ತ್ಯಾಜ್ಯವಿಲೇವಾರಿ-ಹೀಗೊಂದು ಸಲಹೆ
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಗಣನೀಯ ಪ್ರಮಾಣದ ತ್ಯಾಜ್ಯ ವಿಲೇವಾರಿ ಒಂದು ಬೃಹತ್ ಸಮಸ್ಯೆಯಾಗಿದೆ. ಈ ತ್ಯಾಜ್ಯಗಳ ಪೈಕಿ ಕೆಡವಲಾದ ಕಟ್ಟಡಗಳ ಮಣ್ಣು, ಕಲ್ಲು, ಮರಳು ಹಾಗೂ ಕಬ್ಬಿಣ-ಮುಂತಾದವುಗಳ ಪುನರ್ ಬಳಕೆ ಸಾಧ್ಯವೆನಿಸುತ್ತದೆ. ಈ ಕಂಬಿಗಳನ್ನು ಉಪಯೋಗಿಸಿ ನ್ಯಾಯೋಚಿತ ವೆಚ್ಚದಲ್ಲಿ 2ಳ2ಳ2 ಅಡಿಗಳ ಸಿಮೆಂಟ್ ಪೆಟ್ಟಿಗೆ ತಯಾರಿಸಿ, ಇದರಲ್ಲಿ ಮೇಲ್ಕಂಡ ಕಟ್ಟಡದ ತ್ಯಾಜ್ಯಗಳನ್ನು ತುಂಬಿ ಸಿಮೆಂಟ್ನಿಂದ ಬಂದ್ ಮಾಡಿದಲ್ಲಿ, ಬಹು ಭಾರವಾದ ಇವುಗಳನ್ನು ಕೆರೆಗಳ ಪುನರುಜ್ಜೀವನ ಮಾಡುವಾಗ (ಇದೂ ಸಹ ಸರ್ಕಾರದ ಆದ್ಯ ಗಮನದಲ್ಲಿರುವ ಕಾರಣ) ಈ ಬ್ಲಾಕ್ಗಳನ್ನು ಉತ್ತಮ ತಳಪಾಯದ ಮೇಲೆ ಗೋಡೆಗಳನ್ನಾಗಿ ಉಪಯೋಗಿಸಬಹುದು ಅಥವಾ ಸಮುದ್ರದ ಹಿನ್ನೀರಿನ ರಭಸವನ್ನು ತಡೆಯಲು ತಡೆಗೋಡೆಯನ್ನಾಗಿಯೂ ಬಳಸಬಹುದು. ಇದರಿಂದ ಸ್ಥಳೀಯರಿಗೂ ಸಹ ಹೆಚ್ಚಿನ ಉದ್ಯೋಗಾವಕಾಶ ಲಭಿಸುತ್ತದೆ. ಇದನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಬಹುದಲ್ಲವೇ? ಇದರ ಅನುಷ್ಠಾನದ ಸಾಧ್ಯಾಸಾಧ್ಯತೆ ಬಗ್ಗೆ ತಜ್ಞರೂ ಸಹ ಹೆಚ್ಚಿನ ಬೆಳಕು ಚೆಲ್ಲಬಹುದು.
-ಕೆ.ಟಿ. ಕಣ್ಣನ್, ಬೆಂಗಳೂರು.
ಎಂಥಾ ಸಾಮ್ಯತೆ!
30.5.14ರ 7ನೇ ಪುಟದ ಬರಹ-ಜಾವೇದ್ ಹುಸೇನ್ರವರದ್ದು. ಇವರು ಪಾಕಿಸ್ತಾನದ ನಿವೃತ್ತ ರಾಯಭಾರಿ ಮತ್ತು ಅಲ್ಲಿನ ಪ್ರಮುಖ ನೀತಿ ನಿರೂಪಕರಂತೆ. ಅವರ ದೃಷ್ಟಿಕೋನ -"ಮೋದಿ ಮತ್ತು ಬಿಜೆಪಿಯ" ಬಗ್ಗೆ ಓದಿದರೆ ಇದು ಯಾರ ಅಂಕಣವೆಂದು ಬಾರಿ ಬಾರಿ ಮೈ ಚಿವುಟಿಕೊಂಡೆ. ಅರೇ!! ಇದು ನಮ್ಮ ಬುದ್ಧಿ ಜೀವಿಗಳ ಬರಹದಂತೆಯೇ ಕಂಡಿತು. ಎಂಥಾ ಸಾಮ್ಯ ನೋಡಿ ಸ್ವಾಮಿ. ಇವರಿಗೂ ಪಾಕಿಸ್ತಾನದ ರಾಯಭಾರಿಗೂ, ಅವರ ಅಭಿಪ್ರಾಯಕ್ಕೂ; ನೀತಿ ನಿರೂಪಣೆಗೂ ಏನೇನು ವ್ಯತ್ಯಾಸವಿಲ್ಲ. ಅವರಿಗಿಂತ ನಮ್ಮವರು ಒಂದು ಹೆಜ್ಜೆ ಮುಂದು. ಇವರೆಲ್ಲರೂ ಪಾಕಿಸ್ತಾನದ ರಾಯಭಾರಿಗಳಾಗಲೂ ಅತ್ಯಂತ ಅರ್ಹರಲ್ಲವೇ? ಮತ್ತೇಕೆ ಬೇಕು ಅವರ ರಾಯಭಾರ ಕಛೇರಿಗಳು? ಇವರನ್ನು ಸಂಪರ್ಕಿಸಿದರೆ ಆಯಿತು. ಪಾಕಿಸ್ತಾನಕ್ಕೆ ಬೇಕಾದ ಎಲ್ಲ ವಿವರಗಳನ್ನು ಮುಂದಾಗಿ ಕೊಡಬಲ್ಲರು. ಜಾವೇದ್ ಅವರು ಕಡೇಪಕ್ಷ ಜಿಹಾದಿಗಳನ್ನು ನಿಯಂತ್ರಿಸಬೇಕು ಅಂತಾರೆ, ಆದರೆ ನಮ್ಮವರು ಅವರನ್ನು ಬಂಧಿಸಬೇಡಿ, ನಿಮ್ಮ ರಕ್ಷಣೆ ಮಾಡಿಕೊಳ್ಳಬೇಡಿ (ಅದು ನಕಲಿ ಎನ್ಕೌಂಟರ್) ಎನ್ನುತ್ತಾರೆ. ಇಂಥವರು ನಮ್ಮಲ್ಲೇ ಇರುವಾಗ ಪಾಕಿಸ್ತಾನಕ್ಕೆ ಏಕೆ ಆತಂಕ?
-ಚಂದ್ರಶೇಖರ್, ಜಯನಗರ.
ಏಕಸ್ವಾಮ್ಯದ ಅಪಾಯ
ಡಾ. ಶಾಂತುಶಾಂತಾರಾಂ 'ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನವನ್ನು ಅಪ್ಪಿಕೊಳ್ಳುವರೇ ಮೋದಿ? (ಕ.ಪ್ರ. ಮೇ28) ಎಂದು ಪ್ರಶ್ನಿಸಿದ್ದಾರೆ. ಆದಕ್ಕೂ ಮುನ್ನ ಜೈವಿಕ ತಂತ್ರಜ್ಞಾನದ ಕೆಲವು ದೋಷಗಳನ್ನು ಅವರ ಗಮನಕ್ಕೆ ತರಬಯಸುತ್ತೇನೆ. ರೈತ ಕುಲಾಂತರಿ ಸಸ್ಯ/ಬೀಜಗಳನ್ನು ಉತ್ಪಾದಿಸುವ ಉದ್ಯಮ ಸಂಸ್ಥೆಗೆ ಶರಣಾಗಿ ಪರಾವಲಂಬಿಯಾಗಬೇಕಾಗುತ್ತದೆ, ಉದ್ಯಮಗಳು ಉತ್ಪಾದಿಸುವ ಸಸ್ಯ/ಬೀಜಗಳಲ್ಲಿ ವೈವಿಧ್ಯ ಅತ್ಯಲ್ಪ, ಉದ್ಯಮಗಳು ತಾವು ನೀಡುವ ಬೀಜಗಳೊಂದಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ ಅನಿವಾರ್ಯ, ಇಲ್ಲದಿದ್ದರೆ ಸರಿಯಾದ ಫಲ ನೀಡದು ಎಂದು ಎಚ್ಚರಿಸುತ್ತವೆ, ಬೀಜೋತ್ಪಾದನೆಯಲ್ಲಿ ರೈತ/ಕೃಷಿಕನಿಗೆ ಸ್ವಾವಲಂಬನೆಯ ಸ್ವಾತಂತ್ರ್ಯವಿಲ್ಲ. ಏಕೆಂದರೆ ಉದ್ಯಮಗಳು ವಿತರಿಸುವ ಬೀಜಗಳಿಂದ ಬೆಳೆಯುವ ಧಾನ್ಯ-ತರಕಾರಿ-ಫಲ-ಫುಷ್ಪಗಳು ಬಂಜೆ ಬೀಜಗಳನ್ನು ಹೆರುತ್ತವೆ. ಅದರಿಂದಾಗಿ ಕೃಷಿಕರು ಮತ್ತೆ ಮತ್ತೆ ಉದ್ಯಮ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲಿಯಾಗಿ ಪ್ರತಿಯೊಂದಕ್ಕೂ ದುಬಾರಿ ಬೆಲೆ ತೆರಬೇಕಾಗುತ್ತದೆ.
ನಾನು 1965-70ರ ಅವಧಿಯಲ್ಲಿ ಶೃಂಗೇರಿಯಲ್ಲಿ ಅಧ್ಯಯನ ಮಾಡುತ್ತಿದ್ದೆ. ಅಲ್ಲಿನ ಭತ್ತದ ಗದ್ದೆಗಳಲ್ಲಿ ಸಾಂಪ್ರದಾಯಿಕ ಕೃಷಿಯಿಂದ ಸಮೃದ್ಧವಾದ ಬೆಳೆ ಬೆಳೆಯುತ್ತಿದ್ದುದನ್ನು ಪ್ರತ್ಯಕ್ಷ ನೋಡಿದ್ದೆ. ಆದರೆ ಇಂದು ರೈತರು ಬೀಜ-ಗೊಬ್ಬರ-ಕೀಟನಾಶಕಗಳಿಗಾಗಿ ಮಾರಾಟ ಮಳಿಗೆಗಳಿಗೆ ಮುಗಿಬೀಳುವ ಶೋಚನೀಯ ಸ್ಥಿತಿಗೆ ತಲುಪಿದ್ದಾರೆ
-ಎಂ. ಸುಬ್ರಹ್ಮಣ್ಯಭಟ್, ಮುಡಿಪು, ಕುರ್ನಾಡು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com