ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬ್ಯಾಂಕ್ ನೌಕರರ ಕಾಳಜಿ

Srinivasa Murthy VN
Updated On : 12 Feb 2014, 12:12 pm

ಶನಿವಾರ 1.2.14ರ ಕ.ಪ್ರ.ದಲ್ಲಿ "ಬ್ಯಾಂಕ್ ನೌಕರರ ಬವಣೆ ನಮಗೇಕೆ ಕಾಣದು?" ಎಂದು ಕಾಳಜಿ ಮೆರೆದ ಪ್ರಸಾದ್ ಕುಮಾರ್ ಹಾಗೂ ಕನ್ನಡಪ್ರಭ ಬಳಗಕ್ಕೆ ಧನ್ಯವಾದಗಳು. ನಾವು, ದಿನ ಮುಷ್ಕರ ಹೂಡಿದಾಗಲೆಲ್ಲ ನಮ್ಮ ಆ ದಿನದ ಸಂಬಳ ಕಡಿತವಾಗುತ್ತದೆ. ನಮ್ಮ ಹಕ್ಕಿಗಾಗಿ ಎರಡು, ಮೂರು ತಿಂಗಳಿಗೊಮ್ಮೆ ಮುಷ್ಕರ ಹೂಡುವುದು ಇತ್ತೀಚಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಅಂದು ನಮಗೆ ಎದುರಾಗುವ ನಾಗರೀಕರು "ಇಂದು ಬ್ಯಾಂಕ್ ಇಲ್ವ?! ನಿಮಗೆಲ್ಲಾ ಹೆಚ್ಚಾಯ್ತು ಬಿಡಿ" ಎಂದು ಎದುರಿಗೆ ನಿಂದಿಸಿ ಮುನ್ನಡೆಯುತ್ತಾರೆ.
ಕೊನೆಗೊಂದು ದಿನ ಎಲ್ಲಾ ಮುಗಿದು ನಮಗೆ ಅರಿಯರ್ಸ್ ಅಂತ ಬಂದ್ರೆ ಅದರಷ್ಟೇ ಹಣ ನಾವು ಮುಷ್ಕರದಿಂದ ಕಳೆದುಕೊಂಡಿದ್ದರೂ ಆಶ್ಚರ್ಯವಿಲ್ಲ. ಇನ್ನು ಆರ್‌ಬಿಐನ ಹೊಸ ಕಾನೂನು, ಬ್ಯಾಂಕ್ ಕ್ಯಾಶಿಯರ್‌ಗಳಿಗೆ ಬರೆ. ಮೊದಲು ನೋಟು ಅಸಲಿಯೋ, ನಕಲಿಯೋ, ಎಷ್ಟು ಹರಿದಿದೆ, ನಂಬರ್ ಸರಿಯಾಗಿದೆಯಾ ಎಂದು ದುರ್ಬೀನು ಹಾಕಿ ನೋಡುತ್ತಿದ್ದವರು ಈಗ ಹಿಂಭಾಗದಲ್ಲಿ ಇಸವಿ ಇದೆಯಾ, ಇಲ್ಲವೋ ಅಂತ ನೋಡುವ ಅನಿವಾರ್ಯತೆ. ನಂತರ ಬದಲಾಯಿಸಿ ಕೊಡಬೇಕು. ಕಾನೂನು ಮಾಡೋದು ಮಾಡಿದ್ರು, ನೋಟುಗಳ ಬದಲಾವಣೆ ಬದಲಿಗೆ ಆ ಹಣವನ್ನು ಅವರವರ ಖಾತೆಗೆ ಕಟ್ಟಬೇಕು ಎಂದು ತಿಳಿಸಿದ್ರೆ, ಚೆನ್ನಾಗಿತ್ತು ಅನಿಸುತ್ತೆ?!
-ಗೀತಾ ಎಸ್.ಕೆ., ಹಾಸನ

ಉದ್ಯೋಗ ನೀಡದೇ ಭಾಗ್ಯದ ಮಾತೇಕೆ?

ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 1,82,000 ಹುದ್ದೆಗಳು ಖಾಲಿಯಾಗಿವೆ. ರಾಜ್ಯ ಸರ್ಕಾರವು ಕಳೆದ ನಾಲ್ಕು ವರ್ಷಗಳಿಂದ ಯಾವುದೇ ರೀತಿಯ ಹುದ್ದೆಗಳು ನೇಮಕಾತಿಗಳಾಗಿಲ್ಲ. ಹೈದ್ರಾಬಾದ್-ಕರ್ನಾಟಕ ಭಾಗದವರಿಗೆ ವಿಶೇಷ ಸ್ಥಾನಮಾನದಿಂದಾಗಿ ತಡೆ ಹಿಡಿಯಲಾಗಿತ್ತು. ನಿಜ. ಆದರೆ ಇಂದು ಎಲ್ಲಾನೂ ಸರಿ ಹೋಗಿದೆಯಲ್ಲಾ. ಇನ್ನೂ ಸರ್ಕಾರ ಏಕೆ ತಡ ಮಾಡುತ್ತಿದೆ. ಅನ್ನ ಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯದ ಹಾಗೆಯೇ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಏಕೆ ಜಾರಿಗೆ ತಡ ಮಾಡುತ್ತಿದೆ ಗೊತ್ತಾಗುತ್ತಿಲ್ಲ.
1,82,000 ಹುದ್ದೆಗಳನ್ನು ಭರ್ತಿ ಮಾಡಿದರೆ ಅಷ್ಟೂ ಕುಟುಂಬಗಳನ್ನು ನಿರ್ವಹಿಸಿದಂತಾಗುತ್ತದೆ ಮತ್ತು ಸರ್ಕಾರ ನೀಡುತ್ತಿರುವ ಅಕ್ಕಿ ಅಥವ ಧಾನ್ಯದ ಹೊರೆ ಪ್ರತಿ ತಿಂಗಳು 54,60,000 ಕೆ.ಜಿ. ಕಡಿಮೆ ಆಗಲಿದೆ ಹಾಗೂ ದಕ್ಷ, ಸಮರ್ಪಕವಾಗಿ ಆಡಳಿತವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ವಿದ್ಯಾಭ್ಯಾಸ ಮುಗಿಸುವ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಏರುತ್ತಿದ್ದಾರೆ, ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಇದನ್ನು ಆದಷ್ಟು ಬೇಗ ನೇಮಕಾತಿಗಳ ಮೂಲಕ ನಿಯಂತ್ರಿಸಬೇಕು.
-ಬಂಡಾರಹಳ್ಳಿ ಬಿ.ಆರ್. ಅನಿಲ್, ಕೋಲಾರ

ನೆರವು ನೀಡಿ

ಹೊಸನಗರ ತಾಲೂಕಿನ ಯಡೂರಿನ ಸರಸ್ವತಿ (60) ಲಿವರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಅತೀವ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ರಮೇಶ್- ಸರಸ್ವತಿ ದಂಪತಿಗೆ ಮಕ್ಕಳಿಲ್ಲ. ಜೀವನಾಧಾರದ ಹೊಟೇಲ್ ಅನ್ನೂ ಮಾರಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸರಸ್ವತಿಯವರು ಅದಾಗಲೇ ಎರಡೂವರೆ ಲಕ್ಷ ರುಪಾಯಿಗಳನ್ನು ವ್ಯಯಿಸಿದ್ದು, ಇನ್ನೂ ಮೂರು ಲಕ್ಷ ರುಪಾಯಿಗಳ ಅಗತ್ಯವಿದೆ. ದಾನಿಗಳು ಸಹಾಯ ಮಾಡಲು ಇಚ್ಛಿಸುವುದಾದಲ್ಲಿ: ಸರಸ್ವತಿ ಕೆಸ್ತೂರು, ಸಿಂಡಿಕೇಟ್ ಬ್ಯಾಂಕ್ ಖಾತೆ, (ತೀರ್ಥಹಳ್ಳಿ): 2200168303. ಐಎಸ್‌ಎಫ್‌ಸಿ ಕೋಡ್-1908. ಸಂಪರ್ಕ ಸಂಖ್ಯೆ- 9591773063

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement