಚರಿಸುತ್ತಿದೆ. ದೇಶದ ಅಭಿವೃಧ್ಧಿಯ ಉತ್ಕಟ ಆದರ್ಶ ಹೊಂದಿರುವ ಮೋದಿಯವರ 'ಮೋಡಿ'ಯನ್ನು ಸಹಿಸಲು ಆಗದವರು ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುವ ವಾಮಮಾರ್ಗದಲ್ಲಿ ಸಾಗಿದ್ದಾರೆ. ಆರೆಸ್ಸೆಸ್ನ ಮೋಹನ ಭಾಗವತ್ ಅವರು ಕೆಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಅಸೀಮಾನಂದರು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಅಪಪ್ರಚಾರ ಕೊಟ್ಟ ಬೆನ್ನಲ್ಲೇ ಸ್ವಾಮಿ ಅಸೀಮಾನಂದರೇ ಅದನ್ನು ಅಲ್ಲಗಳೆದಿದ್ದಾರೆ. ಇಂಥಹ ಅಪಪ್ರಚಾರದ ಹಿಂದೆ ಅಡಗಿರುವ ಪತ್ರಿಕೋದ್ಯಮದ ದುರ್ಬಳಕೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಇಡೀ ದೇಶದ ಜನತೆ ದೇಶದ ಸುದ್ದಿವಿಚಾರಗಳನ್ನು ತಿಳಿಯಲು ಮಾಧ್ಯಮವನ್ನೇ ನಂಬಿರುವಾಗ ಸತ್ಯಕ್ಕೆ ದೂರವಾದ ವಿಚಾರಗಳನ್ನು ದೇಶದಲ್ಲಿ ಹರಡುವುದು ಅಕ್ಷಮ್ಯ ಅಪರಾಧವಾಗಿ ಪರಿಗಣಿಸಿ ಘೋರ ಶಿಕ್ಷೆಗೆ ಅರ್ಹವಾಗಿಸಬೇಕು. ಆಗ ಮಾತ್ರ ಮಾಧ್ಯಮ ಕ್ಷೇತ್ರವೂ ತನ್ನ ಕರ್ತವ್ಯವನ್ನು ಹೆಚ್ಚಿನ ಜವಾಬ್ದಾರಿಯುತವಾಗಿ ನಿರ್ವಹಿಸಲು ಅವಕಾಶವಾಗುತ್ತದೆ.
-ಮತ್ತೂರು ರಘು
ಎಲ್ಲ ಸಾಹಿತಿಗಳ ಚಿತ್ರವಿರಲಿ ಎಂಬ ಮಾತಿನಲ್ಲಿ ಅರ್ಥವಿದೆ
ಜ್ಞಾನಪೀಠ ಪ್ರಶಸ್ತಿಯನ್ನು ನಾನ್ಸೆನ್ಸ್ ಎನ್ನುವುದರ ಮೂಲಕ ಕುಂ.ವೀ. ಯವರು ಏನೂ ಸಾಧಿಸಿದಂತಾಗಲಿಲ್ಲ. ಆದರೆ ಅವರು ಕಾರ್ನಾಡ್ ಮತ್ತು ಡಾ. ಅನಂತಮೂರ್ತಿಯವರನ್ನು ಗುರುತಿಸಿ ಹೇಳಿರುವುದರಿಂದ ಏನೋ ಸಾಧಿಸಿದಂತಾಗಿದೆ. ಏನಿದ್ದರೂ ಅವರು ಈ ವರೆಗೆ ಅನೇಕರು ಹೇಳಿಕೊಂಡು ಬಂದದ್ದನ್ನೇ ಹೇಳಿದ್ದಾರೆ. ಸ್ವತಃ ಇದು ಕಾರ್ನಾಡರಿಗೂ ಅನಂತಮೂರ್ತಿಯವರಿಗೂ ಗೊತ್ತಿದ್ದದ್ದೇ. ಆದರೆ ಅವರು ಡಾ. ಕಂಬಾರರ ಹೆಸರನ್ನು ಯಾಕೆ ಬಿಟ್ಟಿದ್ದಾರೆಂಬ ಅಚ್ಚರಿ ನನಗೆ. ಅವರು ಬೆಳಗಾವಿ ಸಮ್ಮೇಳನದಲ್ಲಿ ಆಗಿನ ಮುಖ್ಯ ಮಂತ್ರಿಯಾಗಿದ್ದ ಸನ್ಮಾನ್ಯ ಯಡಿಯೂರಪ್ಪರನ್ನು ಹೊಗಳಿ ಮಾತಾಡಿದ್ದನ್ನು ಕುಂ.ವೀ. ಯವರು ಗಮನಿಸಲಿಲ್ಲವೇ? ಅವರಿಗೆ ಅದರ ಲಾಭ ಸಿಕ್ಕದೆ ಹೋಗಿದೆಯೇ? ಎಲ್ಲಾ ಸಾಹಿತಿಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಹೊಗಳು ಭಟತನ ಇದೆ ಸ್ವಾಮಿ. ಯಾರೂ ರಾಜಕೀಯ ಮುತ್ಸದ್ದಿಗಳಿಗಿಂತ ಕಡಿಮೆ ಇಲ್ಲ. ಇನ್ನು, ಶಾಲಾ ಮಕ್ಕಳಲ್ಲಿ ಕೇವಲ ಎಂಟು ಮಂದಿ ಸಾಹಿತಿಗಳೆಂಬ ಭ್ರಮೆ ಹುಟ್ಟಬಹುದೆಂಬ ಕುಂ.ವೀ. ಯವರ ಮಾತಿನಲ್ಲಿ ಅರ್ಥವಿದೆ. ಅವರೆಂದಂತೆ ಮಹಾನ್ ಸಾಹಿತಿಗಳೆಲ್ಲರ ಚಿತ್ರಗಳೂ ಶಾಲೆಗಳಲ್ಲಿರಬೇಕಾದ್ದು ಅಗತ್ಯ. ನಾವು ಅಂತಹ ಒಂದು ಪ್ರಯತ್ನವನ್ನು ಹತ್ತು ವರ್ಷಗಳ ಹಿಂದಿನಿಂದಲೇ ಮಾಡಿದ್ದೇವೆ. ನಮ್ಮ ಸುಳ್ಯದ ಸ್ನೇಹ ಶಾಲೆಗೆ ಬರುವಾಗಲೇ ಗೋಡೆಯಲ್ಲಿ ಇಪ್ಪತ್ತು ಹಿರಿಯ ಸಾಹಿತಿಗಳ ರೇಖಾ ಚಿತ್ರಗಳನ್ನು ನಮ್ಮ ಶಾಲಾ ಶಿಕ್ಷಕ ಪ್ರಸನ್ನ ಮಾಡಿದ್ದಾರೆ. ಇವರಲ್ಲಿ ಮುದ್ದಣ, ಪಂಜೆ, ಡಿವೀಜಿ, ರಾಜರತ್ನಂ, ತೀನಂಶ್ರೀ, ಸೇಡಿಯಾಪು, ಕಡೆಂಗೋಡ್ಲು, ಪುತೀನ ಮುಂತಾದವರ ಮಧ್ಯೆ ಜ್ಞಾನಪೀಠ ಪಡೆದವರೂ ಇದ್ದಾರೆ. ಮಕ್ಕಳೆಲ್ಲ ಅವರನ್ನು ನೋಡಿಕೊಂಡೇ ಶಾಲೆಗೆ ಬರುತ್ತಾರೆ.
-ಚಂದ್ರಶೇಖರ ದಾಮ್ಲೆ, ಅಧ್ಯಕ್ಷರು, ಸ್ನೇಹ ಶಿಕ್ಷಣ ಸಂಸ್ಥೆ, ಸುಳ್ಯ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com