ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 12 Feb 2014, 12:12 pm

ಎಂತಹ ಕಿತಾಪತಿ ಮಾಡುವ ಮಂದಿ ಇರುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ ನೋಡಿ. ಬೆಂಗಳೂರಿನ ಆವಲಹಳ್ಳಿಯಿಂದ ಎಲ್.ಜಿ. ಜ್ಯೋತೀಶ್ವರ ಅವರು ಖುದ್ದು ಕಚೇರಿಗೇ ಆಗಮಿಸಿದ್ದರು. ಅವರು ಬರೆಯುತ್ತಾರೆ- 'ಫೆ.11ರಂದು 'ವಾರ್ತಾ ಇಲಾಖೆಯ ನಿಷ್ಕಾಳಜಿ' ಎಂಬ ಶೀರ್ಷಿಕೆಯೊಡನೆ ಯಾರೋ ಬರೆದ ಪತ್ರಕ್ಕೆ ನನ್ನ ಹೆಸರನ್ನು ಹಾಕಲಾಗಿದೆ. ಇದರಿಂದ ನನಗೆ ತೀವ್ರ ಆಘಾತ, ನೋವುಂಟಾಗಿದೆ. ಈ ಪತ್ರದ ಮೂಲ, ಎಂದರೆ, ಬರೆದಿರುವವರ ಹೆಸರು, ವಿಳಾಸ ಏನೆಂಬುದನ್ನು ದಯವಿಟ್ಟು ತಿಳಿಸಿ.
ಜೊತೆಗೆ, ಈ ಪತ್ರ ನನ್ನದಲ್ಲ ಎಂಬುದಕ್ಕೆ ಸ್ಪಷ್ಟೀಕರಣವನ್ನು ನಿಮ್ಮ ಪತ್ರಿಕೆಯಲ್ಲಿ, ಇದೇ ಶೀರ್ಷಿಕೆಯಡಿ ಪ್ರಕಟಿಸಬೇಕೆಂದು ಕೋರುತ್ತೇನೆ.'
'ನಿಮ್ಮ ಪತ್ರಿಕೆಯೊಡನೆ ನನ್ನ ಮಧುರ ಬಾಂಧವ್ಯ ಬಹುಕಾಲದ್ದು. ನನ್ನನ್ನು ಸದಾ ಪ್ರೋತ್ಸಾಹಿಸುತ್ತಾ ಬಂದಿರುವ ತಾವು ಇದರ ಮೂಲವನ್ನು ಪರೀಕ್ಷಿಸಿ, ನನಗೆ ನ್ಯಾಯ ಒದಗಿಸುವಿರೆಂದು ನನಗೆ ನಂಬಿಕೆ ಇದೆ. ಅಲ್ಲದೆ, ನಾಡಿನ ಗೌರವಾನ್ವಿತ ಸಂಸ್ಥೆಯಾದ ವಾರ್ತಾ ಇಲಾಖೆಯೂ ಸಹಾ ನನ್ನನ್ನು ಸದಾಕಾಲ ಪ್ರೋತ್ಸಾಹಿಸಿ, ಪೋಷಿಸಿಕೊಂಡು ಬಂದಿದೆ. ಆ ಇಲಾಖೆಯ ಬಗ್ಗೆ ಈ ಮೇಲೆ ಉಲ್ಲೇಖಿಸಿರುವ ಶೀರ್ಷಿಕೆಯಲ್ಲಿ ಬರೆದಿರುವುದರಲ್ಲಿ ನನ್ನ ಪಾತ್ರ ಲೇಶ ಮಾತ್ರವೂ ಇಲ್ಲ' ಎಂದಿದ್ದಾರೆ.
ಎಲ್.ಜಿ. ಜ್ಯೋತೀಶ್ವರ ಅವರು ಕಚೇರಿಗೆ ಬಂದ ನಂತರ ನೋಡಿದಾಗ ಅವರ ಹೆಸರಲ್ಲೇ ಪತ್ರ ಬಂದಿದೆ, ಅದರ ಪ್ರತಿಯೂ ನಮ್ಮ ಬಳಿ ಇತ್ತು. ಅದರಲ್ಲಿ ನಮೂದಾದ ನಂಬರ್ ಕೂಡ ಜ್ಯೋತೀಶ್ವರ ಅವರದ್ದೇ. ಆದರೆ ಅದು ಅವರು ಬರೆದ ಪತ್ರವಾಗಿರಲಿಲ್ಲ. ಆದರೆ ಬರುವ ಪತ್ರಗಳೆಲ್ಲ ಹೆಸರಿರುವ ವ್ಯಕ್ತಿಯೇ ಬರೆದಿದ್ದೇ ಎಂಬುದನ್ನು ಪರಿಶೀಲಿಸುವುದು ಕಷ್ಟಕರ.
ಯಾರೋ ಕಿತಾಪತಿ ಮಾಡಲೆಂದು ಪತ್ರವನ್ನು ಮುದ್ರಿಸಿ, ಅದಕ್ಕೆ ಜ್ಯೋತೀಶ್ವರ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆ ಹಾಕಿ, ತಪ್ಪು ವಿಳಾಸ ಬರೆದು ಕಳುಹಿಸಿದ್ದಾರೆ. ಅವರು ಆಗಾಗ ಪತ್ರಿಕೆಗೆ ಬರೆಯುವವರಾಗಿದ್ದರಿಂದ ಅವರದ್ದೇ ಪತ್ರ ಇರಬೇಕು ಎಂದು ನಾವೂ ಪ್ರಕಟಿಸಿದ್ದೇವೆ. ಆದರೆ ಅದು ಅವರು ಬರೆದ ಪತ್ರವಲ್ಲ ಎಂಬುದು ಅವರೇ ಬಂದು ಹೇಳಿದ ನಂತರ ಗೊತ್ತಾಯಿತು.
ಬೆಳಗಾವಿಯ ರವಿವಾರ ಪೇಟೆಯಿಂದ ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಭಾಂವಿ ಅವರು ಬರೆಯುತ್ತಾರೆ- 'ಜ.17ರ ಚಿತ್ರಪ್ರಭ'ದ ಎರಡನೇ ಪುಟದಲ್ಲಿ 'ಲಡಾಕ್ ಮೇ ಲಡಕೀ' ಇದರ ಪ್ರಾರಂಭದಲ್ಲಿ, ನಮ್ಮ ಸಿನಿಮಾ ತಂಡಗಳು ಉತ್ತರ ಕರ್ನಾಟಕಕ್ಕೆ ಹೋದರೆ ಅಲ್ಲಿ ಕಾಶ್ಮೀರದಲ್ಲಿ ಕೇವಲ ಹಾಡು ಚಿತ್ರೀಕರಿಸುವುದೇ ಅವರ ಉದ್ದೇಶವಾಗಿರುತ್ತದೆಂದು ತಮ್ಮ ವರದಿಗಾರರು ಹೇಳಿದ್ದಾರೆ. ಸ್ವಾಮಿ ಕಾಶ್ಮೀರ ಇರುವುದು ಉತ್ತರ ಕರ್ನಾಟಕದಲ್ಲಲ್ಲ, ಉತ್ತರ ಭಾರತದಲ್ಲಿ' 'ಪುಟ 3ರಲ್ಲಿ 'ಕುಣಿಯೋಣು ಬಾರಾ' ಇದರ ಕೊನೆಯಲ್ಲಿ 'ಅಂಕಿತಾ ಮಹೇಶ್ವರಿ ಹಾಗೂ ಪ್ರಿಯಾಂಕ ಚಿತ್ರದ ನಾಯಕರು' ಎಂದಿದೆ. ನನಗೆ ತಿಳಿದಿರುವ ಹಾಗೆ ಪ್ರಜ್ವಲ್ ದೇವರಾಜ್ ಇದರ ನಾಯಕರು. ನಾಯಕಿಯರನ್ನು ನಾಯಕರನ್ನಾಗಿ ಮಾಡಿದ ನಿಮ್ಮ ವರದಿಗಾರನಿಗೆ ಹ್ಯಾಟ್ಸ್‌ಆಫ್‌' ಎಂದಿದ್ದಾರೆ.
ರಕ್ತಬಾರದಂತೆ ಕೊಲ್ಲುವ ಶಕ್ತಿ ಇರುವುದು ಲೇಖನಿಗೆ ಮಾತ್ರ ಅನ್ನುತ್ತಾರಲ್ಲ ಆ ಮಾತಿಗೆ ಸಿದ್ದಲಿಂಗಪ್ಪ ಅವರು ಪ್ರಸ್ತಾಪಿಸಿದ ತಪ್ಪುಗಳು ಬಹುಶಃ ಉತ್ತಮ ಉದಾಹರಣೆಗಳು. ಯಾರನ್ನು ಬೇಕಾದರೂ ನಾಯಕನನ್ನಾಗಿ ಮಾಡುವ, ನಾಯಕನನ್ನೇ ನಾಪತ್ತೆ ಮಾಡುವ ತಾಕತ್ತು ಮತ್ತು ಉತ್ತರ ಕರ್ನಾಟಕಕ್ಕೆ ಕಾಶ್ಮೀರ ತರುವ ತಾಕತ್ತು ಅದಕ್ಕಿದೆ!

-ವಿಶ್ವೇಶ್ವರಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement