ಬೀದಿಗೆ ಬಂದ ಕೇಜ್ರಿವಾಲ್
ಆಮ್ ಆದ್ಮಿ ಪಾರ್ಟಿಯ ಸಂಸ್ಥಾಪಕ- ನಾಯಕ, ನಿರಂತರವಾಗಿ ಪರಿವರ್ತನೆಯ ಕನಸು ಕಾಣುತ್ತಿರುವ ಅರವಿಂದ ಕೇಜ್ರಿವಾಲ್, ಅವರ ದೆಹಲಿ ಮುಖ್ಯಮಂತ್ರಿಯ ಅಧಿಕಾರವನ್ನು ನಲತ್ತೊಂಬತ್ತನೆಯ ದಿನಕ್ಕೇ ಮುಗಿಸಿಕೊಂಡ ರೀತಿಯಲ್ಲೇ ನಿರೀಕ್ಷಿತವಾಗಿ ಬೀದಿಗೆ ಬಂದಿದ್ದಾರೆ.
ದೇಶದ ವಿಖ್ಯಾತ ನಿರಶನ ಸತ್ಯಾಗ್ರಹಿ ಅಣ್ಣಾ ಹಜಾರೆ ಅವರ ಹೆಸರಿನಲ್ಲಿ ರೂಪಿಸಿದ "ಭ್ರಷ್ಟಾಚಾರದ ವಿರುದ್ಧ ಭಾರತ" ಸಂಘಟನೆಯಿಂದ ಹೊರಬಂದು, ಆಮ್ ಆದ್ಮಿ ಪಾರ್ಟಿಯನ್ನು ಸ್ಥಾಪಿಸಿ, ದೆಹಲಿಯ ಸರ್ಕಾರದ ಸಿಂಹಾಸವನ್ನು ಪಡೆದರೂ ಅರವಿಂದ ಕೇಜ್ರಿವಾಲ್ ಹೋರಾಟಗಾರನಾಗಿಯೇ ಉಳಿಯುವ ನಿರ್ಧಾರವನ್ನು ನಿರೀಕ್ಷೆಗಿಂತ ಮುಂಚೆಯೇ ಕಾರ್ಯರೂಪಕ್ಕೆ ಇಳಿಸಿದ್ದರ ಹಿಂದೆ, ಯಾವುದೋ ಅಗೋಚರ ಶಕ್ತಿ ಕೆಲಸ ಮಾಡಿದೆ ಎನ್ನುವ ಭಾವನೆಯನ್ನು ಅವರೇ ಮೂಡಿಸುತ್ತಿದ್ದಾರೆ. ಆ ಶಕ್ತಿಯ ದರ್ಶನ ಸದ್ಯದಲ್ಲೇ ಆಗಬಹುದು. ಅರವಿಂದ ಕೇಜ್ರಿವಾಲ್ ತಮ್ಮ ಪಕ್ಷಕ್ಕೆ ವಿಧಾನ ಸಭೆಯಲ್ಲಿ ಬಹುಮತ ಬಾರದೇ ಇದ್ದರೂ, ಕಾಂಗ್ರೆಸ್ಸನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿ, 'ಆಪ್' ಸರ್ಕಾರಕ್ಕೆ ಅಯಾಚಿತವಾಗಿ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಲ್ಲೇ ಅವರಿಗೆ ಅಧಿಕಾರವನ್ನು ಕಳೆದುಕೊಳ್ಳುವ ಹಾದಿಯ ಚಿಂತನೆಯೇ ಹೆಚ್ಚಾಗಿತ್ತು ಎನ್ನುವುದು ನಿಜ.
ಆರಂಭದಲ್ಲಿ ಉಚಿತ ನೀರು, ವಿದ್ಯುತ್ ದರದ ಇಳಿಕೆಯಂತಹ ಕಾರ್ಯಸಾಧುವಲ್ಲದ ಕಾರ್ಯಕ್ರಮಗಳನ್ನು ಜಾರಿಗೆ ತಂದಾಗಲೂ ಅವರು ಪ್ರದರ್ಶಿಸಿದ್ದು ಆತುರದ ನಡೆ. ಅದರ ಹಿಂದೆ ಇದ್ದಿದ್ದು ಆದಷ್ಟು ಬೇಗ ಜಾಗ ಖಾಲಿ ಮಾಡುವ ಉದ್ದೇಶ.
ಜನಪರ ಹೋರಾಟದ ಹೆಸರಿನಲ್ಲಿ ಭಾರತ ಸರ್ಕಾರದ ಕಾರ್ಯಾಲಯಗಳಿರುವ ರೈಸೀನಾ ಹಿಲ್ಸ್ ಪ್ರದೇಶದಲ್ಲೇ ಪಾದಯಾತ್ರೆ, ಸತ್ಯಾಗ್ರಹ ನಡೆಸಿ, ಅಲ್ಲೇ ದೆಹಲಿ ಸರ್ಕಾರದ ಕಡತಗಳನ್ನು ಪರಿಶೀಲಿಸಿದ್ದೂ ಒಂದು ರೀತಿಯಲ್ಲಿ ಜನರಂಜನೆ ಹಾಗೂ ಅಗ್ಗದ ಜನಪ್ರಿಯತೆಯನ್ನು ಗಳಿಸುವ ಪ್ರಯತ್ನಗಳೇ. ಕಾಂಗ್ರೆಸ್ಸಿನ ಬೆಂಬಲವಿಲ್ಲದೇ ಇದ್ದರೆ, ಪಕ್ಷದ ಸರ್ಕಾರ ಉಳಿಯುವುದಿಲ್ಲವೆನ್ನುವುದರ ಅರಿವಿದ್ದರೂ, ಆ ಪಕ್ಷದ ಹಿರಿಯ ನಾಯಕಿ, ಹದಿನೈದು ವರ್ಷಗಳ ಕಾಲ ದೆಹಲಿಯ ಆಡಳಿತದ ಹೊಣೆಯನ್ನು ನಿರ್ವಹಿಸಿದ್ದ ಶೀಲಾ ದೀಕ್ಷಿತ್ ಅವರ ವಿರುದ್ಧ ಕಾಮನ್ವೆಲ್ತ್ ಕ್ರೀಡಾಕೂಟದ ಅವ್ಯವಹಾರದ ಸಂಬಂಧದಲ್ಲಿ ಮೊದಲ ಮಾಹಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಬೇಕೆಂತಲೇ ಕಾಂಗ್ರೆಸ್ಸನ್ನು ಕೆಣಕಿ, ಕಾಲು ಕೆರೆದು ಜಗಳವಾಡಿ ಅನಂತರ ಹುತಾತ್ಮ ಕಿರೀಟವನ್ನು ಧರಿಸುವ ಪ್ರಯತ್ನವೂ ಫಲ ನೀಡಲಿಲ್ಲ. ಶೀಲಾ ದೀಕ್ಷಿತ್ ಹಾಗೂ ಕಾಂಗ್ರೆಸ್ ಆ ತಂತ್ರವನ್ನು ನಿರ್ಲಕ್ಷಿಸಿದ್ದೂ ಆಯಿತು.
ಅನಂತರ ರಾಮಲೀಲಾ ಮೈದಾನದಲ್ಲೇ ದೆಹಲಿ ವಿಧಾನ ಸಭೆಯ ಅಧಿವೇಶನವನ್ನು ಕರೆಯುವ ಉದ್ದೇಶವನ್ನು ಪ್ರಕಟಿಸಿ, ಅದಕ್ಕೆ ನಿಯಮಗಳಂತೆ ಅವಕಾಶ ಸಿಗದೇ ಹೋದಾಗ, ರಾಜಿನಾಮೆ ಪತ್ರವನ್ನು ಕೊಡುವ ತಂತ್ರಗಾರಿಕೆಯೂ ವಿಫಲವಾಯಿತು.
ಇನ್ನು ಬೇರೆ ದಾರಿ ಕಾಣದೇ, ಮತ್ತೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರನ ಟೋಪಿಯನ್ನೇ ಧರಿಸಿ ಆಮ್ ಆದ್ಮಿ ಪಾರ್ಟಿ ಸಿದ್ಧಪಡಿಸಿದ ಜನಲೋಕಪಾಲ ವಿಧೇಯಕವನ್ನು ದೆಹಲಿ ವಿಧಾನ ಸಭೆಯ ನಿಯಮಗಳ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಅನುಮತಿಯನ್ನು ಪಡೆಯದೆಯೇ ಮಂಡಿಸುವ ನಿರ್ಧಾರವನ್ನು ಪ್ರಕಟಿಸಿ, ಆ ನಿರ್ಧಾರದ ಮೇಲೆ ವಿಧಾನ ಸಭೆಯಲ್ಲಿ ಬಲಾ-ಬಲಾಗಳ ಪರೀಕ್ಷೆಗೆ ಮುಂದಾಗಿದ್ದೂ ಜನಪ್ರಿಯತೆ ಗಳಿಕೆಯ ಉದ್ದೇಶದಿಂದಲೇ.
ಕಾಂಗ್ರೆಸ್ ಪಕ್ಷದ ಲೋಕಪಾಲ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗಿ, ಅಂಗೀಕಾರವಾಗುವ ಹಂತ ತಲುಪಿದ್ದಾಗ, ಬೇರೊಂದು ಜನಲೋಕಪಾಲ ವಿಧೇಯಕದ ಮಂಡನೆಯನ್ನು ದೆಹಲಿಯಲ್ಲಿ ಆ ಪಕ್ಷ ಬೆಂಬಲಿಸುವುದು ಅಸಾಧ್ಯ ಎಂದು ತಿಳಿದಿದ್ದರೂ ವಿಧೇಯಕದ ಮಂಡನೆ ಮಾತಾಡಿದ್ದೂ ಜನಪ್ರಿಯತೆಯ ದೃಷ್ಟಿಯಿಂದಲೇ. ಕಾಂಗ್ರೆಸ್ ಈ ಎಲ್ಲ ಪ್ರಯತ್ನಗಳನ್ನು ಸೇರಿಗೆ ಸವ್ವಾಸೇರು ಎನ್ನುವ ರೀತಿಯಲ್ಲಿ ಮೌನದಿಂದಲೇ ಎದುರಿಸಿ, ಸದನದ ನಿಯಮ ಹಾಗೂ ಸಂವಿಧಾನದ ವಿಧಿನಿಯಮಗಳ ಉಲ್ಲಂಘನೆಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದಾಗ, ಕೇಜ್ರಿವಾಲ್ಗೆ ಬೇರೆ ದಾರಿಯೇ ಇರಲಿಲ್ಲ. ಕಾಂಗ್ರೆಸ್ ಜನಲೋಕಪಾಲ ವಿಧೇಯಕವನ್ನು ವಿರೋಧಿಸಿರಲಿಲ್ಲ. ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನೂ ಹಿಂದಕ್ಕೆ ಪಡೆದಿರಲಿಲ್ಲ. "ಆಪ್" ಸರ್ಕಾರ ಸಿದ್ಧಪಡಿಸಿದ್ದ ಬಜೆಟ್ ಲೇಖಾನುದಾನ ವಿಧೇಯಕಕ್ಕೆ ಅದು ಬೆಂಬಲ ನೀಡಿತ್ತು.
ಇಷ್ಟೆಲ್ಲ ಆದ ಅನಂತರವೂ ಕೇಜ್ರಿವಾಲ್ ಜನ ಲೋಕಪಾಲ ವಿಧೇಯಕದ ಮಂಡನೆಗೂ ಅವಕಾಶ ಸಿಗದೇ ಇದ್ದರೆ, ಅಧಿಕಾರದಲ್ಲಿರಬೇಕೇಕೆ? ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡು, ಪಕ್ಷದ ಕಾರ್ಯಾಲಯ ಸಿದ್ಧಪಡಿಸಿದ್ದ ರಾಜೀನಾಮೆ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ಗೆ ರವಾನಿಸಿ, ವಿಧಾನ ಸಭೆಯ ವಿಸರ್ಜನೆಯ ಸಲಹೆಯನ್ನು ಮಾಡಿದರು. ಆ ಸಲಹೆಯನ್ನು ಕೇಂದ್ರ ಸರ್ಕಾರ ಒಪ್ಪುವ ಸಂಭವವೇ ಇಲ್ಲ ಎನ್ನುವುದನ್ನು ಅರಿಯದಷ್ಟು ಮುಗ್ಧರಲ್ಲ ಕೇಜ್ರಿವಾಲ. ಈಗ ದೆಹಲಿಯ ವಿಧಾನ ಸಭೆ ತ್ರಿಶಂಕು ಅವಸ್ಥೆಯಲ್ಲಿದೆ. ರಾಜ್ಯಾಡಳಿತ ರಾಷ್ಟ್ರಪತಿಯ ವಶಕ್ಕೆ ಹೋಗಿದೆ. ಈ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಇನ್ನು ಆರು ತಿಂಗಳ ಕಾಲ ಮೊದಲ ಹಂತದಲ್ಲಿ ಜಾರಿಯಲ್ಲಿ ಇಡಬಹುದು. ಅಗತ್ಯ ಬಿದ್ದರೆ, ಅದನ್ನು ಮುಂದುವರಿಸುವ ಅವಕಾವೂ ಇದೆ.
ಕೇಜ್ರಿವಾಲ್ ಲೋಕಸಭೆಯ ಚುನಾವಣೆಯತ್ತ ದೃಷ್ಟಿಯನ್ನು ಹರಿಸಿದ್ದಾರೆ. ದೇಶದಲ್ಲಿ ಆರೇಳು ಸ್ಥಾನಗಳನ್ನು ಆಮ್ ಆದ್ಮಿ ಪಾರ್ಟಿ ಪಡೆಯಬಹುದೆನ್ನುವ ಭವಿಷ್ಯ ಟಿ.ವಿ. ವಾಹಿನಿಗಳ ಚುನಾವಣೆ ಸಮೀಕ್ಷೆಯಲ್ಲಿ ಪ್ರಕಟವಾಗಿದೆ. ಕೇಜ್ರಿವಾಲ್ ಕೂಡಾ ಒಂದು ಕಡೆ ನಮಗೆ ಲೋಕಸಭೆಯಲ್ಲಿ ಐದು ಸ್ಥಾನ ಸಿಕ್ಕಿದರೂ ಸಾಕು, ಕಾಂಗ್ರೆಸ್- ಬಿಜೆಪಿಗಳ ಜನ್ಮ ಜಾಲಾಡುತ್ತೀವಿ ಎಂದಿದ್ದಾರೆ. ಅದೇ ಅವರ ಉದ್ದೇಶವಾಗಿದ್ದರೆ, ದೆಹಲಿಯಲ್ಲಿ ಸರ್ಕಾರ ರಚಿಸುವ ನಾಟಕವಾದರೂ ಯಾಕೆ ಬೇಕಾಗಿತ್ತು?