ಚುನಾವಣೆ ಸಿದ್ಧತೆ ಸುತ್ತಮುತ್ತ
ಹದಿನಾರನೆ ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾದ ಅನಂತರ ದೇಶದ ಎಲ್ಲ ಭಾಗಗಳಲ್ಲೂ ರಾಜಕೀಯ ಸಂಚಲನದ ಅನುಭವವಾಗಿರುವುದು ತೀರ ಸಹಜ. ಇದ್ದಕ್ಕಿದ್ದಂತೆ ಪಕ್ಷಗಳ ನಡುವೆ ಇರುವ- ಇರಬೇಕಾದ ಸಂಬಂಧಗಳನ್ನು ಸ್ಫುಟವಾಗಿ ಜನರಿಗೆ ದರ್ಶನ ಮಾಡಿಸುವ ಕೆಲಸ ಆರಂಭವಾಗಿದೆ.
ಚುನಾವಣೆಯ ರಮಾರಮಿ ಹೋರಾಟದಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಕಾಂಗ್ರೆಸ್- ಬಿಜೆಪಿಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಗಳನ್ನು ಪ್ರಕಟಿಸುತ್ತಿದ್ದಂತೆಯೇ ಪಕ್ಷಗಳ ಆಂತರಿಕ ತಿಸ್ರಗಳೂ ಬಹಿರಂಗವಾಗುತ್ತಿವೆ.
ಈ ಪ್ರಕ್ರಿಯೆಯಲ್ಲಿ ವಿಪರೀತವಾಗಿ ಪ್ರಚಾರ ನಡೆಸುತ್ತಿರುವುದು ಭಾರತೀಯ ಜನತಾ ಪಾರ್ಟಿಯೇ. ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ಅವರು ತಮ್ಮದೇ ಆದ ರೀತಿಯಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಭಾರಿ ಯಶಸ್ವಿ ಎನ್ನಬಹುದಾದ ರ್ಯಾಲಿಗಳನ್ನು ನಡೆಸಿ, ಅದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದರೂ, ತಮ್ಮ ಸ್ವಂತ ಕ್ಷೇತ್ರದ ವಿಚಾರದಲ್ಲಿ ಇದುವರೆಗೂ ಏನನ್ನೂ ಪ್ರಕಟಿಸಿಲ್ಲ. ಇದ್ದಕ್ಕಿದ್ದಂತೆ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿ ಹಾಗೂ ಗುಜರಾತ್ನ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಬಹುದೆನ್ನುವ ವದಂತಿ ಆಧರಿತ ವರದಿಗಳಿಗೆ ಪ್ರಚಾರ ಸಿಕ್ಕಿದ ಅನಂತರ, ಬಿಜೆಪಿಯಲ್ಲಿ ಒಂದು ರೀತಿಯಲ್ಲಿ ಭಾವನಾತ್ಮಕವಾದ ಸಂಚಲನವೇ ಉಂಟಾಯಿತು.
ವಾರಾಣಸಿ, ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರ. ಅವರಿಗ್ಯಾಕೆ ಅಲ್ಲಿಂದ 'ಕೊಕ್' ಕೊಡುವುದು ಎನ್ನುವ ಪ್ರಶ್ನೆ ಚರ್ಚೆಗೆ ಗ್ರಾಸ ಒದಗಿಸಿದೆ. ನರೇಂದ್ರ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೇಕೆ? ಹಿಂದೆ ಇಂದಿರಾ ಗಾಂಧಿ (ರಾಯ್ ಬರೈಲಿ, ಮೇಡಕ್) ಸೋನಿಯಾ ಗಾಂಧಿ (ರಾಯ್ ಬರೈಲಿ- ಬಳ್ಳಾರಿ) ಸ್ಪರ್ಧಿಸಿದ್ದರು ಅಂತಲೋ ಅಥವಾ ಬೇರೆ ಯಾವುದಾದರೂ ರೀತಿಯ ಅನುಕೂಲ ಈ ರಾಜಕೀಯ ಆಟದಲ್ಲಿ ಅಡಗಿದೆಯೋ ಗೊತ್ತಾಗುತ್ತಿಲ್ಲ.
ಕಾಂಗ್ರೆಸ್ನ ಮೊದಲ ಪಟ್ಟಿಯಲ್ಲಿ ಹೇಳಿಕೊಳ್ಳಬಹುದಾದ ರೀತಿಯಲ್ಲಿ ಹಿಂದಿನ ಆಯ್ಕೆ ರೀತಿಯಲ್ಲಿ ಬದಲಾವಣೆ ಕಂಡುಬಂದಿಲ್ಲ. ಕಾಂಗ್ರೆಸ್ಸಿನ ರಾಜಕೀಯ ಸೂತ್ರಗಳನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆಂದು ಭಾವಿಸಲಾಗಿರುವ ರಾಹುಲ ಗಾಂಧಿ ಅವರ ನಿಯಂತ್ರಣದ ಸಾಕ್ಷ್ಯ- ಆಧಾರಗಳು ಕಂಡುಬಂದಿಲ್ಲ. ಮೊದಲು ಆಯ್ಕೆಯಾಗಿರುವವರಲ್ಲಿ ಕರ್ನಾಟಕದ ಈಗಿನ ಎಲ್ಲ ಲೋಕಸಭೆ ಸದಸ್ಯರ ಹೆಸರುಗಳಿದ್ದರೂ, ಪಕ್ಷದ ಸರ್ಕಾರದ ಪ್ರಮುಖ ಮಂತ್ರಿಗಳಲ್ಲಿ ಒಬ್ಬರಾದ ವೀರಪ್ಪ ಮೊಯಿಲಿ ಅವರ ಹೆಸರು ಇಲ್ಲ. ವೀರಪ್ಪ ಮೊಯಿಲಿ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೇ ಸ್ಪರ್ಧಿಸುವ ಅವಕಾಶ ಕೊಡುವ ನಿರ್ಧಾರವನ್ನು ಪಕ್ಷ ತನ್ನದೇ ಆದ ರೀತಿಯಲ್ಲಿ ಅನಧಿಕೃತ ಮೂಲಗಳ ಮೂಲಕ ಪ್ರಚಾರ ಮಾಡಿದ್ದಾಗಿದೆ. ಆ ಕಾಲದಲ್ಲೇ ಅವರ ವಿರುದ್ಧ ಸ್ಪರ್ಧಿಸುವ ಪ್ರಬಲ ಎದುರಾಳಿ ದೇವೇಗೌಡರ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಅವರೇ ಆಗಬಹುದೆನ್ನುವ ವದಂತಿಯೂ ಇತ್ತು. ಈಗ ಚಿಕ್ಕಬಳ್ಳಾಪುರವನ್ನು ಕಾಂಗ್ರೆಸ್ -ಜೆಡಿಎಸ್ಗಳು ಒಂದು ಪ್ರತಿಷ್ಠಿತ ಕ್ಷೇತ್ರವಾಗಿ ಪರಿವರ್ತಿಸುವ ಸಿದ್ಧತೆ ನಡೆಸಿರುವಂತೆ.
ಭಾರತೀಯ ಜನತಾ ಪಾರ್ಟಿಯ ಕೇಂದ್ರ ಚುನಾವಣೆ ಸಮಿತಿಯ ಸಭೆಯಲ್ಲಿ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿಯಾಗಿರುವ ಸುಷ್ಮಾ ಸ್ವರಾಜ್ ಮತ್ತು ಮುರಳಿ ಮನೋಹರ ಜೋಷಿ ಅವರು, ಪಕ್ಷದ ನಾಯಕರು ಬಿಹಾರದಲ್ಲಿ ರಾಮ್ವಿಲಾಸ ಪಾಸ್ವಾನ್ ಅವರ ಪಕ್ಷದ ಜತೆ, ಕರ್ನಾಟಕದಲ್ಲಿ ಮಾಜಿ ಸಚಿವ ಬಿಎಸ್ಸಾರ್ ಪಕ್ಷದ ನಾಯಕ ಶ್ರೀರಾಮುಲು ಅವರ ಜತೆ ಮಾಡಿಕೊಂಡಿರುವ ಅಥವಾ ಮಾಡಿ ಕೊಳ್ಳಲಿರುವ ಒಪ್ಪಂದಗಳನ್ನು ಕುರಿತು ಪಕ್ಷದ ಅತ್ಯನ್ನತ ನೀತಿ ನಿರೂಪಕ ಸಂಸ್ಥೆಯಾದ ಸಂಸದೀಯ ಮಂಡಳಿಯ ಸಭೆಯನ್ನು ಕರೆಯಲಿಲ್ಲವೇಕೆ ಎನ್ನುವ ಪ್ರಶ್ನೆಯನ್ನು ಎತ್ತಿದ್ದಾರೆ. ಗುಜರಾತ್ನ ಗಾಂಧಿನಗರದಲ್ಲೇ ಮತ್ತೆ ಸ್ಪರ್ಧಿಸುವ ಅವಕಾಶವನ್ನು ಕೇಳಿರುವ ಪಕ್ಷದ ಅತಿ ಎತ್ತರದ ವಯೋವೃದ್ಧ, ಗೌರವಾನ್ವಿತ ನಾಯಕ ಲಾಲ್ ಕೃಷ್ಣ ಆಡ್ವಾಣಿ ಅವರೂ ಈ ವಿಚಾರದಲ್ಲಿ ಚರ್ಚೆ ಅಗತ್ಯ ಎಂದಿದ್ದಾರೆ.
ಇದೇ ಸಮಯದಲ್ಲೇ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಹಠಾತ್ತನೆ ಅಹಮದಾಬಾದ್ಗೆ ತೆರಳಿ, ಗುಜರಾತ್ನ ಅಭ್ಯುದಯ ಕೆಲಸಗಳ ವಿವರಗಳನ್ನು ಪಡೆಯಲು ಪ್ರಯತ್ನಿಸಿದಾಗ ಅವರನ್ನು ಭೇಟಿ ಮಾಡಲು ಅವಕಾಶವನ್ನೇ ನೀಡದ ಮೋದಿ ಅವರನ್ನು ಹೀನಾಮಾನ ಬಹಿರಂಗ ಸಭೆಯಲ್ಲಿ ಟೀಕಿಸಿದ ಅನಂತರ ಖಾಸಗಿ ಜೆಟ್ ವಿಮಾನದಲ್ಲಿ ದೆಹಲಿಗೆ ಹಾರಿ ಹೋಗಿದ್ದು ದೊಡ್ಡ ಸುದ್ದಿಯನ್ನೇ ಮಾಡಿದೆ. ಇಂತಹ ವರ್ತನೆಯಿಂದ ಕೇಜ್ರಿವಾಲ್ ಹಿಂದೆ ಮೂಡಿಸಿದ್ದ ಭರವಸೆಯಂತೆ ನಿಜ ಜೀವನದಲ್ಲಿ ನಡೆದುಕೊಳ್ಳುವ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಅನುಮಾನವನ್ನು ಉಂಟು ಮಾಡುವುದಕ್ಕೆ ಅವಕಾಶವಾಗಿದೆ. ಆದರೂ ಬೇರೆ ಬೇರೆ ರಾಜ್ಯಗಳಿಂದ ಪ್ರಕಟವಾಗುತ್ತಿರುವ ವರದಿಗಳಂತೆ ಆಮ್ ಆದ್ಮಿ ಪಕ್ಷದ ಮೂಲಕ ಸಾರ್ವಜನಿಕ ಜೀವನಕ್ಕೆ ಧುಮುಕಲು ಅನೇಕ ಮೇಲ್ದರ್ಜೆಯ ವ್ಯಕ್ತಿಗಳು ಉತ್ಸುಕರಾಗಿರುವಂತೆ ಕಂಡುಬರುತ್ತಿದೆ.
ಆದರೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅನಗತ್ಯವಾಗಿ, ಯಾವುದೇ ರೀತಿಯ ಪ್ರಚೋದನೆ ಇಲ್ಲದೇ ಹೋದರೂ ಬಿಜೆಪಿಯ ವಿರುದ್ಧ ಜಗಳಕ್ಕೆ ನಿಂತು ಚುನಾವಣೆಯ ವಾತಾವರಣವನ್ನೇ ಕೆಡಿಸಲು ಮುಂದಾಗಿರುವುದು ಹೊಸ ಪಕ್ಷಕ್ಕೆ ಒಳ್ಳೆಯದಲ್ಲ. ಆ ಪಕ್ಷದ ನಾಯಕರ ಇತ್ತೀಚಿನ ವರ್ತನೆ ಖಂಡಿತವಾಗಿಯೂ ಚುನಾವಣೆಯ ಸಮರವನ್ನು ಧರ್ಮಯುದ್ಧವನ್ನಾಗಿ ಪರಿವರ್ತಿಸುವ ಪ್ರಯತ್ನವನ್ನು ಹಿಂದಕ್ಕೆ ತಳ್ಳಿದೆ. ಮುಂದಿನ ವಾರಗಳಲ್ಲಿ ಚುನಾವಣೆ ಪೂರ್ವ ಸಂಘರ್ಷದ ದರ್ಶನಕ್ಕೆ ಜನ ಸಿದ್ಧರಾಗಬೇಕು.