ಬೆಲೆ ನಿಯಂತ್ರಣ ಯತ್ನ ಎ.ಪಿ.ಎಂ.ಸಿ ವಿವಾದ
ಕೃಷಿ ಉತ್ಪನ್ನಗಳ ಬೆಲೆಗಳ ಏರಿಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ದೊಡ್ಡ ತಲೆನೋವು. ಅಂಕಿ-ಅಂಶಗಳ ಭಾಷೆಯಲ್ಲೇ ಹೇಳಿದರೂ, ಆಹಾರ ಪದಾರ್ಥಗಳ ಬೆಲೆ ಏರಿಕೆಯ ಸೂಚ್ಯಂಕದ ಏರಿಕೆಯಲ್ಲಿ ಹಣ್ಣು- ತರಕಾರಿಗಳ ಪಾಲೇ ಹೆಚ್ಚು.
ಹಣ್ಣು-ತರಕಾರಿಯ ಪರಿಷ್ಕಾರದಂತಹ ಆಧುನಿಕ ಕ್ರಮಗಳನ್ನು ವ್ಯಾಪಕವಾಗಿ ಸದ್ಯದಲ್ಲಿ ಕೈಗೊಳ್ಳುವುದು ಸಾಧ್ಯವಿಲ್ಲವಾಗಿರುವುದರಿಂದ ಈಗಿನ ಪರಿಸ್ಥಿತಿಯನ್ನು ಸುಧಾರಿಸಲು ರೈತರಿಗೆ ತಮ್ಮ ಉತ್ಪಾದನೆಯನ್ನು ಸಾಧ್ಯವಿರುವ ಕಡೆಗಳಲ್ಲೆಲ್ಲಾ ಗ್ರಾಹಕರಿಗೆ ನೇರವಾಗಿ ಮಾರುವ ಸ್ವಾತಂತ್ರ್ಯ ಹಾಗೂ ಅವಕಾಶವನ್ನು ಕೊಡುವುದೇ ಬೆಲೆ ನಿಯಂತ್ರಣ ಸಾಧನ ಎಂದು ಕೇಂದ್ರ ಸರ್ಕಾರ ಹಾಗೂ ಇತರ ಅನೇಕ ಸ್ವತಂತ್ರ ತಜ್ಞರು ನಂಬಿದ್ದಾರೆ. ಆದರೆ ಯಾವುದೋ ಕಾಲದಲ್ಲಿ ರೂಪಗೊಂಡ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕಾಯಿದೆಯ ವಿಧಿ-ನಿಯಮಗಳು ರೈತರು-ಗ್ರಾಹಕರ ನಡುವಣ ನೇರ ಸಂಬಂಧಕ್ಕೆ ಅಡ್ಡಿಯಾಗಿವೆ. ಅದರ ನಿವಾರಣೆಗಾಗಿಯೇ ಇತ್ತೀಚೆಗೆ ದೆಹಲಿಯಲ್ಲಿ ಒಂದು ಉನ್ನತಮಟ್ಟದ ಸಭೆ ನಡೆದು, ಹಣ್ಣು-ತರಕಾರಿಗಳ ವಿಚಾರದಲ್ಲಿ ಈಗಿರುವ ಎಲ್ಲ ನಿರ್ಬಂಧಗಳನ್ನೂ ತೆಗೆದು ಹಾಕುವುದು ಸೂಕ್ತ ಎನ್ನುವ ತಿರ್ಮಾನಕ್ಕೆ ಬರಲಾಯಿತು. ಆ ಸಭೆಯಲ್ಲಿ ಬಹುತೇಕ ರಾಜ್ಯಗಳು ಕೇಂದ್ರದ ಸಲಹೆಯನ್ನು ಒಪ್ಪಿದರೂ, ಕೆಲವು ರಾಜ್ಯಗಳು, ಪ್ರಧಾನವಾಗಿ ತಮಿಳು ನಾಡು ಈಗ ಅಪಸ್ವರವನ್ನು ಎತ್ತಿವೆ. ಹಣ್ಣು-ತರಕಾರಿಗಳಿಗೆ ಕಾಯಿದೆಯಿಂದ ವಿನಾಯಿತಿ ನೀಡಿದರೆ, ಈಗಿನ ಮಾರಾಟ ವ್ಯವಸ್ಥೆಯೇ ಕುಸಿದು ಬೀಳುತ್ತದೆ ಎನ್ನುವುದು ತಮಿಳುನಾಡಿನ ನಿಲವು. ಈ ಹಣ್ಣು-ತರಕಾರಿ, ರೈತನಿಂದ ಗ್ರಾಹಕರನ್ನು ತಲುಪಲು ಹಲವು ಘಟ್ಟಗಳನ್ನು ದಾಟಬೇಕು. ರೈತರು ತಮ್ಮ ಮಾಲನ್ನು ಬೇರೆ ಎಲ್ಲೂ ಮಾರುವಂತಿಲ್ಲ. ಎ.ಪಿ.ಎಂ.ಸಿ ಮಾರುಕಟ್ಟೆಗೇ ಬರಬೇಕು. ಅಲ್ಲಿ ಈಗ ಪಟ್ಟಭದ್ರ ಆಸಕ್ತ ಹಿತಗಳು ಭದ್ರವಾಗಿ ಬೇರೂರಿವೆ.
ಅಲ್ಲಿನ ಹರಾಜಿನಲ್ಲಿ ಸಿಗುವ ಹಣವಷ್ಟೇ ರೈತರದ್ದು. ಅವರಿಗೆ ಬೇರೆ ಯಾವ ಆದಾಯವೂ ಈ ಮೂಲದಿಂದ ಬರುವುದಿಲ್ಲ. ಹರಾಜಿನಲ್ಲಿ ಅವ್ಯವಹಾರಗಳು ಬೇಕಾದಷ್ಟಿವೆ. ಅನಂತರ ಮಾರುಕಟ್ಟೆಯಲ್ಲಿ ಮಾಲು ಕೊಂಡ ದಲ್ಲಾಳಿಗಳು ಸಗಟು ವ್ಯಾಪಾರಿಗಳಿಗೆ ಅದನ್ನು ಮಾರುತ್ತಾರೆ. ಸಗಟು ವ್ಯಾಪಾರಿಗಳು ಅದನ್ನು ಬೇರೆ ಕಡೆಗೆ ಕೊಂಡೊಯ್ದು ಪೇಟೆಗಳಲ್ಲಿ ಹರಾಜಿಗೆ ಇಡುತ್ತಾರೆ. ಆ ಹರಾಜಿನಲ್ಲಿ ಮಾಲು ಕೊಂಡವರು ಚಿಲ್ಲರೆ ವ್ಯಾಪಾರಿಗಳು, ತಳ್ಳುಗಾಡಿಗಳಲ್ಲಿ ಮಾರುವವರಿಗೆ ಮಾರುತ್ತಾರೆ. ಇಲ್ಲಿ ಪ್ರತಿಯೊಂದು ಹಂತದಲ್ಲೂ ಶೇಕಡಾವಾರು ಲೆಕ್ಕದಲ್ಲಿ ಬೆಲೆ ಏರುತ್ತಲೇ ಹೋಗುತ್ತದೆ. ಕೇಂದ್ರದ ಉದ್ದೇಶ ಈಗಿನ ಹಲವು ಹಂತಗಳ ಮಾರಾಟದ ಸರಪಣಿಯ ಸ್ಥಾನದಲ್ಲಿ ಎರಡು ಅಥವಾ ಮೂರು ಹಂತಗಳಲ್ಲಿ ಮಾರಾಟದ ವ್ಯವಸ್ಥೆಯನ್ನು ರೂಪಿಸುವುದು.
ವ್ಯಾಪಾರಿಗಳು ನೇರವಾಗಿ ರೈತರಿಂದಲೇ ಮಾಲು ಕೊಳ್ಳುವುದರಿಂದ ರೈತರಿಗೂ ಹೆಚ್ಚು ಬೆಲೆ ಸಿಗುವುದೂ ಸಾಧ್ಯ. ವ್ಯಾಪಾರಿಗಳಿಗೂ ಕಿರುಕುಳ ತಪ್ಪುತ್ತದೆ. ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಯುವುದರಿಂದ ಸಾರಿಗೆಯ ಸಮಯ ಹಾಗೂ ವೆಚ್ಚವೂ ಕಡಿಮೆಯಾಗುತ್ತದೆ. ಮೂರು ಕೈ ದಾಟಿದ ಹಣ್ಣು- ತರಕಾರಿಯನ್ನು ಗ್ರಾಹಕ ಕೊಳ್ಳಬಹುದು.
ತಮಿಳುನಾಡು ಸರ್ಕಾರ ಈ ವ್ಯವಸ್ಥೆಯನ್ನು ವಿರೋಧಿಸಿದೆ. ಅದಕ್ಕೆ ಅದು ಕೊಟ್ಟಿರುವ ಕಾರಣ ಎಂದರೆ ಕಾಲಕ್ರಮದಲ್ಲಿ ರೈತರು ದೊಡ್ಡ ವ್ಯಾಪಾರಿಗಳ ಸಾಲದ ಬಲೆಯಲ್ಲಿ ಸಿಕ್ಕಿಬೀಳುತ್ತಾರೆ ಎನ್ನುವುದೇ. ತಮಿಳುನಾಡು ಸರ್ಕಾರ, ರೈತರಿಗೆ ನೀಡಲು ಸಿದ್ಧವಾಗಿರುವ ಒಂದೇ ಒಂದು ವಿನಾಯಿತಿ ಎಂದರೆ ಎಪಿಎಂಸಿ ಆವರಣದಲ್ಲೇ ಒಂದು ನಿರ್ದಿಷ್ಟವಾದ ಜಾಗವನ್ನು ಗೊತ್ತುಪಡಿಸಿ, ಅಲ್ಲಿ ರೈತರು ಗ್ರಾಹಕರಿಗೆ ನೇರವಾಗಿ ಮಾಲನ್ನು ಮಾರಬಹುದು ಎನ್ನುವುದು. ಅಂದರೆ ಒಂದೇ ಕಡೆ ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆ ಹಾಗೂ ಅನಿಯಂತ್ರಿತ ವ್ಯಾಪಾರದ ವ್ಯವಸ್ಥೆಯೂ ಇರುತ್ತದೆ. ತಮಿಳುನಾಡಿನಲ್ಲಿ ಪರಿಸ್ಥಿತಿ ಏನಾದರೂ ಇರಲಿ. ಈಗಾಗಲೇ ಇಂತಹ ವ್ಯವಸ್ಥೆಯನ್ನು ಕರ್ನಾಟಕದ ವ್ಯಾಪಾರಿಗಳು ವಿರೋಧಿಸಿದ್ದಾರೆ. ರೈತರಿಗೆಂದು ಮೀಸಲಾಗಿಟ್ಟ ಸ್ಥಳವನ್ನು ವ್ಯಾಪಾರಿಗಳೇ ತಮ್ಮ ಬಲವನ್ನು ಪ್ರದರ್ಶಿಸಿ ಆಕ್ರಮಿಸಿಕೊಳ್ಳುವುದು ಸಾಧ್ಯವಾದಾಗ ಆ ವ್ಯವಸ್ಥೆಯಿಂದ ರೈತರಿಗೂ ತೊಂದರೆ, ವ್ಯಾಪಾರಸ್ಥರಿಗೂ ತೊಂದರೆ. ಇಲ್ಲಿ ಭ್ರಷ್ಟಾಚಾರಕ್ಕೂ ಆಸ್ಪದವಿದೆ ಎನ್ನುವುದೇ ಅವರ ವಾದ. ಈ ವಾದ- ವಿವಾದದಲ್ಲೇ ಕಾಲಹರಣವಾಗಿದೆ. ಎ.ಪಿ.ಎಂ.ಸಿ. ಕಾಯಿದೆಯ ಮಾರ್ಪಾಟಿನ ವಿಚಾರ- ವಿವಾದ ಹಲವಾರು ವರ್ಷಗಳಿಂದಲೂ ಇದ್ದಿದ್ದೇ. ಮಾಜಿ ಹಣಕಾಸು ಮಂತ್ರಿ ಪಿ. ಚಿದಂಬರಮ್ ಬದಲಾವಣೆಗೆ ಒಂದು ರೀತಿಯಲ್ಲಿ ಮೂರು ವರ್ಷಗಳ ಕಾಲ ಭಗೀರಥ ಪ್ರಯತ್ನವನ್ನೇ ನಡೆಸಿದರೂ ಅವರಿಗೆ ಯಶಸ್ಸು ಸಿಗಲಿಲ್ಲ.
ಈ ವಿವಾದದಲ್ಲಿ ಪ್ರಧಾನ ಪಾತ್ರಧಾರಿಯಾಗಬೇಕಾದ್ದು ರೈತ ಸಮುದಾಯವೇ. ಆದರೆ ಇದುವರೆಗೆ ರೈತ ಪ್ರತಿನಿಧಿಗಳ ಪರವಾಗಿ ಯಾರೂ ಏನನ್ನೂ ಹೇಳಿದಂತಿಲ್ಲ. ಒಂದು ವೇಳೆ ರೈತರ ಪರವಾಗಿ ಸಮಗ್ರ ಸ್ವರೂಪದ ಅಭಿಪ್ರಾಯ ಪ್ರಕಟವಾಗಿದ್ದರೆ ಅದಕ್ಕೆ ಪ್ರಚಾರ ಸಿಕ್ಕಿಲ್ಲ. ರಾಜ್ಯ ಸರ್ಕಾರ ತನ್ನ ನಿಲವನ್ನು ಪ್ರಕಟಿಸುವ ಮುನ್ನ, ರೈತ ಸಂಘಟನೆಗಳ ಅಭಿಪ್ರಾಯವನ್ನು ಕೇಳಬೇಕು. ಆ ಕೆಲಸ ಅಂತರಂಗದಲ್ಲೇ ಆದರೆ ಒಳಿತು.