ತಪ್ಪಾಯ್ತು ತಿದ್ಕೋತೀವಿ
ರಾಮನಗರದ ಬಾಳೆಕಟ್ಟೆಯಿಂದ ಮಾಗಡಿ ಶ್ರೀನಿವಾಸ್ ಅವರು ಬರೆಯುತ್ತಾರೆ- 'ಫೆ.8ರಂದು 3ನೇ ಪುಟದ 'ಹಿರಿಯರು ಮಕ್ಕಳ ಮುಂದೆ ಉತ್ತಮ ನಡವಳಿಕೆ ತೋರಲಿ' ಎಂಬ ಶೀರ್ಷಿಕೆಯಲ್ಲಿ 'ನಡವಳಿಕೆ' ಎಂಬ ಪದಪ್ರಯೋಗವಾಗಿದೆ. ಇದು ಶುದ್ಧರೂಪವಲ್ಲ. ಇದು 'ನಡೆವಳಿಕೆ' ಎಂದಾಗಬೇಕು.'
'ಏಕೆಂದರೆ 'ನಡೆ' ಎಂಬುದು ಧಾತುವಿಗೆ (ಕ್ರಿಯಾಪದದ ಮೂಲರೂಪ) 'ವಳಿಕೆ' ಎಂಬ ಪ್ರತ್ಯಯ ಸೇರಬೇಕಲ್ಲದೆ, 'ನಡ' ಎಂಬ ಧಾತು ಬೇರೆ ಅರ್ಥವನ್ನು ಕೊಡುತ್ತದೆ. ಹೀಗೆಯೇ ಬೆಳೆವಣಿಗೆ, ಬರೆವಣಿಗೆ ಇವು ಶುದ್ಧರೂಪಗಳು.'
'2ನೇ ಪುಟ 'ಆರ್ಟಿಇ ಅರ್ಜಿ ಸಲ್ಲಿಕೆ ಅವಧಿ 19ರವರೆಗೆ ವಿಸ್ತರಣೆ' ಸುದ್ದಿಯ ಪರಿಷ್ಕೃತ ವೇಳಾಪಟ್ಟಿಯಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ ಫೆ.2 ಎಂದಾಗಿದೆ. ಇದು ಹೇಗೆ ಸಾಧ್ಯ? ಅಂಕಿಅಂಶ ಹಾಗೂ ದಿನಾಂಕಗಳ ವಿಚಾರದಲ್ಲಿ ಇಂತಹ ಗೊಂದಲಮಯ ತಪ್ಪುಗಳು ಅಪೇಕ್ಷಿತವೇ?'
'ಹಾಗೆಯೇ ಇದೇ ದಿನದ ಪತ್ರಿಕೆಯನ್ನು ಅವಲೋಕಿಸಿದರೆ 12 ಪುಟದ ಪತ್ರಿಕೆಯಲ್ಲಿ ಸುಮಾರು ನಾಲ್ಕು- ನಾಲ್ಕೂವರೆ ಪುಟ ಕೇವಲ ಜಾಹೀರಾತುಗಳೇ ತುಂಬಿಹೋಗಿವೆ. ಏನಾದರಾಗಲಿ ಮೂಗಿಗಿಂತ ಮೂಗುತಿ ಭಾರವಾಗಬಾರದು' ಎಂದಿದ್ದಾರೆ.
ಮೂಗಿಗಿಂತ ಮೂಗುತಿ ಭಾರವಾಗಬಾರದು ಎಂಬುದು ನಮಗೂ ಗೊತ್ತು. ಮಾಗಡಿ ಶ್ರೀನಿವಾಸ ಅವರೇ ಹೇಳಿದಂತೆ 12 ಪುಟದ ಪತ್ರಿಕೆಯಲ್ಲಿ ನಾಲ್ಕು-ನಾಲ್ಕೂವರೆ ಪುಟಗಳಷ್ಟು ಜಾಹೀರಾತಿತ್ತು. ಅಂದರೆ ಇನ್ನೂ ಏಳೂವರೆ-ಎಂಟರಷ್ಟು ಪುಟಗಳು ಸುದ್ದಿಗೆ ಲಭ್ಯವಿತ್ತು! ಅಂದರೆ ಹೆಚ್ಚು ಪುಟ ಸುದ್ದಿಗೇ ಲಭ್ಯವಿತ್ತು.
ಅವರು ಹೇಳಿದ್ದನ್ನು 4-5 ಪುಟ ಕೇವಲ ಜಾಹೀರಾತುಗಳೇ ತುಂಬಿದ್ದವು ಎಂದು ಅರ್ಥೈಸುವುದಾದರೆ, 2ನೇ ಪುಟ, ಸಂಪಾದಕೀಯ ಮತ್ತು ಅದರ ಎದುರಿನ ಪುಟ ಪ್ರತಿ ದಿನವೂ ಯಾವುದೇ ಜಾಹೀರಾತು ಇಲ್ಲದೇ ಪ್ರಕಟವಾಗುತ್ತವೆ. ಇಡೀ ಪತ್ರಿಕೆಯಲ್ಲಿ ಯಾವತ್ತೂ ಶೇ.50 ಮತ್ತು ಅದಕ್ಕಿಂತ ಹೆಚ್ಚಿನ ಸ್ಥಳವನ್ನು ಜಾಹೀರಾತಿಗೆ ನೀಡುವುದಿಲ್ಲ. ಹೀಗಿರುವಾಗ ಮೂಗಿಗಿಂತ ಮೂಗುತಿ ಭಾರವಾಗಲು ಸಾಧ್ಯವೇ ಇಲ್ಲ.
ಓದುಗರಿಗೆ ಹೆಚ್ಚು ಸುದ್ದಿ ಹಾಕಿದಷ್ಟೂ ಸಾಲುವುದಿಲ್ಲ ಎಂಬುದು ನಮಗೆ ಗೊತ್ತು. ಅದಕ್ಕಾಗಿ ನಮ್ಮ ಪ್ರಯತ್ನ ಸದಾ ಜಾರಿಯಲ್ಲಿರುತ್ತದೆ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆಯುತ್ತಾರೆ- 'ಡಿ.30ರ ಸಂಚಿಕೆಯಲ್ಲಿ 'ಶಿ'ರಾಡಿ' ಘಾಟು ದರ್ಶನ' ಲೇಖನದಲ್ಲಿ ರೂಪ ಜಗದೀಶ, ಹಾಸನ ಇವರ ಆಕ್ರೋಶದ ನುಡಿಗಳಲ್ಲಿ ಸರ್ಕಾರಕ್ಕೆ ಇನ್ನೂ 'ಬುದದ್ದಿ' ಎಂದಿದೆ. ಬುದ್ಧಿ ಬಂದಿಲ್ಲ ಎಂದಾಗ ಬೇಕಾಗಿತ್ತು. ಡಾ. ಅಣ್ಣಯ್ಯ ಕುಲಾಲರ ಹೇಳಿಕೆಯಲ್ಲಿ 'ಧಂಗೆ ಹೇಳಬೇಕು' ಎಂದಿದೆ. ಅದು ದಂಗೆ ಏಳಬೇಕು ಎಂದಾಗಬೇಕಿತ್ತು.
-ವಿಶ್ವೇಶ್ವರಭಟ್