ಶುದ್ಧ ದಕ್ಷ ಆಡಳಿತ ಸುಧಾರಣೆ: ಮೇಲಿನಿಂದಲೇ ಆರಂಭ
ಪ್ರಧಾನಿ ನರೇಂದ್ರ ಮೋದಿ ಅವರನ್ನು "ನಿರ್ಧಾರಕ ನಾಯಕ" ಎಂದು ಬಣ್ಣಿಸುವ ಸಂಪ್ರದಾಯ ಗುಜರಾತ್ನಲ್ಲಿ ಹಳೆಯದು. ಆ ಬಣ್ಣನೆ ಈಗ ಅಖಿಲ ಭಾರತ ವ್ಯಾಪ್ತಿಯನ್ನು ಪಡೆಯಲಿದೆ. ಒಮ್ಮೆ ನಿರ್ಧಾರ ಕೈಗೊಂಡ ಅನಂತರ ತಡಮಾಡದೇ ಅದನ್ನು ಜಾರಿಗೆ ತರುವ "ನಿರ್ಧಾರದ ಮನೋಧರ್ಮ"ವನ್ನು ಮೋದಿ ಅವರು ಶನಿವಾರ ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಪ್ರಕಟಿಸಿದ್ದಾರೆ.
ಸಂಕೀರ್ಣವಾದ ಸಮಸ್ಯೆಗಳು, ವಿವಾದಾಸ್ಪದ ವಿಷಯಗಳಲ್ಲಿ ಸರ್ಕಾರದ ಅಂತಿಮ ನಿರ್ಧಾರವನ್ನು ರೂಪಿಸುವ ಹೊಣೆಗಾರಿಕೆಯನ್ನು ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ "ಮಂತ್ರಿಮಂಡಲದ ಗುಂಪುಗಳಿಗೆ" ವರ್ಗಾಯಿಸಿತ್ತು.
ಇಂತಹ ಕ್ರಮದಿಂದ ನೀತಿ ನಿರೂಪಣೆಯ ಹೊಣೆಯನ್ನು ಹೊತ್ತಿರುವ ಮಂತ್ರಾಲಯದ ಅಧಿಕಾರ ಮೊಟಕಾಗುತ್ತಿದ್ದದ್ದು ಅಷ್ಟೇ ಅಲ್ಲ, ಒಂದು ರೀತಿಯಲ್ಲಿ ಮಂತ್ರಿಮಂಡಲದ ಹೊಣೆಗಾರಿಕೆಯ ಸ್ವರೂಪವೇ ಬದಲಾಗಿತ್ತು. ಈ ಸಂಪ್ರದಾಯದಿಂದ ಅನೇಕ ಸಮಸ್ಯೆಗಳು ನೆನೆಗುದಿಗೆ ಬಿದ್ದವು. ಕೇಂದ್ರ ಸಂಪುಟದ ನಿರ್ಧಾರಗಳಲ್ಲಿ ಬಹುತೇಕವಾಗಿ ವಿಳಂಬ ರಾಕ್ಷಸನ ಹಾವಳಿ ಕಂಡು ಬಂದಿತ್ತು. ಆಡಳಿತ ವ್ಯವಸ್ಥೆಯಲ್ಲಿ ಬಿಗಿಯೂ ತಪ್ಪಿತ್ತು. ಆ ಪದ್ಧತಿಯನ್ನೇ ಶನಿವಾರ ನರೇಂದ್ರ ಮೋದಿ ಅವರು ಆಮೂಲಾಗ್ರವಾಗಿ ಬದಲಾಯಿಸಿ, ಶುದ್ಧ-ದಕ್ಷ ಆಡಳಿತದ ಸುಧಾರಣೆಯ ಕ್ರಮವನ್ನು ಸಚಿವ ಸಂಪುಟದಂತಹ ಅತ್ಯಂತ ಮೇಲ್ಮಟ್ಟ ಸಂಸ್ಥೆಯಿಂದಲೇ ಆರಂಭಿಸಿದ್ದಾರೆ.
ಇನ್ನು ಮುಂದೆ, ಪ್ರಮುಖ ವಿಚಾರಗಳ ನೀತಿನಿರೂಪಣೆಯ ಹೊಣೆಗಾರಿಕೆ ಸಂಪೂರ್ಣವಾಗಿ ಸಂಬಂಧಪಟ್ಟ ಮಂತ್ರಾಲಯದ್ದೇ. ಅಲ್ಲಿಂದಲೇ ಅದು ನೇರವಾಗಿ ಸಚಿವ ಸಂಪುಟದ ಪರಿಶೀಲನೆಗೆ ಹೋಗಬೇಕು. ನಡುವೆ ಬೇರೆ ಯಾವ ಸಮಿತಿಗಳ ಅಡ್ಡಿಯೂ ಇರುವುದಿಲ್ಲ. ವಿಳಂಬವನ್ನು ತಪ್ಪಿಸಲು ಇದು ರಾಜಮಾರ್ಗ. ಈಗ ಇಪ್ಪತ್ತೊಂದು ಸಚಿವರ ಗುಂಪುಗಳು ಹಾಗೂ ಒಂಬತ್ತು ಸಂಪುಟದ ಅಧಿಕಾರ ಪಡೆದ ಸಚಿವರ ಸಮಿತಿಗಳು ಅಸ್ತಿತ್ವದಲ್ಲಿವೆ. ಆ ಸಮಿತಿಗಳ ಸದಸ್ಯರಿಲ್ಲ. ಸರ್ಕಾರ ಬದಲಾಗಿದೆ. ಇನ್ನು ಮುಂದೆ ಆ ಸಮಿತಿಗಳು ಮಾಡಬೇಕಾಗಿದ್ದ ಕೆಲಸವನ್ನು ಸಂಬಂಧಪಟ್ಟ ಮಂತ್ರಾಲಯಗಳೇ ಮಾಡಬೇಕು. ಈ ಕ್ರಮದಿಂದ ನಿರ್ಧಾರಕ್ಕೆ ಹೊಣೆಗಾರಿಕೆ ಹಲವು ಮಂತ್ರಿಗಳ ನಡುವೆ ಹಂಚಿಹೋಗುವುದರ ಬದಲಾಗಿ, ನಿರ್ದಿಷ್ಟವಾದ ಮಂತ್ರಾಲಯದ ಮೇಲೇ ಬೀಳುವುದರಿಂದ ಅದರ ದಕ್ಷತೆಯೂ ಹೆಚ್ಚಬೇಕು, ಹೊಣೆಗಾರಿಕೆಯೂ ಹೆಚ್ಚಬೇಕು. ಅದು ಒಳ್ಳೆಯ ಆಡಳಿತದ ಲಕ್ಷಣ.
ನಿಜ. ಈ ಸಚಿವರ, ಸಾಮೂಹಿಕ ಸಮಾಲೋಚನೆಯ ಪದ್ಧತಿಯನ್ನು ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ಜಾರಿಗೆ ತಂದಿದ್ದು ವಾಜಪೇಯಿ ಅವರೇ. ಅವರಿಗೆ ಆಗ ನಿರ್ದಿಷ್ಟವಾದ ಉದ್ದೇಶವಿತ್ತು. ಆದರೆ ಮನಮೋಹನ ಸಿಂಗ್ ಅವರ ಸರ್ಕಾರ ಅಸ್ತಿತ್ವದಲ್ಲಿ ಬಂದ ಅನಂತರ ಈ ಪದ್ಧತಿಯನ್ನು ನಿರ್ಧಾರಗಳನ್ನು ಅನಿರ್ದಿಷ್ಟ ಅವಧಿಗೆ ಮುಂದಕ್ಕೆ ಹಾಕಲು ಬಳಸಲಾಯಿತು. ಮಂತ್ರಿಗಳು ಜವಾಬ್ದಾರಿಯಿಂದ ನುಣುಚಿಕೊಂಡರು.
ಮನಮೋಹನ ಸಿಂಗ್ ಅವರ ಕಾಲದಲ್ಲಿ ಎ.ಕೆ. ಆಂಟನಿ ಹಲವು "ಸಚಿವ ಸಮಿತಿಗಳ" ಅಧ್ಯಕ್ಷರಾಗಿ ನೇಮಕಗೊಂಡಿದ್ದರಿಂದ ಅವರು ಯಾವ ಸಮಿತಿಗೂ ಅಗತ್ಯವಿದ್ದಷ್ಟು ಗಮನ ಕೊಡುವುದು ಅಸಾಧ್ಯವಾಯಿತು. ವಾಸ್ತವದಲ್ಲಿ ಆಗ ಆಂಟನಿ, ಪ್ರಣಬ್ ಮುಖರ್ಜಿ ಅವರು ವಸ್ತುಶಃ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿಯ ಅಧಿಕಾರವನ್ನು ಪಡೆದಂತೆಯೇ ಆಗಿತ್ತು. ಮುಂದೆ ಚಿದಂಬರಮ್ ಆ ಸ್ಥಾನ ಪಡೆದರು. ಈ ಪರಿಸ್ಥಿತಿಯನ್ನು 'ಏಕ್ದಮ್" ಬದಲಾಯಿಸುವ ನಿರ್ಧಾರವನ್ನು ನರೇಂದ್ರ ಮೋದಿ ಅವರು ಪ್ರಕಟಿಸಿದ್ದನ್ನು ಮೆಚ್ಚಲೇಬೇಕು. ಆದರೆ ಸಮಿತಿಗಳ ಗೈರು ಹಾಜರಿಯಲ್ಲಿ ಮಂತ್ರಾಲಯಗಳಿಗೆ ನಿರ್ಧಾರವನ್ನು ಪ್ರಕಟಿಸುವುದು ಕಷ್ಟವಾದರೆ ಏನು ಮಾಡಬೇಕು? ಯಾರ ಸಲಹೆ ಪಡೆಯಬೇಕು?
ಆ ಪ್ರಶ್ನೆಗಳಿಗೂ ಪ್ರಧಾನಿ ಕಾರ್ಯಾಲಯದ ಆದೇಶದಲ್ಲಿ ಉತ್ತರವಿದೆ. ಅಂತಹ ಎಲ್ಲ ಪ್ರಕರಣಗಳಲ್ಲೂ ಪ್ರಧಾನಿ ಕಾರ್ಯಾಲಯ, ಮಂತ್ರಾಲಯ ಒಂದು ಸೂಕ್ತ ನಿರ್ಧಾರಕ್ಕೆ ಬರುವುದಕ್ಕೆ ನೆರವು ನೀಡುತ್ತದೆ. ನೂರಾರು ದಿನಗಳಲ್ಲಿ ಈಗಾಗಲೇ ಪ್ರಚಾರ ಪಡೆದ ಹತ್ತಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತರುವುದರಲ್ಲಿ, ಅನೇಕ ವಿಷಯಗಳು ಸಚಿವರ ಸಮಿತಿಗಳಲ್ಲಿ ಸಿಕ್ಕಿ ಬಿದ್ದಿರುವುದರಿಂದ, ಅಕ್ಕಿ ಬರುವುದನ್ನು ಈಗ ತಪ್ಪಿಸಲಾಗಿದೆ.
ಮಂತ್ರಾಲಯಗಳಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಪರಮಾಧಿಕಾರವನ್ನು ಮತ್ತೆ ತಂದುಕೊಟ್ಟಿರುವ ಪ್ರಧಾನಿ ಅಭಿನಂದನೆಗೆ ಅರ್ಹರು. ಅವರು ಮಂತ್ರಾಲಯಗಳಲ್ಲಿ ಇಟ್ಟಿರುವ ವಿಶ್ವಾಸವನ್ನು ಸಂಬಂಧಪಟ್ಟ ಮಂತ್ರಿಗಳು ಉಳಿಸಿಕೊಳ್ಳಬೇಕು. ಸಮಿತಿಗಳ ಸಂಸ್ಕೃತಿಯಿಂದ ಹೊರಬಿದ್ದಿರುವ ಮಂತ್ರಿಗಳು, ಸಿಬ್ಬಂದಿಗೆ ಜವಾಬ್ದಾರಿಯನ್ನು ಹೊರುವ ರಾಜಕೀಯ ಸಂಕಲ್ಪ ಶಕ್ತಿ ಈಗ ಬೇಕಾಗಿದೆ. ವಿಳಂಬಕ್ಕೆ ಇನ್ನು ನೆಪಗಳೇ ಇರುವುದಿಲ್ಲ.