ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಕಷ್ಟ ಕಾಲದಲ್ಲೂ ಬಜೆಟ್ ಕಾರ್ಯಕ್ರಮಗಳಿಗೆ ಅನುದಾನ

Srinivasa Murthy VN
Updated On : 14 Feb 2014, 11:22 am

ಪ್ರಸಕ್ತ ವರ್ಷದಲ್ಲಿ ಪ್ರಗತಿಯ ವೇಗ ಕುಗ್ಗಿದ್ದರೂ, ಎಲ್ಲ ಬಜೆಟ್ ಯೋಜನೆಗಳಿಗೂ ಅಗತ್ಯವಾದ ಅನುದಾನವನ್ನು ನೀಡಿದ್ದೇ ಒಂದು ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮುಂದಿನ ವರ್ಷದ ಬಜೆಟ್ ಮಂಡನೆಯ ಭಾಷಣದಲ್ಲಿ ವಿಧಾನ ಸಭೆಯಲ್ಲಿ ಹೇಳಿಕೊಂಡಿರುವುದು ಪರಿಸ್ಥಿತಿಯ ಪ್ರಾಮಾಣಿಕ ಚಿತ್ರ.
ಆದರೆ ಹಣದ ಅತಿಪ್ರಸರಣದ ದರದ (ಇನ್‌ಫ್ಲೇಷನ್) ಏರಿಕೆಯ ಹಿನ್ನೆಲೆಯಲ್ಲಿ ಯೋಜನೆಗಳಿಗೆ ಒದಗಿಸಿದ ಹಣದಿಂದ ನಿರೀಕ್ಷಿತ ಪ್ರಮಾಣದಲ್ಲಿ ಭೌತಿಕವಾಗಿ ಸಾಧನೆಯಾಗಿರಲಿಕ್ಕಿಲ್ಲ. ಅದು ಗೊತ್ತಾಗುವುದು ಆಡಿಟ್ ವರದಿ ಬಂದಾಗಲೇ.
ಶುಕ್ರವಾರ ಸಿದ್ದರಾಮಯ್ಯ ಅವರು ಮಂಡಿಸಿದ್ದು ಮುಖ್ಯಮಂತ್ರಿಯಾಗಿ ಎರಡನೇ ಬಜೆಟ್. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಹುಮ್ಮಸ್ಸಿನಲ್ಲಿ ನೀಡಿದ್ದ ಭರವಸೆಗಳ ಈಡೇರಿಕೆಗೆ ಪ್ರಸ್ತುತ ವರ್ಷದಲ್ಲೇ ಆರಂಭವಾಗಿದ್ದ ಕೊಡುಗೆ - ಉಡುಗೊರೆ, ರಿಯಾಯಿತಿ - ವಿನಾಯಿತಿಯ ನೀತಿ, ಮುಂದಿನ ಚುನಾವಣೆ ವರ್ಷದಲ್ಲೂ ಮುಂದುವರಿದಿರುವುದು ಸಹಜವೇ. ಚುನಾವಣೆ ವರ್ಷದಲ್ಲಿ ಯಾವ ಸರ್ಕಾರವೂ ತೆರಿಗೆಯನ್ನು ಹೆಚ್ಚಿಸುವುದಿಲ್ಲ. ಅದಕ್ಕೆ ಸಿದ್ದರಾಮಯ್ಯ ಅವರೂ ಹೊರತಲ್ಲ. ಮದ್ಯದ ಮೇಲಿನ ತೆರಿಗೆಯನ್ನು ಏರಿಸಿರುವುದನ್ನು ಬಿಟ್ಟರೆ, ಬೇರೆ ಯಾವ ತೆರಿಗೆಯನ್ನೂ ಹೆಚ್ಚಿಸಿಲ್ಲ.
ನಿರೀಕ್ಷೆಯಂತೆಯೇ ಸಮಾಜದ ಕೆಳಸ್ತರದಲ್ಲಿರುವ ಎಲ್ಲ ಜನವರ್ಗಗಳಿಗೂ ಸಿದ್ದರಾಮಯ್ಯ ಬಜೆಟ್‌ನಲ್ಲಿ ನೆರವು ಸಿಕ್ಕಿದೆ. ಆದರೆ ಅಭಿವೃದ್ಧಿಯ ವೇಗ ಹೆಚ್ಚಿಸುವುದಕ್ಕೆ ಅಗತ್ಯವಾಗಿರುವ ಬಂಡವಾಳ ಹೂಡಿಕೆ ಹಾಗೂ ಖಾಸಗಿ ವಲಯವನ್ನು ಆಕರ್ಷಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯ ಸಿಕ್ಕಿದಂತಿಲ್ಲ. ಎಲ್ಲ ಹಳೆಯ ಕಾರ್ಯಕ್ರಮಗಳೂ ಯಥಾಪ್ರಕಾರವಾಗಿ ಮುಂದುವರಿದಿವೆ.
ಬಜೆಟ್‌ನ ಅಂಕಿ-ಅಂಶಗಳನ್ನೇ ಆಧಾರವಾಗಿಟ್ಟುಕೊಂಡರೆ ಸಾಮಾಜಿಕ ಸೇವೆ ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಸಿಕ್ಕಿರುವಷ್ಟು ಪ್ರಾಮುಖ್ಯ ನೀರಾವರಿ, ಉದ್ಯಮ ವಲಯ ಹಾಗೂ ಮೂಲ ಸೌಲಭ್ಯಗಳ ನಿರ್ಮಾಣದ ವಲಯಕ್ಕೆ ಸಿಕ್ಕಿದಂತಿಲ್ಲ. ಬಜೆಟ್‌ನ ಗಾತ್ರವೇನೋ ಹಿಗ್ಗಿದೆ. ಸ್ಥೂಲವಾಗಿ ಈ ಬಜೆಟ್ 1,36,249 ಕೋಟಿ ರುಪಾಯಿಗಳ ಜಮೆ (ರಾಜಸ್ವ  ಆದಾಯ - ಸಾಲ ಸೇರಿ) ಹಾಗೂ 1,38,008 ಕೋಟಿ ರುಪಾಯಿಗಳ ವೆಚ್ಚದ ಬಜೆಟ್ ಅಂದರೆ ಒಟ್ಟಾರೆ ಲೆಕ್ಕದಲ್ಲಿ 2,654 ಕೋಟಿ ರುಪಾಯಿಗಳ ಕೊರತೆ ಬಜೆಟ್ ಇದು.
ಸಂಪನ್ಮೂಲದ ಲೆಕ್ಕವನ್ನು ಪರಿಗಣಿಸಿದರೂ, ನೇರವಾದ ಆದಾಯಕ್ಕಿಂತ ಸಾಲದ ಮೂಲಕ ಹರಿದು ಬರುವ ಹಣವೇ ಹೆಚ್ಚು. ಇದು ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವೇ ಆಗಿರಬಹುದು. ಸಮಾಜ ಕಲ್ಯಾಣ, ಸಾಮಾಜಿಕ ಪ್ರಗತಿಯ ಕಾರ್ಯಕ್ರಮಗಳ ವಿವರಗಳನ್ನು ಗಮನಿಸಿದರೆ, ಕೆಳಸ್ತರದ, ಸಣ್ಣ - ಪುಟ್ಟ ವರ್ಗಗಳನ್ನೂ ಹುಡುಕಿ - ಹುಡುಕಿ ಆ ವರ್ಗಗಳ ನೆರವಿಗೆ ಯೋಜನೆಗಳನ್ನು ರೂಪಿಸಲಾಗಿದೆ.
ಈಚಿನ ದಿನಗಳಲ್ಲಿ ಬಜೆಟ್‌ಗಳ ಮೂಲ ಲಕ್ಷಣ ಎನ್ನುವಂತೆಯೇ ಆಗಿರುವ ಸಾಲ ಮನ್ನ ನೀತಿಯೂ ಮುಂದುವರಿದಿದೆ. ಸ್ತ್ರೀಶಕ್ತಿ ಸಂಘಟನೆಗಳಿಂದ, ಕೊಳಚೆ ಪ್ರದೇಶಗಳ ನಿರ್ಮೂಲನಾ ಮಂಡಳಿಯಿಂದ, ಹಿಂದುಳಿದ ಜಾತಿಗಳ ಅಭಿವೃದ್ಧಿ ನಿಗಮಗಳಿಂದ ಬಡವರು ಪಡೆದ ಸಾಲಗಳಲ್ಲಿ ಉಳಿದಿರುವ ಕಂತುಗಳನ್ನು ಮನ್ನಾ ಮಾಡಲಾಗಿದೆ.
ಹೊಸ ಸಾಲಗಳ ವ್ಯವಸ್ಥೆಯೂ ಆಗಿದೆ. ಕೃಷಿ ವಲಯದ ಸುಧಾರಣೆ, ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಸ್ಥೆಗಳ ಕಾಯಿದೆಯ ಬದಲಾವಣೆಯ ಪ್ರಸ್ತಾಪದ ಜತೆಯಲ್ಲೇ ಕಾಣಿಸಿಕೊಂಡಿರುವುದು ಅಲ್ಲಿನ ಹಮಾಲರ ನೆರವಿಗೆ ಒಂದು ಯೋಜನೆ. ಸದ್ಯಕ್ಕೆ ಅದಕ್ಕೆ ಒಂದು ಕೋಟಿ ನೆರವು.
ಪರಿಶಿಷ್ಟ ಜನಾಂಗಗಳು ಹಾಗೂ ಬುಡಕಟ್ಟು ಜನಾಂಗಗಳಿಗೆಂದೇ ರೂಪಿಸುವ ಉಪಯೋಜನೆಗಳಲ್ಲಿ ಅನುದಾನದ ವಿತರಣೆಯಲ್ಲೂ ಸುಧಾರಣೆಯ ಅಂಶಗಳೂ ಬಜೆಟ್ ಭಾಷಣದಲ್ಲಿವೆ. ಒಟ್ಟು ಯೋಜನೆಯ ವೆಚ್ಚದಲ್ಲಿ ಈ ವರ್ಗಗಳ ಪಾಲು ಸ್ವಲ್ಪ ಹೆಚ್ಚಲಿದೆ. ಅದರಲ್ಲಿ ಪರಿಶಿಷ್ಟ ಜನಾಂಗಗಳ ಲೆಕ್ಕ - ಬುಡಕಟ್ಟು ಜನಾಂಗಗಳ ಲೆಕ್ಕ ಬೇರೆ ಬೇರೆ. ಹಿಂದುಳಿದ, ಪರಿಶಿಷ್ಟ ಜನಾಂಗಗಳ, ಬಡ ವಿದ್ಯಾರ್ಥಿಗಳ ವಸತಿ ನಿಲಯಗಳ ಸಂಖ್ಯೆಯೂ ಹೆಚ್ಚಲಿದೆ. ಅಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಮೇಲಿನ ತಲಾ ಲೆಕ್ಕದ ವೆಚ್ಚವೂ ತಿಂಗಳಿಗೆ ಇನ್ನೂರು ರುಪಾಯಿಗಳಷ್ಟು ಹೆಚ್ಚಲಿದೆ. ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಇದು ಸ್ವಾಗತಾರ್ಹ. ಅಲ್ಪ ಸಂಖ್ಯಾತ ವರ್ಗಗಳಿಗೆ ಸೇರಿದವರಿಗೂ ಹಲವು ಹೊಸ ಯೋಜನೆಗಳು ಪ್ರಕಟವಾಗಿವೆ.
ಭಾವನಾತ್ಮಕವಾಗಿ, ಜನಸಾಮಾನ್ಯ ವರ್ಗಗಳನ್ನು ತೃಪ್ತಿಪಡಿಸಬಹುದಾದ ಪ್ರಕಟಣೆಗಳೆಂದರೆ, ಹುಣಸೂರಿನಲ್ಲಿ ದೇವರಾಜ ಅರಸರ ಸ್ಮಾರಕ ಭವನ, ಗೌರಿಬಿದನೂರಿನ ಬಳಿ ನರಸಿಂಹಯ್ಯ ಸ್ಮಾರಕ ಭವನ ಹಾಗೂ ಹರಿಹರದಲ್ಲಿ ದಲಿತ ಹೋರಾಟಗಾರ ಬಿ. ಕೃಷ್ಣಪ್ಪ ಅವರ ಸ್ಮಾರಕ ಭವನಗಳ ನಿರ್ಮಾಣದ ನಿರ್ಧಾರ. ಇಂತಹ ವ್ಯಕ್ತಿಗಳ ಹೆಸರುಗಳು ಬಜೆಟ್ ಭಾಷಣದಲ್ಲಿ ಮೂಡುವುದು ಅಪರೂಪ.
ವೃದ್ಧಾಶ್ರಮಗಳಲ್ಲಿನ ಹಿರಿಯ ನಾಗರಿಕರಿಗೆ ಸಂಜೆಯ ಮನರಂಜನೆಗೆ ವ್ಯವಸ್ಥೆ ಮಾಡಲು ನೆರವು (ಒಂದು ಕೋಟಿ), ಅಪಘಾತಗಳಲ್ಲಿನ ಸಂತ್ರಸ್ತರಿಗೆ ತತ್‌ಕ್ಷಣದಲ್ಲೇ ನೀಡುವ ಚಿಕಿತ್ಸೆಗೆ 25000 ರುಪಾಯಿಗಳ ನೆರವು ನಿಜಕ್ಕೂ ಮಾನವೀಯತೆಯ ಪ್ರದರ್ಶನ. ದೇವಾಲಯಗಳ ಜೀರ್ಣೋದ್ಧಾರದ ಕಾರ್ಯಕ್ರಮಕ್ಕೆ 66 ಕೋಟಿ ರುಪಾಯಿಗಳನ್ನು ಒದಗಿಸಿರುವುದು ಒಂದು ರೀತಿಯಲ್ಲಿ ಪರಂಪರೆಯ ಮುಂದುವರಿಕೆ. ಮಠಮಾನ್ಯಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಸಾರಾಸಗಟು ವಿಶೇಷ ಕೊಡುಗೆಯ ಪ್ರಸ್ತಾಪ ಈ ಬಜೆಟ್‌ನಲ್ಲಿಲ್ಲ.  ರಾಜ್ಯಕ್ಕೊಂದು ಕೇಂದ್ರ ವಿಶ್ವವಿದ್ಯಾಲಯವನ್ನು ಕಾರವಾರದಲ್ಲಿ ಸ್ಥಾಪಿಸುವುದು, ಆರು ಹೊಸ ವೈದ್ಯ ಕಾಲೇಜುಗಳ ಸ್ಥಾಪನೆಗೆ ನೀಡಿರುವ ಅನುಮತಿಯನ್ನು ಬಜೆಟ್‌ನ ವಿವರಗಳೆಂದು ಕಡೆಗಾಣಿಸುವಂತಿಲ್ಲ. ಸರ್ಕಾರದ ಚಿಂತನೆಯ ದಿಕ್ಕಿಗೆ ಅದು ದಿಕ್ಸೂಚಿ. ಅರ್ಥಶಾಸ್ತ್ರ ಪಂಡಿತರು ಒಪ್ಪದೇ ಇದ್ದರೂ, ಜನ ಒಪ್ಪಬಹುದಾದ ವಾಸ್ತವಿಕ ಬಜೆಟ್ ಇದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement