ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅತಿಥಿ ಉಪನ್ಯಾಸಕರ ವೇತನ ಸಮಸ್ಯೆ

Srinivasa Murthy VN
Updated On : 10 Mar 2014, 12:36 pm

ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಆರ್.ವಿ.ದೇಶಪಾಂಡೆಯವರು ಕಾರ್ಯಕ್ರಮಗಳಿಗೆ ಹೋದಲ್ಲೆಲ್ಲ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ವೇತನವನ್ನು ಪ್ರತಿ ತಿಂಗಳು ಪಾವತಿಸುತ್ತಿದ್ದೇವೆ ಎಂದು ತಮ್ಮ ಹಾಗೂ ಇಲಾಖೆಯ ಕಾರ್ಯವನ್ನು ಕುರಿತು ಹೆಮ್ಮೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅಕ್ಟೋಬರ್ ತಿಂಗವಳರೆಗೆ ಮಾತ್ರ ವೇತನವನ್ನು ಪಾವತಿ ಮಾಡಲಾಗಿದೆ. ಆ ನಂತರ ವೇತನ ಪಾವತಿಯಾಗಿಲ್ಲ. ಅಲ್ಲದೇ ಈ ಅತಿಥಿ ಉಪನ್ಯಾಸಕರಿಗೆ ಬೇರೆಲ್ಲೂ ಕೆಲಸ ನಿರ್ವಹಿಸುವಂತಿಲ್ಲ ಎಂಬ ನಿಯಮವನ್ನೂ ಕೂಡ ಜಾರಿಗೆ ತರಲಾಗಿದೆ. ಹಾಗಾದರೆ, ಅತಿಥಿ ಉಪನ್ಯಾಸಕರು ಜೀವನ ನಡೆಸುವುದು ಹೇಗೆ? ಬಾಡಿಗೆ, ಬಸ್ ಚಾರ್ಜ್, ಊಟ ಇತ್ಯಾದಿ ಖರ್ಚುಗಳನ್ನು ಈ ಅತಿಥಿ ಉಪನ್ಯಾಸಕರು ಹೇಗೆ ನಿರ್ವಹಿಸಬೇಕು? ಸರ್ಕಾರ ಗೌರವ ಧನವನ್ನು ನೀಡುತ್ತಿರುವುದೇ ಹತ್ತು ಸಾವಿರ ರೂಪಾಯಿಗಳು. ಈ ಹಣದಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ವಿವಾಹಿತರು, ಮಕ್ಕಳೊಂದಿಗರು ಜೀವನ ನಡೆಸುವುದು ಹೇಗೆ? ಹಾಗೆಯೇ ಹಳ್ಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ಅತಿಥಿ ಉಪನ್ಯಾಸಕರು 60-100 ಕಿ.ಮೀ. ಕ್ರಮಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರ ಪಾಡೇನು? ಸ್ವಾವಲಂಬಿ ಜೀವನದ ಕನಸನ್ನು ಕಂಡು ಉನ್ನತ ಶಿಕ್ಷಣವನ್ನು ಪಡೆದಿರುವ ಯುವಜನಾಂಗವನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಸಾಧ್ಯವಾಗುತ್ತಿಲ್ಲ. ಉನ್ನತ ಶಿಕ್ಷಣ ಇಲಾಖೆ, ಸಚಿವರು, ಅಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು, ಚಿಂತಕರು ಹಾಗೂ ಹೋರಾಟಗಾರರು ಈ ಸಮಸ್ಯೆಯನ್ನು ಬಗೆಹರಿಸುತ್ತಾರೆಯೇ?   
- ಪ್ರದೀಪ್ ಮಾಲ್ಗುಡಿ, ಬೆಂಗಳೂರು

ಮರೆತ ಭರವಸೆ

ಶುಕ್ರವಾರ ದಿ. 11.3.2011 ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ವೇದಿಕೆಯಾದ ಕುಂದಾನಗರಿ ಬೆಳಗಾವಿಗೆ ಬೆಂಗಳೂರಿನ ಲಾಲ್‌ಬಾಗ್ ಮಾದರಿ ಉದ್ಯಾನವನವನ್ನು ಕೊಡುಗೆಯಾಗಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. 100 ಎಕರೆ ಪ್ರದೇಶದಲ್ಲಿ ಲಾಲ್‌ಬಾಗ್ ಮಾದರಿ ಉದ್ಯಾನವನ, ಗಾಜಿನಮನೆ ನಿರ್ಮಿಸಲಾಗುವುದು. ಸಮ್ಮೇಳನಕ್ಕೆ ಚಿರಸ್ಥಾಯಿಯಾಗಲು ಪ್ರಾಚೀನ ಕಾಲದಿಂದ ಹಿಡಿದು ಇಲ್ಲಿಯವರೆಗೆ ಸಮಗ್ರ ಕರ್ನಾಟಕ ವಿಕಾಸ ಹೊಂದಿದ ಬಗ್ಗೆ ಪ್ರಾತ್ಯಕ್ಷಿಕೆ ಒಳಗೊಂಡ ಭವಿಷ್ಯದ ಮಾರ್ಗದರ್ಶಕ ವಸ್ತು ಸಂಗ್ರಹಾಲಯ ನಿರ್ಮಿಸುವುದಾಗಿ ಹೇಳಿದ್ದರು. ವಿಶ್ವ ಕನ್ನಡ ಸಮ್ಮೇಳನ ಸರಿದು ಹೋಗಿ, ಮೂರು ವರ್ಷಗಳಾದವು. ಈಗ ಯಡಿಯೂರಪ್ಪ ಅಧಿಕಾರದಲ್ಲಿಲ್ಲ. ಸಿದ್ದರಾಮಯ್ಯ ಇದ್ದಾರೆ. ಆದರೆ ಸಿದ್ದರಾಮಯ್ಯ ಕನ್ನಡದ ಎರಡನೇ ರಾಜಧಾನಿ ಬೆಳಗಾವಿಯನ್ನು ಮರೆತೇ ಬಿಟ್ಟಿದ್ದಾರೆ. ಇಲ್ಲಿಯ ಮತದಾರರ ಬೇಡಿಕೆಗಳಾದ ಲಾಲ್‌ಬಾಗ್-ಗಾಜಿನಮನೆ ಸಹಿತ, ರಿಸರ್ವ್ ಬ್ಯಾಂಕ್ ಶಾಖೆ, ಕನ್ನಡ ಬಾನುಲಿ ಕೇಂದ್ರ, ಕನ್ನಡ ದೂರದರ್ಶನ ಕೇಂದ್ರ, ಅಂತಾರಾಷ್ಟ್ರೀಯ ಕ್ರೀಡಾಂಗಣ, ರಂಗಾಯಣ ಶಾಖೆ ಹಾಗೂ ಬೆಳಗಾವಿಯಿಂದ -ಬಾಗಲಕೋಟೆಗೆ ನೇರ ರೈಲು ಮಾರ್ಗ ಇವೆಲ್ಲವುಗಳಿಗೆ ಚಾಲನೆ ನೀಡಿ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಸಿದ್ದರಾಮಯ್ಯ ಘೋಷಿಸಲಿ.
- ಸುರೇಶ ಗೋ. ದೇಸಾಯಿ, ಬೆಳಗಾವಿ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement