ಪ್ಲಾಸ್ಟಿಕ್ ಟ್ಯಾಂಕ್ಗಳನ್ನು ಜನಪ್ರಿಯಗೊಳಿಸಿದ್ದು ಯಾರು?
ಅಹ್ಮದಾಬಾದಿನ 'ದಿ ಭಾರತ್ ವಿಜಯ್ ಮಿಲ್ಸ್' ತಾನು ಪ್ರಾರಂಭಿಸಲಿದ್ದ ಪ್ಲಾಸ್ಟಿಕ್ ಘಟಕವನ್ನು ಮುನ್ನಡೆಸಲು ಸೂಕ್ತವಾದ ವ್ಯಕ್ತಿಯನ್ನು ಹುಡುಕುತ್ತಿದ್ದಾಗ ಅದಕ್ಕೆ ಸಿಕ್ಕ ವ್ಯಕ್ತಿ ರಾಜಸ್ಥಾನದ ಎಸ್.ಬಿ.ಡಂಗಾಯಕ್ ಎಂಬ 22ರ ಯುವಕ. ವಿಜ್ಞಾನ ಪದವೀಧರನಾದ ಆತ ಮೊದಲೆರಡು ವರ್ಷ ಏಷ್ಯನ್ ಪೇಂಟ್ ಕಂಪನಿಯಲ್ಲಿ ಕೆಲಸ ಮಾಡಿದ್ದ. ತನಗೆ ಕಂಪನಿಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಮಾತ್ರ ತಾನು ಕೆಲಸ ನಿರ್ವಹಿಸುವುದಾಗಿ ಹೇಳಿದ. ಅದರಂತೆ ಪಟೇಲ್ ಕುಟುಂಬದವರು 1974ರಲ್ಲಿ ಅಹ್ಮದಾಬಾದ್ನಿಂದ 30 ಕಿಲೋಮೀಟರ್ ದೂರದ ಕಲೋಲ್ ಎಂಬ ಸ್ಥಳದಲ್ಲಿ ಒಂದು ಪುಟ್ಟ ಕಂಪನಿಯನ್ನು ಸ್ಥಾಪಿಸಿ ಡಂಗಾಯಕನನ್ನು ಅಲ್ಲಿ ಮಾರ್ಕೆಟಿಂಗ್ ಅಧಿಕಾರಿಯಾಗಿ ನೇಮಕ ಮಾಡಿದರು. ಕೇವಲ 30 ಲಕ್ಷ ರು.ಗಳ ಬಂಡವಾಳದಿಂದ ಪ್ರಾರಂಭವಾದ ಕಂಪನಿ ಒಂದು ಮೌಲ್ಡಿಂಗ್ ಘಟಕ ಪ್ರಾರಂಭಿಸಿ, ಪ್ಲಾಸ್ಟಿಕ್ ನೀರಿನ ಟ್ಯಾಂಕ್ ತಯಾರಿಸತೊಡಗಿತು. ಅಲ್ಲಿವರೆಗೆ ಸಿಮೆಂಟ್ ಮತ್ತು ಉಕ್ಕಿನ ಟ್ಯಾಂಕ್ಗಳು ಮಾತ್ರ ಬಳಕೆಯಲ್ಲಿದ್ದವು. ಮೊದಲ ಬಾರಿಗೆ ಪ್ಲಾಸ್ಟಿಕ್ ಟ್ಯಾಂಕ್ ತಯಾರಿಸಿ ಅದಕ್ಕೆ ಸಿಂಟೆಕ್ಸ್ ಎಂದು ನಾಮಕರಣ ಮಾಡಲಾಯಿತು. ಉಚ್ಚರಿಸಲು ಸರಳವಾಗಿರುವ ಈ ಹೆಸರಿನ ಟ್ಯಾಂಕ್ಗಳು ಅದೆಷ್ಟು ಪ್ರಸಿದ್ಧಿ ಪಡೆದವೆಂದರೆ, ಒಂದೇ ವರ್ಷದಲ್ಲಿ ಆ ವಹಿವಾಟು 60 ಲಕ್ಷ ರು.ಗಳಿಗೆ ಮುಟ್ಟಿತು. ಈ ವರ್ಷ ಕಂಪನಿಯ ವಹಿವಾಟು 1000 ಕೋಟಿ ದಾಟಿದೆ. ಇಂದಿಗೂ ಡಂಗಾಯಕ್ ಈ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಚ್ಚರಿಯೆಂದರೆ ಇಂದು ಅನೇಕ ಕಂಪನಿಗಳು ಇದರಿಂದ ಉತ್ತೇಜಿತವಾಗಿ ಪ್ಲಾಸ್ಟಿಕ್ ಟ್ಯಾಂಕ್ ತಯಾರಿಸಿ ಮಾರುಕಟ್ಟೆ ಪ್ರವೇಶಿಸಿದ್ದರೂ ಜನ ಅವುಗಳನ್ನೂ ಸಿಂಟೆಕ್ಸ್ ಟ್ಯಾಂಕ್ಗಳೆಂದೇ ಕರೆಯುತ್ತಾರೆ. ಅದ್ಭುತ ಕಲ್ಪನೆಯ ಡಂಗಾಯಕ್ ವಿವಿಧ ಆಕಾರದ ಟ್ಯಾಂಕ್ಗಳನ್ನು ನಿರ್ಮಿಸಿ ಯಶಸ್ವಿಯಾಗಿದ್ದಾರೆ. ಇದೀಗ ತಮ್ಮ ಉದ್ಯಮವನ್ನು ವಿಸ್ತರಿಸಿ, ಪ್ರಿ-ಫ್ಯಾಬ್ರಿಕೇಟೆಡ್ ಪರಿಕಲ್ಪನೆಯಲ್ಲಿ ಕೈಗೆಟಕುವ ಬೆಲೆಯಲ್ಲಿ, ಗಟ್ಟಿಮುಟ್ಟಾದ ಮನೆಗಳನ್ನು ತೀವ್ರಗತಿಯಲ್ಲಿ ನಿರ್ಮಿಸಲು ಮುಂದಾಗಿದ್ದಾರೆ. ಕೇವಲ ನಾಲ್ಕೈದು ದಿನಗಳಲ್ಲಿಯೇ ಸುಂದರವಾದ ಮನೆ ನಿರ್ಮಾಣ ಈಗ ಸಾಧ್ಯವಾಗಿದೆ. ಈಗಾಗಲೇ ಗುಜರಾತ್ನಲ್ಲಿ ಇಂತಹ ಮನೆಗಳು ನಿರ್ಮಾಣವಾಗುತ್ತಿವೆ. ಅದಕ್ಕೆ ಜನತೆಯ ಪ್ರೋತ್ಸಾಹವೂ ದೊರೆತಿದೆ. ದೆಹಲಿಯಲ್ಲಿ ಈ ವರ್ಷ ಇಂತಹ ಹತ್ತು ಸಾವಿರ ಮನೆಗಳನ್ನು ನಿರ್ಮಿಸಲು ಸಹ ಸರ್ಕಾರದಿಂದ ಸೂಚನೆ ಸಿಕ್ಕಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com