ಮೂರನೆಯ ರಂಗದ ಉದಯ
ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗಳನ್ನು ಏಕಕಾಲದಲ್ಲಿ ಎದುರಿಸಲು ದೇಶದ ಹನ್ನೊಂದು ರಾಜಕೀಯ ಪಕ್ಷಗಳ ಮುಖಂಡರು ಒಂದು ಐಕ್ಯ ರಂಗ ಸ್ಥಾಪಿಸುವ ನಿರ್ಧಾರವನ್ನು ಸೋಮವಾರ ಪ್ರಕಟಿಸಿದ್ದಾರೆ.
ವಾಸ್ತವದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ದೆಹಲಿಯ ಮನೆಯಲ್ಲಿ (ಅದೇನೂ ಅವರ ಸ್ವಂತದ್ದಲ್ಲ, ಸರ್ಕಾರದ್ದು) ನಡೆದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕುರಿತ ಒಪ್ಪಂದವಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಹಿಂದೆಯೂ ಇಂತಹ ಒಪ್ಪಂದ ಆಗಿತ್ತು. ಆದರೆ ಈಗಿನ ಬೆಳವಣಿಗೆಯ ವೈಶಿಷ್ಟ್ಯವೆಂದರೆ "ನಿಜವಾದ ಐಕ್ಯರಂಗ ಉದಯವಾಗುವುದು ಚುನಾವಣೆಯ ಫಲಿತಾಂಶ ಪ್ರಕಟವಾದ ಅನಂತರವೇ" ಎನ್ನುವ ಮಾತು ಕೇಳಿ ಬಂದಿರುವುದು. ಹಾಗಿದ್ರೆ ಈಗೇಕೆ ಈ ಒಪ್ಪಂದದ ಪ್ರಸ್ತಾಪ?
ಅದು ಮುಂದೆ ತೀರ್ಮಾನವಾಗಬೇಕಷ್ಟೇ. ಇದೊಂದು ಮೊದಲ ಪ್ರಕಟಣೆ.
ಈ ರಂಗದ ಪಕ್ಷಗಳು ತಮ್ಮ ಮೂಲ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ಪಕ್ಷಗಳ ಪ್ರತ್ಯೇಕ ಧ್ವಜ, ಚಿಹ್ನೆ ಹಾಗೂ ಸಿದ್ಧಾಂತ, ಸಂಘಟನೆಗಳನ್ನು ಹಾಗೇ ಉಳಿಸಿಕೊಂಡು ಚುನಾವಣೆ ರಂಗವನ್ನು ಪ್ರವೇಶಿಸುವುದೇ ಉದ್ದೇಶ. ಪರಸ್ಪರ ವಿರುದ್ಧ ಸ್ಪರ್ಧೆಯನ್ನು ನಿವಾರಿಸುವುದೇ ಮೊದಲ ಗುರಿ.
ಈಗಾಗಲೇ ಪ್ರಕಟವಾಗಿರುವಂತೆ, ಹೊಸ ರಂಗಕ್ಕೆ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ದಾಖಲೆಯೂ ಇರುವುದಿಲ್ಲ. ದೇವೇಗೌಡರು ರಂಗದ ನಾಯಕರಾದರೂ ಅವರು ತಮಗೇನೂ ಈಗ ಪ್ರಧಾನಿಯಾಗುವ ಬಯಕೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಹಾಗಾದ್ರೆ ರಂಗದ ಪ್ರಧಾನಿ ಪೀಠದ ಅಭ್ಯರ್ಥಿ ಯಾರು? ಅದು ತೀರ್ಮಾನವಾಗುವುದೇ ಇಲ್ಲ.
ಕೂಟದಲ್ಲಿರುವ ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್ ಅವರಿಬ್ಬರೂ ರಾಷ್ಟ್ರೀಯ - ಅಂತಾರಾಷ್ಟ್ರೀಯ ವಲಯದಲ್ಲಿ ಕಮ್ಯುನಿಸ್ಟ್ ಸಿದ್ಧಾಂತದ ವಿರೋಧಿ ಪಾಳಯಕ್ಕೆ ಸೇರಿದವರೇ. ಅವರೂ ಈಗ ನಾಲ್ಕು ಕಮ್ಯುನಿಸ್ಟ್ ಪಕ್ಷಗಳ ಜತೆ ಒಪ್ಪಂದ ಮಾಡಿಕೊಳ್ಳುವುದು ಎಂದರೇನರ್ಥ?
ನಿತೀಶ್ ಕುಮಾರ್ ಹಾಗೂ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳಗಳು ಹಿಂದೆ ಬಿಜೆಪಿ ಜತೆ ಅಧಿಕಾರವನ್ನು ಹಂಚಿಕೊಂಡಿದ್ದರು. ಕಾಲಕ್ಕೆ ತಕ್ಕಂತೆ ರಾಜಕೀಯ ಕೂಟಗಳ ಸ್ವರೂಪ ಬದಲಾಗುವುದು ಈಗಿನ ಭಾರತೀಯ ರಾಜಕಾರಣದ ವಿಶೇಷ. ನಮ್ಮ ಸಂವಿಧಾನದಲ್ಲಿ ಎಲ್ಲದಕ್ಕೂ ಅವಕಾಶವಿದೆ. ಅಂತಿಮ ತೀರ್ಮಾನ ಜನರದ್ದೇ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.