ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮುಂದಿನ ವ್ಯವಸ್ಥೆ ಕುರಿತು ಬಹಿರಂಗ ಚಿಂತನೆ

Srinivasa Murthy VN
Updated On : 9 May 2014, 9:51 am

ಲೋಕಸಭೆ ಚುನಾವಣೆ-2014. ದೇಶ ಕಂಡ ಬಹು ದೀರ್ಘವಾದ ಹಾಗೂ ಯಾವುದೇ ರೀತಿಯ ಅಡೆತಡೆ ಇಲ್ಲದ, ಮಾಡು ಇಲ್ಲವೇ ಮಡಿ ಎನ್ನುವ ಭಾವನೆಯನ್ನೇ ಚಿಮ್ಮಿಸುವ ಖಡಾಖಡಿ ಪ್ರಚಾರ ಸಮರ ಗುರುವಾರ ಸಂಜೆಯ ವೇಳೆಗೆ ಮುಗಿಯಿತು. ಸೋಮವಾರ ಅಂತಿಮ ಸುತ್ತಿನ ಮತದಾನ.
ದೇಶದ ಮೂಲೆ ಮೂಲೆಗಳಲ್ಲಿರುವ ಜನ ಸಮುದಾಯಗಳಿಗೂ ಮುಟ್ಟುವ ರೀತಿಯಲ್ಲಿ ರ್ಯಾಲಿ, ಮಾಧ್ಯಮ ಗೋಷ್ಠಿ, ಚರ್ಚಾಕೂಟ ಹಾಗೂ ಮೆರವಣಿಗೆಗಳ ಮೂಲಕ ನಡೆದ ಈ ಸಮರದಲ್ಲಿ ಭಾರತೀಯ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ತಮ್ಮ ಚಿಂತನೆಯ ದಿಕ್ಕನ್ನು ಸಮರ್ಪಕವಾಗಿ ವಿವರಿಸಿದ್ದಾಯಿತು. ಈ ಅವಧಿಯಲ್ಲಿ ಬಿಜೆಪಿಯ ನಾಯಕರೇ ಆಗಲಿ, ಕಾಂಗ್ರೆಸ್ ಮುಖಂಡರೇ ಆಗಲಿ ಇತರ ಪಕ್ಷಗಳ ಜತೆ ಹೊಂದಾಣಿಕೆಯ ವಿಚಾರವನ್ನು ಬಾಯಿ ತಪ್ಪಿಯೂ ಪ್ರಸ್ತಾಪಿಸಲಿಲ್ಲ. ಎರಡೂ ಪಕ್ಷಗಳಿಗೂ ತಾವೇ ಗೆಲ್ಲುವ ಪಕ್ಷವೆನ್ನುವ ವಿಶ್ವಾಸ ಇರುವುದನ್ನು ಪ್ರಕಟಿಸಲಾಯಿತು.
ಚುನಾವಣೆ ಕಣದಲ್ಲಿ ಈ ಎರಡೇ ಪಕ್ಷಗಳಲ್ಲವಲ್ಲ ಕಣಕ್ಕೆ ಇಳಿದಿದ್ದು. ಇತರ ಅನೇಕ ಪಕ್ಷಗಳೂ ಇದ್ದವು. ಕೆಲವು ಪ್ರಾದೇಶಿಕ ಪಕ್ಷಗಳು ಅವರವರ ಕ್ಷೇತ್ರಗಳಲ್ಲಿ ನಿರ್ಣಾಯಕವಾದ ಫಲಿತಾಂಶ ನೀಡಬಲ್ಲ ಪಕ್ಷಗಳೇ. ದೇಶದ ಎಲ್ಲ ಕಡೆ ನಡೆದ ಪ್ರಚಾರದ ಕಾಲದಲ್ಲಿ ಪಕ್ಷಗಳ ನಾಯಕರು, ಕಾರ್ಯಕರ್ತರಿಗೆ ಭವಿಷ್ಯದ ಚಿಂತನೆ ಮೂಡಿರಲೇ ಬೇಕು. ಆದರೆ ಪ್ರಚಾರ ಸಮರದ ಮಧ್ಯೆ, ಇತರ ಸಾಧ್ಯತೆಗಳನ್ನು, ಅಂದರೆ ಕೇಂದ್ರದಲ್ಲಿ ಹೊಂದಾಣಿಕೆಯ ಮಾತು, ಪ್ರಸ್ತಾಪಿಸುವುದು ಅನುಚಿತವೆಂದು ಎರಡೂ ಪಕ್ಷಗಳು ಭಾವಿಸಿರಬಹುದು.
ಆದರೆ ಪ್ರಚಾರದ ಸಮಯ ಮುಗಿದ ಕೂಡಲೇ ಉಭಯ ಪಕ್ಷಗಳಿಗೂ ವಸ್ತುಸ್ಥಿತಿಯನ್ನು ಕುರಿತ ಹೊಸ ಜ್ಞಾನೋದಯವಾದಂತಿದೆ. ಈ ವಿಚಾರದಲ್ಲಿ ಮೊದಲು ಕಣ್ಣು ಮಿಟುಕಿಸಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲಗಾಂಧಿ ಹಾಗೂ ಅವರ ಸಂಗಾತಿಗಳೇ.
ನರೇಂದ್ರ ಮೋದಿ ಅವರನ್ನು ಅಧಿಕಾರದ ಸ್ಥಾನದಲ್ಲಿ ಕೂಡಿಸುವುದನ್ನು ತಡೆಗಟ್ಟಲು ಕಾಂಗ್ರೆಸ್ ಏನು ಬೇಕಾದರೂ ಮಾಡಲಿಕ್ಕೆ ಸಿದ್ಧವಿದೆ ಎನ್ನುವ ಮಾತನ್ನು ಅನುಮಾನಕ್ಕೆ ಆಸ್ಪದವೇ ಇಲ್ಲದ ರೀತಿಯಲ್ಲಿ ರಾಹುಲ ಗಾಂಧಿ ಅವರು ಹೇಳಿ ಆ ವಿಚಾರದಲ್ಲಿ ತಮ್ಮ ಮನಸ್ಸು ಮುಕ್ತವಾಗಿದೆ ಎಂದಿದ್ದರು.
ಅಂದರೆ ಮೋದಿ ಅವರ ಕೈಗೆ ದೇಶದ ಅಧಿಕಾರದ ದಂಡ ಸಿಗದಂತೆ ಮಾಡಲು ಎಲ್ಲ ರಾಜಕೀಯ ತಂತ್ರಗಳನ್ನು ಬಳಸಲು ಸಿದ್ಧ ಎಂದೇ ಹೇಳಿದಂತೆ ಆಯಿತು.
ಬಿಜೆಪಿಯ ಪ್ರಧಾನಿ ಪೀಠದ ಅಭ್ಯರ್ಥಿ ನರೇಂದ್ರ ಮೋದಿ ಅವರೂ ಪ್ರಚಾರ ಸಮರ ಮುಗಿದ ಅನಂತರದ ಪ್ರಮುಖ ಸಂದರ್ಶನದಲ್ಲಿ ಅಗತ್ಯ ಬಿದ್ದರೆ, ಬಿಜೆಪಿ - ಎನ್‌ಡಿಎಗಳು ಪ್ರಾದೇಶಿಕ ಪಕ್ಷಗಳ ನೆರವನ್ನು ಕೇಳಬಹುದೆನ್ನುವ ಮಾತಾಡಿ, ಚುನಾವಣೆ ಪ್ರಚಾರದ ಸಮಯದಲ್ಲಿ ಹೇಳಿದ್ದರ ಹಿನ್ನೆಲೆಯಲ್ಲೇ ಹೊಂದಾಣಿಕೆ - ಸಹಕಾರದ ಪ್ರಯತ್ನ ಸಾಧ್ಯ ಎಂದೂ ವಿವರಿಸಿದರು.
ರಾಹುಲ ಗಾಂಧಿ - ನರೇಂದ್ರ ಮೋದಿ ಅವರೇನೋ ತಮ್ಮ ಚಿಂತನೆ ಹಾಗೂ ನಿಲವನ್ನು ಪ್ರಕಟಿಸಿದ್ದಾರೆ. ಆದರೆ ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕು ಇತರ ಪಕ್ಷಗಳಿಗೂ ಇದೆ. ರಾಹುಲ ಗಾಂಧಿ ಅವರು ಪಕ್ಷಗಳ ಹೊಂದಾಣಿಕೆ ವಿಚಾರವನ್ನು ಪ್ರಸ್ತಾಪಿಸಿದಾಗ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿ ಕೂಡಲೂ ಸಿದ್ಧ ಎಂದಿದ್ದರು.
ಆದರೆ ಭಾರತೀಯ ಜನತಾ ಪಾರ್ಟಿಯ ನಾಯಕರು (ನರೇಂದ್ರ ಮೋದಿ ಅವರಲ್ಲ) ಮೋದಿ ಅವರನ್ನು ಬಿಟ್ಟು ಬೇರೆ ಯಾರನ್ನೂ ಪಕ್ಷ ಪ್ರಧಾನಿ ಎಂದು ಒಪ್ಪುವುದಿಲ್ಲ ಎನ್ನುತ್ತಲೇ ಇದ್ದಾರೆ.   ಮುಲಾಯಂ ಸಿಂಗ್ ಯಾದವ್ - ಕಮ್ಯುನಿಸ್ಟರು ಕಾಂಗ್ರೆಸ್ಸಿನತ್ತ ವಾಲಬಹುದೇನೋ. ಆದರೆ ಮಾಯಾವತೀ, ಮಮತಾ ಬ್ಯಾನರ್ಜಿ ಅವರು ಮೋದಿ ಅವರನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ಈ ಹಗ್ಗ ಜಗ್ಗಾಟಕ್ಕೆ ಇನ್ನೂ ಸಮಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement