ತೆಲಂಗಾಣದ ಉದಯ
ಸಮಗ್ರ ಸ್ವರೂಪದ ರಾಜ್ಯಗಳ ಪುನಾರಚನೆಯ ಪ್ರಚಾರದ ಗೋಜು ಗೊಂದಲಗಳಿಲ್ಲದೇ ತೆಲಂಗಾಣ ರಾಜ್ಯ ಸೋಮವಾರ ಉದಯಿಸಿದೆ. ಆರು ದಶಕಗಳ ಪ್ರತ್ಯೇಕತಾ ಚಳವಳಿಗೆ ಈಗ ಮಾನ್ಯತೆ ಸಿಕ್ಕಿದೆ.
ಭಾಷೆಯನ್ನೇ ಆಧಾರವಾಗಿಟ್ಟುಕೊಂಡು ಮೊದಲು ರಚನೆಯಾದ ರಾಜ್ಯ ಆಂಧ್ರ. ಈಗ ಆ ಭಾಷೆಯ ಅಂಟಿನ ಶಕ್ತಿ ಕಡಿಮೆಯಾಗಿ, ತೆಲಂಗಾಣ- ಆಂಧ್ರಗಳ ನಡುವೆ ತೆಲುಗುನಾಡು ವಿಭಜನೆಯಾಗಿದೆ. ಅದು ಒಳ್ಳೆಯದೋ ಅಲ್ಲವೋ ಎನ್ನುವುದು ಆ ರಾಜ್ಯಗಳಲ್ಲಿ ಈಗ ಅಧಿಕಾರದ ಸೂತ್ರಗಳನ್ನು ಹಿಡಿದಿರುವ ನಾಯಕರ ವರ್ತನೆಯೇ ನಿರ್ಧರಿಸಬೇಕು. ಆಂಧ್ರಪ್ರದೇಶ ಇದುವರೆಗೆ ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯವಾಗಿತ್ತು. ಈಗ ಆ ಸ್ಥಾನವನ್ನು ಎರಡೂ ರಾಜ್ಯಗಳು ಕಳೆದುಕೊಂಡಿವೆ. ದೊಡ್ಡ ರಾಜ್ಯವಾದ ಆಂಧ್ರದ ಯೋಜನೆಗಳೂ ದೊಡ್ಡದು. ಈಗ ಆ ಆಸ್ತಿಯ ಹಂಚಿಕೆಯೇ ಒಂದು ವಿಶಿಷ್ಟ ಸಮಸ್ಯೆಯಾಗಬಹುದು.
ಪ್ರಮುಖವಾಗಿ ಆಂಧ್ರ- ತೆಲಂಗಾಣಗಳ ನಡುವೆ ಮೊದಲು ಬರುವುದು ನದಿ ನೀರಿನ ಹಂಚಿಕೆಯ ವಿಚಾರ. ಈಗ ತೆಲಂಗಾಣವೂ ಆ ವಿವಾದದಲ್ಲಿ ಪಾಲುದಾರ ರಾಜ್ಯವೇ. ಉಭಯ ರಾಜ್ಯಗಳ ನಾಯಕರು ಈಗಲಾದರೂ ಜಗಳವನ್ನು ನಿಲ್ಲಿಸಿ, ರಾಜ್ಯದ ಜನರ ಹಿತರಕ್ಷಣೆಗೆ ಮುಂದಾಗಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.