ತಪ್ಪಾಯ್ತು ತಿದ್ಕೋತೀವಿ
ದಾವಣಗೆರೆಯಿಂದ ಜಿ.ಎಂ. ರಾಜಶೇಖರ ಅವರು ಬರೆಯುತ್ತಾರೆ- 'ಮೇ 13ರ ಕ.ಪ್ರ. ಪುಟ 12ರಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಬಗ್ಗೆ ಬರೆಯುವಾಗ ಐದನೇ ಪ್ಯಾರಾದಲ್ಲಿ 'ಹಾಗಂತ ಆಗ ವಿವಾದಗಳೇ ಇಲ್ಲ ಅಂತಿರಲಿಲ್ಲ' ಎಂದಿದೆ. ಸರಿಯಾದ ಪ್ರಯೋಗ 'ಹಾಗಂತ ಆಗ ವಿವಾದಗಳೇ ಇರಲಿಲ್ಲ ಅಂತಲ್ಲ' ಎಂದಿರಬೇಕಾಗಿತ್ತು. ಇನ್ನು ಮುಂದೆ ಮುದ್ರಾರಾಕ್ಷಸನನ್ನು ವೈಭವೀಕರಿಸುವುದು ಬೇಡ. ವ್ಯಾಕರಣದಲ್ಲಾಗಲೀ, ಪದ/ವಾಕ್ಯ ಪ್ರಯೋಗದ ತಪ್ಪನ್ನಾಗಲೀ ಎತ್ತಿ ತೋರಿಸೋಣ. ಉಚ್ಚಾರವೂ ಒಂದು ಗಣನೀಯ ತಪ್ಪೇ' ಎಂದಿದ್ದಾರೆ.
ಶಿಕಾರಿಪುರದಿಂದ ಆರ್.ಪಿ. ಪರಶುರಾಮ ಅವರು ಬರೆಯುತ್ತಾರೆ- 'ಮೇ 14ರ ಶಿವಮೊಗ್ಗ ಆವೃತ್ತಿಯ ಪುಟ 2ರಲ್ಲಿ '70 ಶಾಲೆಗಳಿಗೆ ಶೇ. 100 ಫಲಿತಾಂಶ' ಎಂಬ ಶೀರ್ಷಿಕೆಯಲ್ಲಿನ ಉಪಶೀರ್ಷಿಕೆಯಲ್ಲಿ 'ಗುಣಮಟ್ಟದ ಫಲಿತಾಂಶದಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನ' ಎಂದಿದೆ. ಇದು 'ಗುಣಮಟ್ಟದ ಫಲಿತಾಂಶದಲ್ಲಿ ಜಿಲ್ಲೆಗೆ ಎಂಟನೇ ಸ್ಥಾನ ಎಂದಾಗಬೇಕಿತ್ತು.'
'ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳು ಫಲಿತಾಂಶದ ಅಂಕಿ ಅಂಶಗಳ ಪಟ್ಟಿಯಲ್ಲಿ ಶೇ. 89-80 ಫಲಿತಾಂಶ ಪಡೆದ ಶಿಕಾರಿಪುರ ತಾಲೂಕು ಪ್ರಥಮ ಸ್ಥಾನದಲ್ಲಿದೆ ಹಾಗೂ ಶೇ. 88.30 ಫಲಿತಾಂಶ ಪಡೆದ ತೀರ್ಥಹಳ್ಳಿ ತಾಲೂಕು ದ್ವಿತೀಯ ಸ್ಥಾನದಲ್ಲಿದೆ. ಆದರೆ ಈ ಸುದ್ದಿಯ ಕೆಳಗಿನ ಮತ್ತೊಂದು ಸುದ್ದಿಯಲ್ಲಿ ಶೇ. 90.10 ಫಲಿತಾಂಶ ಪಡೆದ ತೀರ್ಥಹಳ್ಳಿ ತಾಲೂಕು ಪ್ರಥಮ ಎಂದಿದೆ. ಒಂದೇ ಪುಟದಲ್ಲಿನ ಎರಡು ಭಿನ್ನ ಅಂಕಿ-ಅಂಶಗಳ ಸುದ್ದಿಯಿಂದ ಶೇಕಡಾವಾರು ಫಲಿತಾಂಶ ನಿಖರವಾಗಿ ತಿಳಿಯದೇ ಗೊಂದಲಮಯವಾಗಿದೆ' ಎಂದಿದ್ದಾರೆ.
ಬಾಗಲಕೋಟೆ ಜಿಲ್ಲೆ ಇಳಕಲ್ಲದಿಂದ ಶ್ರೀಕಾಂತ ಮುದಗಲ್ಲ ಅವರು ಬರೆಯುತ್ತಾರೆ- 'ಮೇ 25ರ ಸಂಚಿಕೆಯ ಪುಟ 2ರಲ್ಲಿಯ 20 ನಿಮಿಷ 20 ಸುದ್ದಿ ಅಂಕಣದಲ್ಲಿ 'ಡಾ. ಪಿ.ಬಿ. ಶ್ರೀನಿವಾಸರ ಸ್ವರ ಸ್ಮರಣೆ ನಾಳೆ' ಎಂಬ ತಲೆಬರಹದ ಸುದ್ದಿ ಇದೆ. ಈ ಸುದ್ದಿಯ ವಿವರ ಓದಿದಾಗ ಕಾರ್ಯಕ್ರಮ ನಡೆಯುವುದು 25ನೇ ತಾರೀಖಿನಂದು ಎಂದು ತಿಳಿಯುತ್ತದೆ. ಆದರೆ ನೀವು ಕೊಟ್ಟ ತಲೆಬರಹ ನೋಡಿದರೆ ಕಾರ್ಯಕ್ರಮ 26ನೇ ತಾರೀಖಿನಂದು ಇದೆ ಎಂಬ ಅರ್ಥ ಬರುತ್ತದೆ. ಆದ್ದರಿಂದ ಈ ತಲೆಬರಹವು 'ಡಾ. ಪಿ.ಬಿ. ಶ್ರೀನಿವಾಸರ ಸ್ವರ ಸ್ಮರಣೆ ಇಂದು' ಎಂದಾಗಬೇಕಿತ್ತು ಅಲ್ಲವೇ?'
'ಇನ್ನು ಮೇ 26ರ ಸಂಚಿಕೆಯ ಪುಟ 13ರಲ್ಲಿ 'ಸಜೀವ ದಹಿಸಿದ ಇಬ್ಬರು ವಕೀಲರು' ಎಂಬ ಸುದ್ದಿ ಪ್ರಕಟವಾಗಿದೆ. ಸುದ್ದಿಯಲ್ಲಿ...ಇಬ್ಬರಿಗೂ ಸ್ವಲ್ಪವೂ ಸುಟ್ಟ ಗಾಯಗಳಾಗಿಲ್ಲ ಹೀಗಾಗಿ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದಿದೆ. ಹೀಗಾಗಿ 'ಸಜೀವ ದಹಿಸಿದ ಇಬ್ಬರು ವಕೀಲರು' ಎನ್ನುವ ತಲೆಬರಹವೇ ತಪ್ಪಾಗಿದೆ. ಇಲ್ಲಿ ಇನ್ನೊಂದು ವಿಶೇಷ ತಪ್ಪಾಗಿದೆ. ಅದೇನೆಂದರೆ ಸಜೀವ ದಹಿಸಿದ ಇಬ್ಬರು ವಕೀಲರು ಎಂದು ಬರೆದಿದ್ದೀರಿ. ಆದರೆ ಇಲ್ಲಿ ಮೃತಪಟ್ಟವರು ವಕೀಲರೇ ಅಲ್ಲ! ಬದಲಾಗಿ ಅವರು ಒಬ್ಬರು ಕಕ್ಷಿದಾರರು ಮತ್ತು ಇನ್ನೊಬ್ಬರು ಟೈಪಿಸ್ಟ್. ಹೀಗಾಗಿ ಈ ಸುದ್ದಿಯ ತಲೆಬರಹ 'ಹೊಗೆಯಿಂದ ಉಸಿರುಗಟ್ಟ ಇಬ್ಬರ ಸಾವು ಅಥವಾ ಅಗ್ನಿ ಅವಘಡ: ಇಬ್ಬರ ಸಾವು' ಎಂದಾಗಬೇಕಿತ್ತಲ್ಲವೇ?' ಎಂದಿದ್ದಾರೆ.
ಓದುಗರು ಪತ್ರಿಕೆಯನ್ನು ಎಷ್ಟು ಸೂಕ್ಷ್ಮವಾಗಿ ಓದುತ್ತಾರೆ ಮತ್ತು ಪತ್ರಿಕಾ ಶೈಲಿಯ ಬಗ್ಗೆ ಎಷ್ಟು ಮಾಹಿತಿ ಹೊಂದಿದ್ದಾರೆ ಎಂಬುದಕ್ಕೆ ಶ್ರೀಕಾಂತ ಮುದಗಲ್ಲ ಅವರ ಪತ್ರವೇ ಸಾಕ್ಷಿ. ಸುದ್ದಿಯ ಕೇವಲ ಒಂದೆರಡು ವಾಕ್ಯಗಳನ್ನಷ್ಟೇ ಓದಿ ಆತುರದಲ್ಲಿ ಶೀರ್ಷಿಕೆ ಕೊಟ್ಟಾಗ ಇಂತಹ ತಪ್ಪುಗಳಾಗುತ್ತವೆ.
-ವಿಶ್ವೇಶ್ವರ ಭಟ್