ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆಂಧ್ರಪ್ರದೇಶದ ವಿಭಜನೆ ತೆಲಂಗಾಣದ ಉದಯ

Srinivasa Murthy VN
Updated On : 18 Feb 2014, 11:04 am

ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯ ಸಹಚರ್ಯ, ಸಹಬಾಳ್ವೆಯ ಇತಿಹಾಸ ಆಂಧ್ರಪ್ರದೇಶದ ಜನರ ಪಾಲಿಗೆ ಇನ್ನು ಕೇವಲ ನೆನಪಷ್ಟೇ.
ಮಂಗಳವಾರ ವಿಚಿತ್ರವಾದ ಸಂಸದೀಯ ರಾಜಕೀಯದ ಬೆಳವಣಿಗೆಯಲ್ಲಿ ಲೋಕಸಭೆ ಮುಚ್ಚಿದ ಬಾಗಿಲುಗಳ ಹಿಂದೆ, ಟಿ.ವಿ. ವಾರ್ತಾ ವಾಹಿನಿಗಳ ಸದನದ ಪ್ರಸಾರವನ್ನು ಸ್ಥಗಿತಗೊಳಿಸಿ, ಆಂಧ್ರಪ್ರದೇಶ ರಾಜ್ಯದ ವಿಭಜನೆ ಹಾಗೂ ನೂತನ ತೆಲಂಗಾಣ ರಾಜ್ಯದ ಉದಯದಂತಹ ಮಹಾನ್ ನಿರ್ಣಯವನ್ನು ಒಂದು ವಿಧೇಯಕವನ್ನು ಅಂಗೀಕರಿಸುವ ಪ್ರಕ್ರಿಯೆಯ ಮೂಲಕ ವಿಧಿವತ್ತಾಗಿ ಜಾರಿಗೆ ತರಲು ಮುಂದಾಗಿದ್ದು ನಿಜಕ್ಕೂ ಕಂಡು ಕೇಳರಿಯದ ಘಟನೆ. ದೇಶದ ಅದರಲ್ಲೂ ದಕ್ಷಿಣ ಭಾರತದ ರಾಜಕೀಯ ಭೂಪಟವನ್ನೇ ಬದಲಾಯಿಸುವಂತಹ ಕ್ರಮ ಭಾರತೀಯ ಜನಸ್ತೋಮಗಳ ಸಾರ್ವಭೌಮಾಧಿಕಾರವನ್ನು ಪ್ರತಿನಿಧಿಸುವ ಸದನದ ಧ್ವನಿ ಮತದಿಂದ ಅಂಗೀಕರಿಸುವ ತಂತ್ರಕ್ಕೆ ಶರಣಾಗಬೇಕಾಗಿ ಬಂದಿದ್ದು ಒಂದು ದುರಂತವೇ. ಇದು ಅನಿವಾರ್ಯವಾಗಿತ್ತೇನು? ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಗಳ ನಡುವೆ ತೆಲಂಗಾಣ ರಾಜ್ಯದ ರಚನೆಯ ವಿಚಾರದಲ್ಲಿ ಒಮ್ಮತ ಮೂಡಿದ್ದರಿಂದ ಸೀಮಾಂಧ್ರ ಸಂಸದರ ಉಗ್ರ ಪ್ರತಿಭಟನೆಯನ್ನು ಮೆಟ್ಟಿನಿಲ್ಲುವುದು ಸರ್ಕಾರಕ್ಕೆ ಸಾಧ್ಯವಾಯಿತು. ಆದರೆ ಆ ರೀತಿಯ ಒಮ್ಮತ ಮೂಡುವ ಮುನ್ನ ನಡೆದಿದ್ದೆಲ್ಲಾ ಅವಾಂತರವೇ.
ಭಾರತೀಯ ಜನತಾ ಪಾರ್ಟಿ, ತೆಲಂಗಾಣ ರಾಜ್ಯ ರಚನೆಗೆ ಬೆಂಬಲ ನೀಡದಿದ್ದರೂ, ಸಂಸತ್ತಿನಲ್ಲಿ ಆಂಧ್ರ ರಾಜ್ಯದ ವಿಭಜನೆಯ ಸಾಧಕ-ಬಾಧಕಗಳು, ಅದರಿಂದ ಜನಜೀವನದ ಮೇಲೆ ಆಗುವ ಪರಿಣಾಮ ಹಾಗೂ ಆಂಧ್ರ-ತೆಲಂಗಾಣಗಳ ಸೌಹಾರ್ದ ಕುರಿತಂತೆ, ಮುಕ್ತ - ಬಹಿರಂಗ ಚರ್ಚೆಗೆ ಅವಕಾಶವೇ ಸಿಗಲಿಲ್ಲ. ನಿಜ, ದೇಶದಲ್ಲೇ ಒಂದು ರಾಜ್ಯದ ವಿಭಜನೆ ಇದೇ ಮೊದಲನೇ ಉದಾಹಣೆ ಅಲ್ಲ. ಪಂಜಾಬಿನಿಂದ ಹರ್ಯಾಣ, ಬಿಹಾರದಿಂದ ಜಾರ್ಖಂಡ, ಮಧ್ಯಪ್ರದೇಶದಿಂದ ಚತ್ತೀಸ್ಗಡ, ಉತ್ತರಪ್ರದೇಶದಿಂದ ಉತ್ತರಾಖಂಡ ರಾಜ್ಯಗಳು ಹೊರಬಿದ್ದಿವೆ. ಈಗಿನ ಉತ್ತರ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬೇಕೆನ್ನುವ ಒತ್ತಾಯವೂ ಕೇಂದ್ರ ಸರ್ಕಾರದ ಮುಂದೆ ಇದೆ. ಆದರೆ ಈ ಪ್ರಕರಣಗಳಲ್ಲಿ ಈಗ ಆಂಧ್ರದಲ್ಲಿ ಪ್ರಕಟವಾಗಿರುವಷ್ಟು ಉದ್ರೇಕ - ಉದ್ವಿಗ್ನತೆ ಪ್ರಕಟವಾಗಿರಲಿಲ್ಲ. ಸೀಮಾಂಧ್ರ ಸೀಮೆಯಲ್ಲಿ ರಾಜಕೀಯ ಬೆಂಬಲವನ್ನು ಕಳೆದುಕೊಂಡಿರುವ ಕಾಂಗ್ರೆಸ್, ತೆಲಂಗಾಣದ ಹದಿನೇಳು ಲೋಕಸಭೆ ಸ್ಥಾನಗಳ ಮೇಲೆ ಕಣ್ಣಿಟ್ಟು ಈಗಿನ ಸಂಸತ್ತಿನ ಕಟ್ಟ ಕಡೆಯ ಅಧಿವೇಶನದಲ್ಲಿ ಒಂದು ವಿಧೇಯಕದ ಮೂಲಕ ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯವನ್ನು ವಿಭಜಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದು ಸಂಸದೀಯ ಜನತಂತ್ರದ ಅಣಕವೇ. ಆಂಧ್ರ ಪ್ರದೇಶದ ವಿಧಾನ ಸಭೆ ಆ ನಿರ್ಣಯವನ್ನು ತಿರಸ್ಕರಿಸಿತ್ತು.
ಆ ದೃಷ್ಟಿಯಿಂದ ಮಂಗಳವಾರದ ಲೋಕಸಭೆ ಕಾರ್ಯಕಲಾಪದ ಅನಂತರ, ಇದು ಜನತಂತ್ರದ ಹಾಡ ಹಗಲ ಕಗ್ಗೊಲೆ ಎಂದು ಜಗನ್ಮೋಹನ ರೆಡ್ಡಿ ಅಬ್ಬರಿಸಿದ್ದು ಅರ್ಥವಾಗುವಂತಹ ವರ್ತನೆ. ಈಗ ಚರ್ಚೆಯೇ ಇಲ್ಲದೇ ಕೇವಲ ಧ್ವನಿ ಮತದಿಂದ ಅಂಗೀಕಾರವಾದ ವಿಧೇಯಕದ ಉದ್ದೇಶ ಊರ್ಜಿತವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಕಾಂಗ್ರೆಸ್-ಬಿಜೆಪಿಗಳಿಗೆ ರಾಜ್ಯ ಸಭೆಯಲ್ಲಿ ಬಹುಮತವನ್ನು ಪಡೆಯುವ ಶಕ್ತಿ ಇದೆ. ಉಳಿದಿದ್ದನ್ನು ಸಂಯುಕ್ತ ಪ್ರಗತಿಪರ ಕೂಟ ಸರ್ಕಾರ ನಿಭಾಯಿಸುತ್ತದೆ. ಕಾಯಿದೆಯ ಸಮರವೂ ನಡೆಯಬಹುದು. ಆ ವಿಚಾರ ಬೇರೆ. ಮಂಗಳವಾರವೇ "ತೆಲಂಗಾಣದ ರಾಜಧಾನಿ" ಹೈದರಾಬಾದ್ನಲ್ಲಿ ಸಂಭ್ರಮ, ಸಡಗರ, ಉತ್ಸಾಹದ ಪ್ರದರ್ಶನಗಳು ನಡೆದಿರುವುದು ತೀರ ಸಹಜ. ತೆಲಂಗಾಣ ಜನರ ಪಾಲಿಗೆ ಸುಮಾರು ಒಂದು ದಶಕದ ಹೋರಾಟಕ್ಕೆ ಜಯ ಸಿಕ್ಕಂತೆಯೇ ಆಗಿದೆ.
ಈಗ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ವಿಧೇಯಕದಂತೆ ಇನ್ನು ಹತ್ತು ವರ್ಷಗಳ ಕಾಲ ಹೈದರಾಬಾದ್ ಮಹಾನಗರ ಉಭಯ ರಾಜ್ಯಗಳ ರಾಜಧಾನಿ. ಆಂಧ್ರ ರಾಜ್ಯಕ್ಕೆ ಹೊಸದೊಂದು ರಾಜಧಾನಿಯನ್ನು ನಿರ್ಮಿಸಬೇಕಾಗುತ್ತದೆ. ಅದಕ್ಕೆ ಬೇಕಾದ ಸಂಪನ್ಮೂಲ ಕೇಂದ್ರದಿಂದಲೇ ಬರಬೇಕು. ಮೊದಲ ವರ್ಷದಲ್ಲಿ ಆಂಧ್ರ ರಾಜ್ಯದ ವಿತ್ತೀಯ ಕೊರತೆಯನ್ನು ಕೇಂದ್ರ ಸರ್ಕಾರವೇ ನಿಭಾಯಿಸಬೇಕು. ಸೀಮಾಂಧ್ರ ಪ್ರದೇಶದ ಶ್ರೀಮಂತ ಉದ್ಯಮಿಗಳು ಹೈದರಾಬಾದ್-ಸಿಕಂದರಾಬಾದ್ ನಗರಗಳಲ್ಲಿ ಹೂಡಿರುವ ಬಂಡವಾಳಕ್ಕೆ ಸೂಕ್ತ ರೀತಿಯ ರಕ್ಷಣೆಯನ್ನು ಒದಗಿಸಬೇಕು. ಇದರಲ್ಲಿ ಎಷ್ಟು ಅಂಶಗಳು ವಿಧೇಯಕದಲ್ಲಿ ಸೇರಿವೆಯೋ ಗೊತ್ತಿಲ್ಲ.
ರಾಜಕೀಯವಾಗಿ ದೇಶದಲ್ಲಿ ಒಂದು ದೊಡ್ಡ ಶಕ್ತಿಯಾಗಬಹುದಾಗಿದ್ದ ಆಂಧ್ರಪ್ರದೇಶ, ಭವಿಷ್ಯದಲ್ಲಿ ಆ ಸ್ಥಾನವನ್ನು ಪಡೆಯುವುದು ಸಾಧ್ಯವಿಲ್ಲ. ಕೇಂದ್ರದಲ್ಲಿ ಆಳುವ ಕೂಟ ಒಂದು ರೀತಿಯಲ್ಲಿ ಈಗ ಜೇನು ಗೂಡಿಗೇ ಕೈ ಹಾಕಿರುವಂತಿದೆ. ಇತರ ಕೆಲವು ರಾಜ್ಯಗಳಲ್ಲೂ ಈಗಾಗಲೇ ಪ್ರಾದೇಶಿಕ ಹಂತದಲ್ಲಿ ಹೊಸ ರಾಜ್ಯಗಳ ನಿರ್ಮಾಣದ ಬೇಡಿಕೆ ಕೇಳಿಬಂದಿದೆ. ಅದು ಈಗ ಎಷ್ಟೇ ಕ್ಷೀಣವಾಗಿದ್ದರೂ, ಚುನಾವಣೆ ಸಮಯದಲ್ಲಿ ಹಲವು ಕಡೆ ರಂಪರಾದ್ಧಾಂತವಾದರೂ ಆಗಬಹುದು. ಅದನ್ನು ನಿಭಾಯಿಸುವುದೂ ಕೇಂದ್ರದ ಕರ್ತವ್ಯವೇ. ಯಾವುದೇ ಕಾರಣಕ್ಕೇ ಆದರೂ ಜನತಂತ್ರದ ಮೂಲ ಸಿದ್ಧಾಂತವನ್ನು ಕುರೂಪಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಅದು ವಿದ್ರೋಹಕ್ಕೆ ಸರಿಸಮಾನವಾದ ವರ್ತನೆ ಎಂದೇ ಭಾವಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement