ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅವಸರದ ಶಾಸನ ರಚನೆ ರಾಜ್ಯಕ್ಕೆ ಶೋಭೆಯಲ್ಲ

Srinivasa Murthy VN
Updated On : 30 Jul 2014, 12:14 pm

ವಿಧಾನಮಂಡಲದ ಅಧಿವೇಶನ ಬುಧವಾರವೂ ನಡೆಯಲಿಕ್ಕೆ ಅವಕಾಶವಿದ್ದರೂ, ವಿಪರೀತ ಗೊಂದಲ, ಅಬ್ಬರದ ಆವುಟಗಳ ನಡುವೆಯೇ ಸೋಮವಾರ ಕೆಲವೇ ನಿಮಿಷಗಳಲ್ಲಿ ಹತ್ತು ವಿಧೇಯಕಗಳನ್ನು ವಿಧಾನಸಭೆ ಅಂಗೀಕರಿಸಿದ್ದು ರಾಜ್ಯಕ್ಕೆ ಶೋಭೆ ತರುವ ವಿಚಾರವಲ್ಲ.
ಅದರಲ್ಲೂ ಬಜೆಟ್ ಅಂಗೀಕಾರದ ಅಂತಿಮ ಘಟ್ಟವಾದ ಧನ ವಿನಿಯೋಗ ವಿಧೇಯಕಗಳು ವಿತ್ತಮಂತ್ರಿಯ ಮಾತೇ ಇಲ್ಲದೆ ಅಂಗೀಕಾರವಾಗುವುದೆಂದರೆ, ಇಲ್ಲಿ ವೈಧಾನಿಕ ವ್ಯವಸ್ಥೆಯಲ್ಲೇ ಏನೋ ದೋಷವಿದೆ ಎಂದು ಭಾವಿಸಬಹುದು.
ವಿತ್ತೀಯ ವ್ಯವಹಾರಕ್ಕೆ ಸಂಬಂಧಿಸಿದ ವಿಧೇಯಕಗಳನ್ನು (ವಾರ್ಷಿಕ ಬಜೆಟ್ ಹಾಗೂ ಪೂರಕ ಬೇಡಿಕೆಗಳಿಗೆ ಸಂಬಂಧಿಸಿದ ವಿಧೇಯಕ) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (ಅವರೇ ವಿತ್ತಮಂತ್ರಿಯೂ ಹೌದು) ಅವರು ಪ್ರಾಸ್ತಾವಿಕವಾಗಿಯಾದರೂ ಮಾತನಾಡುವುದಕ್ಕೆ ಅವಕಾಶವೇ ಸಿಗಲಿಲ್ಲ. ಅವರು ಬೇರೆ ಮಾರ್ಗ ಕಾಣದೇ ವಿಧೇಯಕಗಳ ಮಂಡನೆಯಾಯಿತೆಂದು ಭಾವಿಸಬೇಕೆಂದು ಹೇಳಿದ್ದೇ ಸಾಕಾಯಿತು.
ವಿಧಾನ ಮಂಡಲ ಅಂಗೀಕರಿಸಿದ ಹಲವು ವಿಧೇಯಕಗಳು ರಾಜ್ಯದ ಜನಜೀವನದ ಮೇಲೆ, ಕಾನೂನು ಪಾಲನೆ ವ್ಯವಸ್ಥೆಯ ವಿಚಾರದಲ್ಲಿ ಹಾಗೂ ವ್ಯಕ್ತಿ ಸ್ವಾಂತ್ರ್ಯಕ್ಕೆ ಚ್ಯುತಿ ಬರುವುದೇನೋ ಎನ್ನುವ ಅಪಾಯದ ಗಂಟೆಯನ್ನು ಬಾರಿಸುವಂತೆ ಆಗಿದೆಯೇನೋ ಎನ್ನುವ ಅನುಮಾನಕ್ಕೆ ಈಗ ಆಸ್ಪದವಾಗಿದೆ.
ಒಂದು ರೀತಿಯಲ್ಲಿ ಇಡೀ ಅಧಿವೇಶನದ ಕಾರ್ಯಕ್ರಮ, ಸಾಧನೆ - ಸೋಲುಗಳ ವಿಮರ್ಶೆಯ ಹಿನ್ನೆಲೆಯಲ್ಲಿ ಗಮನಿಸಿದರೆ, ಈಗ ತಾನೇ ಮುಗಿದ ವಿಧಾನಸಭೆ ಅಧಿವೇಶನ ಅತ್ಯಾಚಾರದ ಹಲವು ಮುಖಗಳ ವಿಮರ್ಶೆಯ ಅಧಿವೇಶನವಾಗಿ ಪರಿವರ್ತನೆಯಾಗಿತ್ತು. ಪಕ್ಷಭೇದವಿಲ್ಲದೇ ಸದಸ್ಯರು ಅತ್ಯಾಚಾರಿಗಳ ವಿಚಾರದಲ್ಲಿ ಪ್ರಕಟಿಸಿದ ಆಕ್ರೋಶವನ್ನು ಗಮನಿಸಿ, ಎಲ್ಲ ಬಗೆಯ ಲೈಂಗಿಕ ಅಪರಾಧಗಳನ್ನು ಗೂಂಡಾ ಕಾಯಿದೆಯಲ್ಲಿ ಅಳವಡಿಸಲಾಗಿದೆ. ಈ ವಿಚಾರದಲ್ಲಿ ಚರ್ಚೆಯೇ ಆಗಲಿಲ್ಲ. ಸರ್ಕಾರದ ಪರವಾಗಿ ಸಚಿವರು ಏನನ್ನೂ ಹೇಳಿಲ್ಲ. "ಲೈಂಗಿಕ ಅಪರಾಧ" ಪದದ ಅರ್ಥ ವಿವರಣೆಯೂ ಯಾರ ಗಮನಕ್ಕೂ ಬಂದಂತಿಲ್ಲ.
ಇವು ಭಾರತೀಯ ದಂಡ ಸಂಹಿತೆಯ ವಿಧಿಗಳಿಗೆ ತಂದಿರುವ ಬದಲಾವಣೆಗಳು. ಈ ವಿಧೇಯಕಗಳು ಕಾಯಿದೆಯಾಗಿ ಪರಿವರ್ತನೆಯಾದ ಅನಂತರ, ಆರೋಪಿಗಳನ್ನು ವಾರಂಟ್ ಇಲ್ಲದೆ ಬಂಧಿಸಿ, ಒಂದು ವರ್ಷದ ಅವಧಿಯವರೆಗೂ ವಿಚಾರಣೆ ಇಲ್ಲದೇ ಜೈಲಿಗೆ ಹಾಕುವ ಅಧಿಕಾರ ಪೊಲೀಸರಿಗೆ ಸಿಗುತ್ತದೆ. ಅಂತಹ ಗಂಭೀರವಾದ, ವ್ಯಕ್ತಿಸ್ವಾತಂತ್ರ್ಯದ ಹರಣಕ್ಕೆ ಅವಕಾಶ ಮಾಡಿಕೊಡಬಲ್ಲ ವಿಧೇಯಕವನ್ನು ಸದನ ಚರ್ಚೆ ಇಲ್ಲದೆ ಅಂಗೀಕರಿಸಿದೆ, ಎಂದು ಪ್ರಕಟಿಸಲಾಗಿದೆ.
ಗೂಂಡಾ ಕಾಯಿದೆಯ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಗಳಿಗೆ ಕಾದಿರಿಸಿದ ಸಾಹಿತ್ಯದ ಹಕ್ಕುಗಳ ಕಾಯಿದೆಯ (ಕಾಪಿರೈಟ್) ಉಲ್ಲಂಘನೆಯೂ ಸೇರಿದೆ. ಮರಳು ಕಳ್ಳಸಾಗಾಣಿಕೆಯೂ ಇದೆ. ಇಷ್ಟೊಂದು ಅಧಿಕಾರವನ್ನು ಪೊಲೀಸರಿಗೆ ಕೊಟ್ಟಾಗ, ಅದು ದುರುಪಯೋಗವಾಗದಂತೆ ಕೆಲವು ರಕ್ಷಣಾ ವಿಧಿಗಳನ್ನು ಸೇರಿಸುವುದು ವಾಡಿಕೆ. ಈ ವಿಧೇಯಕದಲ್ಲಿ ಅಂತಹ ರಕ್ಷಣೆ ಇದ್ದರೆ, ಅದಕ್ಕೆ ಪ್ರಚಾರ ಸಿಕ್ಕಿಲ್ಲ. ಇದು ಅವಸರದ ಶಾಸನದ ಪರಿಣಾಮ. ಸೋಮವಾರ ಅಂಗೀಕೃತವಾದ ಭೂ ಸುಧಾರಣೆ ಕಾಯಿದೆಯ ಬದಲಾವಣೆಯ ವಿಚಾರದಲ್ಲೂ ಅಷ್ಟೇ. ವಿವರಗಳು ಲಭ್ಯವಿಲ್ಲ. ಭೂ ಸುಧಾರಣೆಯ ಮೂಲ ಕಾಯಿದೆಗೆ ರಾಷ್ಟ್ರಪತಿಯ ಅನುಮೋದನೆ ಸಿಕ್ಕಿದೆ. ಅದರ ಬದಲಾವಣೆಗೆ ಅನುಮತಿ ಬೇಡವೇ?
ನಿಜ. ಹಿಂದೆಯೂ ಇಂತಹ ಅವಸರದ ಕಾರ್ಯಕಲಾಪ, ಶಾಸನ ರಚನೆ ಆಗಿಲ್ಲ ಎಂದೇನೂ ಅಲ್ಲ. ಹಲವಾರು ವರ್ಷಗಳಿಂದಲೂ ಸಂಸದೀಯ ಸದನಗಳ ಕಾರ್ಯಕಲಾಪ ಗೊಂದಲದಲ್ಲೇ ಮುಳುಗಿದ್ದರಿಂದ ಶಾಸನ ರಚನೆಯ ಹಿಂದೆ ವ್ಯಾಪಕವಾದ ಅಧ್ಯಯನ, ಅನುಭವ ಆಧರಿತ ಚರ್ಚೆ, ಮುಕ್ತ ವಿಚಾರ ವಿನಿಮಯ ಅಗತ್ಯ. ಗೊಂದಲದ ನಡುವೆಯೇ ಅಂಗೀಕಾರವಾದ ಹಲವು ವಿಧೇಯಕಗಳಿಗೆ (ಅದು ಈಗ ಕಾಯಿದೆಗಳು) ಈಗ ಬಂದಿರುವ ಗತಿಯನ್ನು ನೋಡಿದರೆ ಇದೆಲ್ಲ ವೃಥಾಶ್ರಮದಂತೆಯೇ ಆದೀತು.
ಉದಾಹರಣೆಗೆ ಬೆಳಗಾವಿಯಲ್ಲಿ ನಡೆದ ಒಂದು ಅಧಿವೇಶನದಲ್ಲಿ ಇದೇ ರೀತಿ ಗೊಂದಲದಲ್ಲಿ, ಚರ್ಚೆಯೇ ಇಲ್ಲದೆ, ಅಂಗೀಕಾರವಾದ ವಿಧೇಯಕಗಳಲ್ಲಿ ರಾಜ್ಯದ ಪೇಟೆ - ಪಟ್ಟಣಗಳ (ಅದರಲ್ಲಿ ಬೆಂಗಳೂರೂ ಸೇರಿದೆ) ಅಕ್ರಮ ಕಟ್ಟಡಗಳನ್ನೆಲ್ಲ ಸಕ್ರಮಗೊಳಿಸುವ ವಿಧೇಯಕವೂ ಒಂದು. ಅದು ಕಾಯಿದೆಯೂ ಆಯಿತು. ನ್ಯಾಯಾಲಯದಲ್ಲಿ ಬಿದ್ದು ಹೋಯಿತು.
ಇದುವರೆಗೂ ಆ ಸಮಸ್ಯೆ ಬಗೆಹರಿದಿಲ್ಲ. ಇಂತಹ ಪರಿಣಾಮದ ಸಾಧ್ಯತೆ ಇರುವ ಅಂಶಗಳು ಈಗ ಆತುರದಲ್ಲಿ ಅಂಗೀಕಾರವಾದ ವಿಧೇಯಕಗಳಲ್ಲೂ ಇರಬಹುದು. ಅದನ್ನು ಪರಿಶೀಲಿಸುವವರು ಯಾರು?
ಅಧಿವೇಶನದ ಕೊನೆಯ ದಿನಗಳ ಕಾರ್ಯಕಲಾಪ ಆಯತಪ್ಪಿತು. ಅದಕ್ಕೆ ಕಾರಣ ಬೆಂಗಳೂರಿನ ಅರ್ಕಾವತಿ ಬಡಾವಣೆಗೆಂದು ವಶಪಡಿಸಿಕೊಳ್ಳಬೇಕಾಗಿದ್ದ ಭೂಮಿಯಲ್ಲಿ 541 ಎಕರೆಗಳಷ್ಟು ಭೂಮಿಯನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟದ್ದು. ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಸಿಬಿಐ ತನಿಖೆಯ ಒತ್ತಾಯವನ್ನು ತಳ್ಳಿಹಾಕಿ ನ್ಯಾಯಾಂಗ ತನಿಖೆಗೆ ಆದೇಶ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅದನ್ನು ಪ್ರಶ್ನಿಸಲೂ ಸದನಕ್ಕೆ ಅವಕಾಶ ಸಿಗದೇ ಹೋಗಿದ್ದು ದುರಂತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement