ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕಾಂಗ್ರೆಸ್: ಸೋಲಿನ ತಳಮಳ

Srinivasa Murthy VN
Updated On : 3 Jun 2014, 1:08 am

ರಾಜಸ್ಥಾನದ ಕಾಂಗ್ರೆಸ್ ಶಾಸಕ ಭನ್ವರಿ ಲಾಲ್, ಅಲ್ಲಿನ ಕಾಂಗ್ರೆಸ್ಸಿನ ಅತ್ಯಂತ ಹೀನಾಯವಾದ ಸೋಲಿಗೆ ಕಾರಣವಾದವರಲ್ಲಿ ರಾಹುಲ ಗಾಂಧಿಯವರ ಹೆಸರನ್ನು ಸೇರಿಸಿದ್ದು ಪಕ್ಷದ ವರಿಷ್ಠರನ್ನು ಕಂಗೆಡಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಅಲ್ಲಿ ಕಾಂಗ್ರೆಸ್ ಸೋತಿರುವುದು ನಿಜ. 25 ಕ್ಷೇತ್ರಗಳಲ್ಲಿ ಒಂದು ಸ್ಥಾನವೂ ಕಾಂಗ್ರೆಸ್ಸಿಗೆ ಬರಲಿಲ್ಲ. ಸಹಜವಾಗಿಯೇ ಅಲ್ಲಿನ ಕಾಂಗ್ರೆಸ್ಸಿಗರಲ್ಲಿ ಅವರ ಭವಿಷ್ಯ ಕುರಿತಂತೆ ಆತಂಕ ಮೂಡಿದೆ. ಅಂತಹ ವಾತಾವರಣದಲ್ಲಿ ರಾಜಸ್ಥಾನದ ಪ್ರದೇಶ ಕಾಂಗ್ರೆಸ್ ನಾಯಕರೇ ಆಗಲಿ ಅಥವಾ ದೆಹಲಿಯ ವರಿಷ್ಠರೇ ಆಗಲಿ ಯಾರೂ ಆ ಸೋಲಿಗೆ ಕಾರಣವೇನು ಎನ್ನುವ ಪ್ರಶ್ನೆಯನ್ನೇ ಕೇಳಿಲ್ಲ ಎನ್ನುವ ದೂರು ಬಹುತೇಕ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ. ಅದನ್ನು ಪ್ರಕಟಿಸುವ ವಿಧಾನ ಹೆಚ್ಚು ಕಡಿಮೆಯಾಗಿರಬಹುದು. ಹಲವರು ಮರ್ಯಾದೆಯಿಂದ ಮಾತನಾಡಿದ್ದರೆ, ಇನ್ನು ಕೆಲವರು ಜನರ ಆಡು ಮಾತನ್ನು ಬಳಸಿರಬಹುದು.
ಪ್ರಾಯಶಃ ಭನ್ವರಿ ಲಾಲ್ ಅದೇ ತಪ್ಪನ್ನು ಮಾಡಿರಬೇಕು. ಅವರನ್ನು ತತ್‌ಕ್ಷಣದಲ್ಲೇ ಪಕ್ಷದಿಂದ ವರಿಷ್ಠರು ಸಸ್ಪೆಂಡ್ ಮಾಡಿದ್ದಾರೆ. ಈ ವರ್ತನೆಗೆ ಏನು ಹೇಳಬೇಕು? ನಿಜ, ಅದು ಕಾಂಗ್ರೆಸ್ಸಿನ ಆಂತರಿಕವಾದ ವಿಚಾರ. ಆ ವಿಚಾರದಲ್ಲಿ ಕಾಂಗ್ರೆಸ್ಸಿಗರಲ್ಲದವರು ಮಾತಾಡುವಂತಿಲ್ಲ. ಆದರೆ ಕಾಂಗ್ರೆಸ್ ಕೇವಲ ಒಂದು ರಾಜಕೀಯ ಪಕ್ಷವಲ್ಲ. ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯ ಕಾಲ ಅದು ದೇಶದ ಜನರ ಪ್ರತಿನಿಧಿಯಂತೆ ಕೆಲಸ ಮಾಡಿದ್ದು ನಿಜ. ಅಂತಹ ಪಕ್ಷ ಸೋತಾಗ ಸಂಯಮದಿಂದ ವರ್ತಿಸಿದ್ದರೆ, ಪಕ್ಷದ ಪ್ರತಿಷ್ಠೆ ಉಳಿಯುತ್ತಿತ್ತೇನೋ.
ಕಾಂಗ್ರೆಸ್ಸಿನ ಸೋಲಿಗೆ ಕಾರಣಗಳನ್ನು ಪತ್ತೆ ಹಚ್ಚಿ, ಅದಕ್ಕೆ ಪ್ರಮುಖವಾಗಿ ಕಾರಣಕರ್ತರಾಗಿದ್ದವರನ್ನು ಗುರ್ತಿಸದೇ ಹೋದರೆ, ಅದು ಒಂದು ರಾಜಕೀಯ ಪಕ್ಷ ಎನಿಸಿಕೊಳ್ಳುವುದಿಲ್ಲ. ಈ ವೇಳೆಗಾಗಲೇ ವರಿಷ್ಠರು ಸೋಲಿನ ಕಾರಣಗಳನ್ನು ಕುರಿತ ತಮ್ಮ ಅನಿಸಿಕೆಗಳ ದಾಖಲೆಯನ್ನು ಸಿದ್ಧಪಡಿಸಬೇಕಾಗಿತ್ತು. ಇದು ಪಕ್ಷದ ಇತಿಹಾಸದಲ್ಲೇ ಅತ್ಯಂತ ದಾರುಣವಾದ ಸೋಲು.
ಈಗ ಕಾರ್ಯಕರ್ತರ ನೈತಿಕ ಸ್ಥೈರ್ಯ ಉಡುಗಿ ಹೋಗಿದೆ. ನಾಯಕರಲ್ಲೂ ತಳಮಳ ಮೂಡಿದೆ. ಇನ್ನು ಮುಂದೆ ಕಾಂಗ್ರೆಸ್ ನಾಯಕರು ಪ್ರತ್ಯಕ್ಷ ಚುನಾವಣೆ ಎಂದರೆ ಹೆದರುವ ಪರಿಸ್ಥಿತಿ ಬರಬಹುದು. ಈಗಾಗಲೇ ಕೆಲವು ಹಿರಿಯ ನಾಯಕರು ಸದ್ಯದ ಮಟ್ಟಿಗಾದರೂ ರಾಜಕೀಯದಿಂದ ದೂರವಿರಲು ಸಜ್ಜಾಗಿರುವಂತಿದೆ.
 ಮಾಜಿ ಸಚಿವ ಕಪಿಲ್ ಸಿಬಲ್ ತಮ್ಮ ವಕೀಲಿಯನ್ನು ಆರಂಭಿಸುವ ಸೂಚನೆ ನೀಡಿದ್ದಾರೆ. ಮತ್ತೊಬ್ಬ ಮಾಜಿ ಸಚಿವ ಸಲ್ಮಾನ ಖುರ್ಷಿದ್, ತಮ್ಮ ಅಂತರಂಗದ ಮಿತ್ರರ ಬಳಿ ರಾಜಕೀಯ ನಿವೃತ್ತಿಯನ್ನು ಬಯಸುವುದಾಗಿ ಹೇಳಿದ್ದಾರೆ. ಚಿದಂಬರಮ್ ಅವರು ಒಂದು ಕಡೆ ರಾಜ್ಯ ಸಭೆಯ ಸದಸ್ಯತ್ವ ಪಡೆಯಲು ಪ್ರಯತ್ನಿಸುತ್ತಿದ್ದರೂ, ಇನ್ನೊಂದು ಕಡೆ ಬೇರೆ ರೀತಿಯ ಬೌದ್ಧಿಕ ಚಟುವಟಿಕೆಯಲ್ಲಿ ತೊಡಗಲು ಸಿದ್ಧರಾಗುತ್ತಿರುವಂತಿದೆ.
ಹೀಗೆ ನಾಯಕರೇ ಪಕ್ಷವನ್ನು ತೊರೆದರೆ ಕಾರ್ಯಕರ್ತರ ಗತಿ ಏನು? ಇದು ಕಾಂಗ್ರೆಸ್ ನಾಯಕತ್ವದ ಅಗ್ನಿ ಪರೀಕ್ಷೆಯ ಸಮಯ. ನಾಯಕರು ಪಕ್ಷದ ಅಂಗರಚನೆಯಲ್ಲಿ ಅಳವಡಿಸಲಾಗಿರುವ ಆಂತರಿಕ ಜನತಂತ್ರದ ಕಲ್ಪನೆಯನ್ನು ಕಾಯಾ ವಾಚಾ ಮನಸಾ ಎತ್ತಿ ಹಿಡಿಯಬೇಕು. ಪ್ರಾತಿನಿಧಿಕ ಸಮಿತಿಗಳ ಪ್ರಾಮುಖ್ಯ ಹಾಗೂ ಅಧಿಕಾರವನ್ನು ಗೌರವಿಸಬೇಕು. ಕೂಟಗಳ ದರ್ಬಾರಿಗೆ ಮಂಗಳ ಹಾಡಬೇಕು. ಇವೆಲ್ಲವೂ ಸಭೆಗಳಲ್ಲಿ ಆಗುವ ಕೆಲಸವಲ್ಲ. ನಾಯಕರೇ ದಾರಿ ತೋರಿಸಬೇಕು.
ಕಾಂಗ್ರೆಸ್ ಈಗ ಅಧಿಕಾರ ಕಳೆದುಕೊಂಡಿರಬಹುದು. ಆದರೆ ಅದಕ್ಕೊಂದು ಐತಿಹಾಸಿಕ ದಾಖಲೆ ಇದೆ. ಅದನ್ನು ವರಿಷ್ಠರು ಮರೆಯಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement