ಕಾಶಪ್ಪನವರ್ ದಾಂದಲೆ: ಸರ್ಕಾರದ ಪೇಚು
ವಿಜಯಾನಂದ ಕಾಶಪ್ಪನವರ್, ಬಾರ್‌ನಲ್ಲಿ ನಡೆದ ಘಟನೆಯಲ್ಲಿ ಪೊಲೀಸ್ ಕಾನ್ಸಟೇಬಲ್..
ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಬೆಂಗಳೂರಿನ ಒಂದು ಬಾರ್‌ನಲ್ಲಿ ನಡೆದ ಘಟನೆಯಲ್ಲಿ ಪೊಲೀಸ್ ಕಾನ್ಸಟೇಬಲ್‌ಗಳನ್ನು ನಿಂದಿಸಿ, ದಾಂಧಲೆ ನಡೆಸಿದ ಪ್ರಕರಣ ಗುರುವಾರ ವಿಧಾನಮಂಡಲದ ಉಭಯ ಸದನಗಳ ಕಾರ್ಯಕಲಾಪವನ್ನು ಬಲಿ ತೆಗೆದುಕೊಂಡಿದ್ದರ ಹಿಂದಿರುವುದು 'ಅಪ್ಪಟ ರಾಜಕೀಯ'.
ಘಟನೆ ನಡೆದಾಗ ಕಾಶಪ್ಪನವರ್ ಜತೆ ಇನ್ನೂ ಇಬ್ಬರು ಮೂವರಿದ್ದರು. ಈಗಾಗಲೇ ಪೊಲೀಸರು ಪ್ರಕರಣದಲ್ಲಿ ಶಾಸಕರನ್ನು ಎರಡನೇ ಆರೋಪಿಯಾಗಿ ಪರಿಗಣಿಸಿ, ಮೊದಲ ಮಾಹಿತಿ ವರದಿಯನ್ನೂ ಸಲ್ಲಿಸಿದ್ದಾಗಿದೆ. ಪೊಲೀಸ್ ಕಾನ್ಸಟೇಬಲ್‌ಗಳೇ ದೂರು ಸಲ್ಲಿಸಿದ್ದಾರೆ. ಕಾಯಿದೆಯಂತೆ, ಪೊಲೀಸ್ ಅಧಿಕಾರಿಗಳ ಮೇಲೆ ಕೈ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ. ಈ ಪ್ರಕರಣದ ವಿಚಾರಣೆ ನಡೆಯಬೇಕಾಗಿದೆ. ಅದು ಹಗರಣದ ಸರಳ ವರದಿ.
ಆದರೆ ಪೊಲೀಸರಿಗೆ ಕಾಶಪ್ಪನವರ್ ಸಿಕ್ಕಿಲ್ಲ. ಈ ವಿಚಾರದಲ್ಲಿ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಹಾಗೂ ಅವರ ವರ್ತನೆ, ಪ್ರಧಾನ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿಯನ್ನು ಕೆರಳಿಸಿರುವುದು ಸಹಜ. ತಮ್ಮ ಪಕ್ಷದ ಶಾಸಕರನ್ನು, ಅವರು ಒಂದು ಕ್ರಿಮಿನಲ್ ಮೊಕದ್ದಮೆಯಲ್ಲಿ ಆರೋಪಿಯಾಗಿದ್ದರೂ ಸರ್ಕಾರ ಬಂಧಿಸದೇ ಇರುವುದರಿಂದ ಆರೋಪಿಗಳನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎನ್ನುವುದು ಬಿಜೆಪಿ ನಾಯಕ ಜಗದೀಶ ಶೆಟ್ಟರ್ ಹಾಗೂ ಇತರರ ಗುಮಾನಿ.
ಆ ಗುಮಾನಿಯ ಆಧಾರದ ಮೇಲೆ ಉಭಯ ಸದನಗಳಲ್ಲೂ ಬಿಜೆಪಿ ಸದಸ್ಯರು ಗದ್ದಲ ಮಾಡಿ ಹೊರಗೆ ನಡೆದಿದ್ದರಿಂದ ವಿಧಾನ ಮಂಡಲದ ಕಾರ್ಯಕಲಾಪವೇ ಬಲಿಯಾಯಿತು. ವಿಧಾನ ಸಭೆಯಲ್ಲಿ ನಡೆದ ಚಕಮಕಿಯಲ್ಲಿ, ಒಂದು ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಾಚಾರದ ಆರೋಪ ಹೊತ್ತ ಹಾಲಪ್ಪನವರ್ ಅವರನ್ನು, ಸದನದಲ್ಲೇ, ಸಚಿವರ ಸ್ಥಾನದಲ್ಲಿ ಕೂತು ಸೆಲ್‌ಫೋನ್‌ನಲ್ಲಿ ಪೋಲಿ ಚಿತ್ರವನ್ನು ನೋಡುತ್ತಿದ್ದ ಲಕ್ಷ್ಮಣ ಸವದಿ ಅವರನ್ನು ನೀವೇನು ಮಾಡಿದಿರಿ? ಎಂದು ಬಿಜೆಪಿಯ ಕಡೆ ಕೈ ತೋರಿಸಿ ಆಕ್ರೋಶದಿಂದ ಕೂಗಿದ್ದು, ಇಡೀ ಸದನವನ್ನೇ ಚಕಿತಗೊಳಿಸಿತ್ತು.
ವಿಧಾನ ಸಭೆಯಲ್ಲಿ ಬಿಜೆಪಿ ದೊಡ್ಡರಂಪವನ್ನೇ ಮಾಡಿದರೆ, ವಿಧಾನ ಪರಿಷತ್ತಿನಲ್ಲಿ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಸರ್ಕಾರದ ಹೇಳಿಕೆಯ ಪ್ರತಿಯನ್ನೇ ಹರಿದು ಹಾಕಿದರು. ಈಗಿನ ವಿಧಾನಸಭೆಯಲ್ಲಿ ಇಂತಹ ರಾಜಕೀಯ ಸಂಘರ್ಷ ಈ ರೀತಿ ನಡೆದಿರಲಿಲ್ಲ. ನಿಜ. ಅವಧಿ ಮೀರಿದ ಅನಂತರವೂ ಬಾರ್ ತೆರೆದಿದ್ದು, ಅಲ್ಲಿಂದ ಹೊರಗೆ ಹೋಗಲು ಒಳಗಿದ್ದವರು ನಿರಾಕರಿಸಿದ್ದು, ಆ ಜಗತ್ತಿಗೆ ದೊಡ್ಡ ವಿಚಾರವೇನೂ ಅಲ್ಲ. ಅದು ಆಗಾಗ ನಡೆಯುವುದೇ. ಆದರೆ ಈಗಿನ ಪ್ರಕರಣದಲ್ಲಿ ಒಬ್ಬ ಕಾಂಗ್ರೆಸ್ ಶಾಸಕರೂ ಪಾಲುಗೊಂಡಿದ್ದರಿಂದ ಅದು ದೊಡ್ಡದಾಗಿದೆ. ಶಾಸಕರಿಲ್ಲದೇ ಹೋಗಿದ್ದರೆ, ಇಂತಹ ಪ್ರಕರಣಗಳನ್ನು ನಿಭಾಯಿಸುವ ವಿಧಾನ ಪೊಲೀಸರಿಗೆ ಗೊತ್ತು. ಇಂತಹ ಅನೇಕ ಪ್ರಕರಣಗಳನ್ನು ಅವರು ನೋಡಿರುತ್ತಾರೆ.
ಇಲ್ಲಿ ಹುನಗುಂದದ ಕಾಂಗ್ರೆಸ್ ಶಾಸಕ ಕಾಶಪ್ಪನವರ್ ಅವರ ವ್ಯಕ್ತಿತ್ವವೂ ಮುಖ್ಯವಾಗುತ್ತದೆ. ಅವರ ವಿರುದ್ಧ ಹುನಗುಂದ, ಬಾಗಲಕೋಟೆ ಪ್ರದೇಶದಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಶಾಸಕರಿಂದ ಗಾಂಭೀರ್ಯ ಹಾಗೂ ಸಂಯಮವನ್ನು ನಿರೀಕ್ಷಿಸುವವರ ಮನಸ್ಸಿನಲ್ಲಿ ಕಸಿವಿಸಿಯಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ನಮ್ಮ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳಲು ಎಂತೆಂತಹ ವ್ಯಕ್ತಿಗಳಿಗೆ ಟಿಕೆಟ್ ಕೊಡುತ್ತವೆ ಎನ್ನುವುದೂ ಈಗ ಬಟಾಬಯಲು. ಆ ರಾಜಕೀಯ ಪಕ್ಷಗಳು ಅದರ ಸಂಭಾವಿತ ಸದಸ್ಯರೂ ಸೇರಿದಂತೆ, ಆರೋಪಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಸರ್ಕಾರದ ಮೃದು ಧೋರಣೆಯನ್ನು ಸಮರ್ಥಿಸಿಕೊಳ್ಳುವುದನ್ನಂತೂ ಸಾರ್ವಜನಿಕರು ಖಂಡಿಸಲೇಬೇಕು. ನಿಜ. ಜನರಿಂದ ಚುನಾಯಿತರಾದ ಪ್ರತಿನಿಧಿಗಳಿಗೆ ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತ ಸ್ಥಾನ-ಮಾನ ಇದೆ. ಆದರೆ ಸಂವಿಧಾನದಲ್ಲಿ ಕ್ರಿಮಿನಲ್ ಆರೋಪಗಳ ಪ್ರಕರಣದಲ್ಲಿ ಶಾಸಕರಿಗೆ, ಸಂಸದರಿಗೆ ಯಾವುದೇ ರೀತಿಯ ವಿನಾಯಿತಿ ರಿಯಾಯಿತಿಯೂ ಇಲ್ಲ.
ಈಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ಸಿನ ಸಂಸದ ಎದುರಾಳಿಗಳ ಮನೆಯ ಹೆಣ್ಣುಮಕ್ಕಳ ಅತ್ಯಾಚಾರಕ್ಕೆ ಹುಡುಗರನ್ನು ಕಳಿಸುವ ಮಾತನ್ನಾಡಿ, ಅನಂತರ ಕ್ಷಮೆ ಕೇಳಿದ ಅನಂತರವೂ ಆ ವರ್ತನೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಹಾಯಕರಂತೆ ಸಮರ್ಥಿಸಿರುವಂತೆಯೇ, ಕರ್ನಾಟಕದ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಮಾಜಿ ಮಂತ್ರಿ ಹಾಲಪ್ಪನವರ್, ಲಕ್ಷ್ಮಣ ಸವದಿ ಅವರ ಹೆಸರುಗಳನ್ನು ಹೇಳಿದ್ದೂ ಸರಿಯಲ್ಲ.
ಆಕ್ರೋಶದಲ್ಲಿ ಬಾಯಿತಪ್ಪಿ ಮಾತುಗಳು ಹೊರಬಿದ್ದಿರಬಹುದು. ಆದರೆ ದಂಡಧಾರಿಗಳು ಸಂಯಮದಿಂದಿರಬೇಕು. ತಪ್ಪಿತಸ್ಥರನ್ನು ಯಾವಾಗಬೇಕಾದರೂ ಬಡಿಯಲು ಅವರಲ್ಲಿ ದಂಡವಿದೆ. ಸೋಮವಾರ ವಿಧಾನ ಮಂಡಲದ ಅಧಿವೇಶನ ಸಮಾವೇಶವಾಗುವುದರ ಒಳಗಾಗಿ ಸರ್ಕಾರ ಕಣ್ಣಿಗೆ ಕಾಣುವಂತೆ ಕಾನೂನು ಪಾಲನೆಯ ಕ್ರಮ ಕೈಗೊಳ್ಳದೇ ಹೋದರೆ ಶಾಶ್ವತವಾಗಿ ಕೆಟ್ಟ ಹೆಸರನ್ನು ಆಹ್ವಾನಿಸಿದಂತೆಯೇ ಆಗುತ್ತದೆ.