ಸಂಘರ್ಷಕ್ಕೆ ಹೊಸ ಆಯಾಮ
ಹದಿನಾರನೇ ಲೋಕಸಭೆ ಚುನಾವಣೆ ವೇಳಾಪಟ್ಟಿಯ ಪ್ರಕಟಣೆಯಲ್ಲಿ ಆಶ್ಚರ್ಯವೇನೂ ಇಲ್ಲ. ಭದ್ರತೆಯ ಬಂದೋಬಸ್ತ್ ವ್ಯವಸ್ಥೆಯ ಅಗತ್ಯವನ್ನು ಪ್ರಮುಖವಾಗಿ ಗಮನಿಸಿರುವ ಚುನಾವಣೆ ಆಯೋಗ ಮತದಾನದ ಪ್ರಕ್ರಿಯೆಯ ಆರಂಭಕ್ಕೂ, ಫಲಿತಾಂಶದ ಪ್ರಕಟಣೆಗೂ ಮೂವತ್ತೈದು ದಿನಗಳ ಅಂತರವನ್ನು ಇಟ್ಟಿರುವುದು ಈಗಿನ ಸ್ಥಿತಿಯಲ್ಲಿ ಸೂಕ್ತ ಎನಿಸಿದರೂ ಆಸಕ್ತರನ್ನು ಅಷ್ಟೊಂದು ದಿನ ಆತಂಕದ ದವಡೆಗೆ ತಳ್ಳಿದ್ದನ್ನು ಸ್ವಾಗತಿಸುವುದು ಸರಿಯಲ್ಲ, ಆದರೆ ಅದು ಅನಿವಾರ್ಯ .
ಚುನಾವಣೆಯಲ್ಲಿನ ಪ್ರಮುಖ ಪಕ್ಷಗಳೇನೂ ತಮ್ಮ ಸಿದ್ಧತೆಗೆ ವೇಳಾಪಟ್ಟಿಯನ್ನು ಎದುರು ನೋಡಬೇಕಾಗಿರಲಿಲ್ಲ. ಸಂಘಟಿತ ಪಕ್ಷಗಳು ತಮ್ಮ ಸಿದ್ಧತೆಯನ್ನು ಹಿಂದೆಯೇ ಆರಂಭಿಸಿದ್ದವು. ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳೆಂದು ಭಾವಿಸಲಾಗಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾಗೂ ವಾಮರಂಗದ ನಾಯಕರು ಎಲ್ಲ ಕ್ಷೇತ್ರಗಳಿಗೂ ಒಂದೇ ದಿನ ಅಭ್ಯರ್ಥಿಗಳನ್ನು ಆರಿಸಿ ದೇಶದಲ್ಲೇ ಒಂದು ದಾಖಲೆಯನ್ನು ಸ್ಥಾಪಿಸಿದ್ದಾಗಿದೆ.
ಕೇಂದ್ರದಲ್ಲಿ ಅಧಿಕಾರದ ಸೂತ್ರಗಳನ್ನು ಹಿಡಿಯಲು ಎಲ್ಲ ಬಗೆಯ ತಂತ್ರಗಳನ್ನು ಬಳಸಲು ಸಿದ್ಧವಾಗಿರುವ ಕಾಂಗ್ರೆಸ್ - ಬಿಜೆಪಿ ಕೂಟಗಳು ತಮ್ಮ ಪ್ರಚಾರವನ್ನು ಆರಂಭಿಸಿ ಹಲವಾರು ವಾರಗಳೇ ಕಳೆದಿವೆ. ಈ ಎರಡೂ ಪ್ರಮುಖ ಪಕ್ಷಗಳು ದೊಡ್ಡ ರೀತಿಯಲ್ಲಿ ಪ್ರಚಾರಕ್ಕೆ ಮುಂದೆ ಬಿಟ್ಟಿರುವುದು ತಮ್ಮ ಪ್ರಧಾನಿ ಪೀಠದ ಅಭ್ಯರ್ಥಿಗಳಾದ ರಾಹುಲ ಗಾಂಧಿ ಹಾಗೂ ನರೇಂದ್ರ ಮೋದಿ ಅವರನ್ನಷ್ಟೇ. ಪ್ರತಿನಿತ್ಯ ಬೇರೆ ಬೇರೆ ಕಡೆ ನಡೆಯುತ್ತಿರುವ "ರ್ಯಾಲಿಗಳಲ್ಲಿ" ಉಭಯ ಪಕ್ಷಗಳ ನಾಯಕರ ಕಾರ್ಯಕ್ರಮಗಳನ್ನು ಟಿ.ವಿ. ವಾಹಿನಿಗಳು ವ್ಯಾಪಕವಾಗಿ ಪ್ರಸಾರ ಮಾಡುತ್ತಿರುವುದರಿಂದ ದೇಶದ ಎಲ್ಲ ಭಾಗಗಳ ಜನರಿಗೂ ಈ ವೇಳೆಗಾಗಲೇ ನಾಯಕರ ಪರಿಚಯವೂ ಆಗಿದೆ. ಅವರು ಪ್ರಸ್ತಾಪಿಸುವ ವಿಷಯಗಳೂ ಗೊತ್ತಾಗಿವೆ. ಈ ಪ್ರಕ್ರಿಯೆಯಲ್ಲಿ ಸದ್ಯದಲ್ಲೇ ಇತರ ಅನೇಕರೂ ಪಾಲುಗೊಳ್ಳುವುದರಿಂದ ಇಡೀ ದೇಶದಲ್ಲಿ ಒಂದು ರೀತಿಯಲ್ಲಿ ಸಂಘರ್ಷದ ವಾತಾವರಣವೇ ನಿರ್ಮಾಣವಾಗಬಹುದು.
ಜನತಂತ್ರ ವ್ಯವಸ್ಥೆಯಲ್ಲಿ ಇಂತಹ ಚರ್ಚೆ ವ್ಯಾಪಕವಾಗಿ ನಡೆದು, ಜಗಳಗಳಿಗೆ ಅವಕಾಶವಾದರೂ, ಅಂತಿಮವಾಗಿ ಒಪ್ಪಂದದಿಂದಲೋ ಅಥವಾ ಅನಿವಾರ್ಯತೆಯ ಒತ್ತಡದಿಂದಲೋ ಒಟ್ಟಾರೆ ಅಭಿಪ್ರಾಯ ರೂಪುಗೊಳ್ಳುವುದೂ ಸಾಧ್ಯ. ಚುನಾವಣೆ ಪ್ರಚಾರ ಸಮರ ನಿಜವಾಗಲೂ ರಾಷ್ಟ್ರೀಯ ಸಮಸ್ಯೆಗಳ ಮುಕ್ತ ವಿಚಾರ ವಿನಿಮಯಕ್ಕೆ ಒಂದು ಒಳ್ಳೆಯ ಅವಕಾಶ. ಮಹಾರಾಷ್ಟ್ರದ ಗಡಚಿರೋಳಿಯ ನಕ್ಸಲೀಯರು, ಹಿಮಾಚಲದ ತಪ್ಪಲಿನ ಬಾಬಾಗಳು, ಶತಕೋಟ್ಯಧಿಪತಿಗಳು, ಗರೀಬರು, ಅವರವರಿಗೆ ಲಭ್ಯವಾಗುವ ಸೀಮಿತ ಅವಕಾಶದಲ್ಲಿ ತಮ್ಮ ಚಿಂತನೆ ಹಾಗೂ ನಿಲವನ್ನು ಪ್ರತಿಪಾದಿಸಬೇಕು. ಕೊನೆಗೆ ಇಷ್ಟವಿರಲಿ, ಇಲ್ಲದೇ ಇರಲಿ ಜನರ ಅಂತಿಮ ತೀರ್ಪನ್ನು ಒಪ್ಪಲೇ ಬೇಕಾಗುತ್ತದೆ.
ಉದಾಹರಣೆಗೆ ಈಗ ತೆಲಂಗಾಣದ ರಚನೆಯ ವಿಚಾರವನ್ನೇ ಗಮನಿಸಿದರೆ, ಸಂಸತ್ ಭವನದ ಮುಂದೆಯೇ ಕೈ ಕೈ ಮಿಲಾಯಿಸಿ ಜಗಳವಾಡಿದ ಸಂಸದರು, ಈಗ ಆಂಧ್ರದ ಮುಂದಿನ ರಾಜಧಾನಿ ಕರ್ನೂಲೋ, ವಿಜಯವಾಡವೋ ಎನ್ನುವ ವಿವಾದದಲ್ಲಿ ಮುಳುಗಿದ್ದಾರೆ. ಆಂಧ್ರ ಪ್ರದೇಶದ ವಿಭಜನೆಯನ್ನು ಒಪ್ಪಿದಂತೆಯೇ ಆಯಿತಲ್ಲ.
2014ರ ಲೋಕಸಭೆ ಚುನಾವಣೆಯಲ್ಲಿ ಸಿದ್ಧಾಂತ, ಶಿಸ್ತು, ಜನತಾಂತ್ರಿಕ ಮೌಲ್ಯಗಳಿಗೆ ಹೆಚ್ಚು ಪ್ರಚಾರ ಸಿಗಲಿಕ್ಕಿಲ್ಲ. ಆದಷ್ಟು ಹೆಚ್ಚು ಜನಪ್ರಿಯತೆಯನ್ನು ಗಳಿಸುವ ಪ್ರಯತ್ನಕ್ಕೇ ಹೆಚ್ಚು ಒತ್ತು ಸಿಗುವುದು ಸಹಜವೇ. ಜಾತಿ-ಮತಗಳನ್ನೇ ಆಧರಿಸಿದ ಪ್ರಚಾರ ಅಂತರಂಗದಲ್ಲಂತೂ ಇದ್ದಿದ್ದೇ. ಅದನ್ನು ಬಿಟ್ಟು ರಾಜಕೀಯ ಇಲ್ಲ.
ಚುನಾವಣೆಯಲ್ಲಿನ ಪ್ರಚಾರ ಸಮರದಲ್ಲಿ ಮೊದಲ ಸುತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೂಟ ಮುಂದಿರುವಂತೆ ಕಂಡುಬಂದಿರುವುದು ನಿಜ. ಆದರೆ ಕಾಂಗ್ರೆಸ್ ಕೂಟದ ಶಕ್ತಿ ಇರುವುದು ಅದರ ಅದೃಶ್ಯ ಮತದಾರರ ಸಮುದಾಯಗಳಲ್ಲಿ. ಅದರ ಪ್ರಮಾಣವನ್ನು ಅಂದಾಜು ಮಾಡುವುದು ಕಷ್ಟ. ಓಟು ಬ್ಯಾಂಕ್ ರಾಜಕೀಯ ಎರಡೂ ಕೂಟಗಳಿಗೆ ತಂತ್ರಗಳೂ ಗೊತ್ತು, ಅದನ್ನು ಬಳಸುವುದೂ ಗೊತ್ತು.
ಕೂಟ ರಚನೆಯಲ್ಲೂ ಆರಂಭದ ದಿನಗಳಲ್ಲಿ ಬಿಜೆಪಿಯ ಮೋದಿ ಆಕರ್ಷಣೆ ಹೆಚ್ಚು ಎನಿಸುತ್ತಿದೆ. ಕಾಂಗ್ರೆಸ್ ಕೂಟಕ್ಕೆ ಹಿಂದಿಗಿಂತ ಹೆಚ್ಚು ಪಕ್ಷಗಳು ಸೇರಲಿಕ್ಕಿಲ್ಲ. ತಮಿಳುನಾಡಿನಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆ ಕೂಟದ ರಚನೆ ಮುಗಿಯುತ್ತ ಬಂದಿದೆ. ಜಯಲಲಿತಾ ಕಮ್ಯುನಿಸ್ಟರ ಜತೆ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಬಿರುಕು ಕಂಡು ಬಂದಿದೆ. ಬಿಹಾರದಲ್ಲಿ ರಾಮವಿಲಾಸ ಪಾಸ್ವಾನ್, ನರೇಂದ್ರ ಮೋದಿ ಕಡೆಗೆ ಒಲವು ತೋರಿಸಿದ್ದಾರೆ. ಲಾಲೂ ಪ್ರಸಾದ ಯಾದವ್ - ಕಾಂಗ್ರೆಸ್ ಕೂಟದ ಅಂಟು ಗಟ್ಟಿಯಾಗಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯ ಕೂಟ ಭದ್ರ ಎನಿಸಿದರೂ ಮಹಾರಾಷ್ಟ್ರದ ನವನಿರ್ಮಾಣ ಸೇನೆಯ ರಾಜ್ಠಾಕ್ರೆ ಕಿರುಕುಳ ಇದ್ದಿದ್ದೇ.
ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ, ಕಮ್ಯುನಿಸ್ಟರ ಜತೆ ಸೇರಿ ರೂಪಿಸಲು ಹೊರಟಿರುವ ಪರ್ಯಾಯ ರಂಗ ಇನ್ನೂ ಮೊದಲ ಹೆಜ್ಜೆಯನ್ನೂ ಇಟ್ಟಿಲ್ಲ.
2014ರ ಒಂದು ಗಮನಾರ್ಹವಾದ ಬೆಳವಣಿಗೆ ಎಂದರೆ ಅರವಿಂದ ಕೇಜ್ರಿವಾಲ ನೇತೃತ್ವದ ಆಮ್ ಆದ್ಮಿ ಪಕ್ಷದ ಕ್ಷಿಪ್ರ ರಾಜಕೀಯ ಕ್ರಾಂತಿ ಹಾಗೂ ಮಮತಾ ಬ್ಯಾನರ್ಜಿ ಅವರಿಗೆ ಅಣ್ಣಾ ಹಜಾರೆ ಆಶೀರ್ವಾದ ಸಿಕ್ಕಿದ್ದು.
ಚುನಾವಣೆಯ ಖರ್ಚಿನ ಮಿತಿಯನ್ನು ಅಭ್ಯರ್ಥಿಗಳಿಗೆ 40 ಲಕ್ಷ ರುಪಾಯಿಗಳಿಂದ 70 ಲಕ್ಷ ರುಪಾಯಿಗಳಿಗೆ ಹೆಚ್ಚಿಸಿದ್ದು, ಆಡಿಟರ್ಗಳಿಗಷ್ಟೇ ಸಂಬಂಧಿಸಿದ್ದು. ವಾಸ್ತವದ ವೆಚ್ಚ ಅದರ ಹತ್ತು ಪಟ್ಟಿಗೂ ಹೆಚ್ಚಿರಬಹುದು.
ಅನೇಕರ ದೃಷ್ಟಿಯಲ್ಲಿ 2014 ರ ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟಾಚಾರ - ಆಡಳಿತ ಸಂಬಂಧದ ಚರ್ಚೆಯೇ ಮುಖ್ಯವಾಗಬೇಕು. ಅದರ ಪ್ರಸ್ತಾಪವಾಗಬಹುದು. ಅದೇ ಅತಿ ಮುಖ್ಯವಲ್ಲ, ಬೇರೆ ವಿಷಯಗಳೂ ಇವೆ.
ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳೇ ಈ ಚುನಾವಣೆಯ ನಿರ್ಣಾಯಕ ರಾಜ್ಯಗಳೆಂದೂ ಕೆಲವು ವಿಶ್ಲೇಷಕರು ಭಾವಿಸಿರುವಂತಿದೆ.