ಭಾರತೀಯ ಜನತಾ ಪಾರ್ಟಿ ಅಮಿತೋತ್ಸಾಹಕ್ಕೆ ಅಧಿಕೃತ ಮುದ್ರೆ
ಪ್ರಚಂಡ ಸಂಘಟನಾ ಚತುರ, ಒಪ್ಪಿಕೊಂಡ ಕೆಲಸವನ್ನು ಚೊಕ್ಕವಾಗಿ ಮಾಡಿ ಮುಗಿಸುವ ಖ್ಯಾತಿಯ ಅಮಿತ್ ಷಾ ಈಗ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ. ರಾಜನಾಥ್ ಸಿಂಗ್ ಅವರು ಗೃಹಮಂತ್ರಿಯಾಗಿ ನೇಮಕಗೊಂಡ ಅನಂತರ ಪಕ್ಷದ ಸಂಸದೀಯ ಮಂಡಳಿ ಮಂಗಳವಾರ ಅಮಿತ್ ಷಾ ಅವರನ್ನೇ ಮುಂದಿನ ನಾಯಕರನ್ನಾಗಿ ಆರಿಸಿತು.
ಸಂಸದೀಯ ಮಂಡಳಿಯ ಹಿರಿಯ ಸದಸ್ಯರಾದ ಆಡ್ವಾಣಿ, ಮುರಳಿ ಮನೋಹರ ಜೋಷಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಅವರೆಲ್ಲರೂ ಸೇರಿದಂತೆ ಎಲ್ಲ ಸದಸ್ಯರೂ ಅಮಿತ್ ಷಾ ಆಯ್ಕೆಯನ್ನು ಸರ್ವಾನುಮತದ ಆಯ್ಕೆ ಎಂದೇ ಹೇಳಿದ್ದಾರೆ. ಅಲ್ಲಿಗೆ ಬಿಜೆಪಿಯ ಅತ್ಯುನ್ನತ ಮಟ್ಟದ ನಾಯಕತ್ವದಲ್ಲಿ ಈಗ ಒಂದು ತಲೆಮಾರಿನ ಬದಲಾವಣೆ ಸ್ಪಷ್ಟವಾಗಿ ಕಂಡುಬಂದಿದೆ.
ಸಂಘ ಪರಿವಾರದ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಅಮಿತ್ ಷಾ ಅವರ ಆಯ್ಕೆಯನ್ನು ಒಪ್ಪುವುದರ ಜತೆಯಲ್ಲೇ ರಾಮ ಮಾಧವ್ ಮತ್ತು ಶಿವಪ್ರಕಾಶ ಅವರನ್ನು ಬಿಜೆಪಿಯ ಸಂಘಟನೆಯಲ್ಲಿ ಕೆಲಸ ಮಾಡಲು ಕಳುಹಿಸಿದೆ. ಸರ್ಕಾರವೇ ಸಂಘ ಪರಿವಾರದ ವಶಕ್ಕೆ ಬಂದಿದ್ದರೂ, ಸಂಘಟನೆಯ ಶಕ್ತಿ ಯಾವ ಕಾರಣಕ್ಕೂ ಕುಗ್ಗಬಾರದು ಎನ್ನುವುದೇ ಆರೆಸ್ಸೆಸ್ನ ಬಯಕೆ.
ಐವತ್ತು ವರ್ಷದ ಅಮಿತ್ ಷಾ, ಅರವತ್ಮೂರರ ವಯೋವಾನದ ನರೇಂದ್ರ ಮೋದಿ ಅವರ ಮೆಚ್ಚಿನ ಬಂಟನಂತೆಯೇ ಇದ್ದಾರೆ. ಈಗಾಗಲೇ ಗುಜರಾತ್ನಲ್ಲಿ ಐದುಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಗೆದ್ದು, ಗೃಹಮಂತ್ರಿಯೂ ಆಗಿ, ಅನಂತರ ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದ ಆರೋಪಿ ಎನಿಸಿಕೊಂಡು, ಸಬರಮತೀ ಜೈಲಿನಲ್ಲಿ ಆರು ತಿಂಗಳು ಇದ್ದವರು. ಅಲ್ಲಿಂದ ಹೊರ ಬಂದ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ಪಕ್ಷವು ನೆಲಕಚ್ಚಿದ್ದ ಉತ್ತರ ಪ್ರದೇಶದಲ್ಲಿ ಚುನಾವಣೆ ವ್ಯವಹಾರಗಳ ಜವಾಬ್ದಾರಿಯನ್ನು ಹೊತ್ತವರು. ಅಲ್ಲಿನ 80 ಕ್ಷೇತ್ರಗಳಲ್ಲಿ 70 ಸ್ಥಾನಗಳಲ್ಲಿ ಬಿಜೆಪಿ ಗೆದ್ದಾಗ, ಅದರ ಸಂಪೂರ್ಣ ಕೀರ್ತಿಯನ್ನು ಅಮಿತ್ ಷಾಗೇ ಕೊಡಲು ಯಾರೂ ಹಿಂದೆ ಮುಂದೆ ನೋಡಲಿಲ್ಲ. ಆ ಪ್ರಭಾವ ಬಿಹಾರದಲ್ಲೂ ಕಾಣಿಸಿಕೊಂಡು ಅಲ್ಲೂ ಪಕ್ಷ ದೊಡ್ಡ ರೀತಿಯಲ್ಲೇ ಗೆದ್ದಿದೆ.
ಉತ್ತರ ಪ್ರದೇಶ, ಬಿಹಾರ, ಗುಜರಾತ್ಗಳಲ್ಲಿ ಗೆದ್ದಿರುವ ಬಿಜೆಪಿ ಸಂಸದರ ಸಂಖ್ಯೆ, ಇಡೀ ಪಕ್ಷದ ಸಂಸದರ ಸಂಖ್ಯೆಯ ಅರ್ಧಭಾಗದಷ್ಟು. ಇದೆಲ್ಲವೂ ಸೇರಿಕೊಂಡು, ಒಂದು ಕಾಲದಲ್ಲಿ ಅತ್ಯಂತ ವಿವಾದಗ್ರಸ್ಥ ನಾಯಕ ಎನಿಸಿಕೊಂಡಿದ್ದ ಅಮಿತ್ ಷಾ ಈಗ ವಿವಾದಾತೀತ, ಹೆಚ್ಚು ಕಡಿಮೆ ಪ್ರಶ್ನಾತೀತರಾಗಿಯೇ, ಹೊರ ಹೊಮ್ಮಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಕೇಂದ್ರ ಸರ್ಕಾರದಲ್ಲಿ ಅಧಿಕಾರ ಕೈ ವಶವಾಗಿರುವಾಗ, ಪಕ್ಷದ ಸಂಘಟನೆ ಹಾಗೂ ಪ್ರಭಾವವನ್ನು ಇತರ ರಾಜ್ಯಗಳಿಗೂ ವಿಸ್ತರಿಸಿ, ಅಲ್ಲೆಲ್ಲ ಸಂಘ ಪರಿವಾರವನ್ನು ಬಲಪಡಿಸುವ ಜವಾಬ್ದಾರಿ ಈಗ ಅಮಿತ್ ಷಾ ಅವರದ್ದು. ಪ್ರಧಾನಿ ನರೇಂದ್ರ ಮೋದಿ ಅವರು ಈಗ ಪಕ್ಷದ ಸಂಘಟನೆಯ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲದೆ, ತಮ್ಮೆಲ್ಲ ಶಕ್ತಿಯನ್ನು ಸರ್ಕಾರಕ್ಕೆ, ಸರ್ಕಾರದ ಅಭಿವೃದ್ಧಿಯ ಕೆಲಸಗಳಿಗೆ ಧಾರೆ ಎರೆದು ಕೊಡಬಹುದು. ಸರ್ಕಾರದ ಭದ್ರತೆ ಕುರಿತ ಅಪನಂಬಿಕೆ ಹಾಗೂ ಆಳುವ ಪಕ್ಷದಲ್ಲಿ ಒಡಕು ಎನ್ನುವುದೇ ಇಲ್ಲವಾಗಿರುವಾಗ ಬಂಡವಾಳದ ಆಕರ್ಷಣೆ ಕಷ್ಟವೇನೂ ಅಲ್ಲ. ಅಮಿತ್ ಷಾ ಮುಂದೆ ಎದುರಿಸಬೇಕಾದ ದೊಡ್ಡ ಸವಾಲು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ. ಅದಕ್ಕೆ ಅವರು ಸಜ್ಜಾಗಿರುವಂತಿದೆ.